ಇನ್ನೂ ಹಲವು ಗ್ರಾಮಗಳಿಗಿಲ್ಲ ಸಾರಿಗೆ ಸೌಲಭ್ಯ
Team Udayavani, Feb 19, 2022, 3:41 PM IST
ದೇವದುರ್ಗ: ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ಇನ್ನು ಬಹುತೇಕ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯೇ ಇಲ್ಲವಾಗಿದೆ. ಹೀಗಾಗಿ ಇಲ್ಲಿನ ಹಳ್ಳಿಗಳ ಗ್ರಾಮಸ್ಥರು ಟಂಟಂ ವಾಹನಗಳನ್ನೇ ಅವಲಂಬಿಸಿದ್ದಾರೆ.
ತಾಲೂಕಿನ ಅಮರಯ್ಯ ದೊಡ್ಡಿ, ಪೂಜಾರಿ ದೊಡ್ಡಿ, ಗೊಲ್ಲರ ದೊಡ್ಡಿ, ಬಸ್ಸಾಪೂರ, ಗಡ್ಡಯ್ಯನ ದೊಡ್ಡಿ, ಸಂಪತ ದೊಡ್ಡಿ, ವೆಂಗಳಪೂರ, ಬಾಗರೂ, ಮೇದಿನಪೂರ, ಪರಾಪೂರ ಸೇರಿದಂತೆ ಹಲವು ದೊಡ್ಡಿ, ತಾಂಡಾಗಳಿಗೆ ಬಸ್ ಸೌಕರ್ಯವಿಲ್ಲದೇ ಗ್ರಾಮಸ್ಥರು ಖಾಸಗಿ ವಾಹನಗಳಿಗೆ ಮೊರೆ ಹೋಗಿದ್ದಾರೆ.
ಹದಗೆಟ್ಟ ರಸ್ತೆಗಳು
ನೆಟ್ಟಗಿರದ ರಸ್ತೆಗಳು, ಕಿರಿದಾದ ಸೇತುವೆ, ಬಸ್ ಓಡಿಸಿದರೆ ನಿರೀಕ್ಷಿತ ಆದಾಯವಿಲ್ಲ ಎನ್ನುವ ಕಾರಣಕ್ಕೆ ಬಸ್‌ಗಳನ್ನು ಓಡಿಸುತ್ತಿಲ್ಲ. ಹೀಗಾಗಿ ಈ ಹಳ್ಳಿಗಳಲ್ಲೀಗ ಬಸ್ ಸೌಲಭ್ಯಕ್ಕಾಗಿ ಜನರು ಪರಿತಪಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ವೆಂಗಳಪೂರ ಸೇರಿ ಇತರೆ ಹಳ್ಳಿ, ತಾಂಡಾಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮಿನಿ ಬಸ್ ಸೌಲಭ್ಯ ಕಲ್ಪಿಸಿದ್ದರು ಆದರೆ ಆದಾಯಕ್ಕೆ ಕೊಕ್ಕೆ ಬೀಳುತ್ತಿದೆ ಎನ್ನುವ ಕಾರಣಕ್ಕೆ ಮಿನಿ ಸೌಲಭ್ಯಕ್ಕೂ ಕತ್ತರಿ ಹಾಕಿದ್ದಾರೆ.
ಹೇರುಂಡಿ, ಅಂಚೆಸೂಗೂರು, ಗೂಗಲ್, ಗಾಗಲ್, ಕೊಪ್ಪರು ಹೇಮನಾಳ ಮಾರ್ಗಗಳಲ್ಲಿ ನಿರೀಕ್ಷಿತ ಆದಾಯ ಬರಲ್ಲ ಎನ್ನುವುದು ಗೊತ್ತಿದ್ದರೂ ಇಲ್ಲಿ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ದಿನಕ್ಕೆರಡು ಬಾರಿ ಬಸ್ ಓಡಿಸಲಾಗುತ್ತಿದೆ.
