ಹಾಲುಮತ ಬಹುರೂಪಿ ಸಮಾಜವಾಗಲಿ
ಜಾತಿಗಣತಿ ವಿಚಾರದಲ್ಲಿ ಎಚ್‌ಡಿಕೆ ನಿರಾಧಾರ ಆರೋಪ: ರೇವಣ್ಣ
Team Udayavani, Oct 10, 2021, 1:39 PM IST
ರಾಯಚೂರು: ಒಂದು ಸಮಾಜ ಕೇವಲ ರಾಜಕೀಯ ಮಾತ್ರವಲ್ಲದೇ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿದಾಗಲೇ ಬಹುರೂಪಿ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಅಂಥ ಅಭಿವೃದ್ಧಿ ಪಥದಲ್ಲಿ ಹಾಲುಮತ ಕೂಡ ಸಾಗಬೇಕು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಆಶಯ ವ್ಯಕ್ತಪಡಿಸಿದರು.
ನಗರದ ರಂಗಮಂದಿರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳನ್ನು ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕುರುಬರ ಸಂಸ್ಕೃತಿಯುಳ್ಳ ಗ್ರಂಥಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಸಮಾಜದ ಬಗ್ಗೆ ಅರಿವು ಮೂಡಿಸುವ ಜನತೆಗೆ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳು ದಾರಿ ತೋರುವ ಮಾರ್ಗದರ್ಶನವಾಗಲಿ ಎಂಬ ಕಾರಣಕ್ಕೆ ಇವುಗಳನ್ನು ರಚಿಸಲಾಗಿದೆ. ಸಮಾಜ ಮುಂದೆ ಬರಲು ಕೇವಲ ರಾಜಕೀಯ ಚಿಂತನೆಗಳಿಂದ ಸಾಧ್ಯ ಎಂಬ ಧೋರಣೆಯನ್ನು ನಾನು ಸಹಮತಿಸುವುದಿಲ್ಲ. ಎಲ್ಲ ರಂಗಗಳಲ್ಲೂ ಸಮಾಜ ಮುಂದೆ ಬರಬೇಕು ಎಂದರು.
ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ನಾವು ರಾಜಕೀಯ ಬೆರೆಸುವುದಿಲ್ಲ. ಇನ್ನೂ ಸಾಧಿಸುವುದು ಬೇಕಾದಷ್ಟಿದ್ದರೂ ಕೂಡ ಸಮಾಜದ ಸಂಸ್ಕೃತಿಯನ್ನ ಮನೆ-ಮನೆಗೆ ತಲುಪಿಸುವ ಚಿಂತನೆ ನಡೆದಿದೆ. ಈಗಾಗಲೇ ಕಿರುಹೊತ್ತಿಗೆಗಳ ಮುದ್ರಣ ಕಾರ್ಯ ನಡೆದಿದೆ. ಕನಕದಾಸರ ಕೀರ್ತನೆ, ಕೃತಿಗಳು ಡಾಕ್ಟರೇಟ್ ಪಡೆಯುವಷ್ಟು ಮಹತ್ವ ಹೊಂದಿವೆ. ಇಂತಹ ಕಾರ್ಯ ಸಾರಸ್ವತ ಲೋಕದಲ್ಲಿ ಹೆಮ್ಮೆಯ ವಿಷಯ ಎಂದರು.
ಹಿರಿಯ ಚಿಂತಕ ಡಾ| ಬಿ.ಕೆ.ರವಿ ಮಾತನಾಡಿ, ದೇಶದಲ್ಲಿ ಕುರುಬ ಸಮಾಜದ ಜನಸಂಖ್ಯೆ 12 ಕೋಟಿಗೂ ಹೆಚ್ಚಿದೆ. ಕುರುಬರು ದೇಶದ ಮೂಲ ನಿವಾಸಿಗಳು. ಕಾಶಿ ದೇವಸ್ಥಾನ ಕಟ್ಟಿದ ಸಮಾಜ ನಮ್ಮದು. ಬಹುಸಂಖ್ಯೆ ಹೊಂದಿದ್ದರೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹರಿದು ಹಂಚಿ ಹೋಗಿದೆ. ಕುರುಬ ಸಮಾಜದ ಕೊಡುಗೆ ಅಪಾರವಾದದ್ದು. ಅದನ್ನು ಮರೆಯದೆ ನಮ್ಮ ಸಮಾಜ ಇನ್ನೂ ಸಂಘಟಿವಾಗಬೇಕು ಎಂದರು.
ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ದೇಶದ ಬೇರೆ ಎಲ್ಲಿಯಾದರೂ ಹುಟ್ಟಿದ್ದರೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ಸಿಗುತ್ತಿತ್ತು. ಆದರೆ, ಆ ಹೋರಾಟಗಾರರನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸಲಾಗುತ್ತಿದೆ. ಇದೇ ಕಾರಣಕ್ಕೆ ನಂದಗಡವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು ಎಂಬ ಬೇಡಿಕೆ ನಮ್ಮದಾಗಿದೆ ಎಂದರು.
ಅನಕ್ಷರತೆ ಕಾರಣಕ್ಕೆ ನಮ್ಮ ಹಿರಿಕರು ಇತಿಹಾಸ ದಾಖಲಿಸಲು ಆಗಿಲ್ಲ. ಈಗ ಲೋಕಾರ್ಪಣೆ ಮಾಡಿದ 13 ಗ್ರಂಥಗಳನ್ನು ಡಿಜಲೀಕರಣ ಮಾಡಲಾಗಿದೆ. ಸಮಾಜದ ಇತಿಹಾಸವನ್ನು ವೈಜ್ಞಾನಿಕವಾಗಿ ದಾಖಲಿಸಿದ ಮೊದಲ ಸಮಾಜ ನಮ್ಮದು ಎಂಬ ಹಿರಿಮೆ ದಕ್ಕಿದೆ. ಕುರುಬರ ಸಾಹಿತ್ಯ ಧರ್ಮ ಇತಿಹಾಸ ಕಲೆ ಆಚಾರ ವಿಚಾರಗಳನ್ನು ಸಂಗ್ರಹಿಸುವ ಕೆಲಸ ಸುಲಭವಾಗಿರಲಿಲ್ಲ. ಸಮಾಜದ ಲೇಖಕರು ಗಣ್ಯರು ಚಿಂತಕರು ಅವಿರತ ಶ್ರಮದಿಂದ ಇದು ಸಾಧ್ಯವಾಯಿತು. ಕಳೆದ 10 ವರ್ಷ ಸತತ ಪರಿಶ್ರಮ ಇದರಲ್ಲಿ ಅಡಗಿದೆ ಎಂದರು. ಹಿರಿಯ ಸಾಹಿತಿ ಬಿ.ಜಿ. ಹುಲಿ ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷೆ ಆರ್.ಕೆ. ವಚನ, ಕುರುಬ ಸಮಾಜದ ಹಿರಿಯ ಮುಖಂಡ ಕೆ.ಪಂಪಾಪತಿ, ಬೇವಿನ ಬೂದಪ್ಪ ಕಲಮಲ, ಕರ್ನಾಟಕ ಕುರುಬ ಸಂಘದ ರಾಜ್ಯ ನಿರ್ದೇಶಕ ಎಂ.ಈರಣ್ಣ, ನಾಗವೇಣಿ ಎಸ್.ಪಾಟೀಲ್, ಕೆ.ಬಸವಂತಪ್ಪ, ವೇಣುಗೋಪಾಲ, ಡಾ| ಲಕ್ಷ್ಮೀದೇವಿ ಇದ್ದರು.
