ಭಾರತ ಬಂದ್ ಮುಷ್ಕರಕ್ಕೆ ಸಿಗದ ಬೆಂಬಲ
ಜಿಲ್ಲಾದ್ಯಂತ ಎಂದಿನಂತಿದ್ದ ಜನಜೀವನ ಧರಣಿ-ರ್ಯಾಲಿ-ಘೋಷಣೆಗಳಿಗೆ ಸೀಮಿತವಾದ ಹೋರಾಟ ಕೇಂದ್ರದ ಧೋರಣೆಗೆ ಕಾರ್ಮಿಕರ ಆಕ್ರೋಶ
Team Udayavani, Jan 9, 2020, 12:01 PM IST
ರಾಯಚೂರು: ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಸೇರಿದಂತೆ ಹಲವು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಅಖೀಲ ಭಾರತ ಬಂದ್ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಕಾರ್ಮಿಕ ಸಂಘಟನೆಗಳ ಧರಣಿ, ರ್ಯಾಲಿಗೆ ಹೋರಾಟ ಸೀಮಿತವಾದ ಕಾರಣ ಜನಜೀವನ ಎಂದಿನಂತಿತ್ತು.
ಪರಿಸ್ಥಿತಿ ನೋಡಿಕೊಂಡು ಸಾರಿಗೆ ಸೌಲಭ್ಯ ಕಲ್ಪಿಸಲು ನಿರ್ಧರಿಸಿದ್ದ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಯಾವುದೇ ಸಂಘಟನೆಗಳಿಂದ ಅಡೆ ತಡೆ ವ್ಯಕ್ತವಾಗಲಿಲ್ಲ. ಇದರಿಂದ ದೂರದ ಊರುಗಳಿಗೆ ಬಸ್ ಸಂಚಾರ ಆರಂಭಿಸಲಾಯಿತು. ಇದರಿಂದ ಜನಸಂಚಾರದಲ್ಲಿ ಅಂಥ ವ್ಯತ್ಯಯ ಕಂಡು ಬರಲಿಲ್ಲ. ಇನ್ನು ಶಾಲಾ ಕಾಲೇಜುಗಳು, ಕಚೇರಿಗಳು ಎಂದಿನಂತೆ ಕಾರ್ಯೋನ್ಮುಖವಾಗಿದ್ದವು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಟಿಯುಸಿಐ, ಎಐಟಿಯುಸಿ, ಯರಮರಸ್ ಥರ್ಮಲ್ ಪವರ್ ಸ್ಟೇಶನ್, ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನ ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡಿದರು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕ ಸಂಘಟನೆಗಳ ಸದಸ್ಯರು, ಅಲ್ಲಿಯೇ ಧರಣಿ ನಡೆಸಿದರು.
ಟಿಯುಸಿಐ ಸಂಘಟನೆ ನೇತೃತ್ವದ ಕಾರ್ಮಿಕರು, ನಗರದ ಪಬ್ಲಿಕ್ ಗಾರ್ಡನ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ರ್ಯಾಲಿ ನಡೆಸಿದರೆ,
ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ನಗರದ ಸ್ಟೇಶನ್ ರಸ್ತೆ
ವೃತ್ತದಲ್ಲಿ ಕೆಲ ಕಾಲ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಅದರ ಜತೆಗೆ ವಿಮಾ ಸಂಸ್ಥೆ ಗುತ್ತಿಗೆ ನೌಕರರು, ಕೆನರಾ ಬ್ಯಾಂಕ್ ನೌಕರರು, ಈಶಾನ್ಯ ಸಾರಿಗೆ ಸಂಸ್ಥೆ ನೌಕರರು ಸೇರಿದಂತೆ ವಿವಿಧ ಗುತ್ತಿಗೆ ಕಾರ್ಮಿಕ ಸಂಘಟನೆಗಳ ನೌಕರರು ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು. ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅದರ ಜತೆಗೆ ಹೋರಾಟದ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಕೇಂದ್ರ ಸರ್ಕಾರದ ಇಬ್ಬಗೆ ನೀತಿಯನ್ನು ಕಟುವಾಗಿ ಖಂಡಿಸಿದರು. ಕಾರ್ಮಿಕರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳಶಾಹಿಗಳ ಪರ ಆಡಳಿತ ನಡೆಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದು, ಕಾರ್ಮಿಕರಿಗೆ ಸೇವಾ ಭದ್ರತೆಯೇ ಇಲ್ಲದಂಥ ಸ್ಥಿತಿ
ಬಂದೊದಗಿದೆ ಎಂದು ದೂರಿದರು.
ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಮಾಲೀಕ ಸ್ನೇಹಿ ನಿಯಮ ರೂಪಿಸಲಾಗುತ್ತಿದೆ. ಇದರಿಂದ ಕಾರ್ಮಿಕರ ಬದುಕು ಅಕ್ಷರಶಃ ಅತಂತ್ರಗೊಳ್ಳಲಿದೆ. ದೇಶದ ಬಡಜನ ನೆಮ್ಮದಿಯಿಂದ ಬದುಕುವುದೇ ಕಷ್ಟವಾಗಲಿದೆ ಎಂದು ದೂರಿದರು. ಕೂಡಲೇ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು. ಕನಿಷ್ಠ ವೇತನ ಸೌಲಭ್ಯ ಕಲ್ಪಿಸಬೇಕು. ನರೇಗಾ ಯೋಜನೆಗೆ ಹೆಚ್ಚುವರಿ ಹಣ ನೀಡಬೇಕು. ಅಂಗನವಾಡಿಗಳ ಬಲವರ್ಧನೆಗೆ ಒತ್ತು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.