ಫಿರೋಜ್ ಕೈಯಲ್ಲಿ ಅರಳಿದ ತೆಂಗಿನಕಾಯಿ ಗಣೇಶ!
Team Udayavani, Aug 28, 2017, 12:53 PM IST
ರಾಯಚೂರು: ಗಣೇಶ ಹಬ್ಬ ಬಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡಿದರೆ, ಕೆಲ ವಿಚಾರಗಳಿಗೆ ಆತಂಕವೂ ಆಗುತ್ತದೆ. ಹೀಗಾಗಿಯೇ ಪೊಲೀಸರು ಶಾಂತಿ ಸಭೆಗಳನ್ನು ಮಾಡಿ ಕೋಮು ಸಾಮರಸ್ಯ ಕಾಪಾಡಲು ಮನವಿ ಮಾಡುತ್ತಾರೆ. ಆದರೆ, ನಗರದಲ್ಲಿ ಬೃಹತ್ ಗಣೇಶವೊಂದು ಮುಸ್ಲಿಂ ವ್ಯಕ್ತಿಯ ಕೈಯಲ್ಲಿ ಅರಳುವ ಮೂಲಕ ಸಾಮರಸ್ಯ ಸಾರುತ್ತಿದೆ. ನಗರದ ಕಲ್ಲಾನೆ ಗಜಾನನ ಸಮಿತಿ ಪ್ರತಿವರ್ಷ ಒಂದಿಲ್ಲೊಂದು ವಿಶೇಷ ಗಣೇಶಗಳನ್ನು ಕೂಡಿಸುವ ಮೂಲಕ ಗಮನ ಸೆಳೆಯುತ್ತಿದೆ. ಕಳೆದ 37 ವರ್ಷಗಳಿಂದ ಹೀಗೆ ವಿಶೇಷ ಗಣೇಶಗಳನ್ನು ಪ್ರತಿಷ್ಠಾಪಿಸಿಕೊಂಡು ಬರುತ್ತಿರುವ ಈ ಸಂಘಟನೆ ಈ ಬಾರಿ ಪರಿಸರ ಸ್ನೇಹಿ ಗಣೇಶನನ್ನು ಕೂಡಿಸಿದೆ. ಸುಮಾರು ಐದು ಸಾವಿರ ತೆಂಗಿನ ಕಾಯಿಗಳನ್ನು ಬಳಸಿ ಮೂರ್ತಿ ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಬೇಕಾದ ಕಬ್ಬಿಣದ ಆಕೃತಿಯನ್ನು ಅತ್ಯಾಕರ್ಷಕವಾಗಿ ತಯಾರಿಸಿದ್ದು ಮಾತ್ರ ದೇವಸುಗೂರು ಮೂಲದ ಫಿರೋಜ್ ನದಾಫ್. ನೆಲಮಟ್ಟದಿಂದ ಸುಮಾರು 30 ಅಡಿ ಎತ್ತರದ ಗಣೇಶ ಇದಾಗಿದ್ದು, ನಾಲ್ಕು ಟನ್ ಕಬ್ಬಿಣ ಬಳಸಿ ನಿರ್ಮಿಸಲಾಗಿದೆ. ಸುಮಾರು ಐದು ಸಾವಿರ ತೆಂಗಿನ ಕಾಯಿಗಳನ್ನು ಬಳಸಲಾಗಿದೆ. ಈ ಬಾರಿ ಪರಿಸರ ಸ್ನೇಹಿಯಾಗಿರಲಿ ಎಂಬ ಕಾರಣಕ್ಕೆ ಇಂಥ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ. ಇದಕ್ಕೆ ಸುಮಾರು ಐದು ಲಕ್ಷ ರೂ. ಖರ್ಚಾಗಿದೆ. ಪಕ್ಕದಲ್ಲಿ ಚಿಕ್ಕ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ. ಅದನ್ನು ವಿಸರ್ಜಿಸುತ್ತೇವೆ. ಈ ತೆಂಗಿನಕಾಯಿಗಳನ್ನು ಭಕ್ತರಿಗೆ ಹಂಚುತ್ತೇವೆ ಎಂದು ವಿವರಿಸುತ್ತಾರೆ ಕಲ್ಲಾನೆ ಗಜಾನನ ಸಮಿತಿಯ ಉಪಾಧ್ಯಕ್ಷ ವಿಜಯ್ ಕೊಠಾರಿ. 45 ದಿನಗಳಿಂದ ಸಿದ್ಧತೆ: ಈ ಗಣೇಶನನ್ನು
