ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ
Team Udayavani, Jan 4, 2018, 4:14 PM IST
ರಾಯಚೂರು: ತುಂಗಭದ್ರಾ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಯ ಕೆಲ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಚಿವ ಸಂಪುಟ ಸಮ್ಮತಿ ಸೂಚಿರುವ ಕ್ರಮಕ್ಕೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿದ ಜನಾಂದೋಲನ ಮಹಾಮೈತ್ರಿ ಮುಖಂಡರು, ಸರ್ಕಾರ ಸಚಿವ ಸಂಪುಟದ ನಿರ್ಧಾರ ಹಿಂಪಡೆಯದಿದ್ದರೆ ಮೂರು ಜಿಲ್ಲೆಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಮೂರು ಜಿಲ್ಲೆಗಳಿಗೆ ಆಪತ್ತು ತರುವಂಥ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರದುರ್ಗದ
ಆಯ್ದ ಪ್ರದೇಶಗಳ ಜನರಿಗೆ ಕುಡಿಯುವ ನೀರು ಒದಗಿಸಲು 2,350 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ಜಲಾಶಯದಿಂದ 2.5 ಟಿಎಂಸಿ ಅಡಿ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ.
ಇದರಿಂದ ಜಲಾಶಯದ ಮೇಲೆ ಅಲವಂಬಿತವಾದ ಮೂರು ಜಿಲ್ಲೆಗಳ ರೈತರಿಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದು ದೂರಿದರು. ವ್ಯಾಪಕ ಗಣಿಗಾರಿಕೆ ಯಿಂದ ಜಲಾಶಯದಲ್ಲಿ 30 ಟಿಎಂಸಿ ಅಡಿಗೂ ಅಧಿಕ ಹೂಳು ಶೇಖರಣೆಯಾಗಿದೆ. ಆದರೆ, ಈ ಸಮಸ್ಯೆ ಬಗೆಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರೇ ಸಿಗುತ್ತಿಲ್ಲ. ಸಮಾನಾಂತರ ಜಲಾಶಯ ನಿರ್ಮಾಣ ವಿಚಾರದಲ್ಲಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸದಲ್ಲಿ ತೊಡಗಿದೆ ಎಂದು ದೂರಿದರು.
ಜಲಾಶಯದಿಂದ ಕಾರ್ಖಾನೆಗಳಿಗೆ 1.5 ಟಿಎಂಸಿ ಅಡಿನೀರು ಹರಿಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜಮೀನಿಗೆ ಅಕ್ರಮವಾಗಿ ನೀರು ಬಳಸಲಾಗುತ್ತಿದೆ. ಆದರೆ, ಟಿಎಲ್‌ಬಿಸಿ ವ್ಯಾಪ್ತಿಗೆ ಬರುವ ರಾಯಚೂರು, ಮಾನವಿ ತಾಲೂಕು ರೈತರಿಗೆ ನೀರೇ ತಲುಪುತ್ತಿಲ್ಲ. ಆದರೆ, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳು ಇಂಥ ಯೋಜನೆಗೂ ವಿರೋಧ ವ್ಯಕ್ತಪಡಿಸದಿರುವುದು ಖಂಡನೀಯ ಎಂದರು.
ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ, ಈ ಭಾಗದ ಜನಪ್ರತಿನಿಧಿಗಳಿಗೆ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಉಸ್ತುವಾರಿ ನೀಡಿದ್ದರೆ ಇಂಥ ಸಮಸ್ಯೆ ಬರುತ್ತಿರಲಿಲ್ಲ. ಸರ್ಕಾರದ ಇಂಥ ನಡೆಯನ್ನು ಬಲವಾಗಿ ಖಂಡಿಸುತ್ತೇವೆ. ಈ ಬಗ್ಗೆ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳದಲ್ಲಿ ಬೃಹತ್ ಜನಾಂದೋಲನ ರೂಪಿಸಲಾಗುವುದು
ಎಂದು ತಿಳಿಸಿದರು.
