ಕಲ್ಯಾಣ ನಾಡಿನ ಅಭಿವೃದ್ಧಿಯೇ ಮೂಲಮಂತ್ರ
ಎಲ್ಲಾ ಮಹಾನ್ ಚೇತನಗಳಿಗೂ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
Team Udayavani, Sep 18, 2021, 5:29 PM IST
ರಾಯಚೂರು: ಕೋವಿಡ್ 3ನೇ ಅಲೆಯ ಆತಂಕ ಹಾಗೂ ಜಿಲ್ಲಾ ಉಸ್ತುವಾರಿ ಅನುಪಸ್ಥಿತಿಯಲ್ಲಿ ಜಿಲ್ಲೆಯಲ್ಲಿ 74ನೇ ಕಲ್ಯಾಣ ಕರ್ನಾಟಕ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಬಳಿಕ ವಿವಿಧ ಪೊಲೀಸ್ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಜಿಲ್ಲೆಯ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ-ಕರ್ನಾಟಕ ಪ್ರದೇಶ ನಿಜಾಮರ ಆಳ್ವಿಕೆಯಿಂದ ಮುಕ್ತಗೊಂಡು 74 ವರ್ಷ ಕಳೆದಿವೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು. 1947, ಆ.15ರಂದು ದೇಶದಲ್ಲಿ ತಿರಂಗ ಧ್ವಜ ಹಾರಾಡಿದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಆ ಸಂಭ್ರಮ ಇರಲಿಲ್ಲ. ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟತನದಿಂದ 1948 ಸೆ.13ರಂದು ಪೊಲೀಸ್ ಕಾರ್ಯಾಚರಣೆ (ಆಪರೇಷನ್ ಪೋಲೋ) ಕೈಗೊಳ್ಳಲಾಯಿತು.
ಸೈನ್ಯವನ್ನು ಎದುರಿಸಲಾಗದೆ ಸೆ.17ರಂದು ನಿಜಾಮರು ಶರಣಾದರು. ಹೈದರಾಬಾದ್ ಪ್ರಾಂತ್ಯವು ಭಾರತದಲ್ಲಿ ವಿಧಿವತ್ತಾಗಿ ವಿಲೀನವಾಯಿತು. ಅದರ ಸವಿ ನೆನಪಿಗಾಗಿ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಉತ್ಸವ ದಿನ ಎಂದು ಆಚರಿಸುತ್ತಿದ್ದೇವೆ ಎಂದು ವಿವರಿಸಿದರು. ಸರ್ಕಾರ ಈ ಭಾಗದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 1,493 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಕೆಕೆಆರ್‌ಡಿಬಿಯಿಂದ ಜಿಲ್ಲೆಗೆ ಈವರೆಗೆ ಒಟ್ಟು 568 ಕೋಟಿ ರೂ. ಅನುದಾನ ಸಿಕ್ಕಿದ್ದು, 778 ಕಾಮಗಾರಿ ಮಂಜೂರಾಗಿವೆ. 597 ಕಾಮಗಾರಿಗಳು ಮುಗಿದಿದ್ದು, 125 ಕಾಮಗಾರಿ ಪ್ರಗತಿಯಲ್ಲಿವೆ ಎಂದರು.
