ರೈತರ ಸಂಕಷ್ಟಕ್ಕೆ ಬಡಕಲು ನಾಯಕತ್ವ ಕಾರಣ
Team Udayavani, Dec 4, 2018, 1:01 PM IST
ರಾಯಚೂರು: ಜಿಲ್ಲೆಯ ನೀರಾವರಿ ವಿಚಾರದಲ್ಲಿ ಇಂಥ ವಿಷಮ ಸ್ಥಿತಿ ನಿರ್ಮಾಣವಾಗಲು ನಮ್ಮಲ್ಲಿರುವ ಬಡಕಲು ನಾಯಕತ್ವಗಳೇ ಕಾರಣ ಎಂದು ರೈತಪರ ಹೋರಾಟಗಾರ ಹನುಮನಗೌಡ ಬೆಳಗುರ್ಕಿ ಟೀಕಿಸಿದರು.
ರಾಯಚೂರು ತಾಲೂಕು ಕೃಷ್ಣ ಬಲದಂಡೆ ಕಾಲುವೆ ರೈತರ ಹಿತರಕ್ಷಣಾ ಸಮಿತಿಯಿಂದ ಸೋಮವಾರ ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಎನ್‌ಆರ್‌ಬಿಸಿ ಕಾಲುವೆಯನ್ನು ಗಣೇಕಲ್ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯ ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ. ಈ ಯೋಜನೆ ಜಾರಿಯಿಂದ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಕಾನೂನು ತೊಡಕುಗಳ ಬಗ್ಗೆ ಅರಿಯುವುದು ಅಗತ್ಯ. ಇದು ಕೇವಲ ನಾಲ್ಕು ಟಿಎಂಸಿ ಅಡಿ ನೀರಿನ ವಿಚಾರವಲ್ಲ. ಭವಿಷ್ಯದಲ್ಲಿ ಎದುರಾಗುವ ಆತಂಕದ ವಿಚಾರ ಎಂದು ಎಚ್ಚರಿಸಿದರು.
ತುಂಗಭದ್ರಾ ಎಡದಂಡೆ ನಾಲೆ (ಟಿಎಲ್‌ಬಿಸಿ), ನಾರಾಯಣಪುರ ಬಲದಂಡೆ ನಾಲೆ (ಎನ್‌ಆರ್‌ಬಿಸಿ) ವ್ಯಾಪ್ತಿಗೆ ಒಟ್ಟು ಏಳು ಲಕ್ಷ ಎಕರೆ ನೀರಾವರಿ ಪ್ರದೇಶವಿದೆ. ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ವಿಸ್ತರಿಸುವಂಥ ದೂರದೃಷ್ಟಿ ನಾಯಕರಲ್ಲಿಲ್ಲ. ಜಿಂದಾಲ್‌ಗೆ ಕೃಷ್ಣ ನದಿಯಿಂದ ನೀರು ಪೂರೈಸಲು ತೋರುವ ಇಚ್ಛಾಶಕ್ತಿ ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ಕಾಣದಾಗಿದೆ ಎಂದು ದೂರಿದರು.
ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯದಿಂದ 200 ಟಿಎಂಸಿ ಅಡಿ, ಆಲಮಟ್ಟಿಯಿಂದ 300 ಟಿಎಂಸಿ ಅಡಿ ನೀರು ವೃಥಾ ನದಿಗೆ ಹರಿದು ಹೋಗಿದೆ. ಆದರೆ, ಜಿಲ್ಲೆಗೆ ನೀರಾವರಿಗಾಗಿ 212 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೆ, ಅದರಲ್ಲಿ ಕೇವಲ 150 ಟಿಎಂಸಿ ಅಡಿ ಪ್ರಮಾಣದಲ್ಲಿ ಮಾತ್ರ ನೀರು ಲಭ್ಯವಾಗುತ್ತಿದೆ. ನೀರು ನಿರ್ವಹಣೆಯಲ್ಲಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ. ನೀರಿನ ಲಭ್ಯತೆ ಆಧರಿಸಿ ಸಮರ್ಪಕವಾಗಿ ಹಂಚಿಕೆ ಮತ್ತು ಬಳಕೆ ಮಾಡುವಲ್ಲಿ ಕಾಣುತ್ತಿರುವ ವೈಫಲ್ಯವೇ ಇಂದು ಕೊನೆ ಭಾಗದ ರೈತರು ಕಣ್ಣೀರಿಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.
ಕೇವಲ ನೀರಾವರಿ ವಿಚಾರವಾಗಿಯೇ ವಿಧಾನಸೌಧದಲ್ಲಿ ಒಂದು ವಾರ ಚರ್ಚೆ ನಡೆಯಬೇಕು. ಅಂದಾಗ ರಾಜ್ಯದ ನೀರಿನ ಸಮಸ್ಯೆಗಳಿಗೆ ಏನಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರ ಜಮೀನಿನಲ್ಲಿ ಚಿಕ್ಕ ಕೆರೆ ನಿರ್ಮಿಸಲಿ, ಅದಕ್ಕಾಗಿ ಸರ್ಕಾರ ಶೇ.50ರಷ್ಟು ಸಬ್ಸಿಡಿ ಕೊಡಲಿ. ಆಗ ಯಾವ ರೈತರೂ ಈ ರೀತಿ ನೀರಿಗಾಗಿ ಬೀದಿಗೆ ಇಳಿಯುವ ಸನ್ನಿವೇಶ ನಿರ್ಮಾಣವಾಗುವುದಿಲ್ಲ ಎಂದು ಸಲಹೆ ನೀಡಿದರು.