75 ಸಾರಿಗೆ ರೂಟ್
ಸಾರಿಗೆ ಘಟಕದಿಂದ ದಿನ ನಿತ್ಯ ಹಳ್ಳಿಗಳಿಗೆ ಸಂಚರಿಸುವ 75 ಬಸ್‌ಗಳ ರೂಟ್ ಇದೆ. ಹಳೇ ಬಸ್‌ಗಳ ಓಡಾಟದಿಂದಲೇ ಆಗಾಗ ರಸ್ತೆ ಮಧ್ಯೆ ಕೆಟ್ಟು ನಿಲ್ಲುವುದು ವಾಡಿಕೆ. ಬೆಂಗಳೂರು ನಗರ ಪ್ರದೇಶದಲ್ಲಿ ಓಡಾಡಿದ ಬಸ್‌ಗಳನ್ನೇ ಇಲ್ಲಿನ ಘಟಕಕ್ಕೆ ತರಲಾಗುತ್ತಿದೆ. ತಾಲೂಕಿನ ಪ್ರಯಾಣಿಕರಿಗೆ ಹಳೇ ಬಸ್‌ಗಳಿಂದ ಮುಕ್ತಿ ಸಿಗದಂತಾಗಿದೆ.
ಬಸ್ ಸೌಲಭ್ಯವಿಲ್ಲ
ಈ ಹಿಂದೆ ಶಿವಮೊಗ್ಗ, ಧರ್ಮಸ್ಥಳ, ಹೈದರಾಬಾದ್, ಹುಬ್ಬಳ್ಳಿ ಸೇರಿ ಇತರೆ ಜಿಲ್ಲೆಗೆ ಬಸ್ ಅನುಕೂಲವಿತ್ತು. ಪ್ರಯಾಣಿಕರ ಕೊರತೆ, ಆದಾಯಕ್ಕೆ ಕೊಕ್ಕೆ ಬೀಳುವ ಕಾರಣದಿಂದಲೇ ಬಸ್ ಓಡಿಸಲು ಸಾರಿಗೆ ಇಲಾಖೆ ಹಿಂಜರಿದಿದೆ. ಜಿಲ್ಲೆಯ ಶಿಕ್ಷಕರು ಸ್ವಂತ ಜಿಲ್ಲೆಗೆ ಹೋಗಲು ತಿಂಥಿಣಿ ಬ್ರಿಡ್ಜ್ಗೆ ಹೋಗಿ ಅಲ್ಲಿಂದ ಜಿಲ್ಲೆಗಳಿಗೆ ತೆರಳಬೇಕಿದೆ. ಇಂತಹ ಜಿಲ್ಲೆಗಳಿಗೆ ವಾರಕ್ಕೊಮ್ಮೆಯಾದರೂ ಬಸ್ ವ್ಯವಸ್ಥೆ ಕಲ್ಪಿಸಬೇಕೆನ್ನುವ ಬೇಡಿಕೆ ಇನ್ನೂ ಜೀವಂತವಾಗಿದೆ.
ನಷ್ಟದಲ್ಲಿ ಸಾರಿಗೆ ಘಟಕ
ಸಾರಿಗೆ ಘಟಕ ಹಲವು ವರ್ಷಗಳಿಂದ ನಷ್ಟದಲ್ಲಿಯೇ ಇದೆ. ನಿರೀಕ್ಷಿತ ಆದಾಯವಿಲ್ಲದೇ ಸೊರಗಿದ್ದರೂ ಕಷ್ಟ-ನಷ್ಟದ ನಡುವೆ ಸಾರಿಗೆ ಘಟಕ ಸಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆ ನಷ್ಟದಲ್ಲೇ ಸಾಗಿದೆ. ಒಂದು ಕಿ.ಮೀಗೆ 28 ರೂ. ವೆಚ್ಚ ಭರಿಸಲಾಗುತ್ತಿದೆ. ಅದರಲ್ಲಿ ಚಾಲಕರ, ಕಂಡಕ್ಟರ್ ಸೇರಿ ವೇತನವೂ ಅನ್ವಯಿಸುತ್ತಿದೆ.
ಕೆಲ ಗ್ರಾಮಗಳಲ್ಲಿ ಕಚ್ಚಾ ರಸ್ತೆ, ಆದಾಯಕ್ಕೆ ಕೊಕ್ಕೆ ಬೀಳುತ್ತಿರುವ ಹಿನ್ನೆಲೆ ಬಸ್ ಓಡಿಸಲು ಆಗುತ್ತಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಬೇಕು ಎನ್ನುವ ಬೇಡಿಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. -ಶಂಕರ ನಾಯಕ, ಪ್ರಭಾರ ಸಾರಿಗೆ ಘಟಕ ವ್ಯವಸ್ಥಾಪಕ.
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.