ವಿಕಲಚೇತನರು-ವೃದ್ಧರ ಪರದಾಟ
ಅಂಗವಿಕಲರಿಗಾಗಿಲ್ಲ ರ್‍ಯಾಂಪ್ ವ್ಯವಸ್ಥೆ ಬಾಡಿಗೆ ಕಟ್ಟಡಗಳಲ್ಲಿವೆ ಬಹುತೇಕ ಕಚೇರಿ
Team Udayavani, Jan 19, 2020, 12:58 PM IST
ಜಾಲಹಳ್ಳಿ: ಪಟ್ಟಣದಲ್ಲಿ ನಾಡ ಕಚೇರಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಬಾಡಿಗೆ ಕಟ್ಟಡದಲ್ಲಿರುವ ಜೊತೆಗೆ ಮಹಡಿ ಮೇಲಿರುವುದರಿಂದ ವೃದ್ಧರು, ವಿಕಲಚೇತನರು ಪರದಾಡು ವಂತಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರು, ಹಿರಿಯ ನಾಗರಿಕರು ಹತ್ತಿ, ಇಳಿಯಲು ಅನುಕೂಲವಾಗುವಂತೆ ರ್‍ಯಾಂಪ್ ವ್ಯವಸ್ಥೆ ಇರಬೇಕೆಂಬುದು ಸರ್ಕಾರದ ನಿಯಮ. ಆದರೆ ಜಾಲಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರ್ಮಿಸಿದ ಬಹುತೇಕ ಸರಕಾರಿ ಕಟ್ಟಡಗಳಲ್ಲಿ ರ್‍ಯಾಂಪ್ ವ್ಯವಸ್ಥೆ ಇಲ್ಲ. ಇದರಿಂದ ವಿಕಲಚೇತನರು, ವೃದ್ಧರು ಕಚೇರಿಗೆ, ಬ್ಯಾಂಕ್‌ಗಳಿಗೆ ಹೋಗಲು ಹರಸಾಹಸ ಪಡಬೇಕಿದೆ. ಅದರಲ್ಲೂ ಮಹಡಿ ಮೇಲೆ ಕಚೇರಿ, ಬ್ಯಾಂಕ್‌ಗಳಿದ್ದರಂತೂ ವಿಕಲಚೇತನರು, ಹಿರಿಯ ನಾಗರಿಕರು ಏದುಸಿರು ಬಿಡುತ್ತ, ಇನ್ನೊಬ್ಬರ ಸಹಾಯದಿಂದ ಹತ್ತಿ ಇಳಿಯಬೇಕಿದೆ. ನಡೆಯಲು ಬಾರದವರನ್ನು ಹೊತ್ತುಕೊಂಡು ಮೆಟ್ಟಿಲು ಏರಿ ಕಚೇರಿ, ಬ್ಯಾಂಕ್‌ಗೆ ಹೋಗಬೇಕಿದೆ.
ಸರ್ಕಾರಿ ಕಟ್ಟಡ ಕಟ್ಟುವ ಸಂದರ್ಭದಲ್ಲೇ ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ ಈ ಬಗ್ಗೆ ಗಮನಹರಿಸಬೇಕು. ಆದರೆ ಅಧಿಕಾರಿಗಳು, ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಕಟ್ಟಡಗಳಲ್ಲಿ ರ್‍ಯಾಂಪ್ ವ್ಯವಸ್ಥೆ ಇಲ್ಲ. ಕೆಲ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇಂತಹ ಕಟ್ಟಡಗಳಿಗೆ ರ್‍ಯಾಂಪ್ ವ್ಯವಸ್ಥೆ ಇರುವುದಿಲ್ಲ.
ಪಟ್ಟಣದ ಉಪ ತಹಶೀಲ್ದಾರ್ ಕಚೇರಿ, ನೆಮ್ಮದಿ ಕೇಂದ್ರ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಪ್ರಗತಿ ಗ್ರಾಮೀಣ ಬ್ಯಾಂಕ್ ಸೇರಿದಂತೆ ಇತರೆ ಕೆಲ ಕಚೇರಿಗಳು ಬಹುಮಹಡಿ ಕಟ್ಟಡಗಳಲ್ಲಿವೆ. ಈ ಕಚೇರಿಗಳಿಗೆ ಬರುವ ವಿಕಲಚೇತನರು, ವೃದ್ದರು, ಗರ್ಭಿಣಿಯರು ಬಾಣಂತಿಯರು ಕಷ್ಟಪಟ್ಟು ಮೆಟ್ಟಿಲು ಹತ್ತಿ ಇಳಿಯಬೇಕಿದೆ.
ಒಬ್ಬ ಸಹಾಯಕರನ್ನು ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ಸಹಾಯಕ್ಕಾಗಿ ಅವರಿವರನ್ನು ಅಂಗಲಾಚಬೇಕು. ಯಾರೂ ಸಹಾಯಕ್ಕೆ ಬರದಿದ್ರೆ ಮೆಟ್ಟಿಲು ಏರಲು ಯಮಹಿಂಸೆ ಅನುಭವಿಸಬೇಕಿದೆ.