ಮಹಾಮೈತ್ರಿ ಮುಖಂಡರಾದ ಡಾ| ವಿ.ಎ.ಮಾಲಿಪಾಟೀಲ್, ಭೀಮೇಶ್ವರ ರಾವ್, ಎಂ.ಆರ್.ಭೇರಿ, ಜಯಪ್ಪ ಸ್ವಾಮಿ, ಅಸ್ಲಂ ಪಾಷಾ, ಜಯಪ್ಪ ಸ್ವಾಮಿ ಉಡುಮಗಲ್, ಜಾನ್ ವೆಸ್ಲಿ ಸೇರಿ ಇತರರಿದ್ದರು. ಚಿತ್ರದುರ್ಗಕ್ಕೆ ಕುಡಿಯುವ ನೀರು; ಯೋಜನೆಗೆ ವಿರೋಧ
ಸಿಂಧನೂರು: ಸರ್ಕಾರ ಹಾಗೂ ಶಾಸಕರು ನೀರಿನ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗ ಮತ್ತೆ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಪಾವಗಡಕ್ಕೆ 2.3 ಟಿಎಂಸಿ ಅಡಿ ನೀರು ಪೂರೈಸುವ ಯೋಜನೆಗೆ ಸರ್ಕಾರ ಉದ್ದೇಶಿಸಿದ್ದು, ಇದು ಖಂಡನೀಯ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಲಿಂಗಪ್ಪ ಹೇಳಿದರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಂಗಟಾಲೂರು ಏತ ನೀರಾವರಿ ಪ್ರಾಜೆಕ್ಟ್ಗೆ 5 ಟಿಎಂಸಿ ಅಡಿ ನೀರು ನೀಡಲಾಗಿದೆ. ಆದರೆ ಅನಧಿಕೃತವಾಗಿ 10-12 ಟಿಎಂಸಿ ಅಡಿ ನೀರು ಬಿಡಲಾಗುತ್ತಿದೆ. ಈ ಭಾಗದ ಶಾಸಕರು ಹೋರಾಟ ಮಾಡಿ ನಿಲ್ಲಿಸಬಹುದಾಗಿತ್ತು. ಆದರೆ ಶಾಸಕರು ನಿದ್ರಾವಸ್ಥೆಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಪಾವಗಡಕ್ಕೆ ನೀರು ಬಿಟ್ಟರೆ ಮುಂದೆ ತುಂಗಭದ್ರಾ ಎಡದಂಡೆ ನಾಲೆಯ ರೈತರು
ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನೀರು ಬಿಡುಗಡೆ ವದಂತಿ: ನೀರಿನ ವಿಷಯವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೂ, ಸರ್ಕಾರದಿಂದ ಸೀಮಾಂಧ್ರ ಹಾಗೂ ತೆಲಂಗಾಣಕ್ಕೆ ಪತ್ರ ಬರೆದಾಗಲೂ ಕಾಂಗ್ರೆಸ್ ಮುಖಂಡರೇ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಿಬಿಡುವ ಮೂಲಕ ರೈತರ ದಾರಿ ತಪ್ಪಿಸಿದ್ದಾರೆ. ಮತ್ತೇ ಶಾಸಕರು ಐಸಿಸಿ ಸಭೆಯಲ್ಲಿ ನಿರ್ಣಯದಂತೆ ನೀರು ಬಿಡಲಾಗುವುದು. ತೆಲಂಗಾಣ
ಹಾಗೂ ಸೀಮಾಂಧ್ರ ಒಪ್ಪಿದರೆ ಮಾತ್ರ ಮಾರ್ಚ್‌ನಲ್ಲಿ ನೀರು ಬಿಡಲಾಗುವುದು ಎನ್ನುವ ಹೇಳಿಕೆಗಳು ರೈತರನ್ನು ಗೊಂದಲಕ್ಕೀಡು ಮಾಡಿವೆ.
