ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿಲ್ಲ ಸಿಬ್ಬಂದಿ
Team Udayavani, Jul 10, 2018, 1:12 PM IST
ರಾಯಚೂರು: ಜನಜೀವನ ಸುಗಮವಾಗಿ ಸಾಗಬೇಕಾದರೆ ಟ್ರಾಫಿಕ್ ಪೊಲೀಸರ ಪಾತ್ರ ಬಹುಮುಖ್ಯ. ಬೃಹದಾಕಾರವಾಗಿ ಬೆಳೆಯುತ್ತಿರುವ ರಾಯಚೂರು ಜಿಲ್ಲೆಯಲ್ಲಿ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲ ಎಂದರೆ…
ನಗರ ಸೇರಿ ಜಿಲ್ಲೆಯಲ್ಲಿ ಮೂರು ಸಂಚಾರಿ ಪೊಲೀಸ್ ಠಾಣೆಗಳಿವೆ. ಮೂರು ಠಾಣೆಗಳಲ್ಲೂ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಯನ್ನು ರಜೆ ರಹಿತವಾಗಿ ದುಡಿಸಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದೆ ಜಿಲ್ಲಾ ಪೊಲೀಸ್ ಇಲಾಖೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿವೆ. ಟ್ರಾಫಿಕ್ ಸಮಸ್ಯೆ ಜನರಿಗೆ ತಲೆ ಸಿಡಿದು ಹೋಗಿದೆ. ಆದರೆ, ಇಲಾಖೆಯನ್ನು ದೂರುವ ಜನರಿಗೇನು ಗೊತ್ತು ಇಲಾಖೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು
ಸಿಬ್ಬಂದಿ ಇಲ್ಲ ಎಂದು..!
ನಗರ ಸೇರಿ ಸಿಂಧನೂರು ಮತ್ತು ದೇವದುರ್ಗದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಗಳಿವೆ. ವಿಪರ್ಯಾಸವೆಂದರೆ ಮೂರು ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಇದರಿಂದ ಇರುವ ಸಿಬ್ಬಂದಿ ಮೇಲೆಯೇ ಹೆಚ್ಚುವರಿ ಹೊರೆ ಬೀಳುತ್ತಿದೆ. ತುರ್ತು ಸಂದರ್ಭದಲ್ಲಿ, ದೊಡ್ಡ ಸಮಾವೇಶ, ಜಾತ್ರೆಗಳಂತಹ ಕಾರ್ಯಕ್ರಮಗಳ ವೇಳೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಿಬ್ಬಂದಿಯನ್ನು ಎರವಲು ಸೇವೆಗೆ ಪಡೆದು ಪರಿಸ್ಥಿತಿ ನಿಭಾಯಿಸುತ್ತಿದೆ ಇಲಾಖೆ.
ಎಲ್ಲೆಲ್ಲಿ ಎಷ್ಟೆಷ್ಟು ಕೊರತೆ..?: ರಾಯಚೂರು ನಗರ ಠಾಣೆಯಲ್ಲಿ ಇಬ್ಬರು ಪಿಎಸ್ ಐಗಳಲ್ಲಿ ಇರುವುದು ಒಬ್ಬರು. ಆರು ಜನ ಎಎಸ್‌ಐಗಳಲ್ಲಿ ಮೂರು ಜನ ಇದ್ದರೆ, 16 ಹೆಡ್‌ಕಾನ್‌ಸ್ಟೆಬಲ್‌ಗಳಲ್ಲಿ ಮೂವರು ತಾತ್ಕಾಲಿಕವಾಗಿ ಬೇರೆಡೆ ವರ್ಗಗೊಂಡಿದ್ದಾರೆ. 32 ಪೇದೆಗಳಲ್ಲಿ ಈಗಿರುವುದು 21 ಮಾತ್ರ. ಅದರಲ್ಲಿ ವಾರದ ರಜೆ, ತುರ್ತು ರಜೆ ಪಡೆದಲ್ಲಿ ಸಿಬ್ಬಂದಿ ಇನ್ನಷ್ಟು ಕಡಿತಗೊಂಡು ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತಿದೆ.
ದೇವದುರ್ಗ ಠಾಣೆಯಲ್ಲಿ ಇರುವ ಎರಡು ಪಿಎಸ್‌ಐ ಹುದ್ದೆಗಳು ಖಾಲಿ ಇವೆ. ನಾಲ್ಕರಲ್ಲಿ ಎರಡು ಎಎಸ್‌ಐ ಹುದ್ದೆ ಖಾಲಿ ಇದ್ದರೆ, 10ರಲ್ಲಿ 4 ಮುಖ್ಯ ಪೇದೆ ಹುದ್ದೆ ಖಾಲಿ ಇವೆ. ಇನ್ನು 26ರಲ್ಲಿ
ಬರೋಬ್ಬರಿ 20 ಪೇದೆ ಹುದ್ದೆಗಳು ಖಾಲಿ ಇವೆ. ಸಿಂಧನೂರು ಠಾಣೆಯಲ್ಲಿ ಈಚೆಗೆ ಒಬ್ಬರು ಪಿಎಸ್‌ಐಯನ್ನು ನಿಯೋಜಿಸಿದ್ದು, ಮತ್ತೂಂದು ಹುದ್ದೆ ಖಾಲಿ ಇದೆ. ಮೂವರು ಎಎಸ್‌ಐಗಳಲ್ಲಿ ಒಬ್ಬರಿಗೆ ಬಡ್ತಿ ಸಿಕ್ಕಿದ್ದು, ಎರಡು ಖಾಲಿ ಇವೆ. 12 ಮುಖ್ಯ ಪೇದೆಗಳು ಭರ್ತಿಯಾಗಿದ್ದರೆ, 25ರಲ್ಲಿ 10 ಪೇದೆ ಹುದ್ದೆಗಳು ಖಾಲಿ ಇವೆ.
