ದಾಂಪತ್ಯ ಜೀವನಕ್ಕೆ 39 ಜೋಡಿ ಪಾದಾರ್ಪಣೆ
ಲಿಂಗದಳ್ಳಿಯಲ್ಲಿ ಸರಳ ಸಾಮೂಹಿಕ ವಿವಾಹ-ವೇದಿಕೆ ಕಾರ್ಯಕ್ರಮ ರದ್ದು ಅಧಿಕಾರಿಗಳಿಂದ ಜಾಗೃತಿ
Team Udayavani, Mar 16, 2020, 4:46 PM IST
ಜಾಲಹಳ್ಳಿ: ವಿಶ್ವವ್ಯಾಪಿ ಜನರನ್ನು ತಲ್ಲಣಗೊಳಿಸಿದ ಕೊರೊನಾ ಆತಂಕದ ನಡುವೆಯೂ ಸಮೀಪದ ಲಿಂಗದಳ್ಳಿ ಗ್ರಾಮದ ಪರಮಾನಂದ ದೇವಸ್ಥಾನದಲ್ಲಿ ರವಿವಾರ ಸರಳವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 39 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಜಾಲಹಳ್ಳಿಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘವು ಕಳೆದ ಮೂರು ವರ್ಷಗಳಿಂದಲೂ ಲಿಂಗದಳ್ಳಿ ಗ್ರಾಮದ ಪರಮಾನಂದ ದೇಗುಲದಲ್ಲಿ ಸಾಮೂಹಿಕ ವಿವಾಹ ನಡೆಸಿಕೊಂಡು ಬರುತ್ತಿದೆ.
ಸಮಾರಂಭಕ್ಕಾಗಿ ಎರಡು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡು ಬರಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಮದುವೆ, ಸಭೆ, ಸಮಾರಂಭ ನಡೆಸದಂತೆ ಸರ್ಕಾರ ಆದೇಶಿಸಿದೆ. ಆದರೆ ಈ ಕಾರ್ಯಕ್ರಮ ಪೂರ್ವ ನಿಗದಿಯಾಗಿದ್ದರಿಂದ ವೇದಿಕೆ ಕಾರ್ಯಕ್ರಮ ರದ್ದುಗೊಳಿಸಿ ಸರಳವಾಗಿ ಸಾಮೂಹಿಕ ವಿವಾಹ ನೆರವೇರಿಸಲಾಯಿತು.
ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜ ಸ್ವಾಮೀಜಿ, ಶ್ರೀ ಅಮರೇಶ್ವರ ಗಜದಂಡ ಸ್ವಾಮೀಜಿ, ಶ್ರೀ ಸುಲ್ತಾನಪುರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ವಧು-ವರರು ಇದ್ದಲ್ಲಿಗೆ ತೆರಳಿ ಆರ್ಶೀರ್ವದಿಸಿದರು.
ಅಧಿಕಾರಿಗಳ ಜಾಗೃತಿ: ಆರೋಗ್ಯ, ಕಂದಾಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅ ಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಜನರು ಗುಂಪು ಗುಂಪಾಗಿ ಸೇರದಂತೆ ಎಚ್ಚರ ವಹಿಸುತ್ತಿದ್ದರು. ಮಹಾಮಾರಿ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಆತುರಾತುರವಾಗಿ ವಧು-ವರರಿಗೆ ಅಕ್ಷತೆ ಹಾಕಿ ತೆರಳಿದರು.
ಪರ-ವಿರೋಧ ಅಭಿಪ್ರಾಯ: ನೆರದ ಜನರು ಕಾರ್ಯಕ್ರಮದ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. ಕೆಲವರು ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಭೆ, ಸಮಾರಂಭ ನಡೆಸದಂತೆ ಆದೇಶಿಸಿದ್ದು ಸ್ವಾಗತಾರ್ಹ. ಸರ್ಕಾರದ ಆದೇಶ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದು ಸರಿಯಲ್ಲ ಎಂದರು.
ಮತ್ತೆ ಕೆಲವರು ಪೂರ್ವನಿಯೋಜಿತ ಕಾರ್ಯಕ್ರಮ ಆಗಿದ್ದರಿಂದ ಎಲ್ಲ ತಯಾರಿ ಮಾಡಿಕೊಂಡಿರುತ್ತಾರೆ. ಏಕಾಏಕಿ ರದ್ದಾದರೆ ಮಾಡಿದ್ದು ಎಲ್ಲ ನಷ್ಟವಾಗುತ್ತದೆ. ಸರಳವಾಗಿ ಮದುವೆ ನಡೆಸಿದ್ದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.