ಸಂಪುಟದಲ್ಲಿ ಹೈಕಕ್ಕೂ ಅನ್ಯಾಯ
Team Udayavani, Jun 8, 2018, 12:07 PM IST
ರಾಯಚೂರು: ಸಚಿವ ಸಂಪುಟ ರಚನೆಯಲ್ಲಿ ಉತ್ತರ ಕರ್ನಾಟಕ ಕಡೆಗಣೆಗೆ ಒಳಪಟ್ಟಿದೆ ಎಂಬ ವಾದದ ಮಧ್ಯೆ ಹೈದರಾಬಾದ್ ಕರ್ನಾಟಕ ಭಾಗಕ್ಕೂ ಸಿಹಿ, ಕಹಿ ಲಭಿಸಿದೆ. ನಂಜುಂಡಪ್ಪ ವರದಿ ಶಿಫಾರಸಿನನ್ವಯ ಎಂಟು ಸಚಿವ ಸ್ಥಾನ ಸಿಗಬೇಕಿದ್ದ ಹೈ-ಕ ಭಾಗಕ್ಕೆ ನಾಲ್ಕು ಮಾತ್ರ ನೀಡಲಾಗಿದೆ. ಅದರಲ್ಲೂ ಮೂರು ಜಿಲ್ಲೆಗಳು ಸಚಿವ ಸ್ಥಾನ ವಂಚಿತಗೊಂಡಿವೆ.
ಸಮ್ಮಿಶ್ರ ಸರ್ಕಾರದಲ್ಲಿ ಹೈ-ಕ ಭಾಗಕ್ಕೆ ನಾಲ್ಕು ಸಚಿವ ಸ್ಥಾನ ಲಭಿಸಿದ್ದು, ಅದರಲ್ಲಿ ಎರಡು ಬೀದರ್ ಜಿಲ್ಲೆ ಪಾಲಾಗಿವೆ. ಉಳಿದಂತೆ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗೆ ಒಂದೊಂದು ಸಚಿವ ಸ್ಥಾನ ಸಿಕ್ಕಿದೆ. ಆದರೆ, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ. ಕಳೆದ ಬಾರಿ ಸಚಿವ ವಂಚಿತ ರಾಯಚೂರಿಗೆ ಈ ಬಾರಿ ನ್ಯಾಯ ಸಿಕ್ಕಿರುವುದು ಸಮಾಧಾನಕರ. ಆದರೆ, ಯಾದಗಿರಿಗೆ ಮತ್ತೂಮ್ಮೆ ಅನ್ಯಾಯವಾಗಿದೆ.
ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರಕೋಟೆ ಎಂದೆ ಹೆಸರಾದ ಬಳ್ಳಾರಿಗೂ ಈ ಬಾರಿ ಒಂದೂ ಸಚಿವ ಸ್ಥಾನ ಲಭಿಸಿಲ್ಲ. ಇನ್ನು ಕೊಪ್ಪಳದಲ್ಲೂ ಅಮರೇಗೌಡ ಬಯ್ನಾಪುರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಗುಮಾನಿಗಳಿದ್ದವು. ಅಲ್ಲದೇ, ಆಪರೇಷನ್ ಕಮಲಕ್ಕೆ ತುತ್ತಾಗದೆ ಪಕ್ಷ ನಿಷ್ಠೆ ತೋರಿದ್ದರು. ಹೀಗಾಗಿ ಅವರಿಗೆ ಸಚಿವ ಪಟ್ಟ ಸಿಗಬಹುದು ಎಂಬ ಊಹೆ ಹುಸಿಯಾಗಿದೆ. ಇನ್ನು ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆಗೆ ಸಚಿವ ಸ್ಥಾನ ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ಅಜಯ್‌ಸಿಂಗ್ ಕೈ ತಪ್ಪಿದೆ. ಒಂಭತ್ತು ಕ್ಷೇತ್ರಗಳುಳ್ಳ ಕಲಬುರಗಿಯಂಥ ದೊಡ್ಡ ಜಿಲ್ಲೆಗೂ ಒಂದೇ ಸಚಿವ ಸ್ಥಾನ ಸಿಕ್ಕಿದೆ.
ಕಲಬುರಗಿಯ ಒಂಭತ್ತು ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಜೆಡಿಎಎಸ್ ಎಲ್ಲೂ ಗೆದ್ದಿಲ್ಲ. ಅದರಲ್ಲಿ ಪ್ರಿಯಾಂಕ ಖರ್ಗೆ, ಅಜಯಸಿಂಗ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇನ್ನು ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಜಿಲ್ಲೆಗೆ ಆದ್ಯತೆ ನೀಡಿದರೆ ನನಗೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಇಲ್ಲೂ ಎರಡು ಬಿಜೆಪಿ, ಒಂದು ಕಾಂಗ್ರೆಸ್ ಮತ್ತು ಒಂದರಲ್ಲಿ ಜೆಡಿಎಸ್ ಗೆಲುವು ದಾಖಲಿಸಿತ್ತು.
