![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 15, 2022, 6:15 PM IST
ಮಸ್ಕಿ: ಪಟ್ಟಣದ ಹೊರವಲಯದಲ್ಲಿನ ನಿರ್ಜನ ಪ್ರದೇಶ, ಸುತ್ತಲೂ ಜಾಲಿಮರಗಿಡ, ಸಾಲದ್ದಕ್ಕೆ ಪಕ್ಕದಲ್ಲಿಯೇ ಸ್ಮಶಾನ, ನಿತ್ಯ ಶವದಹನದ ಚಿತ್ರಣ!.
ಲಿಂಗಸುಗೂರು ಮಾರ್ಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ (ಬಿಸಿಎಂ) ಬಾಲಕರ ವಸತಿ ನಿಲಯದ ಸುತ್ತಲಿನ ಪರಿಸ್ಥಿತಿ ಇದು. ಇಂತಹ ಚಿತ್ರಣಕ್ಕೆ ಬೆದರಿದ ವಸತಿ ನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಸಾಹವಾಸವೇ ಬೇಡವೆಂದು ಊರು ಸೇರಿದ್ದಾರೆ.
ಕಳೆದ ಕೆಲವು ತಿಂಗಳಿಂದ ವಸತಿ ನಿಲಯದಲ್ಲಿ ಇಂತಹ ಭಯದ ವಾತಾವರಣ ಏರ್ಪಟ್ಟಿದ್ದು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮಾತ್ರ ಇತ್ತ ಮುಖ ಮಾಡಿಲ್ಲ. ಹೀಗಾಗಿ ವಸತಿ ನಿಲಯವೇ ಬಿಕೋ ಎನ್ನುತ್ತಿದ್ದು ಇದ್ದ ಕೆಲವೇ ವಿದ್ಯಾರ್ಥಿಗಳು ಜೀವಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.
ಏನಿದು ಪರಿಸ್ಥಿತಿ?
ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಎಲ್ಲೂ ಜಾಗ ಲಭ್ಯವಿಲ್ಲದ ಕಾರಣ ಲಿಂಗಸುಗೂರು ರಸ್ತೆಯಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಇತ್ತೀಚೆಗೆ ಇದರ ಪಕ್ಕದಲ್ಲಿಯೇ ಸ್ಮಶಾನಕ್ಕೆ ಜಾಗೆ ನೀಡಲಾಗಿದ್ದು, ಶವ ಸಂಸ್ಕಾರ, ಶವ ದಹನಕ್ಕೆ ಮಂಟಪ ಕೂಡ ನಿರ್ಮಾಣ ಮಾಡಲಾಗಿದೆ. ಪರಿಣಾಮ ಇಲ್ಲಿನ ವಿದ್ಯಾರ್ಥಿಗಳಿಗೆ ತೀವ್ರ ಕಳವಳ ಉಂಟು ಮಾಡಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಾಗಿದ್ದರಿಂದ ಸಹಜವಾಗಿಯೇ ಭಯ ಹೆಚ್ಚಾಗಿದ್ದು, ವಸತಿ ನಿಲಯದ ಸಮರ್ಪಕ ನಿರ್ವಹಣೆ ಕೊರತೆ, ಅಧಿಕಾರಿಗಳ ಅನುಪಸ್ಥಿತಿಯೂ ವಿದ್ಯಾರ್ಥಿಗಳಲ್ಲಿ ಭಯ ಹೆಚ್ಚುವಂತೆ ಮಾಡಿದೆ.
