ಕಸ್ತೂರಬಾ ಗಾಂಧಿ ವಸತಿ ಶಾಲೆ ಅವ್ಯವಸ್ಥೆ
Team Udayavani, Mar 3, 2020, 2:07 PM IST
ದೇವದುರ್ಗ: ತಾಲೂಕಿನ ಆಲ್ಕೋಡ್ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಕಾಯಂ ಮುಖ್ಯ ಶಿಕ್ಷಕರ ಕೊರತೆ ಇದೆ. ಇನ್ನು ಶಾಲೆ ಕಟ್ಟಡ ಸುತ್ತ ಜಾಲಿಗಿಡಗಳು, ತಿಪ್ಪೆಗುಂಡಿ ಇದ್ದು, ಮಕ್ಕಳು ವಿಷಜಂತುಗಳ ಭಯದಲ್ಲೇ ಪಾಠ ಕೇಳಬೇಕಿದೆ.
ದಿ| ಶಾಸಕ ಎ. ವೆಂಕಟೇಶ ನಾಯಕ ಅವಧಿಯಲ್ಲಿ 2005ರಲ್ಲಿ ಆಲ್ಕೋಡ್ ಗ್ರಾಮಕ್ಕೆ ಕಸ್ತೂರಬಾ ಗಾಂಧಿ ವಸತಿ ಶಾಲೆ ಮಂಜೂರಾಗಿತ್ತು. ಆದರೆ ಆಲ್ಕೋಡ್ ಗ್ರಾಮದಲ್ಲಿ ಕಟ್ಟಡ ಸೌಲಭ್ಯ ಇಲ್ಲದ್ದರಿಂದ ತಾತ್ಕಾಲಿಕವಾಗಿ ದೇವದುರ್ಗ ಪಟ್ಟಣದ ಕರ್ನಾಟಕ ಪಬ್ಲಿಕ್ ಸರಕಾರಿ ಶಾಲೆಯಲ್ಲಿ ಆರಂಭಿಸಲಾಗಿತ್ತು. ಆಲ್ಕೋಡ್ ಗ್ರಾಮದಲ್ಲಿ ಸ್ವಂತ ಕಟ್ಟಡ ನಿರ್ಮಿಸಿದ ನಂತರ ಅಲ್ಲಿಗೆ ಕಸ್ತೂರಬಾ ಗಾಂಧಿ ವಸತಿ ಶಾಲೆ ಸ್ಥಳಾಂತರವಾಗಿ ಸುಮಾರು ವರ್ಷಗಳೇ ಗತಿಸಿದೆ.
ಕಾಯಂ ಮುಖ್ಯ ಶಿಕ್ಷಕರಿಲ್ಲ: ಶಾಲೆಯಲ್ಲಿ ಕಾಯಂ ಮುಖ್ಯ ಶಿಕ್ಷಕರಿಲ್ಲ. ಸರ್ಕಾರಿ ಶಾಲೆಯ ಶಿಕ್ಷಕರನ್ನೇ ಪ್ರಭಾರಿಯಾಗಿ ನೇಮಿಸಲಾಗಿದೆ. ಈ ಹಿಂದೆ ಪಿಲಿಗುಂಡ ಶಾಲೆ ಮುಖ್ಯ ಶಿಕ್ಷಕಿ ವಸತಿ ಶಾಲೆ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಜ.2ರಂದು ಶಿಕ್ಷಕಿ ಲೀಲಾವತಿ ಅವರಿಗೆ ಚಾರ್ಜ್ ನೀಡಲಾಗಿದೆ. ಕಾಯಂ ಶಿಕ್ಷಕಿ ಸುರೇಖಾ ಹೆರಿಗೆ ರಜೆಯಲ್ಲಿ ತೆರಳಿದ್ದಾರೆ. ಹಣಕಾಸು ವ್ಯವಹಾರದಲ್ಲಿ ಕಾಯಂ ಶಿಕ್ಷಕಿ, ಮುಖ್ಯ ಶಿಕ್ಷಕಿ ಜಂಟಿ ಬ್ಯಾಂಕ್ ಖಾತೆ ತೆಗೆಯಬೇಕಾಗಿದೆ. ರಜೆಯಲ್ಲಿರುವ ಕಾರಣ ಹಣಕಾಸು ವ್ಯವಹಾರ ನಿರ್ವಹಣೆಗೆ ಸಮಸ್ಯೆ ಆಗುತ್ತಿದೆ. ಅಲ್ಲದೇ ಕಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆ ಆಗುತ್ತಿದೆ.
ಏಜೆನ್ಸಿ ಮೂಲಕ ನೇಮಕ: ಏಜೆನ್ಸಿ ಮೂಲಕ ವಸತಿ ಮೇಲ್ವಿಚಾರಕಿ, ಕಂಪ್ಯೂಟರ್, ಹಿಂದಿ, ದೈಹಿಕ ಶಿಕ್ಷಕರು ಸೇರಿ ಐದು ಜನರನ್ನು ನೇಮಿಸಲಾಗಿದೆ. ಏಜೆನ್ಸಿಯಿಂದಲೇ ಶಿಕ್ಷಕರಿಗೆ ವೇತನ ಪಾವತಿ ಮಾಡಲಾಗುತ್ತಿದೆ.
