ಖರೀದಿಗೆ ಮುಂದಾದರೂ ಕೈಗೆ ಸಿಗದ ಕಡಲೆ
ಪ್ರತಿಯೊಂದು ಸೊಸೈಟಿಗೆ ಅಂದಾಜು 5 ಲಕ್ಷ ರೂ.ನಷ್ಟು ಕಮಿಷನ್ ಬಿಡುಗಡೆಯಾಗಬೇಕಿದೆ.
Team Udayavani, Mar 1, 2021, 6:10 PM IST
ಸಿಂಧನೂರು: ಭತ್ತ, ಜೋಳದ ಬಳಿಕ ಕಡಲೆ, ತೊಗರಿ ಖರೀದಿಗೂ ಕೇಂದ್ರಗಳ ಬಾಗಿಲು ತೆರೆಯಲಾಗಿದೆ. ಆದರೆ, ಮುಕ್ತ ಮಾರುಕಟ್ಟೆ ಹಾಗೂ ಕೇಂದ್ರ ಸರಕಾರದ ಬೆಂಬಲ ಬೆಲೆ ಮಧ್ಯೆ ಹೆಚ್ಚಿನ ವ್ಯತ್ಯಾಸ ಇಲ್ಲದ್ದರಿಂದ ರೈತರು ಕಾದು ನೋಡುವ ಮಾರ್ಗ ತುಳಿದಿದ್ದಾರೆ. ಕಳೆದ ತಿಂಗಳಿನಿಂದಲೂ ರೈತರ ಒತ್ತಾಯ, ಜನಪ್ರತಿನಿಧಿ ಗಳ ಮನವಿಯ ಬಳಿಕ ಸಹಕಾರಿ ಸೊಸೈಟಿಗಳ ಮೂಲಕ ಕಡಲೆ, ತೊಗರಿಯನ್ನು ಖರೀದಿಸಲು ಅನುಮತಿಸಲಾಗಿದೆ.
ಹೊಸದಾಗಿ ಗುರುತಿಸಿದ ತಾಲೂಕಿನ 7 ಖರೀದಿ ಕೇಂದ್ರಗಳಿಗೆ ಆದೇಶ ರವಾನಿಸಿ, ನೋಂದಣಿಗೆ ಅವಕಾಶ ನೀಡಲಾಗಿದೆ. ಮೂರ್‍ನಾಲ್ಕು ದಿನ ಕಳೆದರೂ ರೈತರಿಂದ ಹೆಚ್ಚಿನ ಸ್ಪಂದನೆ ದೊರಕಿಲ್ಲ. ಬೆರಳೆಣಿಕೆಯಷ್ಟು ರೈತರಷ್ಟೇ ಮುಂದೆ ಬಂದಿದ್ದಾರೆ.
ಮುಕ್ತ ಮಾರುಕಟ್ಟೆಯೇ ಲೇಸು: ನಗರದ ಟಿಎಪಿಸಿಎಂಎಸ್, ಸುಭಿಕ್ಷಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ತುರುವಿಹಾಳದ ಎಫ್‌ಪಿಒ ಕೇಂದ್ರ, ಉಮಲೂಟಿ, ಬಾದರ್ಲಿ, ಬಳಗಾನೂರು, ತುರುವಿಹಾಳ, ಸಿಂಧನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತಗಳಲ್ಲಿ ಖರೀದಿಗೆ ಅವಕಾಶ ನೀಡಲಾಗಿದೆ.
ಕೆಲವು ಕಡೆ 50 ರಿಂದ 60 ರೈತರು ಮಾತ್ರ ಇದುವರೆಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ. ಕ್ವಿಂಟಲ್ ಕಡಲೆಗೆ ಖರೀದಿ ಕೇಂದ್ರದಲ್ಲಿ 5,100 ರೂ.ಬೆಲೆಯಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ 4,800 ರೂ. ದೊರೆಯುತ್ತಿದೆ. ಬರೀ 300 ರೂ. ನಷ್ಟು ವ್ಯತ್ಯಾಸವಿದ್ದು, ಬೆಲೆ ಚೇತರಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಖರೀದಿ ಕೇಂದ್ರದಲ್ಲಿ ಕೊಟ್ಟರೆ ಒಂದೂವರೆ ತಿಂಗಳು ಹಣಕ್ಕಾಗಿ ಕಾಯಬೇಕಾಗುತ್ತದೆ. ಒಂದೆರಡು ದಿನದಲ್ಲಿ ಬೆಲೆ ಜಿಗಿದರೆ, ಮುಕ್ತ ಮಾರುಕಟ್ಟೆಯಲ್ಲೇ ಕಡಲೆ ಮಾರಾಟ ಮಾಡಬೇಕೆನ್ನುವ ಲೆಕ್ಕಾಚಾರ ರೈತರದ್ದು.
