ಶುದ್ಧನೀರು ಘಟಕ ನಿರುಪಯುಕ್ತ
ಗ್ರಾಮೀಣ ಜನರಿಗೆ ಕೆರೆ-ಕಾಲುವೆ-ಕೊಳವೆಬಾವಿಯ ಅಶುದ್ಧ ನೀರೇ ಜೀವಜಲ
Team Udayavani, Feb 14, 2020, 3:10 PM IST
ಗೊರೇಬಾಳ: ಸಿಂಧನೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜನತೆಗೆ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಿದ್ದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದಾಗಿ ನಿರುಪಯುಕ್ತವಾಗಿವೆ. ಹೀಗಾಗಿ ಜನ ಕೊಳವೆಬಾವಿ, ಇಲ್ಲವೇ ಕೆರೆ ಇಲ್ಲವೇ ಕಾಲುವೆಯ ಅಶುದ್ಧ ನೀರನ್ನೇ ಸೇವಿಸುವಂತಾಗಿದೆ.
ಸಿಂಧನೂರು ತಾಲೂಕಿನ ಸಾಸಲಮರಿ, ತಾಯಮ್ಮಕ್ಯಾಂಪ್, ಶ್ರೀಪುರಂಜಂಕ್ಷನ್, ಸೋಮಲಾಪುರ, ಏಳುಮೈಲ್ ಕ್ಯಾಂಪ್ ಸೇರಿದಂತೆ ಹಲವು ಗ್ರಾಮ, ಕ್ಯಾಂಪ್ ಗಳಲ್ಲಿ ಮೂರ್‍ನಾಲ್ಕು ವರ್ಷಗಳ ಹಿಂದೆಯೇ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಪ್ರತಿ ಘಟಕಕ್ಕೆ 8ರಿಂದ 10 ಲಕ್ಷ ರೂ. ವ್ಯಯಿಸಲಾಗಿದೆ.
ತಾಯಮ್ಮಕ್ಯಾಂಪ್‌ನಲ್ಲಿನ ಶುದ್ಧ ನೀರಿನ ಘಟಕದಲ್ಲಿ ಯಂತ್ರಗಳೇ ಇಲ್ಲ. 2016-17ನೇ ಸಾಲಿನ ನೀತಿ ಆಯೋಗದ ಅನುದಾನದಲ್ಲಿ 8.80 ಲಕ್ಷ ರೂಪಾಯಿ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಈ ಘಟಕ ದುರಸ್ತಿಗೀಡಾಗಿ ವರ್ಷಗಳೇ ಕಳೆದಿದ್ದು, ನೀರಿಲ್ಲವಾಗಿದೆ. ಹೊಸದಾಗಿ ತಿಂಗಳುಗಳ ಹಿಂದೆ ಮತ್ತೂಂದು ಆರ್‌ಓ ಘಟಕ ಅಳವಡಿಕೆಗೆ ಕೊಠಡಿ ನಿರ್ಮಿಸಿದ್ದು, ಇನ್ನೂ ಯಂತ್ರ ಜೋಡಿಸಿಲ್ಲ. ಹೀಗಾಗಿ ಗ್ರಾಮಸ್ಥರು ಕಾಲುವೆ ನೀರನ್ನೇ ಕುಡಿಯುವಂತಾಗಿದೆ. ಘಟಕದ ಕಾಮಗಾರಿ ಕಳಪೆಯಾಗಿದ್ದು, ಬುನಾದಿಯಲ್ಲಿ ಬಿರುಕು ಬಿಟ್ಟಿವೆ. ಇದೇ ಗ್ರಾಮದಲ್ಲಿ ಕಿರು ನೀರು ಸರಬರಾಜು ಯೋಜನೆ ಇದ್ದರೂ, ಇದುವರೆಗೆ ಆರಂಭಗೊಂಡಿಲ್ಲ. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಶ್ರೀಪುರಂಜಂಕ್ಷನ್‌ನಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಾಮಗ್ರಿಗಳು ಕಾಣೆಯಾಗಿವೆ. ಘಟಕದ ಒಳಗೆ ಅಶ್ಲೀಲ ಬರಹಗಳು ಕಾಣಸಿಗುತ್ತವೆ. ನೀರು ಒದಗಿಸುವ ಘಟಕ ನೆಪ ಮಾತ್ರಕ್ಕೆ ಎಂಬಂತಾಗಿದೆ. ಜನರು ಕೆರೆ ನೀರನ್ನೇ ಸೇವಿಸುವಂತಾಗಿದೆ. ಇನ್ನು ಸೋಮಲಾಪುರ ಗ್ರಾಮದಲ್ಲಿ ಕೆರೆ ಪಕ್ಕದಲ್ಲಿಯೇ 2016-17ನೇ ಸಾಲಿನಲ್ಲಿ 10.20 ಲಕ್ಷ ರೂಪಾಯಿ ಅನುದಾನದಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತ ಎಜೆನ್ಸಿಯವರು ಶುದ್ಧ ನೀರು ಘಟಕ ನಿರ್ಮಿಸಿದ್ದಾರೆ. ಆದರೆ ಇಂದಿಗೂ ಆರಂಭಗೊಂಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿ ಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜನ ಅಶುದ್ಧ ನೀರನ್ನೇ ಸೇವಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಪಂದನೆ ಕೊರತೆ: ಘಟಕ ಆರಂಭ ಹಾಗೂ ನಿರ್ವಹಣೆ ಕುರಿತಂತೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಹಲವರ ಬೇಸರವಾಗಿದೆ. ಕೆಲವು ಗ್ರಾಮಗಳಲ್ಲಿ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಜನತೆ ಅಲ್ಲಿಗೆ ಹೋಗಿ ನೀರು ತಂದು ಕುಡಿಯುತ್ತಾರೆ. ಘಟಕ ಇಲ್ಲದ ಕಡೆಗಳಲ್ಲಿ ಬೋರ್‌ವೆಲ್, ಕೆರೆ, ಕಾಲುವೆ ನೀರೇ ಆಧಾರವಾಗಿದೆ. ತಾಲೂಕಿನಲ್ಲಿ 160ಕ್ಕೂ ಅಧಿ ಕ ನೀರಿನ ಘಟಕಗಳಿದ್ದು, ಅರ್ಧದಷ್ಟು ಘಟಕಗಳು ಕಾರ್ಯಾರಂಭ ಮಾಡಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿ ಶುದ್ಧ ನೀರು ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.