ಜಾತಿಗಣತಿ ವಿಚಾರದಲ್ಲಿ ಎಚ್‌ಡಿಕೆ ನಿರಾಧಾರ ಆರೋಪ: ರೇವಣ್ಣ
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 172 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ಮಾಡಿಸಿದ್ದರು. ಮೈತ್ರಿ ಸರ್ಕಾರದಲ್ಲಿ ಅದನ್ನು ಬಹಿರಂಗಪಡಿಸದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಈಗ ಸಿದ್ಧರಾಮಯ್ಯ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಹಿರಂಗಪಡಿಸುವಂತೆ ಒತ್ತಾಯಿಸಿದರೂ ಮಾಡಲಿಲ್ಲ. ಆದರೆ, ಈಗ ಸಿದ್ಧರಾಮಯ್ಯನವರೇ ಜಾತಿಗಣತಿ ಬರೆಯಿಸಿದ್ದಾರೆ ಎನ್ನುವುದು ಸರಿಯಲ್ಲ. ಸುಮಾರು1.53 ಲಕ್ಷ ಶಿಕ್ಷಕರು ಗಣತಿ ಕಾರ್ಯದಲ್ಲಿ ತೊಡಗಿದ್ದರು. ಜಾತಿಗಣತಿ ಬಹಿರಂಗಪಡಿಸಲು ಕಾರ್ಯದರ್ಶಿಗಳ ಬದಲಾವಣೆ ಕಾರಣ ವಿನಃ ಮತ್ತೇನು ಅಲ್ಲ. ಎಲ್ಲರೂ ಸಹಮತದಿಂದ ಸಹಿ ಮಾಡಿಯೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.
ಮೂರನೇ ದೊಡ್ಡ ಸಮಾಜವಾಗಿರುವ ಕುರುಬ ಸಮಾಜವನ್ನು ಇನ್ನಷ್ಟು ಬಲಪಡಿಸಲು ಸಂಘಟನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮೀಸಲಾತಿ ನಿರ್ಬಂಧ ಸಡಿಲಿಸಬೇಕಿದೆ. ತಮಿಳುನಾಡಿನಲ್ಲಿ ಶೇ.65ರಷ್ಟು ಮೀಸಲಾತಿ ನೀಡಲಾಗುತ್ತಿದೆ. ರಾಜ್ಯದಲ್ಲಿರುವ ಶೇ.50 ಮೀಸಲಾತಿ ಸಡಿಲಿಸಿ ಇಲ್ಲಿಯೂ ಹೆಚ್ಚಿಸಬೇಕು. ಯಾರು ಬರಲಿ ಬಿಡಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಕನಕದಾಸ ಸಾಹಿತ್ಯವನ್ನು14 ಭಾಷೆಗಳಲ್ಲಿ ತರ್ಜುಮೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕುರುಬ ಸಮಾಜದ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸಲು ಕುರುಬ ಸಾಂಸ್ಕೃತಿಕ ಪರಿಷತ್ ಅನೇಕ ಯೋಜನೆ ಹಾಕಿಕೊಂಡಿದೆ. ಒಂದು ದಶಕದ ಸತತ ಪರಿಶ್ರಮದಿಂದ ಕುರುಬ ಸಮಾಜದ ಇತಿಹಾಸ ದಾಖಲಿಸುವ ಕೆಲಸವಾಗಿದೆ. ಲಕ್ಕಪ್ಪಗೌಡ ನೇತೃತ್ವದಲ್ಲಿ ಚಿಂತಕರು, ಸಂಶೋಧನಾ ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿ 13 ಗ್ರಂಥಗಳನ್ನು ರಚಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಗ್ಗೆ ಈಗಾಗಲೇ ಬೆಂಗಳೂರು, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೀಘ್ರದಲ್ಲೇ ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಮಾಜದ ನಾಗವೇಣಿ ಎಸ್.ಪಾಟೀಲ್, ದೇವಯ್ಯ ಒಡೆಯರ್, ಕೆ.ಸಿ.ಅಯ್ಯಣ್ಣ, ಸಿದ್ದಪ್ಪ ಭಂಡಾರಿ ಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.