ಬಳ್ಳಾರಿ ಕಡೆಗಣನೆ: ಒಂದು ಕಾಲಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯ ಶಕ್ತಿ ಕೇಂದ್ರದಂತಿದ್ದ ಬಳ್ಳಾರಿಯಲ್ಲಿ ಈ ಬಾರಿಯೂ ಒಂಭತ್ತರಲ್ಲಿ ಆರುಸ್ಥಾನ ಗೆದ್ದಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆನಂದಸಿಂಗ್, ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿತ್ತು. ಇವರಿಬ್ಬರು ಮಾತ್ರವಲ್ಲದೇ ಸಂಡೂರು ಶಾಸಕ ಈ. ತುಕಾರಾಂ ಕೂಡ ಮೂರನೇ ಬಾರಿ ಗೆಲುವು ದಾಖಲಿಸಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಬೀದರ್‌ಗೆ ಬಂಪರ್: ಆರು ಕ್ಷೇತ್ರ ಹೊಂದಿದ ಬೀದರ್ ಜಿಲ್ಲೆಗೆ ಉತ್ತಮ ಪ್ರಾತಿನಿಧ್ಯ ಸಿಕ್ಕಿದೆ. ನಾಲ್ಕು ಬಾರಿ ಗೆದ್ದ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ ಸಚಿವರಾದರೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪರಮಾಪ್ತ ಬಂಡೆಪ್ಪ ಕಾಶೆಂಪುರ ಕೂಡ ಸಚಿವರಾಗಿದ್ದಾರೆ. ಇಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕೂಡ ರೇಸ್‌ನಲ್ಲಿದ್ದರು. ಅವರಿಗೆ ಸಚಿವ ಸ್ಥಾನ ತಪ್ಪಿದೆ. ಇನ್ನು ಹೈಕ ಭಾಗದಲ್ಲಿ ಗೆದ್ದ ಅಲ್ಪಸಂಖ್ಯಾತರು ಇಬ್ಬರೇ. ಅದರಲ್ಲಿ ಮಾಜಿ ಸಚಿವ ಖಮರುಲ್ ಇಸ್ಲಾಂ ಪತ್ನಿ ಖನೀಜ್ ಫಾತೀಮಾ ಹಾಗೂ ಬೀದರ್ ನಗರ ಕ್ಷೇತ್ರದ ರಹೀಂ ಖಾನ್. ಮೂರು ಬಾರಿ ಗೆದ್ದ ರಹೀಂಖಾನ್ ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದರು. ಅವರಿಗೂ ಸಿಕ್ಕಿಲ್ಲ.
ಕೊಪ್ಪಳಕ್ಕೂ ಸಿಕ್ಕಿಲ್ಲ ಆದ್ಯತೆ: ಕೊಪ್ಪಳ ಜಿಲ್ಲೆಗೂ ಈ ಬಾರಿ ಸಚಿವ ಸ್ಥಾನ ಕೈ ತಪ್ಪಿದೆ. ಕುಷ್ಟಗಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ನಾಪುರಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆ ಹೈ-ಕ ಭಾಗದ 40 ಕ್ಷೇತ್ರಗಳಲ್ಲಿ 25ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಜಿಲ್ಲೆಗೊಂದರಂತೆ ಆದ್ಯತೆ ನೀಡಿದ್ದರೂ ಕನಿಷ್ಠ ಆರು ಸಚಿವ ಸ್ಥಾನವಾದರೂ ದಕ್ಕಬೇಕಿತ್ತು. ಸರ್ಕಾರದಲ್ಲಿ ಇನ್ನೂ ಹಲವು ಸ್ಥಾನ ಹಂಚಿಕೆಯಾಗದೆ ಬಾಕಿ ಇದ್ದು, ಮುಂಬರುವ ದಿನಗಳಲ್ಲಾದರೂ ಹಂಚಿಕೆ ಆಗಬೇಕು ಎಂಬ ಒತ್ತಾಯ ಈ ಭಾಗದ ಜನರದು
ಸರ್ಕಾರಗಳು ಈ ಭಾಗವನ್ನು ಕಡೆಗಣಿಸುವ ಸಂಪ್ರದಾಯ ಮುರಿಯಲಿ. ಹಿಂದಿನ ಸರ್ಕಾರ ಕೂಡ ಹೈ-ಕ ಭಾಗದ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಸರ್ಕಾರವೂ ಮೂರು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಿಲ್ಲ. ನಂಜುಂಡಪ್ಪ ವರದಿಯನ್ವಯ ಕನಿಷ್ಠ ಎಂಟು ಸಚಿವ ಸ್ಥಾನ ಹೈ-ಕ ಭಾಗಕ್ಕೆ ನೀಡಬೇಕು. ಅದರಲ್ಲಿ ಕನಿಷ್ಠ ಜಿಲ್ಲೆಗೊಂದರಂತೆ ಆರು ಸ್ಥಾನಗಳನ್ನಾದರೂ ಕೊಡಲಿ. ಅದರ ಜತೆಗೆ ಆ ಜಿಲ್ಲೆಯ ಸಚಿವರಿಗೆ ಅದೇ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಬೇಕು. ಅಂದಾಗ ಮಾತ್ರ ಪ್ರಗತಿ ಸಾಧ್ಯ.
ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್ ಮುಖಂಡ
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.