ಕೋಣೆಗಳ ಸಮಸ್ಯೆ: ಆಲ್ಕೋಡ್ ಗ್ರಾಮದಲ್ಲಿರುವ ಕಸ್ತೂರಬಾ ಗಾಂ ಧಿ ವಸತಿ ಶಾಲೆಯಲ್ಲಿ 6ರಿಂದ 8ನೇ ತರಗತಿವರೆಗೆ ನೂರು ವಿದ್ಯಾರ್ಥಿಗಳಿದ್ದು, ಎರಡೇ ಕೋಣೆಗಳಿವೆ. ಈ ಕೋಣೆಯಲ್ಲಿ ಊಟ, ನಿದ್ರೆ ಮಾಡಬೇಕಿದೆ. ಇಕ್ಕಟ್ಟಿನ ಜಾಗೆಯಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಶಾಲೆಯಲ್ಲಿನ ಶುದ್ಧ ಕುಡಿಯವ ನೀರಿನ ಯಂತ್ರ ದುರಸ್ತಿಯಲ್ಲಿರುವ ಕಾರಣ ಅಶುದ್ಧ ನೀರನ್ನೇ ಮಕ್ಕಳು ಸೇವಿಸಬೇಕಿದೆ.
ಏಜೆನ್ಸಿ ಮೂಲಕ ಆಹಾರ: ಕಸ್ತೂರಬಾ ಗಾಂಧಿ ವಸತಿ ಶಾಲೆಯ ಒಬ್ಬ ವಿದ್ಯಾರ್ಥಿ ಊಟ ಇತರೆ ವೆಚ್ಚಕ್ಕೆ ತಿಂಗಳಿಗೆ 1500 ರೂ. ನಿಗದಿ ಮಾಡಲಾಗಿದೆ. ಕನಕಗಿರಿ ಏಜೆನ್ಸಿಯವರು ಏಜೆನ್ಸಿಯವರು ಅಕ್ಕಿ, ಬೇಳೆ, ತರಕಾರಿ, ಎಣ್ಣೆ, ಮೊಟ್ಟೆ, ಚಿಕನ್ ಸೇರಿ ಆಹಾರ ಪದಾರ್ಥ ಪೂರೈಸುತ್ತಾರೆ. ತಿಂಗಳಿಗೆ 1.50 ಲಕ್ಷ ವೆಚ್ಚ ಭರಿಸಲಾಗುತ್ತಿದೆ. ವಸತಿ ಶಾಲೆಯಿಂದಲೇ ಒಬ್ಬ ವಿದ್ಯಾರ್ಥಿಗೆ ತಿಂಗಳ 200 ರೂ. ಶಿಷ್ಯವೇತನ ನೀಡಲಾಗುತ್ತಿದೆ. ನವೆಂಬರ್ ತಿಂಗಳಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಎನ್ನಲಾಗಿದೆ.
ಶಾಲೆಯಲ್ಲಿನ ಶೌಚಾಲಯಗಳ ಬಾಗಿಲು ಕಿತ್ತು ಹೋಗಿವೆ. ಶಾಲೆ ಕಟ್ಟಡ ಸುತ್ತ ಆವರಣ ಗೋಡೆ ಇಲ್ಲ. ಜಾಲಿಗಿಡಗಳು, ತಿಪ್ಪೆಗುಂಡಿಗಳು ಇರುವುದರಿಂದ ರಾತ್ರಿ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಹೊರಬರಲು ಭಯಪಡುವಂತಾಗಿದೆ. ಆದ್ದರಿಂದ ಶಾಲೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕೆಂದು ಎಸ್‌ಎಫ್‌ಐ ಮುಖಂಡ ಶಬ್ಬೀರ ಜಾಲಹಳ್ಳಿ ಆಗ್ರಹಿಸಿದ್ದಾರೆ.
ಕಾಯಂ ಶಿಕ್ಷಕಿ ಹೆರಿಗೆ ರಜೆಯಲ್ಲಿರುವ ಕಾರಣ ಬೇರೆ ಶಾಲೆಯಿಂದ ಎರವಲು ಶಿಕ್ಷಕಿಯನ್ನು ನಿಯೋಜನೆ ಅಥವಾ ಎಸ್ ಡಿಎಂಸಿ ರಚನೆ ಮಾಡಿ ಜಂಟಿ ಬ್ಯಾಂಕ್ ಖಾತೆ ತೆಗೆಯುವಂತೆ ಸೂಚನೆ ನೀಡಿದ್ದೇನೆ. ಸಮಸ್ಯೆ ಕುರಿತು ಗಮನಕ್ಕೆ ಬಂದಿದೆ. ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.-ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ
–ನಾಗರಾಜ ತೇಲ್ಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.