ಕೃಷ್ಣಾ ನದಿ ಪ್ರವಾಹದಿಂದ 3,217 ಹೆಕ್ಟೇರ್ ಕೃಷಿ ಹಾಗೂ 45 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೊದಲ ಹಂತದ 807 ಫಲಾನುಭವಿಗಳಿಗೆ 1 ಕೋಟಿ ಇನ್‌ಪುಟ್ ಸಬ್ಸಿಡಿ ಜಮೆ ಮಾಡಲು ಅನುಮೋದನೆ ನೀಡಲಾಗಿದೆ. ರಾಯಚೂರು ವಿಮಾನ ನಿಲ್ದಾಣದ ಸರ್ವೇ ಕಾರ್ಯ ನಡೆಯುತ್ತಿದೆ. ಕೆಕೆಆರ್‌ಡಿಬಿಯಡಿ 40 ಕೋಟಿ ರೂ. ಮತ್ತು ಡಿಎಂಎಫ್ ಅಡಿ 10 ಕೋಟಿ ರೂ. ಸೇರಿ 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೆಎಸ್ ಐಐಡಿಸಿ ಮತ್ತು ಆರ್‌ಐಟಿಇಎಸ್ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದರು.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಜಲ್‌ಜೀವನ್ ಮಿಷನ್ ಯೋಜನೆಯಡಿ 313 ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಪ್ರತಿ ಮನೆ-ಮನೆಗೆ ನೀರು ಪೂರೈಕೆಗೆ ಪ್ರಸಕ್ತ ಸಾಲಿನಲ್ಲಿ 225 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, 213 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ರಾಜ್ಯ ಸರ್ಕಾರದ 1,500 ಕೋಟಿ ರೂ.ಗಳ ಅನುದಾನದಲ್ಲಿ ಜಲಧಾರೆ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಬಿ.ಆರ್ ಗಣೇಕಲ್ ಏತ ನೀರಾವರಿಗೆ 200 ಕೋಟಿ ರೂ. ಮತ್ತು ರಾಯಚೂರು ತಾಲೂಕಿನ ಲಿಂಕ್ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 212 ಕೋಟಿ ರೂ. ಕಾಮಗಾರಿಗೆ ಶೀಘ್ರವೇ ಚಾಲನೆ ಸಿಗುವ ನಿರೀಕ್ಷೆ ಇದೆ. ಲೋಕೋಪಯೋಗಿ ಇಲಾಖೆಯಲ್ಲಿ 394 ಕೋಟಿ ರೂ. ಅಂದಾಜು ಮೊತ್ತದಲ್ಲಿ ಜಿಲ್ಲೆಯಲ್ಲಿ 51ವಿವಿಧಕಾಮಗಾರಿಗಳುಮುಗಿದಿವೆ. ರಸ್ತೆ, ಸೇತುವೆ ಮತ್ತು ಕಟ್ಟಡಗಳ ತುರ್ತು ದುರಸ್ತಿಗಾಗಿ 735 ಕೋಟಿ ಮೊತ್ತದಲ್ಲಿ 131 ಕಾಮಗಾರಿ ಕೈಗೊಂಡಿದ್ದು, 74 ಕಾಮಗಾರಿ ಮುಗಿದಿವೆ. ರಿಂಗ್ ರಸ್ತೆಗೆ ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಆಯವ್ಯಯದಲ್ಲಿ 80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದರು.
ಇಂತಹ ಹತ್ತು ಹಲವು ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಮಹಾನ್ ಚೇತನಗಳಿಗೂ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ದೇಶ ಚೈತನ್ಯಯುತ ಅಭಿವೃದ್ಧಿಶೀಲ ದೇಶವಾಗಬೇಕಾದರೆ ದೇಶಪ್ರೇಮ ಮೂಡಬೇಕು ಎಂದರು. ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್‌ಪಿ ಪ್ರಕಾಶ್ ನಿಕ್ಕಂ, ಎಡಿಸಿ ಕೆ.ಆರ್.ದುರುಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ಜನಪ್ರತಿನಿಧಿಗಳಿಗಿಲ್ಲ ಉತ್ಸವದ ಉತ್ಸಾಹ
ಎಲ್ಲೆಡೆ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಮನೆ ಮಾಡಿದ್ದರೆ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಮುಖಂಡರಿಗೆ ಮಾತ್ರ ಅದು ಬೇಕಿಲ್ಲವೇನೋ ಎನಿಸಿತು. ಈ ಬಾರಿ ಜಿಲ್ಲಾ ಉಸ್ತುವಾರಿಯನ್ನುಕೊಪ್ಪಳದ ಹಾಲಪ್ಪ ಆಚಾರ್ ಅವರಿಗೆ ನೀಡಿದ್ದು, ಎರಡು ಜಿಲ್ಲೆಯಹೊಣೆಹೊತ್ತ ಅವರು ಜಿಲ್ಲೆಗೆ ಬರಲಿಲ್ಲ. ಸಚಿವರು ಬಂದರೆ ಪುಂಖಾನುಪುಂಖವಾಗಿ ಬರುತ್ತಿದ್ದ ಜನಪ್ರತಿನಿಧಿಗಳು, ರಾಜಕೀಯ ಮುಖಂಡರುಯಾರೊಬ್ಬರು ಸುಳಿಯಲಿಲ್ಲ. ನಗರ ಶಾಸಕ ಡಾ| ಶಿವರಾಜ್ ಪಾಟೀಲ್ ನಗರದಲ್ಲಿಯೇ ಇದ್ದರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಆ ಮೂಲಕ ಕಲ್ಯಾಣಕರ್ನಾಟಕ ಭಾಗದಕಾಳಜಿ ಎಷ್ಟರ ಮಟ್ಟಿಗಿದೆ ಎಂದು ಗೊತ್ತಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.