ಶವ ದಹನ ಕ್ರಿಯೆ ಮಾಡುವ ವೇಳೆ ಹೊಗೆ ಉಂಟಾಗಿ ವಸತಿ ನಿಲಯ ಒಳಗೆ ತುಂಬಿಕೊಳ್ಳುತ್ತಿದೆ. ಹೊಗೆ ತಡೆಯಲು ವಸತಿ ನಿಲಯ ಪಕ್ಕದಲ್ಲಿ ಗೋಡೆ ಕಟ್ಟಿದ್ದರೂ ಪ್ರಯೋಜನವಾಗಿಲ್ಲ. ವಸತಿ ನಿಲಯದ ಕೋಣೆಗಳಿಗೆ ಹೊಗೆ ಆವರಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ವಸತಿ ನಿಲಯ ವಾಸ “ವನವಾಸ’ ಆಗಿದೆ. ಭೂತ ಬಂಗಲೆಯಂತಾಗಿರುವ ಹಾಸ್ಟೆಲ್ ಸ್ಥಿತಿ ಕಂಡು ವಿದ್ಯಾರ್ಥಿಗಳು ಜ್ವರಪೀಡಿತರಾಗುತ್ತಿದ್ದಾರೆ. ನೆರವಿಗಾಗಿ ಕನಿಷ್ಟ ರಾತ್ರಿ ಕಾವಲುಗಾರರನ್ನು ಇಲ್ಲಿ ನೇಮಿಸಿಲ್ಲ. ಹೀಗಾಗಿ ಹಾಸ್ಟೆಲ್ ಸಹವಾಸ ಬೇಡ ಎಂದು ನಾನಾ ಹಳ್ಳಿಗಳ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಗುಡ್ ಬೈ ಹೇಳಿದ್ದಾರೆ. ವಸತಿ ನಿಲಯದ ಒಟ್ಟು 50 ವಿದ್ಯಾರ್ಥಿಗಳ ಪೈಕಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂತಹ ಚಿತ್ರಣಕ್ಕೆ ಬೇಸತ್ತು ಮನೆಗೆ ಹೋಗಿದ್ದಾರೆ.
ಸೌಲಭ್ಯಗಳೂ ಇಲ್ಲ
ವಸತಿ ನಿಲಯದಲ್ಲಿ ಸ್ನಾನಗೃಹ, ಶೌಚಾಲಯಗಳ ಸೌಲಭ್ಯವೂ ಇಲ್ಲ. ವಸತಿ ನಿಲಯ ಆವರಣದಲ್ಲಿಯೇ ಬಯಲು ಪ್ರದೇಶದಲ್ಲಿ ಸ್ನಾನ ಮಾಡಿದರೆ, ಬಹಿರ್ದೆಸೆಗಾಗಿ ಬಯಲು ಪ್ರದೇಶವನ್ನೇ ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ಸುತ್ತಲೂ ಜಾಲಿಗಿಡ, ಸ್ಮಶಾನವಿದ್ದರಿಂದ ಒಂದು-ಎರಡಕ್ಕೂ ವಿದ್ಯಾರ್ಥಿಗಳು ಹೆದರುವ ಸಮಸ್ಯೆ ಉಂಟಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿದರೂ ಮಸ್ಕಿ ಪಟ್ಟಣದಲ್ಲಿನ ವಸತಿ ನಿಲಯದ ಚಿತ್ರಣ ಮಾತ್ರ ಭೂತ-ಪ್ರೇತಗಳ ಅವಾಸ ಸ್ಥಾನವಾಗಿದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ತಿರುಗಿ ನೋಡಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.
ವಸತಿ ನಿಲಯ ಪಕ್ಕದಲ್ಲಿ ಸ್ಮಶಾನ ಭೂಮಿ ಇರುವ ಕಾರಣ ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ನಿಲಯ ಬೇರೆ ಕಡೆ ಶಿಫ್ಟ್ ಮಾಡಬೇಕು ಎಂದು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. -ಹೊನ್ನಪ್ಪ, ವಸತಿ ನಿಲಯ ಮೇಲ್ವಿಚಾರಕ, ಮಸ್ಕಿ
ವಸತಿ ನಿಲಯದ ಸುತ್ತಮುತ್ತಲಿನ ಪರಿಸ್ಥಿತಿ ಸರಿಯಾಗಿಲ್ಲ. ರಾತ್ರಿ ಹೊತ್ತು ಓದು-ಬರೆಯಲಿರಲಿ, ಒಂದು-ಎರಡಕ್ಕೂ ಹೆದರಿಕೆಯಾಗುತ್ತಿದೆ. ಹೀಗಾಗಿ ಇದನ್ನು ಸ್ಥಳಾಂತರ ಮಾಡಿ ಅನುಕೂಲ ಮಾಡಿಕೊಡಬೇಕು. -ಹೆಸರು ಹೇಳಲಿಚ್ಛಿಸದ ಹಾಸ್ಟೆಲ್ ವಿದ್ಯಾರ್ಥಿ
-ಮಲ್ಲಿಕಾರ್ಜುನ ಚಿಲ್ಕರಾಗಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.