ಸವಾರರ ಮೂಳೆ ಸಡಿಲಿಸುವ ಹೆದ್ದಾರಿ!
Team Udayavani, Jan 21, 2020, 2:12 PM IST
ರಾಯಚೂರು: ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗುವುದೇನೋ ಹೊಸ ಸಂಗತಿಯಲ್ಲ. ಆದರೆ, ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗಳೇ ಕುಗ್ರಾಮದ ರಸ್ತೆಗಳಿಗಿಂತ ಹದಗೆಟ್ಟು ಪ್ರಯಾಣಿಕರ ಜೀವ ಹಿಂಡುತ್ತಿವೆ.
ರಾಯಚೂರು ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆಯನ್ನಾಗಿ ಆಯ್ಕೆ ಮಾಡಿ; ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಆದರೆ, ಇಲ್ಲಿ ರಾಜ್ಯ ಹೆದ್ದಾರಿಗಳನ್ನೂ ದುರಸ್ತಿ ಮಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಗಿಣಿಗೇರಾ-ಶಕ್ತಿನಗರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-23 ಈಗಿನ ಸ್ಥಿತಿ ಶೋಚನೀಯ ಎಂದೇ ಹೇಳಬೇಕು. ಹೈದರಾಬಾದ್ ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿರುವ ಇದು ಈಗ ಸಂಪೂರ್ಣ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ.
ಎಲ್ಲಿ ಬೇಕಾದಲ್ಲಿ ತಗ್ಗುಗಳು ನಿರ್ಮಾಣಗೊಂಡಿವೆ. ಈ ಹಿಂದೆ ತೇಪೆ ಹಾಕಿ ಸಮತಟ್ಟು ಮಾಡಿದಲ್ಲಿ ಪುನಃ ಡಾಂಬರ್ ಕಿತ್ತು ಹೋಗಿ ಯಥಾ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯನ್ನು ದಶಕದ ಹಿಂದೆ ನಿರ್ಮಿಸಲಾಗಿತ್ತು. ಆರಂಭದ ಒಂದೆರಡು ವರ್ಷ ಚನ್ನಾಗಿತ್ತಾದರೂ ಕ್ರಮೇಣ ರಸ್ತೆ ಹದಗೆಡಲು ಶುರುವಾಯಿತು. ಆಗ ತುಸು ತೇಪೆ ಹಚ್ಚುವ ಕೆಲಸ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕನಿಷ್ಠ ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿಲ್ಲ. ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಸಾತ್ ಮೈಲ್ ಬಳಿ ಒಂದಷ್ಟು ತೇಪೆ ಹಾಕಿದ್ದು ಬಿಟ್ಟರೆ ಮತ್ತೆಲ್ಲೂ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ವಾಹನಗಳು ಜಖಂ: ಇದು ಮೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಈ ರಸ್ತೆ ಮೂಲಕ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಆದರೆ, ಹೆದ್ದಾರಿ ಎಂದು ವೇಗವಾಗಿ ಚಲಿಸಿದರೆ ಎಲ್ಲಿ ತಗ್ಗು ಗುಂಡಿ ಬರುವುದೋ ತಿಳಿಯದು. ಹೀಗಾಗಿ ವಾಹನಗಳು ಜಖಂಗೊಳ್ಳುತ್ತಿವೆ. ಬಿಡಿ ಭಾಗಗಳು ಸಡಿಲಗೊಳ್ಳುತ್ತವೆ. ಎಲ್ಲಕ್ಕಿಂತ ಪ್ರಯಾಣಿಕರಿಗೆ ಬೆನ್ನು ನೋವು ಖಚಿತ. ವೃದ್ಧರು, ಗರ್ಭಿಣಿಯರಿಗೆ ಮಾತ್ರ ಈ ರಸ್ತೆ ಸುಗಮ ಪ್ರಯಾಣಕ್ಕೆ ಸೂಕ್ತವಲ್ಲ ಎನ್ನುವಂತಾಗಿದೆ.
120 ಕಿಮೀ ವ್ಯಾಪ್ತಿ: ರಾಜ್ಯ ಹೆದ್ದಾರಿ-23 ಜಿಲ್ಲೆಯಲ್ಲಿ ಅಂದಾಜು 120 ಕಿಮೀ ಅ ಧಿಕ ವ್ಯಾಪ್ತಿ ಒಳಗೊಂಡಿದೆ. ಮುಖ್ಯವಾಗಿ ರಾಯಚೂರು, ಮಾನ್ವಿ, ಸಿಂಧನೂರು ತಾಲೂಕಿಗೆ ಸಂಪರ್ಕ ಕಲ್ಪಿಸಲಿದೆ. ಇತ್ತ ಹೈದರಾಬಾದ್, ಅತ್ತ ಬೆಂಗಳೂರು, ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಇನ್ನು ಲಿಂಗಸುಗೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಆದರೆ, ಮಾನ್ವಿಯಷ್ಟು ಹದಗೆಟ್ಟಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಂತಿದೆ. ಜನಪ್ರತಿನಿಧಿಗಳ ಜಾಣಕುರುಡು: ವಿಪರ್ಯಾಸ ಎಂದರೆ ಈ ರಸ್ತೆ ಮೇಲೆಯೇ ಜಿಲ್ಲೆಯ ನಾಲ್ವರು ಶಾಸಕರು, ಸಂಸದರು ಓಡಾಡುತ್ತಾರೆ. ಸಿಂಧನೂರಿನ ವೆಂಕಟರಾವ್ ನಾಡಗೌಡ, ಮಾನ್ವಿಯ ರಾಜಾ ವೆಂಟಕಪ್ಪ ನಾಯಕ, ಗ್ರಾಮೀಣ ಕ್ಷೇತ್ರದ ಬಸನಗೌಡದದ್ದಲ್, ನಗರ ಶಾಸಕ ಡಾ| ಶಿವರಾಜ ಪಾಟೀಲ್
ಜತೆಗೆ ಸಂಸದ ರಾಜಾ ಅಮರೇಶ್ವರ ನಾಯಕರು ಈ ರಸ್ತೆ ಮೂಲಕ ಓಡಾಡಿದರೂ ದುರಸ್ತಿ ಬಗ್ಗೆ ಮಾತ್ರ ಕಮಕ್ ಕಿಮಕ್ ಎನ್ನುತ್ತಿಲ್ಲ. ಸಾಮಾನ್ಯ ಸಭೆಗಳಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಚರ್ಚೆ ಕೂಡ ಮಾಡುವುದಿಲ್ಲ. ಇನ್ನು ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಬಿ. ಶ್ರೀರಾಮುಲು ಕೂಡ ಇದೇ ಮಾರ್ಗವಾಗಿ ಸಾಕಷ್ಟು ಬಾರಿ ಓಡಾಡಿದರೂ ಅವರೂ ಅಷ್ಟೇನೂ ಗಂಭೀರವಾಗಿ ಪರಿಗಣಿಸಿಲ್ಲ. ಕಂಡರೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi; ಈಗ ಟೈಂ ಬಾಂಬ್! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ
Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ
ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.