ಬೇಸಿಗೆ ಮುನ್ನವೇ ಕುಡಿವ ನೀರಿನ ಅಭಾವ
Team Udayavani, Mar 13, 2022, 3:05 PM IST
ದೇವದುರ್ಗ: ಬೇಸಿಗೆ ಮುನ್ನವೇ ಬಹುತೇಕ ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ ಶುರುವಾಗಿದೆ.
ತಾಲೂಕು ಕೃಷ್ಣಾ ನದಿ ದಂಡೆಗೆ ಹೊಂದಿಕೊಂಡಿದ್ದರೂ ಬೇಸಿಗೆಯಲ್ಲಿ ಜನ-ಜಾನುವಾರು ಜಲದಾಹಕ್ಕೆ ಪರಿಹಾರ ಸಿಕ್ಕಿಲ್ಲ. ನಾರಾಯಣಪುರ ಬಲದಂಡೆ ನಾಲೆ ವರ್ಷದ 8 ತಿಂಗಳು ಹರಿದರೂ ಬೇಸಿಗೆ ಬಂದರೆ ಸಾಕು 40 ಕ್ಕೂ ಹೆಚ್ಚು ಹಳ್ಳಿ, ಎನ್‌ಆರ್‌ಬಿ ನಾಲೆ ಕೊನೇ ಭಾಗ, ಗುಡ್ಡಗಾಡು ಪ್ರದೇಶ, ರಸ್ತೆ ಸಂಚಾರವಿಲ್ಲದ ತಾಂಡಾ, ದೊಡ್ಡಿಗಳಲ್ಲಿ ನೀರಿನ ಅಭಾವ ದಿನೇದಿನೆ ಹೆಚ್ಚಾಗುತ್ತದೆ.
ಜನರ ದಾಹ ನೀಗಿಸಲು ತಾಪಂ-ಜಿಪಂ ಹತ್ತಾರೂ ಯೋಜನೆ ಜಾರಿಗೊಳಿಸಿದರೂ, ಅನುದಾನ ಖರ್ಚಾದರೂ ಶಾಶ್ವತ ಪರಿಹಾರ ಎನ್ನುವುದು ಮರೀಚಿಕೆಯಾಗಿದೆ. ಬಹುಗ್ರಾಮ ಯೋಜನೆ, ಜಲ ನಿರ್ಮಲ ಯೋಜನೆ, ಶುದ್ಧೀಕರಣ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದರೂ, ಕೋಟ್ಯಂತರ ರೂ. ಅನುದಾನ ಖರ್ಚಾದರೂ ನಿರ್ವಹಣೆ ಕೊರತೆಯಿಂದ ಹಳ್ಳ ಹಿಡಿದಿವೆ.
ತಾಲೂಕಿನ ಸೋಮನಮರಡಿ, ಹೇಮನಾಳ, ಕೋಳ್ಳೂರು, ಊಟಿ, ಸಲಿಕ್ಯಾಪುರ, ಚಿಕ್ಕಬೂದೂರು, ಜೇರಬಂಡಿ, ಹೊಸೂರು ಸಿದ್ದಾಪುರ, ವಂದಲಿ ಸೇರಿ ತಾಂಡಾ, ದೊಡ್ಡಿಗಳಲ್ಲಿ ಕುಡಿವ ನೀರಿನ ಬವಣೆಯಿದೆ. ಬೇಸಿಗೆ ಬಂತೆಂದರೆ ಖಾಸಗಿ ಬೋರ್‌ವೆಲ್, ಹಳ್ಳ ಕೊಳ್ಳ ಅಲೆಯುವಂತಹ ಸ್ಥಿತಿಯಿದೆ.
ಕೃಷ್ಣಾ ನದಿಯಿಂದ ದೇವದುರ್ಗ ಪಟ್ಟಣಕ್ಕೆ 24/7 ನೀರು ಒದಗಿಸಲು ಯೋಜನೆ ಜಾರಿಗೊಳಿಸಿದ್ದರೂ ಅದರ ಉದ್ದೇಶ ಈಡೇರಿಲ್ಲ. ಕೆಲ ವಾರ್ಡ್‌ಗಳಿಗೆ ದಿನದಲ್ಲಿ 10-20 ನಿಮಿಷ ನೀರು ಬಿಟ್ಟರೆ, ಕೆಲವು ಕಡೆ ಎರಡ್ಮೂರು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಹೊಸ ಬಡಾವಣೆಗಳಿಗೆ ಕುಡಿವ ನೀರಿನ ಸೌಲಭ್ಯವೇ ಕಲ್ಪಿಸಿಲ್ಲ. ಪ್ರತಿ ಮನೆಗೆ ನಲ್ಲಿ, ವಾಟರ್ ಮೀಟರ್ ಅಳವಡಿಕೆ ಕನಸಾಗಿಯೇ ಉಳಿದಿದೆ.
