ಭತ್ತದ ನಾಡಿಗೆ ಸಾವಯವ ಭತ್ತವೇ ಚಿನ್ನ
Team Udayavani, Jan 21, 2022, 1:37 PM IST
ಸಿಂಧನೂರು: ಯಾವುದೇ ರಸಗೊಬ್ಬರ, ರಾಸಾಯನಿಕವನ್ನು ಬಳಕೇ ಮಾಡದೇ ಸತತ 15 ವರ್ಷಗಳಿಂದ ಎರಡು ಎಕರೆ ಜಮೀನಿನಲ್ಲಿ ಸಾವಯವ ಭತ್ತವನ್ನು ಬೆಳೆಯುವ ಮೂಲಕ ಇಲ್ಲೊಬ್ಬ ರೈತ ಯಶಸ್ಸು ಗಳಿಸಿದ್ದಾರೆ.
ಸುತ್ತಲೂ ರಸಗೊಬ್ಬರ ಬಳಕೆಯ ಭತ್ತದ ಗದ್ದೆಗಳ ನಡುವೆ ಕೃಷಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ಕ್ರಿಮಿನಾಶಕ ಅಂಶಗಳಿಲ್ಲ ಎಂಬ ವರದಿ ಬಂದಿದ್ದು ರೈತನ ಶ್ರಮ ಸಾರ್ಥಕವಾಗಿದೆ.
ತಾಲೂಕಿನ ಮುಳ್ಳೂರು ಗ್ರಾಮದ ಪ್ರಗತಿಪರ ರೈತ ಅಮೀನ್‌ಸಾಬ್ ಸಾಹುಕಾರ್ ಅವರು, ಒಂದೂವರೆ ದಶಕದಿಂದ ಸಾವಯವ ಮಂತ್ರ ಪಠಿಸುವ ಮೂಲಕ ಯಶಸ್ಸಿನ ನಗೆಬೀರಿದ್ದಾರೆ. ಆರಂಭದಲ್ಲಿ ನಿರೀಕ್ಷಿತ ಇಳುವರಿ, ಪ್ರತಿಫಲ ದೊರೆಯದಿದ್ದರೂ ವರ್ಷ ಕಳೆದಂತೆ ಜಮೀನು ಸಾವಯವ ಕೃಷಿಗೆ ಒಗ್ಗಿದೆ.
ಛಲ ಬಿಡದೇ ಪ್ರಯತ್ನ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಒಳಪಟ್ಟ ಜಮೀನಾಗಿರುವುದರಿಂದ ನೀರಿಗೆ ಯಾವುದೇ ಕೊರತೆಯಿಲ್ಲ. ಆದರೂ, ಹೆಚ್ಚಿನ ಇಳುವರಿ, ಲಾಭಕ್ಕೆ ಆಸೆ ಬೀಳದೇ ಅಮೀನ್‌ಸಾಬ್, ಎರಡು ಎಕರೆ ಜಮೀನಿನನ್ನು ಸಾವಯವ ಭತ್ತಕ್ಕೆ ಮೀಸಲಿಟ್ಟಿದ್ದಾರೆ. 15 ವರ್ಷದ ಹಿಂದೆ ಪ್ರತಿ 6 ಚೀಲ ಭತ್ತವಷ್ಟೇ ಬಂದಿತ್ತು. ಆದರೂ, ಪಟ್ಟು ಬಿಡದೇ ಇದೇ ಕೃಷಿಯನ್ನು ಮುಂದುವರಿಸಿದ್ದರಿಂದ ಇಳುವರಿ ಚೇತರಿಸಿದೆ. 10, 12 ಚೀಲದಂತೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಫಸಲು ಬಂದಿದೆ. ಪ್ರಸಕ್ತ ವರ್ಷ ಎಕರೆಗೆ 30 ಚೀಲ ಭತ್ತ ಬೆಳೆಯಲಾಗಿದ್ದು, ರಾಸಾಯನಿಕ ಬಳಸಿ ಬೆಳೆಯುವ ಭತ್ತಕ್ಕೆ ಕಡಿಮೆ ಇಲ್ಲದಂತೆ ಇಳುವರಿ ಬಂದಿದೆ.
ಖರ್ಚಿನ ಹೊರೆಯಿಲ್ಲ
ರಸಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡುವುದರಿಂದ ಪ್ರತಿ ಎಕರೆಗೆ 20-25 ಸಾವಿರ ರೂ.ಗೂ ಹೆಚ್ಚಿನ ಖರ್ಚು ಬರುತ್ತದೆ. ಸಾವಯವ ಕೃಷಿಯಲ್ಲಿ ಹೆಚ್ಚಿನ ಖರ್ಚಿಲ್ಲ. ಕೊಟ್ಟಿಗೆ ಗೊಬ್ಬರವನ್ನು ಬಳಕೆ ಮಾಡುವುದರಿಂದ ಹೆಚ್ಚಿನ ಹೊರೆಯಿಲ್ಲ. ಸುತ್ತಲೂ ರಾಸಾಯನಿಕ ಬಳಕೆ ಮಾಡುವ ಭತ್ತದ ಗದ್ದೆಗಳಿರುವುದರಿಂದ ಸಾವಯವಕ್ಕೆ ಆಯ್ಕೆ ಮಾಡಿದ ಎರಡು ಎಕರೆ ಜಮೀನು ಹದಕ್ಕೆ ಮರಳಲು ಸಮಯ ಹಿಡಿದಿದೆ.
