ರಾಯಚೂರು: ಕೋಟೆ ಒತ್ತುವರಿ ತೆರವಿಗೆ ಒಲ್ಲದ ಮನಸ್ಯಾಕೆ?
Team Udayavani, Jul 12, 2023, 6:33 PM IST
ರಾಯಚೂರು: ನಗರದಲ್ಲಿ ಕೋಟೆ ಇದೆಯೇ ಎನ್ನುವಷ್ಟರ ಮಟ್ಟಿಗೆ ಒತ್ತುವರಿಯಾಗಿದ್ದರೂ ಸ್ಥಳೀಯಾಡಳಿತ ತೆರವಿಗೆ ಮುಂದಾಗದಿರುವುದು ಕೋಟೆ ಅಭಿವೃದ್ಧಿಗೆ ಕಂಟಕವಾಗುತ್ತಿದೆ. ಪುರಾತತ್ವ ಇಲಾಖೆ ಕೋಟ್ಯಂತರ ರೂ.ವೆಚ್ಚದಲ್ಲಿ ಅಭಿವೃದ್ಧಿಗೆ ಮುಂದಾಗುತ್ತಿದೆ ಹೊರತು ಒತ್ತುವರಿ ತೆರವು ಮಾತ್ರ ಆಗುತ್ತಿಲ್ಲ.
ರಾಜ್ಯದ ಕೆಲವೇ ಕೆಲ ಐತಿಹಾಸಿಕ ಕೋಟೆಗಳಲ್ಲಿ ರಾಯಚೂರು ಕೂಡ ಸೇರಿದೆ. ಬೃಹದಾಕಾರದ ಕೋಟೆ ಹೊರಭಾಗ ಕಾಣುತ್ತಿದೆಯಾದರೂ ಒಳಭಾಗ ಶೇ.80 ಒತ್ತುವರಿಯಾಗಿದೆ. ಪುರಾತತ್ವ ಇಲಾಖೆಗೆ ಸಂಬಂಧಿಸಿದ ಕೋಟೆ, ಸ್ಮಾರಕಗಳ 300 ಮೀಟರ್ ಆಸು ಪಾಸು ಯಾವುದೇ ಕಟ್ಟಡಗಳಿರಬಾರದು ಎಂಬ ನಿಯಮವಿದ್ದರೂ ಇಲ್ಲಿ ಕೇವಲ 3 ಮೀಟರ್ ಕೂಡ ಬಿಟ್ಟಿಲ್ಲ. ತೀನ್ ಕಂದಿಲ್ ಬಳಿ ಕೋಟೆ ಪ್ರದೇಶವೇ ಕೆಲವರ ವ್ಯಾಪಾರ ತಾಣ. ಇನ್ನು ಕೆಲ ಹೋಟೆಲ್ ಮಾಲೀಕರು ಕೋಟೆಗೆ ಹೊಂದಿಕೊಂಡೇ ಬೋರ್ ವೆಲ್ ಕೊರೆದರೂ ಕೇಳುವವರೇ ಇಲ್ಲದಂತಹ ಸ್ಥಿತಿ ಇದೆ.
2015-16ನೇ ಸಾಲಿನಲ್ಲಿ ಕೋಟೆ ಅಭಿವೃದ್ಧಿಗೆಂದು 5 ಕೋಟಿ ರೂ. ಬಿಡುಗಡೆಯಾದರೂ ಅದು ಈವರೆಗೂ ಖರ್ಚಾಗಿರಲಿಲ್ಲ. ಅದರಲ್ಲಿ 50 ಲಕ್ಷ ರೂ.ಗಳನ್ನು ಸಣ್ಣ ಪುಟ್ಟ ದುರಸ್ತಿಗಾಗಿ ಬಳಸಲಾಗಿದೆ ಎಂದು ತಿಳಿದು ಬಂದಿದೆ. ಅದು ಕೂಡ ಲೋಕೋಪಯೋಗಿ ಇಲಾಖೆ ಮೂಲಕ ಕೆಲಸ ಮಾಡಿಸಲು ಮುಂದಾಗಿದ್ದು, ಯಾವುದೇ ಪುರಾತತ್ವ ಕೆಲಸಗಳನ್ನು ಸಂಬಂಧಿಸಿ ಇಲಾಖೆಯ ಇಂಜಿನಿಯರ್ ಗಳೇ ಮಾಡಬೇಕಿದೆ. ಹೀಗಾಗಿ ಅದಕ್ಕೆ ಕಡಿವಾಣ ಹಾಕಿ ಈಗ ಪುರಾತತ್ವ ಇಲಾಖೆ ಇಂಜಿನಿಯರ್ ಗಳು ಕೋಟೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಆದರೆ ಭಾಗಶಃ ಕೋಟೆ ಒತ್ತುವರಿಯಾದ ಕಾರಣ ಡಿಸಿ ಕಚೇರಿ ಮುಂಭಾಗದ ಕೋಟೆಯನ್ನೇ ದುರಸ್ತಿ ಮಾಡಿಸಲಾಗುತ್ತಿದೆ.
