ಸರ್ಕಾರಿ ಕಚೇರಿಗಳಲ್ಲಿ ಜಿನುಗುತ್ತಿದೆ ನೀರು!
Team Udayavani, Jul 19, 2022, 2:21 PM IST
ರಾಯಚೂರು: ಸದಾ ಜನರ ಸೇವೆ ಮಾಡುವ ಸರ್ಕಾರಿ ಕಚೇರಿಗಳಿಗೆ ಸ್ವಂತ ನೆಲೆ ಇಲ್ಲದಿರುವ ದಯನೀಯ ಸ್ಥಿತಿ ರಾಯಚೂರು ಜಿಲ್ಲೆಯಲ್ಲಿದೆ. ಕೆಲವೊಂದು ಕಚೇರಿಗಳಿಗೆ ಸ್ವಂತ ಕಟ್ಟಡಗಳಿದ್ದರೂ ಅವು ಇಂದೊ ನಾಳೆಯೋ ಎನ್ನುವ ಸ್ಥಿತಿಯಲ್ಲಿದ್ದರೆ, ಮಳೆ ಬಂದರೆ ಸೋರುತ್ತಿವೆ.
ಬಹುತೇಕ ಇಲಾಖೆಗಳನ್ನು ಬಾಡಿಗೆ ಮನೆಗಳಲ್ಲಿ ನಡೆಸುವ ಸ್ಥಿತಿ ಇದೆ. ಜಿಲ್ಲಾಡಳಿತದ ಬಳಿ ಶಿಥಿಲಗೊಂಡ ಕಟ್ಟಡಗಳ ಸರಿಯಾದ ಅಂಕಿ ಸಂಖ್ಯೆಗಳು ಇಲ್ಲ ಎನ್ನುವುದು ಮತ್ತೊಂದು ವಿಪರ್ಯಾಸ.
ಕಂದಾಯ ಇಲಾಖೆಯೇ ಬ್ರಿಟಿಷರು ಬಿಟ್ಟು ಹೋಗಿರುವ ದೊಡ್ಡ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಉಳಿದ ಕಚೇರಿಗಳ ಕತೆಯೂ ಭಿನ್ನವಾಗಿಲ್ಲ. ಸ್ವಂತ ಸೂರಿದ್ದರೆ ಮಳೆ ಬಂದರೆ ಸೋರುತ್ತವೆ. ಇಲ್ಲವೇ ಬಾಡಿಗೆ ಕಟ್ಟಡಗಳೇ ಗತಿಯಾಗಿವೆ. ಒಂದು ಕಾಲಕ್ಕೆ ಹೈದರಬಾದ್ ಸಂಸ್ಥಾನಕ್ಕೆ ರಾಯಚೂರು ಜಿಲ್ಲೆ ಒಳಪಟ್ಟಿದ್ದರಿಂದ ಇಲ್ಲಿ ಇಂದಿಗೂ ನಿಜಾಮರ ಕಾಲದ ಕಟ್ಟಡಗಳಿವೆ. ಇನ್ನೂ ಕೆಲವೆಡೆ ಬ್ರಿಟಿಷರ ಕಾಲದ ಕಟ್ಟಡಗಳು ಉಳಿದುಕೊಂಡಿವೆ. ಕಲ್ಲಿನ ಕಟ್ಟಡಗಳಾಗಿದ್ದರಿಂದ ಸುಸಜ್ಜಿತವಾಗಿದ್ದು, ಸರ್ಕಾರಿ ಕಚೇರಿ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಈಗ ಅವು ಸೋರುತ್ತಿದ್ದರೂ ಪರ್ಯಾಯ ಕಟ್ಟಡಗಳಿಲ್ಲದೇ ಪರದಾಡುವ ಸ್ಥಿತಿ ಇದೆ.
ಶಿಕ್ಷಣ ಇಲಾಖೆಗೆ ಹಿಡಿದ ಗ್ರಹಣ
ಜಿಲ್ಲೆಯ ಭವಿಷ್ಯ ರೂಪಿಸಬೇಕಾದ ಶಿಕ್ಷಣ ಇಲಾಖೆಗೆ ದೊಡ್ಡ ಗ್ರಹಣ ಹಿಡಿದಿದೆ. ಸಾರ್ವಜನಿಕ ಉಪ ನಿರ್ದೇಶಕರ ಕಚೇರಿ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲ ಬಂದರೆ ಇಡೀ ಕಟ್ಟಡ ತಂಪೇರುತ್ತದೆ. ಕಡತಗಳು ತೇವಗೊಳ್ಳುತ್ತವೆ. ಈಗೆಲ್ಲ ಕಂಪ್ಯೂಟರೀಕರಣಗೊಂಡಿದ್ದರೂ ಗೋಡೆಗಳು ತೇವಗೊಂಡು ವಿದ್ಯುತ್ ಪ್ರವಹಿಸುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ.
ರಾಯಚೂರಿನಲ್ಲಿರುವ ಬಿಇಒ ಕಚೇರಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಛಾವಣಿ ಸಿಮೆಂಟ್ ಕಳಚಿ ಕಬ್ಬಿಣದ ರಾಡುಗಳು ಕಾಣುತ್ತಿದ್ದರೆ, ಮಳೆ ಬಂದಾಗ ಮೂಲೆಗಳೆಲ್ಲ ಸೋರುತ್ತಿವೆ. ಡಿಡಿಪಿಯು ಕಚೇರಿಯಂತೂ ಇಂದಿಗೂ ನಿಜಾಮರ ಕಾಲದ ಬೃಹತ್ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ದೊಡ್ಡ ಸಭಾಂಗಣದಲ್ಲಿಯೇ ಪರದೆ ಕಟ್ಟಿಕೊಂಡು ಕೆಲಸ ಮಾಡುವ ದುಃಸ್ಥಿತಿ ಇದೆ. ಇದು ಒಂದೇ ಸಮಸ್ಯೆಯಾದರೆ ಜಿಲ್ಲೆಯಲ್ಲಿ ಸುಮಾರು 370ಕ್ಕೂ ಅಧಿಕ ತರಗತಿ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತೆರವು ಮಾಡಬೇಕಾದ ಪರಿಸ್ಥಿತಿಯಲ್ಲಿವೆ. ಸುಮಾರು ಮೂರು ಸಾವಿರ ಕೊಠಡಿಗಳ ದುರಸ್ತಿಗೆ ಕಾದು ಕುಳಿತಿವೆ. ಮಳೆಗಾಲ ಬಂದರೆ ಮಕ್ಕಳು ಜೀವ ಕೈಯಲ್ಲಿ ಹಿಡಿದು ಕೂಡುವ ಸ್ಥಿತಿ ಇದೆ.
ದುರಸ್ತಿಯಲ್ಲಿಯೇ ಕಾಲಕ್ಷೇಪ
ಕೆಲವೊಂದು ಇಲಾಖೆಗಳು ಕಟ್ಟಡಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ವರದಿ ಕೇಳಿ ಅರ್ಜಿ ಸಲ್ಲಿಸುತ್ತವೆ. ಪರಿಶೀಲಿಸುವ ಅಧಿಕಾರಿಗಳು ದುರಸ್ತಿ ಮಾಡಿ ಮುಂದುವರಿಸುವಂತೆಯೇ ಹೇಳುತ್ತಿದ್ದಾರೆ. ಇದರಿಂದ ಸಂಪೂರ್ಣ ಕಟ್ಟಡ ತೆರವುಗೊಳಿಸುವುದಾಗಲಿ, ಹೊಸ ಕಟ್ಟಡ ಕಟ್ಟುವ ಪ್ರಕ್ರಿಯೆ ಇಲ್ಲದಾಗಿದೆ. ಇನ್ನೂ ಲೋಕೋಪಯೋಗಿ ಇಲಾಖೆಗೆ ಸಲ್ಲಿಕೆಯಾಗುವ ಬಹುತೇಕ ಅರ್ಜಿಗಳಲ್ಲಿ ಶಾಲಾ ಕಟ್ಟಡಗಳಿಗೆ ಸಂಬಂಧಿಸಿದ್ದೇ ಹೆಚ್ಚಾಗಿರುತ್ತದೆ.
ಬಾಡಿಗೆ ಮನೆಗಳೇ ಗತಿ
ನಗರದಲ್ಲಿ ಕೆಲವೊಂದು ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳಿಗೆ ಸ್ವಂತ ಕಟ್ಟಡಗಳಿವೆ. ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸೇರಿದಂತೆ ಕೆಲವೊಂದು ಇಲಾಖೆಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಬಕಾರಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸ್ವಂತ ಕಟ್ಟಡವಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ವಂತ ಕಟ್ಟಡವಿಲ್ಲದೇ ರಂಗಮಂದಿರದ ಮೂಲೆಯೊಂದರಲ್ಲಿ ಕೆಲಸ ಮಾಡುತ್ತಿದೆ. ಕೆಲವೊಂದು ಇಲಾಖೆಗಳಿಗೆ ದುಬಾರಿ ಬಾಡಿಗೆ ಕಟ್ಟಡಲಾಗದ ಕಾರಣ ಸಂದಿ ಗೊಂದಿಗಳಲ್ಲಿ ಚಿಕ್ಕ ಮನೆಗಳಲ್ಲಿ ಕೆಲಸ ಮಾಡುತ್ತಿವೆ. ಪ್ರವಾಸೋದ್ಯಮ ಇಲಾಖೆ ಕಚೇರಿ ಹುಡುಕುವುದೇ ಸವಾಲು ಎನ್ನುವಂಥ ಜಾಗದಲ್ಲಿದೆ.
ಸರ್ಕಾರಿ ಕಚೇರಿಗಳ ಸ್ವಂತ ಕಟ್ಟಡಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ಶಿಥಿಲಗೊಂಡ ಕಟ್ಟಡಗಳಿದ್ದರೆ ಸಂಬಂಧಿಸಿದ ಇಲಾಖೆಯವರೇ ನೇರವಾಗಿ ಪ್ರಸ್ತಾವನೆ ಸಲ್ಲಿಸುತ್ತಾರೆ. -ಡಾ| ಕೆ.ಆರ್.ದುರಗೇಶ, ಎಡಿಸಿ, ರಾಯಚೂರು
ಯಾವುದಾದರೂ ಕಚೇರಿಯ ಸಾಮರ್ಥ್ಯದ ವರದಿ ನೀಡಲು ಸಾಕಷ್ಟು ಇಲಾಖೆಗಳು ಅರ್ಜಿ ಸಲ್ಲಿಸುತ್ತವೆ. ನಮ್ಮ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡುತ್ತಾರೆ. ಆದರೆ, ನಾವು ಯಾವುದೇ ಅಂಕಿಸಂಖ್ಯೆ ಸಂಗ್ರಹಿಸಿಲ್ಲ. -ಚನ್ನಬಸಪ್ಪ ಮೆಕಾಲೆ, ಎಇಇ, ಲೋಕೊಪಯೋಗಿ ಇಲಾಖೆ
-ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.