ವೈಟಿಪಿಎಸ್ ಭೂಸಂತ್ರಸ್ತರ ಅರೆಬೆತ್ತಲೆ ಪ್ರತಿಭಟನೆ
Team Udayavani, Oct 27, 2017, 11:12 AM IST
ರಾಯಚೂರು: ಯರಮರಸ್ ಶಾಖೋತ್ಪನ್ನ ಕೇಂದ್ರಕ್ಕೆ ಭೂಮಿ ನೀಡಿದ ಭೂ ಸಂತ್ರಸ್ತರ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದ್ದಕ್ಕೆ ಪ್ರತಿಭಟನಾಕಾರರು ಗುರುವಾರ ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಅ.23ರಂದು ವೈಟಿಪಿಎಸ್ ಕೇಂದ್ರಕ್ಕೆ ಬೀಗ ಜಡಿದು ಹೋರಾಟ ಆರಂಭಿಸಿದ ಪ್ರತಿಭಟನಾಕಾರರು ಕೇಂದ್ರದ ಎದುರೇ ಧರಣಿ ಕುಳಿತರು. ಹೋರಾಟಕ್ಕಿಳಿದು ನಾಲ್ಕು ದಿನವಾದರೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಆಡಳಿತ ಪಕ್ಷದ ಯಾವುದೇ ಜನಪ್ರತಿನಿಧಿ ಗಳಾಗಲಿ ಕೇಂದ್ರಕ್ಕೆ ಭೇಟಿ ನೀಡಿ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಭೂಮಿ ಪಡೆಯುವಾಗ ಇದ್ದ ವರ್ತನೆ ಈಗ ಇಲ್ಲದಾಗಿದೆ. ಹತ್ತಾರು ಎಕರೆ ಭೂಮಿ ಕಳೆದುಕೊಂಡು ನಾವು ನಿತ್ಯ ಯಾತನೆ ಅನುಭವಿಸುವಂತಾಗಿದೆ ಎಂದು ದೂರಿದರು. 1100 ಎಕರೆ ಭೂಮಿ ವಶಪಡಿಸಿಕೊಂಡಿದ್ದು, ಸುತ್ತಲಿನ ಗ್ರಾಮಗಳಲ್ಲಿ ಕೇವಲ 100 ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಭೂ ಸಂತ್ರಸ್ತರು ಬಿಟ್ಟು ಬೇರೆಯವರಿಗೆ ಉದ್ಯೋಗ ನೀಡುತ್ತಿದ್ದು, ನಮಗೆ ಆತ್ಮಹತ್ಯೆಯೊಂದೇ ದಾರಿ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರೆಬೆತ್ತಲೆ ಧರಣಿ ನಡೆಸಿದ ಪ್ರತಿಭಟನಾಕಾರರು ಅಧಿಕಾರಿಗಳು ನಮ್ಮ ಬೇಡಿಕೆಗೆಳಿಗೆ ಮನ್ನಣೆ ನೀಡದಿದ್ದ ಪಕ್ಷದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ವಿದ್ಯಾಭ್ಯಾಸಕ್ಕೆ ತಕ್ಕ ಹುದ್ದೆ ನೀಡಿದರೂ ನಮ್ಮ ತಕರಾರಿಲ್ಲ. ಆದರೆ, ಭೂಮಿ ಕಳೆದುಕೊಂಡವರನ್ನು ಬಿಟ್ಟು ಬೇರೆಯವರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಅವೈಜ್ಞಾನಿಕ ನಿಯಮಗಳಿಂದ ಹುದ್ದೆ ಪಡೆಯಲಾಗದೆ ಸಮಸ್ಯೆ ಎದುರಿಸುತ್ತಿದ್ದು, ಶೀಘ್ರವೇ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಏಗನೂರು, ವಡ್ಮೂರು, ಸಂಕನೂರು, ಕುಕನೂರು ಸೇರಿ ವಿವಿಧ ಗ್ರಾಮಗಳ ಭೂಸಂತ್ರಸ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.