ಟ್ರಾಫಿಕ್ ಸಮಸ್ಯೆಗೆ ಮಿತಿಯಿಲ್ಲ: ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ, ಸಂಜೆ ಟ್ರಾಫಿಕ್ ಸಮಸ್ಯೆಗೆ ಮಿತಿ ಇಲ್ಲದಂತಾಗಿದೆ. ಒನ್ ವೇನಲ್ಲಿ ನುಗ್ಗುವ ವಾಹನಗಳು, ಅಡ್ಡಾದಿಡ್ಡಿ ಪಾರ್ಕಿಂಗ್‌ಗಳು, ಇಕ್ಕಟ್ಟಾದ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ…. ಹೀಗೆ ಒಂದಲ್ಲ ಎರಡಲ್ಲ ನಿತ್ಯ ಯಾತನೆ ಎದುರಿಸುವ ಸವಾರರಿಗೆ ಗೊತ್ತು ಅದರ ಫಜೀತಿ. ಪ್ರಮುಖ ಕೇಂದ್ರಗಳಲ್ಲಿ ನಿಯೋಜನೆಗೊಂಡ ಪೊಲೀಸರು ಕರ್ತವ್ಯ ನಿರ್ವಹಿಸಿದರೆ ಸಾಕಷ್ಟು ಕಡೆ ಹೇಳುವವರು ಕೇಳುವವರಿಲ್ಲದಂಥ ಸ್ಥಿತಿ ಇರುತ್ತದೆ.
ಸಿಂಧನೂರು ಮತ್ತು ದೇವದುರ್ಗದಲ್ಲಿ ವಾರದ ಸಂತೆ ದಿನಗಳಂದು ಪರಿಸ್ಥಿತಿ ನಿಭಾಯಿಸುವುದು ಸುಲಭವಲ್ಲ. ಅಂಥ ಕಡೆ ಎಷ್ಟು ಪೊಲೀಸರನ್ನು ನಿಯೋಜಿಸಿದರೂ ಕಡಿಮೆಯೇ ಎನ್ನುವಂತಿರುತ್ತದೆ ಪರಿಸ್ಥಿತಿ.
ರಜೆ ರಹಿತ ಕೆಲಸ: ಕೆಲವೊಮ್ಮೆ ಸಿಬ್ಬಂದಿ ಕೊರತೆ ಎದುರಾದಾಗ ವಾರದ ರಜೆಯನ್ನು
ಪಡೆಯದೆ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಟ್ರಾಫಿಕ್ ಪೊಲೀಸರು. ನಿರಂತರವಾಗಿ ಕೆಲಸ ಮಾಡಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ.
ಇಲ್ಲಿನ ಬಿಸಿಲು, ಧೂಳಿಗೆ ನಿರಂತರವಾಗಿ ನಿಂತು ಕೆಲಸ ಮಾಡುವುದು ನಿಜಕ್ಕೂ ಸವಾಲಿನ ಕೆಲಸವೇ ಎಂಬುದು ಅವರ ಅಳಲು. ಹೀಗೆ ನಾನಾ ಸಂಕಷ್ಟಗಳ ಮಧ್ಯೆ ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ಸಾಗಿದೆ. ಒಟ್ಟಾರೆ ಇಲಾಖೆ ಸಿಬ್ಬಂದಿ ಕೊರತೆ ಇರುವವರ ಮೇಲೆ ಹೊರೆ ಹೆಚ್ಚಿಸಿರುವುದು
ಸುಳ್ಳಲ್ಲ. ಆದರೆ, ಶೀಘ್ರ ಕ್ರಮ ಕೈಗೊಂಡು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಚಿತ್ತ ಹರಿಸಬೇಕಿದೆ.
ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವವರ ಮೇಲೆ ಹೊರೆ ಹೆಚ್ಚಾಗುತ್ತಿರುವುದು ನಿಜ. ಈಗಾಗಲೇ ಕೆಲವರಿಗೆ ಬಡ್ತಿ ನೀಡಿದ್ದು, ಅವರನ್ನು ಟ್ರಾಫಿಕ್ ಇಲಾಖೆಗೆ ನಿಯೋಜಿಸಲಾಗುವುದು. ಸರ್ಕಾರ ಕೂಡ ತಿಂಗಳೊಳಗೆ ಪೊಲೀಸರ ನೇಮಕಾತಿಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಖಾಲಿ ಇರುವ ಎಲ್ಲ ಹುದ್ದೆ ಭರ್ತಿಗೆ ಒತ್ತು ನೀಡಲಾಗುವುದು.
ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.