ಬಾಲೆಯರಿಗೆ ಬಲವಂತದ ಕಂಕಣಭಾಗ್ಯ
ಬಡತನ ಬೇಗೆಯಿಂದ ಮಕ್ಕಳಿಗೆ ಮದುವೆ ಮಾಡುವ ಪಾಲಕರು
Team Udayavani, Sep 23, 2020, 5:48 PM IST
ಸಾಂದರ್ಭಿಕ ಚಿತ್ರ
ರಾಯಚೂರು: ಕಂಕಣ ಕೂಡಿ ಬಂದಾಗ ಮದುವೆಯಾಗುತ್ತದೆ ಎನ್ನುವ ಮಾತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಬಾಲಕಿಯರ ವಿಚಾರದಲ್ಲಿ ಅದು ಸುಳ್ಳಾಗಿದೆ. 18 ವರ್ಷ ತುಂಬುವ ಮುನ್ನವೇ ಬಲವಂತದ ಮದುವೆ ಮಾಡುತ್ತಿದ್ದು, ಬಾಲ್ಯವಿವಾಹ ಪದ್ಧತಿ ಇನ್ನೂ ಕಾಡುತ್ತಿದೆ.
ಜಿಲ್ಲೆಯನ್ನು ಬಾಧಿಸುತ್ತಿದ್ದ ದೇವದಾಸಿ ಪದ್ಧತಿಗೆ ಬಹುತೇಕ ಕಡಿವಾಣ ಬಿದ್ದಿದೆ. ಆದರೆ, ಬಾಲ್ಯವಿವಾಹದಂಥ ಸಾಮಾಜಿಕಪಿಡುಗು ಮಾತ್ರ ಸಂಪೂರ್ಣ ಅಳಿದು ಹೋಗಿಲ್ಲ. ಅಕ್ಷರಜ್ಞಾನ ಇಲ್ಲದ, ತಿಳಿವಳಿಕೆ ಇಲ್ಲದ ಪಾಲಕರು ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ಈ ಕೆಟ್ಟ ಪದ್ಧತಿ ಮುಂದುವರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಈವರೆಗೆ ಒಟ್ಟು 29 ಬಾಲ್ಯ ವಿವಾಹಗಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ತಡೆದಿದ್ದಾರೆ. ಆದರೆ, ಮಾಹಿತಿ ಸಿಕ್ಕು ಸ್ಥಳಕ್ಕೆ ಹೋಗುವಷ್ಟರಲ್ಲಿ ಮೂರು ಜೋಡಿಗಳಿಗೆ ಬಾಲ್ಯ ವಿವಾಹ ನೆರವೇರಿಬಿಟ್ಟಿದೆ. ಬಾಲ್ಯ ವಿವಾಹ ಮಾಡಿದ ಹೆತ್ತವರು, ಮದುವೆಗೆ ಸಹಕರಿಸಿದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಇನ್ನೂ ಅನೇಕ ಕಡೆ ಸದ್ದಿಲ್ಲದೇ ಬಾಲ್ಯವಿವಾಹ ನಡೆಯುತ್ತಿವೆ.
ಬೆಳ್ಳಂಬೆಳಗ್ಗೆ ಮದುವೆ: ಕೋವಿಡ್ ಲಾಕ್‌ಡೌನ್ ವೇಳೆಯಲ್ಲೇ ಬಹುತೇಕ ಕಡೆ ಬೆಳ್ಳಂಬೆಳಗ್ಗೆಯೇ ಮದುವೆಗಳು ನೆರವೇರಿವೆ. ರಾತ್ರೋರಾತ್ರಿ ಸಿದ್ಧತೆ ಮಾಡಿಕೊಂಡು ಅಧಿಕಾರಿಗಳು ಬರುವಷ್ಟರಲ್ಲೇ ಮದುವೆ ಮಾಡಿ ಮುಗಿಸಿದ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಆದರೂ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬಹುತೇಕ ಮದುವೆಗಳನ್ನು ತಪ್ಪಿಸಲಾಗಿದೆ.
ಬಡತನವೇ ಮೂಲ: ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಾಕಷ್ಟು ಜಾಗೃತಿ ಮೂಡಿಸಿದರೂ ಜಿಲ್ಲೆಯಲ್ಲಿ ಇಂದಿಗೂ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಬಾಲ್ಯವಿವಾಹಗಳಿಗೆ ಬಡತನವೇ ಮುಖ್ಯ ಕಾರಣ ಎಂಬುದು ಅಧಿಕಾರಿಗಳ ವಿಶ್ಲೇಷಣೆ. ಹೆಣ್ಣು ಹೆತ್ತ ಪಾಲಕರು ಹೆಣ್ಣು ಮಕ್ಕಳು ವಯಸ್ಸಿಗೆ ಬಂದ ಒಂದೆರಡು ವರ್ಷದಲ್ಲೇ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಬಹುತೇಕ ಹಳ್ಳಿಗಳಲ್ಲಿ ಪ್ರೌಢಶಾಲೆಗಳಿಲ್ಲ. ಹೆಚ್ಚಿನ ವ್ಯಾಸಂಗಕ್ಕೆ ಅಕ್ಕಪಕ್ಕದ ಊರುಗಳಿಗೆ ಹೋಗಬೇಕು. ಇದು ಹೆತ್ತವರ ಸಮಸ್ಯೆಗೆ ಕಾರಣವಾಗುತ್ತಿದೆ. ಬೇರೆ ಊರಿಗೆ ಓದಲುಕಳುಹಿಸದೆ ಮದುವೆ ಮಾಡುತ್ತಿದ್ದಾರೆ.