ಸಮಾವೇಶ ಉದ್ಘಾಟಿಸಿದ ಕೃಷ್ಣ ಕಣಿವೆ ಹೋರಾಟಗಾರ ಬಸವರಾಜ ಕುಂಬಾರ ಮಾತನಾಡಿ, ನೀರಿಗಾಗಿ ಮೂರನೇ ಯುದ್ಧ ನಡೆಯಲಿದೆ ಎಂಬ ಮಾತು ಹಂತಹಂತವಾಗಿ ನಿಜವಾಗುತ್ತಿದೆ. ಆದರೆ, ಇಂದು ನೀವು ಕೈಗೊಂಡ ಹೋರಾಟ ಯಾವುದೇ ಕಾರಣಕ್ಕೂ ರಾಜಕೀಯ ಸ್ವರೂಪ ಪಡೆಯಬಾರದು. ಒಂದು ವೇಳೆ ಹಾಗಾದಲ್ಲಿ ಆ ಹೋರಾಟದ ಮೌಲ್ಯವೇ ಕಳೆದು ಹೋಗುತ್ತದೆ ಎಂದು ಎಚ್ಚರಿಸಿದರು.
ನೀರಿನ ಸಮರ್ಪಕ ಬಳಕೆ ಮಾಡಿದರೆ ಯಾವ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ, ನಮ್ಮ ಪಾಲಿನ ನೀರನ್ನು ನೆರೆ ರಾಜ್ಯಗಳಿಗೆ ಹರಿಸಿ ನಾವು ಬರ ಎದುರಿಸುತ್ತಿದ್ದೇವೆ. ಇಂದು ನೀರಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡುತ್ತಿದೆ. ರೈತನಿಗೆ ಯಾವ ಯೋಜನೆ, ಸಾಲ ಮನ್ನಾ, ಸಬ್ಸಿಡಿಗಳು ಬೇಕಿಲ್ಲ. ನೀರು ಕೊಟ್ಟರೆ ಸಾಕು. ಸರ್ಕಾರ ಮೊದಲು ಆ ಕೆಲಸ ಮಾಡಲಿ. ನಿಮ್ಮ ಹೋರಾಟ ಅಚಲವಾಗಿರಲಿ ಎಂದು ಹೇಳಿದರು.
ರೈತರು ಕೂಡ ಅಧಿಕ ಇಳುವರಿ ಆಸೆಗೆ ಅಗತ್ಯವಿಲ್ಲದಿದ್ದರೂ ಅಧಿಕ ನೀರು ಹಾಯಿಸಿ, ರಸಗೊಬ್ಬರ ಬಳಸಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಭಾಗದಲ್ಲಿ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ತೆಗೆಯಬಹುದು. ಆ ದಿಸೆಯಲ್ಲಿ ಕೃಷಿ ಮಾಡುವಂತೆ ಕರೆ ನೀಡಿದರು. ಕೊನೆಗೆ ಹೋರಾಟದ ರೂಪರೇಷೆಗಳ ಕುರಿತು ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಿತಿ ಮುಖಂಡ ಶಿವಬಸಪ್ಪ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಗೋಪಾಲರೆಡ್ಡಿ, ಶರಬನಗೌಡ, ಷಣ್ಮುಖಪ್ಪ, ಸಿದ್ಧನಗೌಡ ಮುರಾನ್‌ಪುರ ಸೇರಿ ಇತರರಿದ್ದರು. ಚನ್ನಬಸವಣ್ಣ ನಿರೂಪಿಸಿದರು.
ಕೇವಲ 30 ಕಿ.ಮೀ. ಅಂತರದಲ್ಲಿ ಎರಡು ಜೀವನದಿಗಳು ಹರಿಯುತ್ತಿವೆ. ಆದರೆ, ನಮ್ಮ ನಾಯಕರಿಗೆ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ಇಲ್ಲ. 50 ವರ್ಷಗಳ ಹಿಂದೆ ಜಲಾಶಯ ನಿರ್ಮಿಸಿದರೂ ಇನ್ನೂ ಕೊನೆ ಭಾಗದಲ್ಲಿ ಕಾಲುವೆ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ. ನಗರಕ್ಕೆ ಕುಡಿಯುವ ನೀರು ಬೇಕು ಎಂಬ ಕಾರಣಕ್ಕೆ 150 ಹಳ್ಳಿಗಳ ರೈತರ ಬದುಕು ಬಲಿ ಕೊಡುವುದು ಸರಿಯಲ್ಲ.
ಷಣ್ಮುಖಪ್ಪ ವೆಂಕಟಾಪುರ, ಹೋರಾಟ ಸಮಿತಿ ಸದಸ್ಯ
ಈ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದೆ 157 ಕಿ.ಮೀ.ವರೆಗೆ ಕಾಲುವೆ ವಿಸ್ತರಿಸಲು ಹೋರಾಡಿದ್ದೆವು. ಇಂದು ಲಿಂಕ್ ಕಾಲುವೆ ಬೇಡ ಎಂದು ಹೋರಾಡಬೇಕಿದೆ. ಇದು ಯಾವುದೇ ರಾಜಕೀಯ ಪ್ರೇರಿತವಲ್ಲ. ಕೊನೆ ಭಾಗದ ರೈತರು ಸ್ವ ಇಚ್ಛೆಯಿಂದ ಹೋರಾಟಕ್ಕೆ ಧುಮುಕಬೇಕು. ಅಂದಾಗ ಫಲ ಸಿಗಲು ಸಾಧ್ಯ.
ಶಿವಬಸಪ್ಪ ಮಾಲಿಪಾಟೀಲ, ಹೋರಾಟ ಸಮಿತಿ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.