ಜಾರು ಬಂಡೆಯ ಮೇಲೆ ಮಕ್ಕಳ ಓದು!
ಶಾಲೆಯಲ್ಲಿ ಹಾಕಿದ ಸ್ಥಿತಿಯಲ್ಲೇ ಬಂಡೆಗಳಿಲ್ಲ
Team Udayavani, Oct 10, 2021, 11:52 AM IST
ಸಿಂಧನೂರು: ಈ ಶಾಲೆಯಲ್ಲಿ ಹಾಕಿದ ಸ್ಥಿತಿಯಲ್ಲೇ ಬಂಡೆಗಳಿಲ್ಲ. ಎಚ್ಚರ ತಪ್ಪಿದರೆ, ಎಡವಿ ಬೀಳಬೇಕಾಗುತ್ತದೆ. ಮಳೆ ಬಂದರೆ, ಶಾಲೆ ಬಿಟ್ಟು ಮಕ್ಕಳು ಮನೆ ಸೇರಬೇಕಾಗುತ್ತದೆ. ತಾಲೂಕಿನ ಸೆಂಟ್ರಲ್ ಸ್ಟೇಟ್ ಫಾರ್ಮ್ (ಸಿಎಸ್ ಎಫ್) ಕ್ಯಾಂಪ್-1ರಲ್ಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿಯಿದು.
1996ರಲ್ಲಿ ರಾಜ್ಯ ಸರಕಾರ ಸ್ಥಾಪನೆ ಮಾಡಿರುವ ಸರಕಾರಿ ಶಾಲೆಯಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಶಿಕ್ಷಕರು ಹಾಗೂ ಗ್ರಾಮಸ್ಥರು ಹೇಳಿಕೊಂಡರು ಈ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಕೊನೆಗೆ ಅನಿವಾರ್ಯವಾಗಿ ಹಾಳಾದ ಶಾಲೆಯಲ್ಲಿ ಮಕ್ಕಳು ಕಲಿಯುವಂತಾಗಿದೆ.
ಏನಿದೆ ಸ್ಥಿತಿಗತಿ?
ಶಾಲೆಯನ್ನು ತೆರೆದ ಆರಂಭದಲ್ಲೇ ಇಲ್ಲಿನ ಶಾಲೆಗೆ ಗುಬ್ಬಿ ಗೂಡಿನಂತಹ ಎರಡು ಸರಕಾರಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಅದೇ ಕಟ್ಟಡಗಳೇ ಆಸರೆಯಾಗಿವೆ. ಇನ್ನುಳಿದಂತೆ ಪಕ್ಕದಲ್ಲಿ ಒಂದೇ ಚಿಕ್ಕ ಕೊಠಡಿಯಿದೆ. 1 ರಿಂದ 7ನೇ ತರಗತಿ ವರೆಗೆ ಇಲ್ಲಿ ಪಾಠ ಮಾಡಬೇಕಿರುವುದರಿಂದ ವಿದ್ಯಾರ್ಥಿಗಳು ಕಂಬೈಡ್ ಮಾಡಬೇಕಿದೆ. ಇನ್ನು ಹಳೇ ಎರಡು ಕೊಠಡಿಗಳ ಪ್ರವೇಶ ದ್ವಾರದಲ್ಲೇ ಬಂಡೆ ಕಿತ್ತು ಹೋಗಿವೆ. ಕೊಠಡಿ ಬಾಗಿಲು ಮುಚ್ಚಲು ಬರುವುದಿಲ್ಲ. ಒಳಗಡೆ ವಿದ್ಯಾರ್ಥಿಗಳು ಕುಳಿತುಕೊಂಡಾಗಲೂ ಬಂಡೆಗಳು ಕಿತ್ತು ಹೋಗಿ, ಜಾರು ಬಂಡೆಯಂತಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ. ಬಂಡೆಗಳ ನಡುವೆ ಇರುವ ಮಣ್ಣು ತೇಲಿ ಬರುವುದರಿಂದ ಪುಸ್ತಕಗಳ ಮೇಲೆ ಬೀಳುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ :ಒಂದು ಸೆಮಿಸ್ಟರ್‌ನಲ್ಲಿ ಕನ್ನಡ ಕಲಿಕೆ ಕಡ್ಡಾಯ
ಇರುವ ಕಡೆಗೆ ಬೋನಸ್:
ಸ್ವಾರಸ್ಯ ಇಲ್ಲಿಗೆ ಹತ್ತಿರದಲ್ಲೇ ಇರುವ ಸಿಎಸ್‌ಎಫ್ ಕ್ಯಾಂಪ್-2ರಲ್ಲಿನ ಶಾಲೆಯಲ್ಲಿ ಬರೀ 6 ಮಕ್ಕಳು ಮಾತ್ರ ಇದ್ದರು. ಈಗಾಗಲೇ ಎರಡು ಕೊಠಡಿ ಇರುವ ಅಂತಹ ಶಾಲೆಗೆ ಹೊಸದಾಗಿ 12.50 ಲಕ್ಷ ರೂ. ವೆಚ್ಚದ ಕಟ್ಟಡ ಮಂಜೂರು ಮಾಡಲಾಗಿದೆ.