ಅಧಿಕಾರಿಗಳು ಹೆತ್ತವರನ್ನು ವಿಚಾರಿಸಿದರೆ, ಮನೆಯಲ್ಲಿ ಬಡತನ ಇದೆ. ಅವರನ್ನು ಸಾಕುವ ಯೋಗ್ಯತೆ ಇಲ್ಲ. ಮದುವೆ ಮಾಡಿದರೆ ಅವರಷ್ಟಕ್ಕೆ ಅವರು ದುಡಿದು ತಿನ್ನುತ್ತಾರೆ ಎಂಬ ಸಬೂಬು ನೀಡುತ್ತಾರೆ. ಇನ್ನು ಹಲವೆಡೆ ಮನೆಯಲ್ಲಿನ ವೃದ್ಧರ ಒತ್ತಾಯಕ್ಕೆ ಮಣಿದು, ಸಂಬಂಧಿ ಕರಲ್ಲೇ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ನಡೆದ ಬಹುತೇಕ ಮದುವೆಗಳು ಇಂಥದ್ದೇ ಕಾರಣಗಳಿಂದ ಘಟಿಸಿವೆ.
ಬಾಲಕಿಯರು ಕಲ್ಯಾಣ ಸಮಿತಿಗೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸರು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಮದುವೆ ತಡೆದು ಮಕ್ಕಳನ್ನು ರಕ್ಷಿಸುತ್ತಿದ್ದಾರೆ. ಹಾಗೆ ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗುತ್ತಿದೆ. ಅಲ್ಲಿ ಅವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ಬಾಲಮಂದಿರಕ್ಕೆ ಕಳುಹಿಸಬೇಕೇ, ಮನೆಗೆ ಕಳುಹಿಸಬೇಕೇ ಎಂದು ನಿರ್ಧರಿಸಿ ಕ್ರಮ ಕೈಗೊಳ್ಳುತ್ತಾರೆ. ಅದರ ಜತೆಗೆ ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಲಾಗುತ್ತಿದೆ. ಈ ರೀತಿ ದಾಖಲಾದ ಬಹುತೇಕ ಹೆಣ್ಣುಮಕ್ಕಳು ನಮಗೆ ಓದುವ ಆಸೆಯಿದೆ. ಬೇಡ ಎಂದರೂ ಕೇಳದೆ ಮದುವೆ ಮಾಡಲು ಮುಂದಾದರು. ನಮಗೆ ಇಷ್ಟು ಬೇಗ ಮದುವೆ ಸುತಾರಾಂ ಇಷ್ಟ ಇಲ್ಲ ಎಂಬ ಅಭಿಪ್ರಾಯ ನೀಡಿದ್ದಾಗಿ ತಿಳಿಸುತ್ತಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ ಇಂದಿಗೂ ಸಾಕಷ್ಟು ಕಡೆ ಬಾಲ್ಯವಿವಾಹಗಳು ನಡೆಯುತ್ತಿರುವ ದೂರುಗಳು ಬರುತ್ತಿವೆ. ತಕ್ಷಣಕ್ಕೆ ದಾಳಿ ನಡೆಸುವ ಮೂಲಕ ತಡೆಯುತ್ತಿದ್ದೇವೆ. ಹೆತ್ತವರಲ್ಲಿ ತಿಳಿವಳಿಕೆ ಕೊರತೆ, ಬಡತನ, ಮನೆಯಲ್ಲಿನ ಹಿರಿಯರ ಒತ್ತಡಗಳೇ ಇದಕ್ಕೆ ಕಾರಣ. ಬಾಲ್ಯವಿವಾಹದಲ್ಲಿ ಬಾಲಕಿಯರೇ ಹೆಚ್ಚಾಗಿ ಗುರಿಯಾಗುತ್ತಾರೆ. ಒಂದು ಪ್ರಕರಣದಲ್ಲಿ ಮಾತ್ರ 20 ವರ್ಷದ ಬಾಲಕನಿಗೆ ಮದುವೆ ಮಾಡಲಾಗಿತ್ತು. ಜಾಗೃತಿ ಮೂಡಿಸುವ ಕೆಲಸ ನಿರಂತರ ಸಾಗಿದೆ. – ಅಹ್ಮದ್ ಮನ್ಸೂರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
-ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.