ವಿದ್ಯಾರ್ಥಿ ನಿಲಯ ತ್ವರಿತ ನಿರ್ಮಿಸಿ: ವೀರಲಕ್ಷ್ಮೀ
Team Udayavani, Jun 25, 2020, 8:38 AM IST
ರಾಯಚೂರು: ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿ ಚುರುಕುಗೊಳಿಸುವಂತೆ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ವಸತಿ ನಿಲಯ ಕಾಮಗಾರಿಗಳು ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿವೆ. 2 ತಿಂಗಳೊಳಗೆ ಕಾಮಗಾರಿ ಮುಗಿಸಿ ಬಳಕೆಗೆ ಮುಕ್ತಗೊಳಿಸಬೇಕು. ಲಾಕ್‌ಡೌನ್ ಘೋಷಣೆಗೂ ಮುನ್ನವೇ ಈ ಕಾಮಗಾರಿಗಳು ಮುಗಿಯಬೇಕಿತ್ತು, ಯಾಕೆ ಮುಗಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪತ್ರಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಬ್ರಮಣ್ಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋನಾಳ, ಕೂಡಲೇ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಗಳನ್ನು ಸಂಬಂಧಿಸಿದ ಏಜೆನ್ಸಿಗಳೊಂದಿಗೆ ಮಾತನಾಡಿ ಮುಗಿಸುವುದಾಗಿ ತಿಳಿಸಿದರು.
ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೊಠಡಿಗಳ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ನೀಡುವಂತೆ ತಿಳಿಸಿದಾಗ ಡಿಡಿಪಿಐ ಎಚ್.ಬಿ.ಗೋನಾಳ ಮಾತನಾಡಿ, ಈಗ ಶಾಲೆಗಳಿಗೆ ರಜೆ ನೀಡಲಾಗಿದೆ. ಶುರುವಾದ ನಂತರ ವರದಿ ನೀಡುವುದಾಗಿ ತಿಳಿಸಿದರು. ಜಿಪಂ ಸಿಇಒ ಜಿ.ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಪ್ರಸ್ತುತ 100 ಶಾಲಾ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳಲ್ಲಿ 80 ಕಾಮಗಾರಿ ಬಾಕಿ ಇವೆ. ಅಡುಗೆ ಕೋಣೆಗಳ ನಿರ್ಮಾಣದ 150 ಕಾಮಗಾರಿಯಲ್ಲಿ 93 ಬಾಕಿ ಉಳಿದಿವೆ. ಈ ವರ್ಷ 500 ಕೊಠಡಿಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಅಲ್ಲದೇ ಈ ಕಾಮಗಾರಿಗಳನ್ನು ಆಯಾ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಂದ ಮಾಹಿತಿ ಪಡೆದು ಆರಂಭಿಸಲಾಗುವುದು ಎಂದು ತಿಳಿಸಿದರು.
ಮುಂಗಾರು ಶುರುವಾಗಿದ್ದು, ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ವಿತರಿಸಬೇಕು. ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು. ರೈತರ ಸಂಕಷ್ಟ ಬಗೆಹರಿಸಲು ಕೃಷಿ ಇಲಾಖೆ ಸದಾ ಸಿದ್ದವಾಗಿರಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಸಿಗದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಅಬೀದ್ ಅವರಿಗೆ ಅಧ್ಯಕ್ಷೆ ಸೂಚಿಸಿದರು. ಸೋಮಲಾಪುರದಲ್ಲಿ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಜಿಪಂ ಉಪಕಾರ್ಯದರ್ಶಿ ಮಹ್ಮದ್ ಯೂಸೂಫ್, ಮುಖ್ಯ ಯೋಜನಾಧಿಕಾರಿ ಡಾ| ಟಿ.ರೋಣಿ ಸೇರಿ ಇತರೆ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.