ಮಸ್ಕಿಯಲ್ಲಿನ್ನು “ತುರುವಿಹಾಳ’ ವಾಸ್ತವ್ಯ!
ಸ್ವಂತಕ್ಕೆ ಮನೆ ಖರೀದಿ ಮಾಡಿದ ಆರ್. ಬಸನಗೌಡ! ಸಿದ್ದರಾಮಯ್ಯ, ಡಿಕೆಶಿಗೂ ಪ್ರತ್ಯೇಕ ಮನೆ
Team Udayavani, Mar 14, 2021, 5:56 PM IST
ಮಸ್ಕಿ: ಮಸ್ಕಿ ಉಪ ಚುನಾವಣೆ ಗಾಳಿ ಜೋರಾಗುತ್ತಿದ್ದಂತೆ ತುರುವಿಹಾಳನಲ್ಲೇ ವಾಸ್ತವ್ಯ ಹೂಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ಈಗ ಮಸ್ಕಿಯಲ್ಲಿ ವಾಸ್ತವ್ಯಕ್ಕೆ ಅಣಿಯಾಗಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಮನೆಯನ್ನೂ ಖರೀದಿಸಿರುವ ಅವರು ಶಿವರಾತ್ರಿ ದಿನ ಪೂಜೆ ಸಲ್ಲಿಸಿ ಗೃಹಪ್ರವೇಶ ಮಾಡಿದ್ದಾರೆ.
ಕಳೆದ 2018ರ ಸಾರ್ವತ್ರಿಕ ಚುನಾವಣೆ ವೇಳೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ವಿರುದ್ಧ ಸೋಲನುಭವಿಸಿದ್ದ ಬಸನಗೌಡ ತುರುವಿಹಾಳ ದಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಹಿಂದಿನ 2018ರ ಚುನಾವಣೆಯಲ್ಲೂ ತಾತ್ಕಾಲಿಕವಾಗಿ ಇಲ್ಲಿ ಉಳಿಕೆ ವ್ಯವಸ್ಥೆ ಮಾಡಿಕೊಂಡಿದ್ದ ಅವರು, ಹಿಂದಿನ ಬಿಜೆಪಿ ಕಚೇರಿ, ಬಿಜೆಪಿ ಮುಖಂಡರ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಈ ಬಾರಿ ಸ್ವತಃ ಮಸ್ಕಿ ಪಟ್ಟಣದ ಹೊರವಲಯದ ಮಲ್ಲಿಕಾರ್ಜುನ “ಗ್ರೀನ್ ಸಿಟಿ’ಯಲ್ಲಿ ಮನೆ ಖರೀದಿಸಿದ್ದಾರೆ. ಇದೇ ಮನೆಯಲ್ಲಿ ಇದ್ದುಕೊಂಡೇ ಉಪ ಚುನಾವಣೆ ರಣತಂತ್ರ ಹೆಣೆಯುವ ಕಸರತ್ತು ನಡೆದಿದೆ.
ಮಸ್ಕಿ ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದು, ಮುಖಂಡರ ಆದೇಶದ ಮೇರೆಗೆ ದಿಢೀರ್ ಮನೆ ಖರೀದಿಸಿದ್ದಾರೆ. ಒಂದೇ ಮಹಡಿ ಇರುವ ಈ ಮನೆಯಲ್ಲಿ ಶಿವರಾತ್ರಿ (ಮಾ.11)ಯಂದು ಪೂಜೆ ಸಲ್ಲಿಸಿ, ಅವರ ಸಹೋದರ ಆರ್. ಸಿದ್ದನಗೌಡ ತುರುವಿಹಾಳ ಮತ್ತು ಪತ್ನಿ ಗೃಹ ಪ್ರವೇಶ ಪೂಜೆ ಸಲ್ಲಿಸಿದ್ದಾರೆ.