ಒತ್ತುವರಿ ತೆರವು ಮಾಡದಿದ್ರೆ ಅಭಿವೃದ್ಧಿ ಆಗೋದು ಹೇಗೆ?
ಜಿಲ್ಲಾಡಳಿತ, ನಗರಸಭೆ ಕೋಟೆ ಸಂರಕ್ಷಣೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆದರೆ ಈ ವಿಚಾರದಲ್ಲಿ ಸ್ಥಳೀಯ ಆಡಳಿತ ಮೌನ ಒತ್ತುವರಿಗೆ ಅನುವು ಮಾಡಿಕೊಟ್ಟಂತಾಗಿದೆ. ನಿಜಾಂ ಕಾಲದ ದಾಖಲೆಗಳನ್ನು ತೋರಿಸಿ ಇದು ನಮ್ಮ ಜಾಗ ಎನ್ನುತ್ತಿದ್ದಾರೆ.
ಆದರೆ ಇತ್ತೀಚಿಗೆ ಮನೆಗಳನ್ನು, ಶೆಡ್‌ಗಳನ್ನು ಹಾಕಿಕೊಂಡರೂ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದರೂ ನಗರಸಭೆ ಅಧಿಕಾರಿಗಳು ಗಾಢ ಮೌನಕ್ಕೆ ಜಾರಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ಅವರು ಕೂಡ ಉತ್ಸಾಹ ತೋರದಿರುವುದು ಒತ್ತುವರಿದಾರರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ರಾಜಾರೋಷವಾಗಿ ಕಟ್ಟಡಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಒತ್ತುವರಿ ತೆರವಿಗೆ ಮುಂದಾಗದಿದ್ದರೆ ನಾವು ಕೋಟೆ ಅಭಿವೃದ್ಧಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಪುರಾತತ್ವ ಇಲಾಖೆ ಅಧಿಕಾರಿಗಳು.
ವಿವಿಧ ಖಾತೆಗಳಿಗೆ ಹಣ ಹಂಚಿಕೆ
ಕೋಟೆ ಅಭಿವೃದ್ಧಿಗೆ 2015-16ರಲ್ಲಿ ಬಂದ 5 ಕೋಟಿ ರೂ.ಹಣ ವಿವಿಧ ಖಾತೆಗಳಿಗೆ ಹಂಚಿಕೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಕೆಲಸ ಮಾಡಿಸುವ ಉದ್ದೇಶದಿಂದ ಒಂದೂವರೆ ಕೋಟಿ ರೂ.ನೀಡಿದ್ದು, ಅದರಲ್ಲಿ 50 ಲಕ್ಷ ರೂ.ಖರ್ಚಾಗಿದೆ. ಒಂದು ಕೋಟಿ ರೂ. ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದು, ಉಳಿದ ಹಣ ಯಾವ ಖಾತೆಗಳಲ್ಲಿ ಎಂದು ಪರಿಶೀಲಿಸಿ ಒಟ್ಟುಗೂಡಿಸಿ ಅಭಿವೃದ್ಧಿಗೆ ಮುಂದಾಗಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.
ಬಜೆಟ್‌ನಲ್ಲಿ 75 ಕೋಟಿ ರೂ.
ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ವಿವಿಧ ಜಿಲ್ಲೆಗಳ ಕೋಟೆಗಳ ಅಭಿವೃದ್ಧಿಗೆ 75 ಕೋಟಿ ರೂ. ಮೀಸಲಿರಿಸಿದ್ದು, ಅದರಲ್ಲಿ ರಾಯಚೂರು ಜಿಲ್ಲೆ ಕೂಡ ಸೇರಿದೆ. ಈಗಿರುವ ಅನುದಾನ ಜತೆಗೆ ಹೊಸ ಅನುದಾನ ಬಳಸಿಕೊಂಡು ಕೋಟೆ ಅಭಿವೃದ್ಧಿ ಮಾಡಬೇಕಿದೆ. ಜಿಲ್ಲಾಡಳಿತ ಈ ಕೂಡಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ.
