ಪೌರ ಕಾರ್ಮಿಕರ ಸೇವೆ ಕಾಯಂಗೆ ಆಗ್ರಹಿಸಿ ಧರಣಿ
ನೈರ್ಮಲ್ಯ ವಿಭಾಗದ ವಾಹನ ಚಾಲಕರಿಗೆ 7 ತಿಂಗಳ ವೇತನ ಹಾಗೂ ಪಿಎಫ್, ಇಎಸ್‌ಐ ಹಣ ಜಮಾ ಮಾಡಬೇಕು
Team Udayavani, Feb 24, 2021, 6:48 PM IST
ರಾಯಚೂರು: ನಗರಸಭೆ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ
ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಗರಸಭೆ ಹಿಂದಿನ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ಕಾಯಂಗೊಳಿಸದೇ ವಿಳಂಬ ನೀತಿ, ಕಿರುಕುಳ ನೀಡುತ್ತಿರುವ ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳ ಧೋರಣೆ ಖಂಡನೀಯ. 41 ಪೌರಕಾರ್ಮಿಕರು ಮಾತ್ರ ಕಾಯಂಗೆ ಅರ್ಹರಿದ್ದು, ವಾಲ್‌ಮಾನ್, ಪಂಪ್ ಆಪರೇಟರ್, ಫಿಟ್ಟರ್, ಪರಿಚಾರಕಿಯರ ಸೇರಿ 60 ಜನರನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ಪೌರಕಾರ್ಮಿಕರೆಂದು ನೇಮಿಸಲಾಗಿದೆ. ಹೀಗೆ ನೇಮಕಗೊಂಡವರು ಕೆಲಸಕ್ಕೆ ಬಾರದೇ ವೇತನ ಪಡೆಯುತ್ತಿದ್ದಾರೆ ಎಂದು
ದೂರಿದರು.
ಕೊರೊನಾ ವಾರಿಯರ್ಗಳಾದ ಪೌರಕಾರ್ಮಿಕರ ವಿರುದ್ಧ ಹೂಡಿದ ಸುಳ್ಳು ಕ್ರಿಮಿನಲ್ ಪ್ರಕರಣ ಹಿಂಪಡೆಯಬೇಕು. ದಿನಗೂಲಿ ನೌಕರರ ಸೇವೆ ಕಾಯಂಗೊಳಿಸಿ 2017ರ ಏ.10ರಂದು ಡಿಸಿ ಹೊರಡಿಸಿದ್ದ ಕಾನೂನು ಬಾಹಿರ ಆದೇಶ ರದ್ದುಗೊಳಿಸಬೇಕು. 4 ತಿಂಗಳ ವೇತನ ಪಾವತಿಸಬೇಕು, ಇಎಸ್‌ಐ ಹಣ ಜಮಾ ಮಾಡಬೇಕು, ಪೌರಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಇನ್ನೂ 50 ಪೌರಕಾರ್ಮಿಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ನೈರ್ಮಲ್ಯ ವಿಭಾಗದ ವಾಹನ ಚಾಲಕರಿಗೆ 7 ತಿಂಗಳ ವೇತನ ಹಾಗೂ ಪಿಎಫ್, ಇಎಸ್‌ಐ ಹಣ ಜಮಾ ಮಾಡಬೇಕು, ಗುತ್ತಿಗೆದಾರರು 2014ರಿಂದ ಕಡಿಮೆ ಪಿಎಫ್ ಹಣ ಜಮಾ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆ
ಈಡೇರಿಸುವಂತೆ ಆಗ್ರಹಿಸಿದರು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಎಸ್. ಮಾರೆಪ್ಪ ವಕೀಲ, ಜಿಲ್ಲಾಧ್ಯಕ್ಷ ಉರುಕುಂದಪ್ಪ, ಉಪಾಧ್ಯಕ್ಷ ಮುತ್ತಣ್ಣ, ತಾಲೂಕು ಅಧ್ಯಕ್ಷ ಅಬ್ರಾಹಂ ಕಮಲಾಪುರ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.