ನಿರ್ಮಿಸಲು ಕಳೆದ 45 ದಿನಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನುತ್ತಾರೆ ಫಿರೋಜ್ ನದಾಫ್. ನಾನು ಗಣೇಶ ಮಾಡುವುದನ್ನು 90ರ ದಶಕದಲ್ಲೇ ಕಲಿತಿದ್ದೇನೆ. ಮೊದಲೆಲ್ಲ ಪುಣೆ, ಮುಂಬಯಿಗಳಲ್ಲಿ ಗಣೇಶ ನಿರ್ಮಿಸುವ ಕಾಯಕ ಮಾಡಿದ್ದೇನೆ. ಹೀಗಾಗಿ ಇಷ್ಟು ದೊಡ್ಡ ಗಾತ್ರದ ಗಣೇಶ ತಯಾರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಕಬ್ಬಿಣದ ರಾಡುಗಳನ್ನು ಬಳಸಿ ತಯಾರಿಸಲಾಗಿದೆ. ಅದಕ್ಕೆ ತೆಂಗಿನಕಾಯಿಗಳನ್ನು ಜೋಡಿಸುವ ಮೂಲಕ ಮೂರ್ತರೂಪ ನೀಡಲಾಗಿದೆ. ಕಳೆದ ಹಲವು ವರ್ಷಗಳಿಂದ ಕಲ್ಲಾನೆ ಗಣೇಶನನ್ನು ನಿರ್ಮಿಸುತಿದ್ದೇನೆ ಎಂದು ವಿವರಿಸಿದರು. ಇದಕ್ಕೆ ಮತ್ತೂಬ್ಬ ಕಲಾವಿದ ರಮೇಶ ಸಾಥ್ ನೀಡಿದ್ದಾರೆ. ಒಟ್ಟಾರೆ ನಗರದಲ್ಲಿ ಈ ಬಾರಿ ವಿಶೇಷ ಆಕರ್ಷಣೆ ಕೇಂದ್ರವಾಗಿರುವುದು ಈ ತೆಂಗಿನಕಾಯಿ ಗಣೇಶ. ಅದರಲ್ಲೂ ಮುಸ್ಲಿಂ ಕಲಾವಿದನೊಬ್ಬ ಇದನ್ನು ನಿರ್ಮಿಸಿರುವುದು ಮತ್ತಷ್ಟು ವಿಶೇಷವಾಗಿದೆ. ವಿವಿಧೆಡೆ ಬಹುರೂಪಿ ಗಣಪ: ಎಂದಿನಂತೆ ನಗರದ ಬಹುತೇಕ ಪ್ರಮುಖ ವೃತ್ತಗಳು, ಬಡಾವಣೆಗಳು ಸೇರಿದಂತೆ ವಿವಿಧೆಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಈ ಬಾರಿಯೂ ತರಹೇವಾರಿ ಗಣೇಶಗಳನ್ನು ಕೂಡ್ರಿಸಿದ್ದು, ಜನರನ್ನು ಆಕರ್ಷಿಸುತ್ತಿವೆ. ತೀನ್ ಕಂದಿಲ್, ಬಂಗಾರ ಬಜಾರ್, ಜೈನ ಮಂದಿರ, ನಿಜಲಿಂಗಪ್ಪ ಕಾಲೋನಿ,
ಗಂಜ್ ಏರಿಯಾ, ಹರಿಜನವಾಡ , ಸ್ಟೇಶನ್ ಏರಿಯಾ ಸೇರಿದಂತೆ ನಗರದ ಬಹುತೇಕ ಪ್ರಮುಖ ಬಡಾವಣೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇನ್ನು ಬಂಗಾರ ಬಜಾರದಲ್ಲಿ ಕಳೆದ ಎಂಟು ವರ್ಷಗಳಿಂದ ಕೂಡಿಸಿಕೊಂಡು ಬರುತ್ತಿರುವ 35 ಕೆಜಿ ತೂಕದ ಬೆಳ್ಳಿ ಗಣೇಶನನ್ನು ಈ ಬಾರಿಯೂ ಪ್ರತಿಷ್ಠಾಪಿಸಲಾಗಿದೆ. ಒಂಭತ್ತು ದಿನಗಳವರೆಗೆ ಪ್ರತಿಷ್ಠಾಪಿಸಲಾಗುತ್ತಿದೆ. ಭಗತ್ ಸಿಂಗ್ ವೃತ್ತದಲ್ಲಿ ಗಜಾನನ ಮಂಡಳಿ ದೇಶಭಕ್ತಿ ಸಾರುವ ಗಣೇಶನನ್ನು ಪ್ರತಿಷ್ಠಾಪಿಸಿದ್ದು, ಭಗತ್ ಸಿಂಗ್, ಗಂಗಾಧರ ತಿಲಕ್, ಛತ್ರಪತಿ ಶಿವಾಜಿ, ರಾಣಾ ಪ್ರತಾಪ್ ಸಿಂಹ ಹಾಗೂ ಮೇಲ್ಭಾಗದಲ್ಲಿ ಭಾರತ ಮಾತೆಯ ಚಿತ್ರವಿದೆ. ಚಂದ್ರಮೌಳೇಶ್ವರ ವೃತ್ತದಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಇನ್ನು ಗಣೇಶ ಚತುರ್ಥಿ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೆಲ ಸಮಿತಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿವೆ. ಪೊಲೀಸರು ನಗರದಲ್ಲಿ ಪ್ರಭಾತ್ ಪೇರಿ ನಡೆಸುವ ಮೂಲಕ ಶಾಂತಿಯುತವಾಗಿ ಹಬ್ಬ ಆಚರಿಸುವ ಬಗ್ಗೆ ಜಾಗೃತಿ ಮೂಡಿಸಿದರು.
