ಕಳಪೆ ಶೂ: 7 ಶಾಲೆ ಮುಖ್ಯ ಶಿಕ್ಷಕರಿಗೆ ನೋಟಿಸ್
ಸಮಗ್ರ ತನಿಖೆಗೆ ರಾಯಚೂರು ಜಿಪಂ ಸಿಇಒ ಸೂಚನೆ ಪ್ರತಿ ತಾಲೂಕಿಗೆ 7ರಂತೆ 35 ಶಾಲೆಗಳಲ್ಲಿ ಪರಿಶೀಲನೆ
Team Udayavani, Jan 8, 2020, 3:10 PM IST
ರಾಯಚೂರು: ಜಿಲ್ಲೆಯ ಕೆಲ ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಶೂ ವಿತರಿಸಿರುವುದು ಖಚಿತಗೊಂಡಿದ್ದು, ಅದಕ್ಕೆ ಸಂಬಂಧಿಸಿ ತನಿಖಾ ತಂಡ ವರದಿ ಸಿದ್ಧಪಡಿಸಿದೆ. ಅದರ ಭಾಗವಾಗಿ ಜಿಲ್ಲೆಯ ಏಳು ಶಾಲೆಗಳ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಗುಣಮಟ್ಟದ ಬೂಟು ಖರೀದಿಸಿದ್ದಾಗಿ ಮಕ್ಕಳಿಗೆ ಕಳಪೆ ಮಟ್ಟದ ಶೂ ವಿತರಿಸಲಾಗಿತ್ತು. ಇದು ಶಿಕ್ಷಣ ಸಚಿವರ ಗಮನಕ್ಕೆ ಬಂದ ಕಾರಣ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರನ್ವಯ ಜಿಪಂ ಸಿಇಒ ಸೂಚನೆ ಮೇರೆಗೆ ತನಿಖೆ ಕೈಗೊಂಡ ಅಧಿಕಾರಿಗಳ ತಂಡ ಜಿಲ್ಲೆಯ 35 ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಪ್ರತಿ ತಾಲೂಕಿನಲ್ಲಿ 7 ಶಾಲೆಗಳಂತೆ ಆಯ್ದ ಶಾಲೆಗಳಿಗೆ ತೆರಳಿ ಪರಿಶೀಲಿಸಿದಾಗ ಏಳು ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಶೂ ಸಿಕ್ಕಿವೆ. ಅದರಲ್ಲಿ ನಾಲ್ಕು ಪ್ರಾಥಮಿಕ ಹಾಗೂ ಮೂರು ಪ್ರೌಢ ಶಾಲೆಗಳಿವೆ. ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದ ತಂಡದ ಜತೆಗೆ ಆಯಾ ತಾಲೂಕಿನ ಇಒಗಳ ನೇತೃತ್ವದಲ್ಲಿ ಪರಿಶೀಲನೆ ಕಾರ್ಯ ಕೈಗೊಂಡಿದೆ.
1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬೂಟು ವಿತರಿಸಲಾಗಿತ್ತು. 1-5ನೇ ತರಗತಿಯ ಪ್ರತಿ ಮಗುವಿಗೆ 265 ರೂ., 6-8ನೇ ತರಗತಿ ಮಗುವಿಗೆ 295 ರೂ. ಹಾಗೂ 9-10ನೇ ತರಗತಿ ಮಕ್ಕಳಿಗೆ 323 ರೂ. ಹಣವನ್ನು ಮುಖ್ಯಶಿಕ್ಷಕರು ಹಾಗೂ ಎಸ್‌ಡಿಎಂಸಿ ಜಂಟಿ ಖಾತೆಗೆ ಬಿಡುಗಡೆ ಮಾಡಲಾಗಿತ್ತು. ಈ ಹಣದಿಂದ ಗುಣಮಟ್ಟದ ಶೂ ಖರೀದಿಸಿ ಮಕ್ಕಳಿಗೆ ವಿತರಿಸಬೇಕಿತ್ತು.