ರಾಯಚೂರು ನಗರದ ಕೋಟೆ ಭಾಗಶಃ ಒತ್ತುವರಿಗೆ ಒಳಪಟ್ಟಿದೆ. ಕೇಳಿದರೆ ಅಲ್ಲಿನ ನಿವಾಸಿಗಳು ನಮ್ಮಲ್ಲಿ ದಾಖಲೆ ಇದೆ ಎನ್ನುತ್ತಾರೆ. ಇನ್ನು ಕೆಲವರು ಮೊದಲು ಅವರನ್ನು ತೆರವು ಮಾಡಿ ನಂತರ ನಾವು ತೆರವು ಮಾಡುತ್ತೇವೆಂಬ ಮೊಂಡುವಾದ ಪ್ರದರ್ಶಿಸುತ್ತಾರೆ. ಸ್ಥಳೀಯ ಆಡಳಿತದ ಅಧಿಕಾರಿಗಳು ಒತ್ತುವರಿ ತೆರವು ಮಾಡಿದರೆ ಕೋಟೆಯನ್ನು ಮತ್ತಷ್ಟು ಸುಂದರವಾಗಿಸಬಹುದು. ಈಗ 4.5 ಕೋಟಿ ರೂ. ವೆಚ್ಚದಲ್ಲಿ ಡಿಸಿ ಕಚೇರಿ ಮುಂಭಾಗದ ಕೋಟೆ ಅಭಿವೃದ್ಧಿ ಮಾಡಲಾಗುತ್ತಿದೆ.
ಪ್ರೇಮಲತಾ, ಪುರಾತತ್ವ ಇಲಾಖೆ ಎಂಜಿನಿಯರ್, ಕಲಬುರಗಿ ವಿಭಾಗ
ರಾಯಚೂರು ನಗರ ಕೋಟೆ ಯಾವ ಭಾಗದಲ್ಲಿ ಒತ್ತುವರಿಗೆ ಒಳಪಟ್ಟಿದೆ ಎಂಬ ಬಗ್ಗೆ ಪುರಾತತ್ವ ಇಲಾಖೆಯವರು ನಮಗೆ ಸ್ಪಷ್ಟವಾಗಿ ವರದಿ ನೀಡಿದರೆ ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಅವರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಬಗ್ಗೆ ನಮಗೆ ಸಮರ್ಪಕ ವರದಿ ನೀಡಲ್ಲ. ಅಲ್ಲದೇ ಕೋಟೆ ಸ್ಥಳ ಬೇರೆಯವರ ಹೆಸರಿಗೆ ಪರಭಾರೆ ಮಾಡುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪುರಾತತ್ವ ಇಲಾಖೆ ಅಧಿ ಕಾರಿಗಳ ಜತೆಗೆ ಈ ಕುರಿತು ಶೀಘ್ರವೇ ಸಭೆ ನಡೆಸಲಾಗುವುದು.
ಚಂದ್ರಶೇಖರ ನಾಯಕ, ಜಿಲ್ಲಾಧಿಕಾರಿ
ರಾಯಚೂರಿನ ಕೋಟೆಗೆ ತನ್ನದೇಯಾದ ಇತಿಹಾಸವಿದೆ. ದೊಡ್ಡ ಸಾಮ್ರಾಜ್ಯಗಳು ಆಳ್ವಿಕೆ ಮಾಡಿದ್ದು ಸಾಕಷ್ಟು ಕುರುಹುಗಳಿವೆ. ಆದರೆ ಸಂರಕ್ಷಣೆ ಮಾಡುವ ಕುರಿತು ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸಾಕಷ್ಟು ಒತ್ತುವರಿಯಾಗಿದ್ದು, ಎಷ್ಟೇ ಪ್ರಭಾವಿಗಳಾದರೂ ಕೂಡಲೇ ತೆರವು ಮಾಡಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರಿ ನಿಯೋಜಿಸಬೇಕು. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಮರ್ಪಕ ಬಳಕೆ ಮಾಡಿ ಕೋಟೆಯನ್ನು ಸುಂದರ ತಾಣವನ್ನಾಗಿ ಮಾಡಬೇಕು. ಇಲ್ಲವಾದರೆ ಹೋರಾಟ ಮುಂದುವರಿಸಲಾಗುವುದು.
ವಿನೋದರೆಡ್ಡಿ, ಜಿಲ್ಲಾಧ್ಯಕ್ಷ, ಕರವೇ (ನಾರಾಯಣಗೌಡ ಬಣ)
*ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.