ಮುದಗಲ್ಲಗೆ ಹರಿದು ಬಂದ ಜನಸಾಗರ
Team Udayavani, Sep 21, 2018, 4:38 PM IST
ಮುದಗಲ್ಲ: ಪಟ್ಟಣದಲ್ಲಿ ಆಚರಿಸುವ ಮೊಹರಂ ರಾಜ್ಯದಲ್ಲೇ ಹೆಸರು ಪಡೆದಿದ್ದು, ಭಾವೈಕ್ಯಕ್ಕೆ ಮಾದರಿಯಾಗಿದೆ. ಮುದಗಲ್ಲ ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ವಿಜಯಪುರದ ಆದಿಲ್‌ಶಾಹಿ ದೊರೆ ಯುದ್ಧದಲ್ಲಿ ಮುದಗಲ್ಲ
ಕೋಟೆ ವಶಪಡಿಸಿಕೊಂಡ ನಂತರ ತನ್ನೊಂದಿಗೆ ತಂದಿದ್ದ ಆಲಂ (ದೇವರು)ಗಳನ್ನು ಸ್ಥಾಪಿಸಿ ಪೂಜಿಸಿದ್ದ ಎಂಬ ಪ್ರತೀತಿ ಇದ್ದು, ಅಂದಿನಿಂದ ಪಟ್ಟಣದಲ್ಲಿ ಪ್ರತಿ ವರ್ಷ ಮೊಹರಂ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿರುವ ದೇವರುಗಳಿಗೆ ಕಲ್ಯಾಣದ ರಾಜ ದತ್ತಿಗಳನ್ನು ಕಳುಹಿಸುತ್ತಿದ್ದ ಎಂಬುದು ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ.
ವಿಶಿಷ್ಟ ಆಚರಣೆ: ಹುಸೇನಿ ಆಲಂ ದರ್ಗಾಕ್ಕೆ ಹೊಸ ಕಟ್ಟಡ ನಿರ್ಮಿಸಿದಾಗಿನಿಂದ ಹಬ್ಬಕ್ಕೆ ಹೆಚ್ಚಿನ ಕಳೆ ಬಂದಿದೆ. ಸತತ 10 ದಿನಗಳ ಕಾಲ ಆಚರಿಸಲ್ಪಡುವ ಮೊಹರಂ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಹಿಂದು-ಮುಸ್ಲಿಮರು ಒಗ್ಗಟಿನಿಂದ ಆಚರಿಸುವ ಮೊಹರಂದಲ್ಲಿ 5ನೇ ದಿನ ಹಜರತ್ ಹುಸೇನ್ ಆಲಂ ದರ್ಗಾದ ಮುಂದಿನ ದ್ವಾರಬಾಗಿಲು ಮೇಲೆ ಬೆಳ್ಳಿಯ ತೂಗು ಸರಪಳಿ (ಝೂಲಾ) ಕಟ್ಟಲಾಗುತ್ತದೆ. ಮೊಹರಂ ಕೊನೆ ದಿನ ಸುತ್ತಲಿನ ಹಳ್ಳಿಗಳಿಂದ ಬಂದ ಅಪಾರ ಭಕ್ತರು ಹಸೇನ್, ಹುಸೇನ್ ದೇವರುಗಳಿಗೆ ಮುಡಿಪು, ಕೆಂಪು ಸಕ್ಕರೆ, ಹೂ, ಕಾಯಿ ಅರ್ಪಿಸುತ್ತಾರೆ. ಬಳಿಕ ಸಂಜೆ ಆಲಂ ದೇವರುಗಳ ಕೊನೆ ಭೇಟಿ ನಡೆಯುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು
ಅಪಾರ ಭಕ್ತಸಾಗರ ಐತಿಹಾಸಿಕ ಕೋಟೆ ಗೋಡೆ, ಚಾವಡಿ, ಮನೆ ಮಾಳಗಿಗಳ ಮೇಲೆ ನಿಂತು ವೀಕ್ಷಿಸುತ್ತಾರೆ. ದುಬೈ, ಅರಬ್ ದೇಶ ಮತ್ತು ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಗಮನ ಸೆಳೆವ ಹೆಜ್ಜೆ ಕುಣಿತ: ಮೊಹರಂ ಹಬ್ಬಕ್ಕೆ ರಾಯಚೂರು ಜಿಲ್ಲೆ ರಾಜ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಮೊಹರಂ ಪ್ರಯುಕ್ತ ಜಿಲ್ಲಾದ್ಯಂತ ಹಳ್ಳಿಗಳಲ್ಲಿ ಕಲಾವಿದರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕುತ್ತ ಕುಣಿಯುವುದು ಸಂಪ್ರದಾಯವಾಗಿದೆ. ಮೊಹರಂ ಹಬ್ಬದ ಪ್ರಯುಕ್ತ 8ರಿಂದ 10 ಹೆಜ್ಜೆ ಮೇಳ ತಂಡಗಳು ಪಟ್ಟಣದಲ್ಲಿ ಬೀಡು ಬಿಟ್ಟಿವೆ. ಅಲಂಕಾರಿಕ ಬಣ್ಣ ಬಣ್ಣದ ಛತ್ರಿಗಳನ್ನು ಹಿಡಿದುಕೊಂಡು ಕೋಲಾಟ, ತಮಟೆ ತಾಳಕ್ಕೆ ತಕ್ಕಂತೆ ಕಲಾವಿದರು