ಕಟ್ಟಡ ನಿರ್ಮಾಣವೂ ಪ್ರಗತಿಯಲ್ಲಿದೆ. 5 ಲಕ್ಷ ರೂ.ಗೂ ಹೆಚ್ಚಿನ ಮೊತ್ತ ಮೀಸಲಿಟ್ಟು ಕಾಂಪೌಂಡ್ ಕೂಡ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಹಳೇ ಒಂದು ಕೊಠಡಿಯನ್ನು ನೆಲಸಮ ಮಾಡಲು ಸಿದ್ಧತೆ ನಡೆದಿದೆ. ಮಕ್ಕಳೇ ಇಲ್ಲವೆಂದರೂ ಅಲ್ಲಿಗೆ ಕೊಠಡಿಯನ್ನು ದಯಪಾಲಿಸಲಾಗಿದೆ. ವಿದ್ಯಾರ್ಥಿಗಳಿದ್ದು, ಕೊಠಡಿಗಳಿಲ್ಲದ ಶಾಲೆ ಕಡೆಗಣಿಸಲಾಗಿದೆ.
ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ
ಮುಖ್ಯವಾಗಿ ಶಿಕ್ಷಣ ಇಲಾಖೆ ನಡೆಯೇ ವಿಚಿತ್ರವಾಗಿದೆ. ಬಿಇಒ ಇದ್ದರೂ ಅವರು ಅಲ್ಲಿನ ಶಾಲೆಗಳ ಸ್ಥಿತಿಗತಿ ಪರಿಗಣಿಸಿ ವರದಿ ನೀಡುವುದಿಲ್ಲ ಎಂಬುವುದಕ್ಕೆ ಈ ಎರಡು ಕ್ಯಾಂಪಿನ ಶಾಲೆ ನಿದರ್ಶನ. ಸರಕಾರದ ಅನುದಾನ ಹಾಗೂ ಸೌಲಭ್ಯ ಸದ್ಬಳಕೆಯಾಗಲು ಸಮಸ್ಯೆ ಇರುವ ಕಡೆಗೆ ಒತ್ತು ನೀಡಬೇಕಿತ್ತು. ಮಕ್ಕಳ ಹಾಜರಾತಿ, ಶಾಲೆಯ ಸ್ಥಿತಿಗತಿ ಮರೆತು ಬೇರೆಡೆಗೆ ಅನುದಾನ ನೀಡಿರುವುದು ಸಮಸ್ಯೆ ತಲೆದೋರಿದೆ.
ಪತ್ರ ಕಸದ ಬುಟ್ಟಿಗೆ ಅಲ್ಲಿನ ಮುಖ್ಯ ಗುರು ಇಲ್ಲವೇ ಗ್ರಾಮಸ್ಥರು ಲಾಬಿ ನಡೆಸಿದರೆ ಮಾತ್ರ ಅಲ್ಲಿಗೆ ಶಾಲಾ ಕೊಠಡಿಗಳನ್ನು ಮಂಜೂರು ಮಾಡಲಾಗುತ್ತಿದೆ. ಸ್ಥಳೀಯವಾಗಿ ಯಾರೊಬ್ಬರೂ ಲಾಬಿ ಮಾಡದೇ ಹೋದರೆ ಫಲ ಸಿಗುವುದಿಲ್ಲ. ಮುಖ್ಯ ಗುರುಗಳು ತೊಂದರೆ ತಾಳದೇ ಪತ್ರ ಬರೆದರೂ ಅವು ಕಸದ ಬುಟ್ಟಿಗೆ ಎಸೆಯಲಾಗುತ್ತದೆ ಎನ್ನುವ ದೂರುಗಳು ಸಾಮಾನ್ಯವಾಗಿವೆ
ಹಳೇ ಕೊಠಡಿಗಳ ಸಮಸ್ಯೆ ಕುರಿತು ನಮ್ಮ ಮೇಲಧಿಕಾರಿಗಳ ಗ ಮನಕ್ಕೆ ತರಲಾಗಿದೆ. ಇರುವ ಸ್ಥಿತಿಯಲ್ಲಿ ಸಮಸ್ಯೆಯಾಗದಂತೆ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.
ಪ್ರವೀಣ್, ಮುಖ್ಯ ಗುರು, ಸರಕಾರಿ ಹಿ.ಪ್ರಾ.ಶಾಲೆ, ಸಿಎಸ್‌ಎಫ್1, ಸಿಂಧನೂರು
ಹಳೇ ಕೊಠಡಿಗಳಿದ್ದ ಕಾರಣಕ್ಕೆ ಮತ್ತೊಂದು ಕೊಠಡಿ ಮಂಜೂರಾಗಿದೆ. ದಾಖಲಾತಿ ಹಿಂದೆ ಕಡಿಮೆಯಿತ್ತು. ಈ ವರ್ಷ 10ಕ್ಕೆ ಏರಿಕೆಯಾಗಿದೆ. ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
ಕೊಟ್ರೇಶ ಚಕ್ರಸಾಲಿ, ಮುಖ್ಯಗುರು, ಸ.ಹಿ.ಪ್ರಾ.ಶಾಲೆ, ಸಿಎಸ್‌ಎಫ್2, ಸಿಂಧನೂರು
ಯಮನಪ್ಪ ಪವಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.