ಇದನ್ನೂ ಓದಿ:ಕೋವಿಡ್ ನಡುವೆ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ವೈರಸ್ ಆತಂಕ!
ಚಿನ್ನದಂತಹ ಬೆಲೆ
ಇದೀಗ ಇಳುವರಿ ಜಿಗಿತ ಕಂಡಿದ್ದರಿಂದ ಇತರ ಭತ್ತಕ್ಕಿಂತಲೂ ಹೆಚ್ಚಿನ ಲಾಭ ಸಾಧ್ಯವಾಗಿದೆ. ಸಾಮಾನ್ಯ ಅಕ್ಕಿ ಕ್ವಿಂಟಲ್ ಗೆ 3500-4500 ರೂ.ಗೆ ಕ್ವಿಂಟಲ್‌ನಂತೆ ಮಾರಾಟವಾಗುತ್ತದೆ. ಆದರೆ, ಇವರು ಬೆಳೆದ ಸಾವಯವ ಅಕ್ಕಿಯ ದರ ಪ್ರತಿ ಕ್ವಿಂಟಲ್ ಗೆ 7,000 ರೂ. ದರವಿದೆ. ಕೆಜಿ ಲೆಕ್ಕದಲ್ಲಿ ಕೇಳಿದರೆ, 100 ರೂ. ಕೊಡಬೇಕಾಗುತ್ತದೆ. ಮಣ್ಣಿನ ಫಲವತ್ತತೆ ರಕ್ಷಣೆ, ಆರೋಗ್ಯಕ್ಕೆ ಪೂರಕವಾದ ಸಾವಯವ ಪದ್ಧತಿಯಿಂದ ಸಾಕಷ್ಟು ಅನುಕೂಲವಿದೆ ಎಂಬುದನ್ನು ಈ ರೈತ ಸಾಧಿಸಿ ತೋರಿಸಿದ್ದಾರೆ.
ವಿವಿಯಿಂದ ಅನುಮಾನ ನಿವಾರಣೆ
ಭತ್ತ ನಾಡಿನಲ್ಲಿ ಬೆಳೆಯುವ ಅಕ್ಕಿಯನ್ನು ಈ ಹಿಂದೆ ರಾಯಚೂರು ವಿವಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕ್ರಿಮಿನಾಶಕ ಅಂಶಗಳಿರುವುದನ್ನು ದೃಢಪಡಿಸಲಾಗಿತ್ತು. ಇಂತಹ ಅನುಮಾನ ಪ್ರಗತಿಪರ ರೈತ ಅಮೀನ್‌ಸಾಬ್ ಅವರನ್ನು ಕಾಡಿದ್ದುಂಟು. ಸ್ವತಃ ತಾವೇ ಅಕ್ಕಿಯ ಸ್ಯಾಂಪಲ್ ತೆಗೆದುಕೊಂಡು ಹೋಗಿ ರಾಯಚೂರು ವಿವಿಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ರೈತನ ಉತ್ಸಾಹ ನೋಡಿ ವಿವಿಯು ಕಡಿಮೆ ವೆಚ್ಚದಲ್ಲಿ ಪರೀಕ್ಷೆ ವರದಿ ಕೊಟ್ಟಿದ್ದು, ಅದರಲ್ಲಿ ರಾಸಾಯನಿಕ ಮಿಶ್ರಣವಿಲ್ಲ ಎಂಬ ಸಂಗತಿ ಸ್ಪಷ್ಟವಾಗಿದೆ.
ಆರಂಭದಲ್ಲಿ ಅಕ್ಕ-ಪಕ್ಕದ ರೈತರೇ ಇದೇನು ಹೊಸ ಪ್ರಯೋಗ ಮಾಡುತ್ತಿದ್ದಾರೆ. 6 ಚೀಲ ಬರಲ್ಲ ಎಂದು ನಕರಾತ್ಮಕವಾಗಿ ಮಾತನಾಡಿದ್ದರು. ಪಟ್ಟುಬಿಡದೇ ಅದೇ ಕೃಷಿ ಮುಂದುವರಿಸಿದ ಪರಿಣಾ ಮ ಎಕರೆಗೆ 30 ಚೀಲ ಭತ್ತ ಬರಲಾರಂಭಿಸಿದ್ದು, ಕ್ರಿಮಿನಾಶಕ ಅಂಶಗಳಿಲ್ಲ ಎಂಬ ವರದಿ ನನಗೆ ಹೆಚ್ಚು ಖುಷಿ ಕೊಟ್ಟಿದೆ. -ಅಮೀನ್‌ಸಾಬ್ ಸಾಹುಕಾರ್, ಪ್ರಗತಿಪರ ರೈತ, ಮುಳ್ಳೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.