ಕಾಲುವೆ ದುರಸ್ತಿಗೆ ವಿಳಂಬ ಧೋರಣೆ
Team Udayavani, Mar 12, 2019, 11:56 AM IST
ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯ 16, 17, 18ನೇ ಡಿಸ್ಟ್ರಿಬ್ಯೂಟರ್ ಕಾಲುವೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಮುಗಿದರೂ ಕಾಮಗಾರಿ ಆರಂಭಕ್ಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ.
ನಾರಾಯಣಪುರ ಬಲದಂಡೆ ಕಾಲುವೆಯ ಚಿಕ್ಕಹೊನ್ನಕುಣಿ ವಿಭಾಗ-4ರ ವ್ಯಾಪ್ತಿಯ ಕಾಲುವೆಗಳ ದುರಸ್ತಿ, ಜಂಗಲ್ ಕಟಿಂಗ್, ಮರಂ ಹಾಕುವುದು ಸೇರಿ 2 ಕೋಟಿ ಮೌಲ್ಯದ ಕಾಮಗಾರಿಗೆ ಟೆಂಡರ್ ಆಗಿದೆ ಎನ್ನಲಾಗಿದೆ. ಗುತ್ತಿಗೆದಾರರು ಇನ್ನೂ ಕಾಮಗಾರಿ ಆರಂಭಿಸಿಲ್ಲ.
15ನೇ ಡಿಸ್ಟ್ರಿಬ್ಯೂಟರ್ ವ್ಯಾಪ್ತಿ ಕಾಲುವೆಗಳು ತೀರಾ ಹದಗೆಟ್ಟು ಹೋಗಿವೆ. ಭಾರೀ ಪ್ರಮಾಣದಲ್ಲಿ ಒಡೆದಿವೆ. ಇದೀಗ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಕಾಲುವೆಗಳ ದುರಸ್ತಿ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಆತಂಕ ಕಾಲುವೆ ವ್ಯಾಪ್ತಿ ರೈತರನ್ನು ಕಾಡುತ್ತಿದೆ.
ಅರೆಬರೆ ಕಾಮಗಾರಿ: ಪ್ರತಿ ವರ್ಷ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ ನಂತರ ಬೇಸಿಗೆಯಲ್ಲಿ ಕಾಲುವೆಗಳ ದುರಸ್ತಿ, ಜಂಗಲ್ ಕಟಿಂಗ್ ಕಾಮಗಾರಿಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಮಳೆಗಾಲ ಆರಂಭಕ್ಕೂ ಮುನ್ನವೇ ಕಾಮಗಾರಿ ಮುಗಿಸದೇ ಇನ್ನೇನು ಮಳೆಗಾಲ ಆರಂಭವಾಗಿ ಕಾಲುವೆಗೆ ನೀರು ಹರಿಯಲಿದೆ ಎನ್ನುವಾಗ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಾರೆ. ಅರೆಬರೆ ಕಾಮಗಾರಿ ಮಾಡಿ ಅನುದಾನ ಕೊಳ್ಳೆ ಹೊಡೆಯುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರೈತರಿಗೆ ತಲುಪಲ್ಲ ನೀರು: ಕಾಲುವೆಗಳ ಅಸಮರ್ಪಕ ನಿರ್ವಹಣೆ ಮತ್ತು ದುರಸ್ತಿ ಮತ್ತು ಜಂಗಲ್ ಕಟಿಂಗ್‌ನಿಂದಾಗಿ ಕಾಲುವೆಗೆ ಸಮರ್ಪಕ ನೀರು ಹರಿಸಿದರೂ 18ನೇ ಡಿಸ್ಟ್ರಿಬ್ಯೂಟರ್ ಕಾಲುವೆ ವ್ಯಾಪ್ತಿಯ ಗಬ್ಬೂರು ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಭಾಗದ ರೈತರು ಪ್ರತಿ ವರ್ಷ ಚಿಕ್ಕಹೊನ್ನಕುಣಿ ಕಚೇರಿ ಮುಂದೆ ಹೋರಾಟ ಕೈಗೊಂಡರೂ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರುತ್ತಾರೆ ರೈತರು.