ಈಗಾಗಲೇ ಶೇ.60ರಷ್ಟು ರೈತರು ಭತ್ತ ನಾಟಿ ಮಾಡಿದ್ದಾರೆ. ನೀರು ಬಿಡದಿದ್ದರೆ ರೈತರು ಧಂಗೆ ಏಳುತ್ತಾರೆ ಎಂದು ಎಚ್ಚರಿಸಿದರು. ಜ.5ರಂದು ನಗರದ ಸತ್ಯ ಗಾರ್ಡನ್‌ನಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ಜನ್ಮದಿನ ಕಾರ್ಯಕ್ರಮ ನಡೆಸಲಾಗುವುದು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕ ರಾಜ್ಯಾಧ್ಯಕ್ಷ ಅಲ್ತಾಫ್, ಹೈದ್ರಾಬಾದ್ ಕರ್ನಾಟಕದ ಉಸ್ತುವಾರಿ, ಎಂಎಲ್‌ಸಿ ಶರವಣ್, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ನಾಡಗೌಡರ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಬೇಕೆಂದು ವಿನಂತಿಸಿದರು.
ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಮುಖಂಡರಾದ ಜಿ.ಸತ್ಯನಾರಾಯಣ, ವೆಂಕಟೇಶ ನಂಜಲದಿನ್ನಿ, ಜಹಿರುಲ್ ಹಸನ್, ಎಂ.ಡಿ.ನದೀಮುಲ್ಲಾ, ಕೆ. ಜಿಲಾನಿ ಪಾಷಾ, ಡಿ. ಸತ್ಯನಾರಾಯಣ, ವೆಂಕೋಬ ಕಲ್ಲೂರು ಇತರರು ಇದ್ದರು.
ಸಿದ್ದರಾಮಯ್ಯ ಪ್ರತಿಕೃತಿ ದಹನ
ರಾಯಚೂರು: ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲು ಮುಂದಾಗಿರುವ ಸರ್ಕಾರದ ನಿಲುವು ಖಂಡಿಸಿ ಬುಧವಾರ ಜನಾಂದೋಲನಾ ಮಹಾಮೈತ್ರಿ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯವವನ್ನು 1945-1953ರ ವೇಳೆ ಹೈದರಾಬಾದ್‌ನ ನಿಜಾಮರು ಹಾಗೂ ಆಂಧ್ರ ಪ್ರದೇಶ ಜಂಟಿ ಯೋಜನೆಯಾಗಿ ರೂಪಿಸಲಾಗಿತ್ತು. ಅಂದಿನ ಅವಿಭಜಿತ ರಾಯಚೂರು, ಬಳ್ಳಾರಿ ಹಾಗೂ ಅನಂತಪುರ ಜಿಲ್ಲೆಗಳ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಅಣೆಕಟ್ಟು ನಿರ್ಮಿಸಲಾಗಿತ್ತು. ಆದರೆ, ಈಗ ಜಲಾಶಯದ ನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಸಿಗುತ್ತಿಲ್ಲ.
ಆದರೆ, ಯಾರನ್ನೋ ತೃಪ್ತಿಪಡಿಸಲು ಹೈ-ಕ ಭಾಗದ ಜೀವನಾಡಿಯಾದ ಜಲಾಶಯವನ್ನು ದುರ್ಬಳಕೆ ಮಾಡುವುದು ಸರಿಯಲ್ಲ. ಜಲಾಶಯವನ್ನೇ ನಂಬಿರುವ ರೈತರ ಜೀವನದ ಜತೆ ಚಲ್ಲಾಟವಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ಜಿಲ್ಲೆಯ 337 ಗ್ರಾಮಗಳಲ್ಲಿ ಫ್ಲೋರೈಡ್‌ಯುಕ್ತ ನೀರೇ ಗತಿಯಾಗಿದೆ. ಆದರೆ, ಇಲ್ಲಿ ಇಷ್ಟೆಲ್ಲ
ಸಮಸ್ಯೆಗಳಿದ್ದರೂ ನೆರೆ ಜಿಲ್ಲೆಗೆ ನೀರು ಪೂರೈಸಲು ಮುಂದಾದ ಸರ್ಕಾರದ ನಡೆ ನಾಚಿಕೆಗೇಡು. ಈ ಕೂಡಲೇ ರದ್ದುಪಡಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.