ನಿತ್ಯ ನೂರಾರು ಜನರು ಪಿಂಚಣಿ, ವೈದ್ಯಕೀಯ ಪ್ರಮಾಣ ಪತ್ರ, ಸಹಾಯಧನ, ಸಾಲ ಸೌಲಭ್ಯ, ಪಹಣಿ, ವೃದ್ಧಾಪ್ಯ ವೇತನ, ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಇತ್ಯಾದಿ ಅಹವಾಲುಗಳನ್ನು ಹೊತ್ತು ಕಚೇರಿಗಳಿಗೆ ಆಗಮಿಸುತ್ತಾರೆ. ಇವರು ದಿನನಿತ್ಯ ಅನುಭವಿಸುವ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಇನ್ನಾದರೂ ಸಂಬಂಧಿಸಿದ ಮೇಲಾಧಿ ಕಾರಿಗಳು ಈ ಕಡೆ ಗಮನ ಹರಿಸಿ ವಿಕಲಚೇತನರು, ಹಿರಿಯ ನಾಗರಿಕರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ರ್‍ಯಾಂಪ್ ವ್ಯವಸ್ಥೆ ಮಾಡಿಸಬೇಕು, ಇಲ್ಲವೇ ಮೇಲ್ಮಹಡಿಯಲ್ಲಿರುವ ಕಟ್ಟಡಗಳನ್ನು ನೆಲಮಹಡಿಗೆ ಸ್ಥಳಾಂತರಿಸಬೇಕಿದೆ.
ಸರಕಾರಿ ಕಚೇರಿಗಳು ಬಹುಮಹಡಿಯಲ್ಲಿ ಇರುವುದರಿಂದ ಹತ್ತಿ ಇಳಿಯಲು ತೊಂದರೆಯಾಗುತ್ತಿದೆ. ಯಾರೂ ಸಹಾಯಕ್ಕೆ ಬರದಿದ್ದಾಗ ಹತ್ತಲು ಪ್ರಯತ್ನಿಸಿ ಕೆಲವರು ಆಯತಪ್ಪಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಕಚೇರಿಗಳಿಗೆ ಹತ್ತಲು ರ್‍ಯಾಂಪ್ ವ್ಯವಸ್ಥೆ ಮಾಡಬೇಕು. ಇಲ್ಲವೇ ನೆಲಮಹಡಿಗೆ ಕಚೇರಿಗಳನ್ನು ಸ್ಥಳಾಂತರಿಸಬೇಕು.
ವೀಣಾ ಜಾಲಹಳ್ಳಿ,
ವಿಕಲಚೇತನೆ
ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪಿಕೆಜಿ
ಬ್ಯಾಂಕ್ ಇತ್ಯಾದಿ ಕಚೇರಿಗಳು ಬಹುಮಹಡಿಗಳಲ್ಲಿ ಇರುವುದರಿಂದ ವೃದ್ಧರು, ವಿಕಲಚೇತನರು, ಗರ್ಭಿಣಿಯರು, ಬಾಣಂತಿಯರಿಗೆ ಹತ್ತಿ ಇಳಿಯಲು ತೊಂದರೆ ಆಗುತ್ತಿದೆ. ಜಿಲ್ಲಾಧಿಕಾರಿಗಳು ಕಚೇರಿಗಳನ್ನು ಜಿಲ್ಲಾಕಾರಿಗಳು ನೆಲಮಹಡಿಯಲ್ಲಿರುವಂತೆ ವ್ಯವಸ್ಥೆ ಮಾಡಬೇಕು.
ನಂದಪ್ಪ ಲಿಂಗದಳ್ಳಿ,
ಕರವೇ ಮುಖಂಡರು
ನಾಡಕಚೇರಿಗೆ ಕೆಳಗಡೆ ಬಾಡಿಗೆ ಕಟ್ಟಡ ಸಿಗದ್ದರಿಂದ ಸದ್ಯ ಮಹಡಿ ಕಟ್ಟಡದಲ್ಲಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಪಕ್ಕ ಸರಕಾರಿ ಜಾಗೆ ಇದ್ದು ಕಟ್ಟಡ ನಿರ್ಮಿಸಲು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಬೇರೆ ಇಲಾಖೆ ಕಚೇರಿಗಳು ಮೇಲ್ಮಹಡಿಯಲ್ಲಿರುವುದು ಗಮನಕ್ಕಿದೆ. ನೆಲಮಹಡಿಯಲ್ಲಿ ಕಚೇರಿಗಳನ್ನು ತೆರೆಯಲು ಆಯಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವೆ.
ಮಂಜುನಾಥ ಭೋಗಾವತಿ,
ತಹಶೀಲ್ದಾರ್, ದೇವದುರ್ಗ.
ಚಂದ್ರಶೇಖರ ನಾಡಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.