ಭತ್ತಕ್ಕೆ ಸಿಗದ ಬೆಲೆ; ಕಂಗಾಲಾದ ಅನ್ನದಾತ
Team Udayavani, Dec 26, 2021, 3:31 PM IST
ದೇವದುರ್ಗ: ಭತ್ತಕ್ಕೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಕಂಗಾಲಾಗಿದ್ದು ಜಮೀನಿನಲ್ಲೇ ರಾಶಿ ಹಾಕಿ ಮಾರಾಟ ಮಾಡದೇ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.
ಜಾಲಹಳ್ಳಿ, ಗಲಗ, ಬಿ. ಗಣೇಕಲ್, ಅರಕೇರಾ, ಗಬ್ಬೂರು ಸೇರಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಶೇ. 55ರಷ್ಟು ಭತ್ತ ಕಟಾವು ಮಾಡಿ ರಾಶಿ ಮಾಡಿ ಮಾರಾಟಕ್ಕೆ ಮುಂದಾದರೂ ಸೂಕ್ತ ಬೆಲೆ ಇಲ್ಲ ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಕೃಷಿ ಬೆಳೆ ನಷ್ಟವಾಗಿದ್ದು ರೈತರ ಶ್ರಮ ಮಣ್ಣುಪಾಲಾಗಿದೆ. ಅಳಿದುಳಿದ ಭತ್ತಕ್ಕೂ ಸರಿಯಾದ ಬೆಲೆ ಸಿಗುತ್ತಿಲ್ಲ. ಬೆಳೆದ ಭತ್ತವನ್ನು ರೈತರು ಜಮೀನಿನಲ್ಲೇ ರಾಶಿ ಮಾಡಲಾಗುತ್ತಿದೆ. ಖರೀದಿ ಕೇಂದ್ರ ಆರಂಭಿಸಿದಲ್ಲಿ ಇಂಥ ಸಮಸ್ಯೆ ಎದುರಾಗುತ್ತಿರಲಿಲ್ಲ ಎನ್ನುತಾರೆ ಅನ್ನದಾತ.
ಇನ್ನುಳಿದ ರೈತರ ಬೆಳೆ ಕಟಾವು ಹಂತಕ್ಕೆ ಬಂದಿದೆ. ಅತಿವೃಷ್ಟಿ ನಡುವೆಯೂ ಭತ್ತ ರೈತರ ಕೈಹಿಡಿದಿದೆ. ದಲ್ಲಾಳಿಗಳು ಖರೀದಿಗೆ ಮುಂದೆ ಬರುತ್ತಿದ್ದು, ಸೂಕ್ತ ಬೆಲೆ ಇಲ್ಲದೇ ಕಾರಣ ರೈತರು ಮಾರಾಟಕ್ಕೆ ಮನಸ್ಸು ಮಾಡುತ್ತಿಲ್ಲ. ಭತ್ತ ರಾಶಿ ಮಾಡಿ ಜಮೀನಿನಲ್ಲೇ ತಾಡುಪಾಲು ಹಾಕಿ ರಕ್ಷಣೆ ಮಾಡುತ್ತಿದ್ದಾರೆ.
ಭತ್ತ ಯಂತ್ರಕ್ಕೆ ಡಿಮ್ಯಾಂಡ್
ನಾರಾಯಣಪುರ ಬಲದಂಡೆ ನಾಲೆಯಿಂದ ಬೇಸಿಗೆ ಬೆಳೆಗೆ ನೀರು ಬಿಡುವ ಭರವಸೆ ಸಿಗುತ್ತಿದ್ದಂತೆ ತಾಲೂಕಿನಲ್ಲಿ ಕೃಷಿ ಚಟುವಟಕೆ ಗರಿಗೆದರಿದ್ದು ಜೊತೆಗೆ ಭತ್ತ ಕಟಾವು ಯಂತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. ಗಂಟೆಗೆ 3ರಿಂದ 3500ರೂ ಬೇಡಿಕೆ ಇದ್ದು, ಆರೇಳು ದಿನಗಳ ಮುಂಚಿತವಾಗಿಯೇ ಬುಕ್ ಮಾಡುವಂತ ಪರಿಸ್ಥಿತಿ ಇದೆ. ತೆಲಂಗಾಣದ ಸೀಮಾಂಧ್ರದಿಂದ 10ಕ್ಕೂ ಅಧಿಕ ಯಂತ್ರಗಳು ತಾಲೂಕಿಗೆ ಲಗ್ಗೆಯಿಟ್ಟಿವೆ. ಇವುಗಳಿಗೆ ದುಬಾರಿ ಬೆಲೆತೆತ್ತು ಕಟಾವು ಮಾಡಿಸುವುದೂ ಕಷ್ಟ ಎನ್ನುತ್ತಾರೆ ರೈತರು.
ಕಳೆದ ಬಾರಿ ಭತ್ತ ಕೊಯ್ಯುವ ಯಂತ್ರಗಳ ಮಾಲೀಕರು ಬೇಕಾಬಿಟ್ಟಿ ದರ ನಿಗದಿ ಮಾಡಿದ್ದರಿಂದ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಮಾಡುವ ಮೂಲಕ 2300ರೂ. ದರ ನಿಗದಿ ಮಾಡಲಾಗಿತ್ತು. ಈ ಬಾರಿ ಎಂಎಲ್ಸಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮಾಡದ್ದರಿಂದ ಯಂತ್ರಗಳ ಮಾಲೀಕರು ಬೇಕಾಬಿಟ್ಟಿ ದರ ನಿಗದಿಪಡಿಸಿದ್ದು ರೈತರ ಜೀವ ಹಿಂಡುತ್ತಿದೆ. –ಹನುಮಂತ್ರಾಯ ಗೌಡ, ಚಂದಾಪಾಷ್ ರೈತರು
ಭತ್ತ ಕೊಯ್ಯುವ ಯಂತ್ರಗಳ ಮಾಲೀಕರು, ರೈತರ ಸಭೆ ಕರೆಯಲು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ. ಯಂತ್ರಗಳ ದರ ಬೇಡಿಕೆ ಹೆಚ್ಚಿದೆ ಎನ್ನುವ ದೂರುಗಳು ರೈತರಿಂದ ಬಂದಿವೆ. –ಶ್ರೀನಿವಾಸ ಚಾಪಲ್, ಪ್ರಭಾರ ತಹಶೀಲ್ದಾರ್
–ನಾಗರಾಜ ತೇಲ್ಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.