ವಿಷವಾಗುತ್ತಿದೆ ಬೋರ್‌ವೆಲ್ ನೀರು
ಪರಿಸರ ಅಸಮತೋಲನದಿಂದ ದಿನೇದಿನೆ ಬೋರ್‌ವೆಲ್ ನೀರು ವಿಷವಾಗುತ್ತಿದೆ. ವಂದಲಿ, ಊಟಿ, ಸುಣ್ಣದಕಲ್, ಬಿ.ಗಣೇಕಲ್, ಸೋಮನಮರಡಿ, ಎಚ್.ಸಿದ್ದಾಪುರ ಸೇರಿ 20ಕ್ಕೂ ಹೆಚ್ಚು ಗ್ರಾಮಗಳ ಬೋರ್‌ವೆಲ್‌ನಲ್ಲಿ ಆರ್ಶೇನಿಕ್ ಹಾಗೂ ಫ್ಲೋರೈಡ್ ನೀರಿನ ಅಂಶ ಹೆಚ್ಚುತ್ತಿದೆ. ಈ ಬಗ್ಗೆ ಅಧಿಕಾರಿಗಳೇ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಇದರ ನಿರ್ವಹಣೆಗೆ ಶುದ್ಧ ಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಹಲವು ಕಡೆ ಯೋಜನೆ ನನೆಗುದಿಗೆ ಬಿದ್ದಿದ್ದರೆ, ಕೆಲವು ಕಡೆ ನಿರ್ವಹಣೆ ಕೊರತೆಯಿಂದ ಮೂಲೆ ಸೇರಿವೆ. ಬೆರಳೆಣಿಕೆಯಷ್ಟು ಪ್ಲಾಂಟ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಜನರು ಅನಿವಾರ್ಯವಾಗಿ ಅರ್ಶೇನಿಕ ಹಾಗೂ ಫ್ಲೋರೈಡ್ ಅಂಶವಿರುವ ನೀರು ಕುಡಿಯುತ್ತಿದ್ದಾರೆ. ಇದರಿಂದ ಮೊಣಕಾಲು ನೋವು, ಕೀಲು ಬೇನೆ, ಕಂದು ಹಲ್ಲಿನ ಸಮಸ್ಯೆ ಸೇರಿ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ.
13 ಘಟಕಗಳು ನಿರ್ವಹಣೆ ಇಲ್ಲದೇ ಬಂದ್
ಕುಡಿವ ನೀರಿನ ಬವಣೆ ನೀಗಿಸಲು ತಾಲೂಕಿನಲ್ಲಿ 30ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 17 ಪ್ಲಾಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, 13 ಘಟಕಗಳು ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿವೆ. ಸುಮಾರು 20ಕ್ಕೂ ಹೆಚ್ಚು ಪ್ಲಾಂಟ್‌ಗಳು ಅರೆಬರೆಯಾಗಿವೆ. ಹೊಸ ಪ್ಲಾಂಟ್‌ಗಳಿಗಾಗಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರೂ ಸಂಬಂಸಿದ ಇಲಾಖೆಯಿಂದ ಅನುಮೋದನೆ ದೊರತಿಲ್ಲ. ಆಲ್ಕೋಡ್, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್, ನೀಲವಂಜಿ, ಸೂಗರಾಳ, ಗಣಜಲಿ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್ ನಿರುಪಯುಕ್ತವಾಗಿವೆ.
3-4 ಗ್ರಾಪಂ ವ್ಯಾಪ್ತಿಯ 10-15 ಹಳ್ಳಿಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ. ಖಾಸಗಿ ಬೋರ್‌ವೆಲ್ ನೀರು ಪಡೆದು ಜನರಿಗೆ ಪೂರೈಸಲಾಗುತ್ತಿದೆ. ಗುಡ್ಡಗಾಡು, ಎನ್‌ಆರ್‌ಬಿ ನಾಲೆ ಕೊನೇ ಭಾಗದ ಹಳ್ಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. -ವೆಂಕಟೇಶ ಗಲಗ, ಜಿಪಂ ಎಇಇ
ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗುತ್ತದೆ. -ಪಂಪಾಪತಿ ಹಿರೇಮಠ, ತಾಪಂ ಇಒ
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.