ಪ್ರಧಾನಿ ಕಚೇರಿ ಆದೇಶಕ್ಕೂ ಕ್ಯಾರೆ ಎನ್ನದ ಜಿಪಂ!
Team Udayavani, Mar 10, 2020, 1:03 PM IST
ರಾಯಚೂರು: ಜಿಲ್ಲಾ ಕೇಂದ್ರದಿಂದ ಕೇವಲ 6 ಕಿಮೀ ಅಂತರದಲ್ಲಿರುವ ತಾಲೂಕಿನ ಕುಕುನೂರು ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಮಾಡುವಂತೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ ಬಂದರೂ ಜಿಪಂ ಕ್ಯಾರೆ ಎನ್ನುತ್ತಿಲ್ಲ. ಅನಗತ್ಯ ಕಾಲಕ್ಷೇಪ ಮಾಡುತ್ತಿದ್ದು, ನಮ್ಮ ಸಮಸ್ಯೆಗೆ ಇನ್ಯಾರು ಸ್ಪಂದಿಸಿಯಾರು ಎಂಬ ಜಿಜ್ಞಾಸೆ ಮೂಡಿದೆ.
ರಸ್ತೆ ದುರಸ್ತಿ ಮಾಡಿಸುವಂತೆ ಗ್ರಾಮದ ಮುಖಂಡ ರಾಜಶೇಖರ ಪಾಟೀಲ ಪ್ರಧಾನಿ ಕಚೇರಿಗೇ ದೂರು ಸಲ್ಲಿಸಿದ್ದರು. ಇ-ಜನಸ್ಪಂದನ (ಗೌರ್ನೆನ್ಸ್) ಆ್ಯಪ್ ಮೂಲಕ ಅ.15ರಂದು ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಸಿದ್ದ ದೂರಿಗೆ ಕೇವಲ 19 ದಿನಗಳಲ್ಲಿ ಸ್ಪಂದನೆ ಸಿಕ್ಕಿತ್ತು. ಜಿಪಂ ಕಚೇರಿಗೆ ಪಿಎಂ ಕಚೇರಿಯಿಂದ ನಿರ್ದೇಶನ ಬಂದಿತ್ತು. ಆದರೆ, ಅದಾಗಿ ನಾಲ್ಕು ತಿಂಗಳಾದರೂ ಈವರೆಗೆ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ವಾಜಪೇಯಿ ಜಾರಿಗೊಳಿಸಿದ ಗ್ರಾಮ ಸಡಕ್ ಯೋಜನೆಯಡಿ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಗಿತ್ತು. ಅದಾದ ಮೇಲೆ ಕೆಲ ವರ್ಷ ನಿರ್ವಹಣೆ ಕಂಡಿದ್ದ ರಸ್ತೆ ತದನಂತರ ಸಂಪೂರ್ಣ ಹಾಳಾಗಿದೆ. ಹೈದರಾಬಾದ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಮಾರ್ಗವಾಗಿ ಕುಕುನೂರು ಮಾತ್ರವಲ್ಲದೇ ಮರ್ಚೆಡ್, ಜೇಗರಕಲ್, ಮಲ್ಲಾಪುರ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ಜನ ಓಡಾಡುತ್ತಾರೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಈಗಿನ ರಸ್ತೆ ಸ್ಥಿತಿ ಕಂಡ ಸವಾರರ ಮೂಳೆ ಸಡಿಲಾದರೆ, ವಾಹನಗಳು ಬಿಡಿಭಾಗಗಳು ಕಳಚಿ ಬೀಳುವಂತಾಗಿದೆ. ಕೇವಲ ಮೂರು ಕಿಮೀ ರಸ್ತೆ ಇದ್ದು, ಅದನ್ನು ದುರಸ್ತಿ ಮಾಡಲು ಇಷ್ಟೆಲ್ಲ ನಿರ್ಲಕ್ಷ್ಯ ತೋರುತ್ತಿರುವುದು ವಿಪರ್ಯಾಸ.