ಮುದಗಲ್ಲನಲ್ಲಿ 72 ಗಣೇಶ ಪ್ರತಿಷ್ಠಾಪನೆ
ಮುದಗಲ್ಲ: ಮುದಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ 72 ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ವೆಂಕಟರಾಯನಪೇಟೆಯಲ್ಲಿ ಆರು ಸಾವಿರ ಚಾಕೋಲೇಟ್‌ಗಳಿಂದ ತಯಾರಿಸಿದ ಗಣೇಶ ಮೂರ್ತಿ ಭಕ್ತರನ್ನು ಸೆಳೆಯುತ್ತಿದೆ. ಪುರಸಭೆ ಮೈದಾನದಲ್ಲಿ ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ ಸೋಮವಾರಪೇಟೆ, ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನ, ರಾಘವೇಂದ್ರ ಸ್ವಾಮಿ ಮಠ, ಹಳೆಪೇಟೆ ಸೇರಿದಂತೆ ವಿವಿಧೆಡೆ ಗಜಾನನ ಸಮಿತಿಯವರು ವಿವಿಧ ರೂಪಗಳ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಒಂದನೇ ದಿನ 21 ಗಣೇಶ ವಿಗ್ರಹಗಳು ವಿಸರ್ಜನೆಯಾಗಿದ್ದರೆ, ಎರಡನೇ ದಿನ 3 ಮತ್ತು ಮೂರನೇ ದಿನ 16 ಗಣೇಶ ವಿಗ್ರಹಗಳು ವಿಸರ್ಜನೆಯಾಗಿದ್ದು, ಐದನೇ ದಿನ 28 ಗಣೇಶ ವಿಗ್ರಹಗಳು ವಿಸರ್ಜನೆಯಾಗಲಿವೆ. ಪಟ್ಟಣದಲ್ಲಿನ ಬಹುತೇಕ ಗಣೇಶ ಮೂರ್ತಿಗಳು ಏಕಕಾಲಕ್ಕೆ ವಿಸರ್ಜನೆ ಆಗಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಗಾನೂರು: ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಬಳಗಾನೂರು: ಪಟ್ಟಣದ ವಿವಿಧೆಡೆ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಜಾನನೋತ್ಸವ ಸಮಿತಿಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿವೆ. ಶ್ರೀ ಮಾರುತಿ, ಶ್ರೀ ಮೌನೇಶ್ವರ ಶ್ರೀ ಕಾಳಿಕಾ ದೇವಸ್ಥಾನ, ವೀರಭದ್ರ ದೇವಸ್ಥಾನ, ಶ್ರೀ ನಾಗಭೂಷಣ ದೇವಸ್ಥಾನ, ಶ್ರೀ ಬಸವೇಶ್ವರ ವೃತ್ತ ಸೇರಿದಂತೆ ವಿವಿಧ ದೇವಸ್ಥಾನ ಹಾಗೂ ಮಠಗಳಲ್ಲಿ, ವಿವಿಧ ವಾರ್ಡ್‌ಗಳಲ್ಲಿ ಸೇರಿ 55ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಮನೆಗಳಲ್ಲಿ ಕೂಡ ಅನೇಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ
ಸಲ್ಲಿಸಿ ಶುಕ್ರವಾರ ಸಂಜೆ ಬಾವಿಗಳಲ್ಲಿ ವಿಸರ್ಜಿಸಿದರು. ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆ ದಿನಗಳಂದು ಪೊಲೀಸರು ಸೂಕ್ತ ಬಂದೋಬಸ್ತ್ಗೆ ಕ್ರಮ ಕೈಗೊಂಡಿದ್ದಾರೆ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಧ್ವನಿವರ್ಧಕಗಳನ್ನು ನಿಷೇಧಿಸಿದ್ದರಿಂದ ಭಜನೆ, ಡೊಳ್ಳು ಇನ್ನಿತರ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಶಾಂತಿಯುತವಾಗಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವಂತೆ ಪೊಲೀಸ್ ಇಲಾಖೆ ಸಮಿತಿಗಳಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.