ಅಮರಾಪುರು ಡಿವಿಜನ್-5ರ ರೋಡಲಬಂಡ ವ್ಯಾಪ್ತಿಗೆ ಬರುವ ಡಿಸ್ಟ್ರಿಬ್ಯೂಟರ್-9 ಜಾಲಹಳ್ಳಿ ಡಿಸ್ಟ್ರಿಬ್ಯೂಟರ್-12 ಗಣೇಕಲ್, ಗಲಗ ಸೇರಿ ವಿತರಣೆ ಕಾಲುವೆಗಳ ದುರಸ್ತಿ, ಜಂಗಲ್ ಕಟಿಂಗ್, ಮರಂ ಹಾಕಿಸುವ ಕೆಲಸಕ್ಕೆ ಈವರೆಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ.
ಕಳೆದ ವರ್ಷ ಅಪೂರ್ಣ ಕಾಮಗಾರಿ: ಕಳೆದ ವರ್ಷ ನೀರು ಹರಿಸುವ ಮುನ್ನವೇ ಏಕಾಏಕಿ ಟೆಂಡರ್ ಪ್ರಕ್ರಿಯೆ ಆರಂಭಿಸಿ ತುರ್ತಾಗಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚನೆ ನೀಡಿದರು. ಇನ್ನೂ ಕಾಮಗಾರಿ ನಡೆಯುತ್ತಿರುವಾಗಲೇ ಕಾಲುವೆಗಳಿಗೆ ನೀರು ಹರಿಸಲಾಯಿತು. ಪರಿಣಾಮ ಕೋಟ್ಯಂತರ ರೂ. ಗುತ್ತಿಗೆದಾರರ ಪಾಲಾಯಿತು ಎಂದು ರೈತ ಮುಖಂಡರು ದೂರಿದ್ದಾರೆ. ಕಾಲುವೆಯಲ್ಲಿ ಜಾಲಿಗಿಡಗಳು ಬೆಳೆದು ನಿಂತಿವೆ. ಅಲ್ಲಲ್ಲಿ ನೀರು ಸಂಗ್ರಹಿಸಲು ರೈತರು ಕಲ್ಲುಗಳನ್ನು ಹಾಕಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಜಂಗಲ್ ಕಟಿಂಗ್ ಆಗದೇ ಇರುವುದರಿಂದ ರೈತರಿಗೆ ಸರಿಯಾಗಿ ನೀರು ತಲುಪುವುದಿಲ್ಲ. ಚಿಕ್ಕಹೊನ್ನಕುಣಿ ವ್ಯಾಪ್ತಿ ಕಾಲುವೆಗಳ ದುರಸ್ತಿ, ಜಂಗಲ್ ಕಟಿಂಗ್, ಮರಂ ಸೇರಿ ಇತರೆ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಬೇಕು. ಅಧಿಕಾರಿಗಳು ಕಾಮಗಾರಿಯತ್ತ ನಿಗಾ ಹರಿಸಬೇಕೆಂದು ಕೆಆರ್‌ಎಸ್ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಟೆಂಡರ್ ಕರೆಯುವುದು. ಅರೆಬರೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುವುದು ದಂಧೆಯಾಗಿದೆ. ಹೀಗಾಗಿ ರೈತರ ಜಮೀನುಗಳಿಗೆ ಸರಿಯಾಗಿ ನೀರು ತಲುಪುತ್ತಿಲ್ಲ.
ಲಕ್ಷ್ಮಣ , ದೇವರಾಜ ರೈತರು
ಕಾಲುವೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿಗಳ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಶ್ರೀನಿವಾಸ ಇಇ ಚಿಕ್ಕಹೊನ್ನಕುಣಿ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.