ಬಡವರು ಸತ್ತರೆ ಹೂಳಲು ಪ್ರಯಾಸ!
Team Udayavani, Jan 3, 2020, 2:46 PM IST
ರಾಯಚೂರು: ನಗರದ ವ್ಯಾಪ್ತಿ ದಿನೇದಿನೆ ವಿಸ್ತಾರಗೊಳ್ಳುತ್ತಿದ್ದು, ಮೂಲಭೂತ ಸೌಲಭ್ಯಗಳ ಜತೆ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೂ ಸ್ಥಳಾಭಾವ ಎದುರಾಗಿದೆ. ಅದರಲ್ಲೂ ನಿರಾಶ್ರಿತರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನಗರ ಮಾತ್ರವಲ್ಲ ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲೂ ಸ್ಮಶಾನದ ಕೊರತೆ ಕಾಡುತ್ತಿದೆ. ನಗರದಲ್ಲಿ 37 ಘೋಷಿತ ಕೊಳಚೆ ಪ್ರದೇಶಗಳಿದ್ದು, 20ಕ್ಕೂ ಅಧಿ ಕ ಅಘೋಷಿತ ಕೊಳಚೆ ಪ್ರದೇಶಗಳಿವೆ. ಇವರಿಗೆ ಇರಲು ಸಣ್ಣ ಸೂರು ಬಿಟ್ಟರೆ ಮತ್ತೂಂದು ಆಸ್ತಿಗಳಿಲ್ಲ. ಅಂಥವರು ಮೃತಪಟ್ಟಲ್ಲಿ ಶವಸಂಸ್ಕಾರ ಮಾಡಬೇಕಾದರೆ ನಾನಾ ಪಡಿಪಾಟಲು ಪಡುವಂತಾಗಿದೆ. ಸರ್ಕಾರಿ ಸ್ಥಳದಲ್ಲಿರುವ ಬಹುತೇಕ ಸ್ಮಶಾನಗಳು ತುಂಬಿ ಹೋಗಿವೆ. ಕೆಲವರು ಸಂಸ್ಕಾರ ಮಾಡಿದ ಮೇಲೆ ಹಿರಿಯರ ಸ್ಮರಣಾರ್ಥ ಸಮಾಧಿಗಳನ್ನು ಕಟ್ಟುತ್ತಿದ್ದು, ಇದರಿಂದ ಸ್ಥಳಾಭಾವ ಎದುರಾಗುತ್ತಿದೆ.
ಬಹುತೇಕರು ನಗರ ಸುತ್ತಲಿನ ಬೆಟ್ಟ ಗುಡ್ಡಗಳಲ್ಲೇ ಸಂಸ್ಕಾರ ಮಾಡುತ್ತಿದ್ದಾರೆ. ಅಂಥ ವೇಳೆ ಹಿಂದೆ ಹೂತ ಶವಗಳ ಅಸ್ಥಿ ಹೊರ ತೆಗೆದೇ ಮಾಡಬೇಕಾದ ಸ್ಥಿತಿಯಿದೆ. ಇನ್ನೊಂದೆಡೆ ಬಹುತೇಕ ಸ್ಮಶಾನಗಳು ನಿರ್ವಹಣೆ ಇಲ್ಲದೆ ಜಾಲಿ ಕಂಟಿ ಬೆಳೆದಿವೆ. ತಾಲೂಕಿನ ಉಡುಮಗಲ್ ಖಾನಾಪುರ ಗ್ರಾಮಕ್ಕೆ ಸ್ಮಶಾನವೇ ಇಲ್ಲ. ಖಾಸಗಿಯವರ ಗುಂಟೆ ಸ್ಥಳದಲ್ಲೇ ಶವಸಂಸ್ಕಾರ ಮಾಡುತ್ತಿದ್ದಾರೆ. ನಗರದ ಆಶಾಪುರ ರಸ್ತೆ, ಅಂಬೇಡ್ಕರ್ ಬಡಾವಣೆ, ಜ್ಯೋತಿ ಕಾಲೋನಿ, ಎಲ್‌ಬಿಎಸ್ ನಗರ ಸೇರಿ ಕೆಲ ಬಡಾವಣೆ ನಿವಾಸಿಗಳಿಗೆ ಈ ಸಮಸ್ಯೆ ಬಾಧಿಸುತ್ತಿದೆ. ಆದರೆ, ಹರಿಜನವಾಡದಲ್ಲಿ ನಿವಾಸಿಗಳ ಬೇಡಿಕೆಯನುಸಾರ ಈಗಾಗಲೇ ಮತ್ತೂಂದು ರುದ್ರಭೂಮಿ ಸೌಲಭ್ಯ ಕಲ್ಪಿಸಲಾಗಿದೆ. ಸ್ಲಂಗಳಲ್ಲಿ ವಾಸಿಸುವ ಕೆಲವರು ತಮ್ಮ ತಮ್ಮ ಸಮುದಾಯದ ರುದ್ರಭೂಮಿಗಳಿಗೆ ನಿಗದಿ ಮಾಡಿದ ಸ್ಥಳದಲ್ಲೇ ಶವ ಸಂಸ್ಕಾರ ಮಾಡುತ್ತಾರೆ. ಆದರೆ, ಇನ್ನೂ ಸಾಕಷ್ಟು ಜನರಿಗೆ ಈ ಸಮಸ್ಯೆ ತಪ್ಪಿಲ್ಲ.
ಸಮಾಧಿ ಕಟ್ಟದಿರಿ: ಸರ್ಕಾರಿ ಸ್ಥಳಗಳಲ್ಲಿರುವ ಸ್ಮಶಾನಗಳಲ್ಲಿ ಶವ ಸಂಸ್ಕಾರ ಮಾಡಿದ ನಂತರ ಯಾವುದೇ ಸಮಾಜದವರಾಗಲಿ ಸಮಾಧಿ ಕಟ್ಟದಂತೆ ತಡೆ ಹಿಡಿಯಬೇಕು ಎಂದು ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಒತ್ತಾಯಿಸಿದೆ. ಸಮಾಧಿ ಕಟ್ಟಿದರೆ ಅದನ್ನು ತೆರವು ಮಾಡುವುದು ಕಷ್ಟ. ಮಣ್ಣು ಮಾಡಿದ ಮೇಲೆ ಹಾಗೆ ಬಿಟ್ಟರೆ ಕೆಲ ದಿನಗಳಲ್ಲೇ ಅದೇ ಸ್ಥಳದಲ್ಲಿ ಬೇರೆ ಶವ ಹೂಳಬಹುದು.
ಸರ್ಕಾರಿ ಸ್ಥಳ ಲಭ್ಯ: ನಗರದ ಆಸುಪಾಸು ನೂರಾರು ಎಕರೆ ಸರ್ಕಾರಿ ಸ್ಥಳವಿದ್ದರೂ ನಗರಾಡಳಿತ ಸ್ಮಶಾನಕ್ಕಾಗಿ ನೀಡಲು ಮೀನಮೇಷ ಎಣಿಸುತ್ತಿದೆ ಎಂಬ ಆರೋಪಗಳಿವೆ. ಸುತ್ತಲೂ ಬೆಟ್ಟಗಳಿರುವ ನಗರ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಬೇಕಾದರೆ ಅಲೆದಾಡುವ ಸ್ಥಿತಿ ಇದೆ. ಅದರ ಆಯಾ ಬಡಾವಣೆಗಳಿಗೆ ಹತ್ತಿರದ ಗೈರಾಣಿ ಭೂಮಿ ಗುರುತಿಸಿ ರುದ್ರಭೂಮಿಗೆ ನೀಡಬೇಕೆಂಬ ಬೇಡಿಕೆ ಇದೆ.
-ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.