ಕುಣಿಯುವ ದೃಶ್ಯ ಗಮನ ಸೆಳೆಯುತ್ತದೆ. ಹೆಜ್ಜೆ ಮೇಳದವರು ಅಂಗಡಿ, ವಾಣಿಜ್ಯ ಮಳಿಗೆ, ಮನೆಗಳ ಮುಂದೆ ಕುಣಿಯುತ್ತಾರೆ. ಇವರಿಗೆ ಅಂಗಡಿಕಾರರು, ಮನೆಯವರು ಖುಷಿಯಿಂದ ಹಣ ನೀಡಿ ಪ್ರೋತ್ಸಾಹಿಸುತ್ತಾರೆ
ಖತಲ್ ರಾತ್ರಿ ಕಣ್ತುಂಬಿಕೊಂಡ ಭಕ್ತರು
ಮುದಗಲ್ಲ: ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ನಡೆಯುವ ಮೊಹರಂ ಆಚರಣೆಯ 8ನೇ ದಿವಸ ಮೌಲಾಲಿ ಪೀರನ ಖತಲ್ ರಾತ್ರಿ ಸಂಭ್ರಮದಿಂದ ಜರುಗಿದರೆ, 9ನೇ ದಿನದ ಹುಸೇನ್‌ಪಾಷಾ ಖತಲ್ ರಾತ್ರಿಗೆ ಬೆಳಗಿನ ಜಾವದಿಂದಲೇ ಜನಸಾಗರವೇ ಹರಿದು ಬಂದಿದೆ. ಪಟ್ಟಣದ ಹಳೆಪೇಟೆ ರಸ್ತೆಯಲ್ಲಿರುವ ಮೌಲಾಲಿ ಪೀರ್‌ನ ಖತಲ್ ರಾತ್ರಿ 8ನೇ ದಿವಸ ಬುಧವಾರ ರಾತ್ರಿ ಜರುಗಿತು. ರಾಯಚೂರು ಜಿಲ್ಲೆ ಸೇರಿ ರಾಜ್ಯ, ನೆರೆ ರಾಜ್ಯಗಳಿಂದ ಆಗಮಿಸಿದ್ದ
ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸಿದರು. 9ನೇ ದಿನ ಗುರುವಾರ ರಾತ್ರಿ ಐತಿಹಾಸಿಕ ಕೋಟೆಯೊಳಗೆ ಇರುವ ಹುಸೇನ್ ಆಲಂ ಹಾಗೂ ಮೇಗಳಪೇಟೆಯಲ್ಲಿಯ ಹಸನ್ ಆಲಂ ದೇವರುಗಳ ಖತಲ್ ರಾತ್ರಿ ನಡೆಯಿತು. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮುದಗಲ್ಲ ಪಟ್ಟಣಕ್ಕೆ ಆಗಮಿಸಿದ್ದಾರೆ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿ ದುಬೈನಿಂದಲೂ ಭಕ್ತರು ಆಗಮಿಸಿದ್ದಾರೆ.
ಶುಕ್ರವಾರ ಮೊಹರಂ ಕೊನೆ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಗುರುವಾರ ಬೆಳಗ್ಗೆಯಿಂದಲೆ
ಭಕ್ತರು ಸರದಿಯಲ್ಲಿ ನಿಂತು ಆಲಂ ದೇವರುಗಳಿಗೆ ಪೂಜೆ ಸಲ್ಲಿಸಿ, ಸಕ್ಕರೆ ನೈವೇದ್ಯ ಅರ್ಪಿಸಿ ಹರಕೆ ತೀರಿಸದರು. ಕೋಟೆಯಲ್ಲಿ ಜಾತ್ರೆ ವಾತಾವರಣ ಕಂಡುಬಂತು. ಹುಸೇನ್‌ಪಾಷಾ ದರ್ಗಾಕ್ಕೆ ಕೆಲವರು ನಡೆದುಕೊಂಡು ಬಂದರೆ, ಇನ್ನು ಕೆಲವರು ದೀಡ ನಮಸ್ಕಾರ ಹಾಕಿ ತಮ್ಮ ಹರಕೆ ಸಲ್ಲಿಸಿದರು. ಹರಕೆ ಹೊತ್ತ ಕೆಲ ಭಕ್ತರು ಹುಲಿ ವೇಷ
ಧರಿಸಿ ಹುಲಿ ಕುಣಿತದೊಂದಿಗೆ ಸಕ್ಕರೆ ನೈವೇದ್ಯ ಮಾಡಿ ಹರಕೆ ತೀರಿಸಿದರು. ಅಳ್ಳೊಳ್ಳಿ ಭಾವಾಗಳು ಹರಕೆ ತೀರಿಸಿದರು. ದೇವರ ಹರಕೆ ತೀರಿಸಲು ಕೆಲವರು ಆಡು, ಕುರಿಗಳನ್ನು ಬಲಿ ಕೊಟ್ಟರೆ, ಇನ್ನು ಕೆಲವರು ಚೊಂಗ್ಯಾ, ಕೆಂಪು ಸಕ್ಕರೆ ನೈವೇದ್ಯ ಅರ್ಪಿಸಿದರು.
ಭಕ್ತರಿಗೆ ವ್ಯವಸ್ಥೆ: ಹುಸೇನಿ ಆಲಂ ಆಡಳಿತ ಮಂಡಳಿಯು ಪುರಸಭೆ ಸಹಕಾರದಲ್ಲಿ ಭಕ್ತರಿಗೆ ತೊಂದರೆ ಆಗದಂತೆ ಸ್ನಾನಗೃಹ, ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಔಷಧಿ, ಚಿಕಿತ್ಸೆ, ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಜನ, ವಾಹನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಶ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.