ಲಿಬರ್ಟಿ ಹೆಸರಲ್ಲಿ ವಂಚನೆ: ಲಿಬರ್ಟಿ ಕಂಪನಿ ಹೆಸರಿನ ನಕಲಿ ಬೂಟುಗಳನ್ನು ವಿತರಿಸುವ ಮೂಲಕ ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಯಾವ ಯಾವ ಶಾಲೆಗಳಲ್ಲಿ ಆ ಕಂಪನಿ ಹೆಸರಿನಲ್ಲಿ ಬೂಟು ಖರೀದಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚುವಂತೆ ಜಿಪಂ ಸಿಇಒ ಸೂಚನೆ ನೀಡಿದ್ದಾರೆ. ಲಿಬರ್ಟಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕೆಲವರು ಅದೇ ಹೆಸರಿನಡಿ ನಕಲಿ ಬೂಟುಗಳನ್ನು ವಿತರಿಸಿದ್ದಾರೆ. ತೀರ ಕಡಿಮೆ ದರಕ್ಕೆ ಕಳಪೆ ಗುಣಮಟ್ಟದ ಬೂಟುಗಳನ್ನು ವಿತರಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸಿಇಒ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಎಸ್‌ಡಿಎಂಸಿಗೂ ಅಕ್ರಮ ಹೊಣೆ: ಈಗ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಕಾರಣ ಕೇಳಿ ಏಳು ಶಾಲೆಗಳ ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಆದರೆ, ಈಗ ಅಭಿವೃದ್ಧಿ ಸೇರಿದಂತೆ ಪ್ರತಿ ವಿಚಾರದಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಈ ಅಕ್ರಮದಲ್ಲಿ ಎಸ್ ಡಿಎಂಸಿಗಳನ್ನು ಭಾಗಿದಾರರನ್ನಾಗಿಸುವ ಚಿಂತನೆ ನಡೆಸಲಾಗುತ್ತಿದೆ. ಮುಂದೆ ಇಂಥ ಅಕ್ರಮಗಳಿಗೆ ಆಸ್ಪದ ನೀಡಬಾರದು ಎಂದರೆ ಎಸ್‌ಡಿಎಂಸಿಗಳಿಗೂ ಎಚ್ಚರಿಕೆ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ.
ಪ್ರಭಾವಿಗಳ ಹಸ್ತಕ್ಷೇಪ!:
ಶೂ ಖರೀದಿಸುವ ಅ ಧಿಕಾರ ಮುಖ್ಯಶಿಕ್ಷಕರು, ಎಸ್‌ಡಿಎಂಸಿಗೆ ಇದೆಯಾದರೂ ಅದರಲ್ಲಿ ಪ್ರಭಾವಿಗಳ ಕೈಚಳಕ ಹೆಚ್ಚಾಗಿದೆ. ಪ್ರಭಾವಿಗಳ ಮೌಖೀಕ ಆದೇಶಕ್ಕೆ ಮಣಿದು ಮುಖ್ಯಶಿಕ್ಷಕರು ಗುಣಮಟ್ಟದಲ್ಲಿ ರಾಜಿಯಾಗುವಂತಾಗಿದೆ. ಕೆಲವೆಡೆ ಮುಖ್ಯ ಶಿಕ್ಷಕರೇ ಇಂಥ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪಗಳಿವೆ. ಪ್ರಭಾವಿಗಳು ತಮಗೆ ಬೇಕಾದ ಗುತ್ತಿಗೆದಾರರು, ಸಂಸ್ಥೆಗಳಿಂದಲೇ ಶೂ ಖರೀದಿಸಬೇಕು ಎಂಬ ಷರತ್ತು ಒಡ್ಡುತ್ತಿರುವುದು ಶಾಲೆಗಳ ಮುಖ್ಯಶಿಕ್ಷಕರಿಗೆ ಉಭಯ ಸಂಕಟ ತಂದೊಡ್ಡಿದೆ.
ಶಾಲಾ ಮಕ್ಕಳಿಗೆ ವಿತರಿಸುವ ಬೂಟುಗಳಲ್ಲಿ ಕಳಪೆ ಮಟ್ಟದ್ದು ಇರುವ ಬಗ್ಗೆ ಈಗ ಒಂದು ಹಂತದ ತನಿಖೆ ಕೈಗೊಳ್ಳಲಾಗಿದೆ. ಏಳು ಶಾಲೆಗಳಲ್ಲಿ ಅಕ್ರಮ ನಡೆದಿರುವುದು ಖಚಿತಗೊಂಡಿದ್ದು, ಆ ಶಾಲೆ ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದು ಮೇಲಧಿಕಾರಿಗಳಿಗೆ ಬಿಟ್ಟ ವಿಚಾರ. ಇನ್ನು ಲಿಬರ್ಟಿ ಕಂಪನಿ ಶೂ ಎಲ್ಲೆಲ್ಲಿ ಖರೀದಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಪಂ ಸಿಇಒ ತಿಳಿಸಿದ್ದಾರೆ. ಶೀಘ್ರದಲ್ಲೇ ತನಿಖೆ ನಡೆಸಲಾಗುವುದು.
ಬಿ.ಎಚ್.ಗೋನಾಳ,
ಡಿಡಿಪಿಐ ರಾಯಚೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ
ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…
Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.