ಜೋಳಕ್ಕೆ ಸಡಿಲ, ಕಡಲೆ ಮಿತಿ: ಇತ್ತೀಚೆಗಷ್ಟೇ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ರೈತರು ಎಷ್ಟು ಎಕರೆಯಷ್ಟು ಬೇಕಾದರೂ ಜೋಳ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಇಂತಹ ಅವಕಾಶ ಕಡಲೆಗೆ ಕೊಟ್ಟಿಲ್ಲ. ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಒಬ್ಬ ರೈತ 15 ಕ್ವಿಂಟಲ್ ಕಡಲೆ ಮಾತ್ರ ಕೊಡಬಹುದು. ಇಂತಹ ಷರತ್ತಿನ ಕಾರಣಕ್ಕೂ ರೈತರು ಹೆಚ್ಚಿನ ಆಸಕ್ತಿ ತೋರಿಲ್ಲ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 3,800 ರೂ. ದರವಿದ್ದರೆ, ಬೆಂಬಲ ಬೆಲೆಯಡಿ 4,875 ರೂ. ನೀಡಲಾಗಿತ್ತು. ಈ ವರ್ಷ ಬೆಂಬಲ ಬೆಲೆ ಹೆಚ್ಚಳವಾಗಿದ್ದರೂ ಮಾರುಕಟ್ಟೆಯಲ್ಲಿನ ದರದ ಮಧ್ಯೆ ಹೆಚ್ಚಿನ ಅಂತರ ಕಾಣಿಸಿಲ್ಲ.
ಪಾವತಿಯಾಗದ ಹಳೇ ಬಾಕಿ: 2017-18ನೇ ಸಾಲಿನಲ್ಲೂ ಬೆಂಬಲ ಬೆಲೆ ಯೋಜನೆಯಡಿ 6ಕ್ಕೂ ಸಹಕಾರಿ ಪತ್ತಿ ಸಹಕಾರಿ ನಿಯಮಿತಗಳಲ್ಲಿ ಕಡಲೆಯನ್ನು ಖರೀದಿ ಮಾಡಲಾಗಿತ್ತು. ಶೇ.1ರಷ್ಟು ಕಮಿಷನ್ ರೂಪದಲ್ಲಿ ಸೊಸೈಟಿಗಳಿಗೆ ನೀಡಬೇಕಿದ್ದ ಸುಮಾರು 20 ಲಕ್ಷ ರೂ.ಗೂ ಹೆಚ್ಚು ಹಣ ಈಗಲೂ ಬಿಡುಗಡೆಯಾಗಿಲ್ಲ. ಪ್ರತಿಯೊಂದು ಸೊಸೈಟಿಗೆ ಅಂದಾಜು 5 ಲಕ್ಷ ರೂ.ನಷ್ಟು ಕಮಿಷನ್ ಬಿಡುಗಡೆಯಾಗಬೇಕಿದೆ. ಹಳೇ ಬಾಕಿಯನ್ನು ನೀಡಿದರೆ, ಹೊಸದಾಗಿ ಖರೀದಿಸುವುದಕ್ಕೆ ಹುಮ್ಮಸ್ಸು ಬರುತ್ತದೆ ಎನ್ನುತ್ತಾರೆ ಸಹಕಾರಿ ಸೊಸೈಟಿಗಳ ಮುಖ್ಯಸ್ಥರು.
ಮಾರುಕಟ್ಟೆಯಲ್ಲೇ ತೊಗರಿಗೆ ಬಂಪರ್
ತೊಗರಿಗೆ ಕೇಂದ್ರ ಸರಕಾರದ ಬೆಂಬಲ ಬೆಲೆ 6,000 ರೂ. ಇದೆ. ಮುಕ್ತ ಮಾರುಕಟ್ಟೆಯಲ್ಲಿ 6,000 ರೂ.ನಿಂದ 6,800 ರೂ.ನಷ್ಟು ದರ ಸಿಗುತ್ತಿದೆ. 4,78 ರೈತರು ಆರಂಭದಲ್ಲಿ ತಮ್ಮ ಹೆಸರು ನೋಂದಾಯಿಸಿದರೂ ಖರೀದಿ ಕೇಂದ್ರದ ಕಡೆ ಮುಖ ಮಾಡಿಲ್ಲ. ಖರೀದಿ ಕೇಂದ್ರಕ್ಕಿಂತ ಮುಕ್ತ ಮಾರುಕಟ್ಟೆಯೇ ಉತ್ತಮ ಎನ್ನುವ ಮಾತು ಕೇಳಿಬರುತ್ತಿದೆ.
ಕಡಲೆ ಖರೀದಿಸಲು ನಮ್ಮ ಸೊಸೈಟಿಗೂ ಅನುಮತಿ ನೀಡಿದ್ದು, ರೈತರು ಆಗಮಿಸಿದರೆ ಖರೀದಿಸಲಾಗುವುದು. ಸೊಸೈಟಿಗಳಿಗೆ ನೀಡಬೇಕಿರುವ ಹಿಂದಿನ ಕಮಿಷನ್ ಬಾಕಿ ಹಾಗೆ ಉಳಿದಿದ್ದು, ಈ ಬಗ್ಗೆಯೂ ಸಂಬಂಧಿಸಿದವರು ಗಮನ ಹರಿಸಬೇಕು.
ಅಮರೇಶ ಅಂಗಡಿ, ಅಧ್ಯಕ್ಷರು, ಪ್ರಾಥಮಿಕ
ಪತ್ತಿನ ಸಹಕಾರಿ ನಿಯಮಿತ, ಸಿಂಧನೂರು
ಆರಂಭದಲ್ಲಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆಯಾಗಿತ್ತು. ಇದೀಗ ಸರಿಪಡಿಸಲಾಗಿದೆ. 55 ರೈತರು ಹೆಸರು ನೋಂದಾಯಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದರೂ ಅವಕಾಶ ಮಾಡಿಕೊಡಲಾಗುವುದು.
ಹನುಮರೆಡ್ಡಿ, ಅಕೌಂಟೆಂಟ್,
ಟಿಎಪಿಎಂಸಿಎಸ್, ಸಿಂಧನೂರು
*ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.