ಸಮನ್ವಯ ಕೊರತೆ: ಜಿಪಂ ಸಿಇಒ ಅವರು ಪಿಎಂಜಿಎಸ್‌ವೈ ವಿಭಾಗದ ಮುಖ್ಯ ಎಂಜಿನಿಯರ್ ರಸ್ತೆ ದುರಸ್ತಿ ಮಾಡಲು ಸೂಚಿಸಿದ್ದರು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿದ ಎಂಜಿನಿಯರ್, ಕನಿಷ್ಟ 5 ಕಿಮೀ ಮೇಲ್ಪಟ್ಟ ರಸ್ತೆ ಮಾತ್ರ ಪಿಎಂಜಿಎಸ್ ವೈ ಯೋಜನೆಯಡಿ ದುರಸ್ತಿ ಮಾಡಬಹುದು. ಕುಕುನೂರು ರಸ್ತೆ ಕೇವಲ 3 ಕಿಮೀ ಇದ್ದು, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಪಿಆರ್‌ಇಡಿ ಮುಖ್ಯ ಎಂಜಿನಿಯರಿಗೂ ಸಿಇಒ ಪತ್ರ ಬರೆದಿದ್ದಾರೆ. ಆದರೆ, ಪಿಆರ್‌ಇಡಿ ಹಣ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು ಕೈ ತೊಳೆದುಕೊಂಡಿದೆ. ಈವರೆಗೂ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.
ಪ್ರಯಾಣಿಕರಿಗೆ ಯಾತನೆ: ವೃದ್ಧರು, ಶಾಲಾ ಮಕ್ಕಳು, ಕೃಷಿಕರು, ಕೂಲಿ ಕಾರ್ಮಿಕರು ಹೀಗೆ ನೂರಾರು ಜನ ಇದೇ ಮಾರ್ಗದಲ್ಲಿ ಓಡಾಡುತ್ತಿದ್ದು, ಸೂಕ್ತ ಸಾರಿಗೆ ಸೌಲಭ್ಯವಿಲ್ಲದೇ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ಸುಡುಬಿಸಿಲಲ್ಲೂ ಮಹಿಳೆಯರು ನಡೆದೇ ಹೋಗಬೇಕಿದೆ. ಕಚ್ಚಾ ರಸ್ತೆಯಾಗಿ ಮಾರ್ಪಟ್ಟ ಕಾರಣ ಖಾಸಗಿ ಆಟೋ ಚಾಲಕರು ಇತ್ತ ತಲೆ ಹಾಕುತ್ತಿಲ್ಲ. ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಗ್ರಾಮದ ಕತೆಯೇ ಹೀಗಾದರೆ ಕುಗ್ರಾಮಗಳ ಗತಿಯೇನು ಎಂದು ಪ್ರಶ್ನಿಸುತ್ತಾರೆ ಪ್ರಯಾಣಿಕರು.
ಕ್ಷೇತ್ರದಲ್ಲಿ ಬೇಡವಾದ ಕಡೆ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆ. ಆದರೆ, ಅಗತ್ಯವಿರುವ ಕುಕುನೂರು ರಸ್ತೆ ದುರಸ್ತಿಗೆ ಪ್ರಧಾನಮಂತ್ರಿ ಕಚೇರಿ ಸೂಚಿಸಿದರೂ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಬಗ್ಗೆ ನಿರಂತರ ಪ್ರಯತ್ನ ನಡೆಸಿದ್ದು, ಅಧಿಕಾರಿಗಳನ್ನು ಭೇಟಿ ಮಾಡಿ ಸಾಕಾಗಿದೆ. ಈಗ ಪಿಆರ್‌ಇಡಿಯಿಂದ ಅನುಮೋದನೆಗೆ ಪತ್ರ ಕಳುಹಿಸಿದ್ದಾಗಿ ತಿಳಿದು ಬಂದಿದೆ. ಶೀಘ್ರದಲ್ಲೇ ದುರಸ್ತಿ ಕೈಗೊಳ್ಳದಿದ್ದಲ್ಲಿ ಎಲ್ಲ ದಾಖಲೆ ಸಮೇತ ಪುನಃ ಇ-ಗೌರ್ನೆನ್ಸ್ ಮೂಲಕ ದೂರು ಸಲ್ಲಿಸುವೆ. –ರಾಜಶೇಖರ ಪಾಟೀಲ, ಕುಕುನೂರು ಗ್ರಾಮಸ್ಥ.
ಅಧಿಕಾರಿಗಳು ರಸ್ತೆಗಳ ದುರಸ್ತಿಯನ್ನು ಯಾವ ಯೋಜನೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ಪಿಎಂ ಕಚೇರಿ ಸೂಚನೆ ಬಗ್ಗೆ ಗಮನಕ್ಕೆ ಬಂದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು.-ಆರ್. ವೆಂಕಟೇಶ ಕುಮಾರ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.