ಮಸ್ಕಿ ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿ ದರೆ ಪಕ್ಷ ಸಂಘಟನೆ ಹಾಗೂ ಚುನಾವಣೆ ಪ್ರಚಾರಕ್ಕೆ ಅನುಕೂಲವಾಗಲಿದೆ ಎನ್ನುವ ಹೈಕಮಾಂಡ್ ಸೂಚನೆ ಮೇರೆಗೆ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ. ಗೃಹಪ್ರವೇಶದ ಬೆನ್ನಲ್ಲೇ ಈಗ ಬಸನಗೌಡ ತುರುವಿಹಾಳ ಮನೆ ಕಾಂಗ್ರೆಸ್ ಕಾರ್ಯಕರ್ತರಿಂದ ತುಂಬಿ ತುಳುಕಲಾರಂಭಿಸಿದೆ. ಇವರಿಗೂ ಪ್ರತ್ಯೇಕ ಮನೆ: ಸದ್ಯ ಕಾಂಗ್ರೆಸ್ ಅಭ್ಯರ್ಥಿಗೆ ಮಾತ್ರ ಮಸ್ಕಿಯಲ್ಲೇ ಪ್ರತ್ಯೇಕ ಮನೆ ಮಾಡಲಾಗಿದ್ದರೆ, ಚುನಾವಣೆ ಪ್ರಚಾರಕ್ಕಾಗಿ ಆಗಮಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ಎಂಟØತ್ತು ದಿನಗಳ ಕಾಲ ಉಳಿಯಲು ಪ್ರತ್ಯೇಕ ಮನೆ ಹುಡುಕಾಡಲಾಗುತ್ತಿದೆ. ಮಸ್ಕಿ ಕೇಂದ್ರ ಸ್ಥಾನದ ಬದಲು ಮುದಗಲ್ ಇಲ್ಲವೇ ಲಿಂಗಸುಗೂರಿನಲ್ಲಿ ಮನೆ ಗುರುತು ಮಾಡಲಾಗಿದೆ.
ಸಿದ್ದರಾಮಯ್ಯರಿಗೆ ಮುದಗಲ್ ಇಲ್ಲವೇ ಲಿಂಗಸುಗೂರಿನಲ್ಲಿನ ಶಾಸಕ ಡಿ.ಎಸ್. ಹೂಲಗೇರಿಯವರ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯಾಗಲಿದ್ದರೆ; ಡಿ.ಕೆ. ಶಿವಕುಮಾರ್ ಅವರಿಗೆ ಸಿಂಧನೂರು ಕೇಂದ್ರ ಸ್ಥಾನದಲ್ಲಿ ಮನೆ ಹುಡುಕಾಟ ನಡೆದಿದೆ. ಇನ್ನುಳಿದಂತೆ ಉಳಿದ ಕಾಂಗ್ರೆಸ್‌ನ ರಾಜ್ಯ-ಜಿಲ್ಲಾ ನಾಯಕರಿಗೂ ಸಂತೆಕಲ್ಲೂರು, ತುರುವಿಹಾಳ, ಪಾಮನಕಲ್ಲೂರು, ಕವಿತಾಳ, ಹಾಲಾಪುರ ಸೇರಿದಂತೆ ಇತರೆಡೆ ಮನೆ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನುಳಿದ ಮತ್ತಷ್ಟು ಮುಖಂಡರು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಅಣಿಯಾಗಿದ್ದಾರೆ.
ಇಲ್ಲೂ ಗುರುತು: ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿಯೂ ಅದೇ ಲೆಕ್ಕಾಚಾರದಲ್ಲಿದೆ. ಬಿ.ವೈ. ವಿಜಯೇಂದ್ರ ಮತ್ತು ಬಿ. ಶ್ರೀರಾಮುಲು ಅವರಿಗೆ ಪ್ರತ್ಯೇಕ ಮನೆ ಗುರುತು ಮಾಡಲಾಗಿದ್ದು, ಉಳಿದ ಮುಖಂಡರಿಗೆ ಸಿಂಧನೂರಿನ ಖಾಸಗಿ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಲಾಗಿದೆ.