ಕಲ್ಯಾಣ ಉತ್ಸವ ಆಚರಣೆ ಎಲ್ಲರ ಕರ್ತವ್ಯ
Team Udayavani, Sep 18, 2022, 1:57 PM IST
ರಾಯಚೂರು: ದೇಶಕ್ಕೆ ಆ.15ರ ಸ್ವಾತಂತ್ರ್ಯ ದಿನಾಚರಣೆ ಎಷ್ಟು ಮಹತ್ವವಾಗಿದೆಯೋ ಕಲ್ಯಾಣ ಕರ್ನಾಟಕ ಉತ್ಸವ ಕೂಡ ಅಷ್ಟೇ ಮಹತ್ವದ್ದಾಗಿದೆ. ಈ ದಿನ ಆಚರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 74 ವರ್ಷಗಳಾಗಿದೆ. ಇದಕ್ಕಾಗಿ ಹೋರಾಡಿದ ಮಹನೀಯರನ್ನು ಎಲ್ಲರೂ ಗೌರವಿಸಬೇಕಿದೆ. ಸಹಸ್ರಾರು ಹೋರಾಟಗಾರರ ತ್ಯಾಗ-ಬಲಿದಾನಗಳಿಂದ ಸಿಕ್ಕಿರುವ ವಿಮೋಚನೆ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ ಎಂದು ಹೇಳಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಯೇ ನಮ್ಮ ಗುರಿಯಾಗಿದೆ. ಜಿಲ್ಲೆಯಲ್ಲಿ ಐಐಟಿ ತರಗತಿಗಳು ಶುರುವಾಗಿದ್ದರೆ; ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ಸಿಗುವ ವಿಶ್ವಾಸವಿದೆ. ಇದಕ್ಕಾಗಿ 65 ಕೋಟಿ ರೂ. ಮೀಸಲಿಡಲಾಗಿದೆ ಎಂದು ವಿವರಿಸಿದರು.
ಭಾರಿ ಮಳೆಯಿಂದ 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಾಥಮಿಕ 6,710 ಹೆಕ್ಟೇರ್ ಕೃಷಿ-ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮೊದಲನೇ ಹಂತದಲ್ಲಿ 438 ರೈತರಿಗೆ 36 ಲಕ್ಷ ರೂ. ಬ್ಯಾಂಕ್ ಪರಿಹಾರ ಜಮೆ ಮಾಡಲಾಗಿದೆ. ಬಾಕಿ ರೈತರಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗುವುದು. ಭಾರಿ ಮಳೆಯಿಂದ 75.53 ಕೋಟಿ ರೂ. ಹಾನಿ ಉಂಟಾಗಿದ್ದು, ಎನ್‌ಡಿಆರ್‌ಎಫ್ /ಎಸ್‌ಡಿಆರ್ ಎಫ್ ಮಾರ್ಗಸೂಚಿಯಂತೆ 13.76 ಕೋಟಿ ರೂ. ಹಾನಿಯಾದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಡಳಿತದ ಪಿಡಿ ಖಾತೆಯಲ್ಲಿ 28 ಕೋಟಿ ರೂ. ಲಭ್ಯವಿದ್ದು, ತುರ್ತು ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದರು.
ಕೆಕೆಆರ್‌ಡಿಬಿಯಿಂದ ಜಿಲ್ಲೆಗೆ ಈವರೆಗೆ 2013-14ರಿಂದ 2022 ರವರೆಗೆ 1679 ಕೋಟಿ ರೂ. ಮಂಜೂರಾಗಿದ್ದು, ಈ ಸರ್ಕಾರದ ಅವಧಿಯಲ್ಲಿ 898 ಕೋಟಿ ರೂ. ಮಂಜೂರಾಗಿದೆ. 1304 ಕಾಮಗಾರಿಗಳು ಮಂಜೂರಾಗಿದ್ದು, 610 ಕಾಮಗಾರಿ ಮುಗಿದಿವೆ. ಜಲಧಾರೆ ಯೋಜನೆಯಡಿ 108 ಕೋಟಿ ರೂ., ಜಲಜೀವನ್ ಯೋಜನೆಯಲ್ಲಿ 98 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ನರೇಗಾದಡಿ 105 ಲಕ್ಷ ಮಾನವ ದಿನಗಳ ಗುರಿಗಳಿಗೆ ಅನುಸಾರವಾಗಿ 70 ಲಕ್ಷ ಮಾನವ ದಿನಗಳನ್ನು ಸೃಜಿಸಿ, 17726.78 ಕೋಟಿ ಖರ್ಚು ಮಾಡಿ ಉತ್ತಮ ಸಾಧನೆ ಮಾಡಲಾಗಿದೆ. ಮಾತೃಪೂರ್ಣ ಯೋಜನೆಯಡಿ 24,209 ಗರ್ಭಿಣಿಯರಿಗೆ, 23,759 ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮುಂದೆಯೂ ಜಿಲ್ಲೆಯ ಪ್ರಗತಿಗೆ ಎಲ್ಲರೂ ಶ್ರಮಿಸುವ ಮೂಲಕ ದೇಶದ ಸರ್ವತೋಮುಖ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿದ ನೀರಲಕೇರಿ, ಹೀರಾ, ಆರ್. ಹೆಚ್.ಕ್ಯಾಂಪ್-01, ಚಿಕ್ಕಸಗೂರು, ಪೋತ್ನಾಳ, ಅರಕೇರಾ, ಮಾರಲದಿನ್ನಿ ಪಿಡಿಒಗಳನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲು, ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಪಂ ಸಿಇಒ ಶಶಿಧರ್ ಕುರೇರ್, ಎಸ್‌ಪಿ ನಿಖೀಲ್ ಬಿ., ಎಡಿಸಿ ಡಾ|ಕೆ.ಆರ್.ದುರುಗೇಶ್, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವುಪೂರೆ, ಸಹಾಯಕ ಆಯುಕ್ತ ರಜನಿಕಾಂತ್, ತಹಸೀಲ್ದಾರ್ ರಾಜಶೇಖರ ಪಾಟೀಲ್, ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.