ಯೋಜನೆ ಅನುಷ್ಠಾನಕ್ಕಿಲ್ಲ ಮುಹೂರ್ತ
ಹಳೆ ಯೋಜನೆಗಳೇ ಜಾರಿಯಾಗಿಲ್ಲ •ಬಹುದಿನಗಳ ಬೇಡಿಕೆ ನನೆಗುದಿಗೆ •ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಮಂಜೂರು
Team Udayavani, Jul 1, 2019, 11:14 AM IST
ರಾಯಚೂರು: ಉದ್ದೇಶಿತ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಗುರುತಿಸಲಾದ ಯರಗೇರಾ ಸ್ನಾತಕೋತ್ತರ ಕೇಂದ್ರ.
•ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ವರ್ಷದ ಹೊಸಿಲು ದಾಟಿರುವ ಸಮ್ಮಿಶ್ರ ಸರ್ಕಾರದಿಂದ ಐವರು ಶಾಸಕರನ್ನು ಕೊಡುಗೆ ನೀಡಿರುವ ರಾಯಚೂರು ಜಿಲ್ಲೆಗೆ ನಿರೀಕ್ಷೆಯಷ್ಟು ಕೊಡುಗೆ ಸಿಕ್ಕಿಲ್ಲ. ಅಲ್ಪಸ್ವಲ್ಪ ಅನುದಾನದ ಜತೆಗೆ ಕೆಲವೊಂದು ಬೇಡಿಕೆ ಈಡೇರಿರುವುದು ಬಿಟ್ಟರೆ ಹೇಳಿಕೊಳ್ಳುವಂಥ ಕೆಲಸಗಳು ಆಗಿಲ್ಲ ಎನ್ನುವುದು ವಾಸ್ತವ.
ಎಂದಿನಂತೆ ಇಲಾಖೆಗಳಿಗೆ ಬರುವ ಅನುದಾನದಲ್ಲಿ ಯಾವುದೇ ಕೊರತೆ ಕಂಡು ಬರದಿದ್ದರೂ, ಹೊಸ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕಳೆದ ಬಜೆಟ್‌ನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳೇ ಘೋಷಿಸಿದ್ದಾರೆ. ಆದರೆ, ಅವುಗಳ ಅನುಷ್ಠಾನ ಮಾತ್ರ ಇನ್ನೂ ಶುರುವಾಗಿಲ್ಲ.
ಮುಖ್ಯವಾಗಿ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ನಿವಾರಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ನೀರಾವರಿ ಇರಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಿಸುವ ಸ್ಥಿತಿ ಇದೆ. ಕಳೆದ ಮಳೆಗಾಲದಲ್ಲಿ ನದಿ ಮೂಲಕ 300 ಟಿಎಂಸಿಗೂ ಅಧಿಕ ನೀರು ವೃಥಾ ಹರಿದು ಹೋಗಿದೆ ಎನ್ನುತ್ತಾರೆ ಕೃಷಿ ತಜ್ಞರು. ಇದರಲ್ಲಿ ಕೇವಲ ಶೇ.10ರಷ್ಟು ಸಂಗ್ರಹಿಸಿದ್ದರೂ ಇಡೀ ಜಿಲ್ಲೆಯ ಬರ ನೀಗಿಸಬಹುದಿತ್ತು. ಹಲವು ಏತ ನೀರಾವರಿ ಯೋಜನೆಗಳು, ಸಮಾನಾಂತರ ಜಲಾಶಯಗಳ ಯೋಜನೆಗಳ ಕಲ್ಪನೆ ಸರ್ಕಾರದ ಎದುರಿಗಿದ್ದರೂ ಸಮ್ಮಿಶ್ರ ಸರ್ಕಾರ ಲೆಕ್ಕಿಸುತ್ತಿಲ್ಲ. ಆದರೆ, ಈಚೆಗೆ ಗ್ರಾಮ ವಾಸ್ತವ್ಯಕ್ಕೆಂದು ಸಿಎಂ ಬಂದಾಗ ನವಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ಮಿಸಲು ಡಿಪಿಆರ್ ಮಾಡಲು ಸೂಚಿಸಲಾಗಿದೆ. ಅಂದಾಜು ಆರು ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂಬ ನಿರೀಕ್ಷೆಯಿದ್ದು, ನನ್ನ ಅಧಿಕಾರಾವಧಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡುವುದಾಗಿ ಹೇಳಿದ್ದಾರೆ. ಆದರೆ, ಹಿಂದೊಮ್ಮೆ ಇದೇ ರೀತಿ ಡಿಪಿಆರ್ ಸಿದ್ಧಪಡಿಸಿದ್ದು, ಅದು ಮೂಲೆ ಸೇರಿತ್ತು. ಈ ಬಾರಿಯಾದರೂ ಅದು ಜಾರಿಯಾಗುವುದೇ ಎನ್ನುವ ಅನುಮಾನವಂತೂ ಇದೆ.
ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಆದ್ಯತೆ ಸಿಗಲಿಲ್ಲ. ಆಗ ಸಾಲ ಮನ್ನಾ ಘೋಷಣೆಯಾಗಿದ್ದರೂ ಈವರೆಗೂ ಜಿಲ್ಲೆಯ ರೈತರಿಗೆ ನಿರೀಕ್ಷಿತ ಮಟ್ಟದ ಫಲ ಸಿಕ್ಕಿಲ್ಲ. ಆದರೆ, ಜಿಲ್ಲೆಯ 69,831 ರೈತರ ಖಾತೆಗಳಿಗೆ 225 ಕೋಟಿ ರೂ. ಹಣ ಪಾವತಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಇನ್ನೂ 1600 ಕೋಟಿ ರೂ.ಗೂ ಅಧಿಕ ಹಣ ಬರಬೇಕಿದೆ.
ಎರಡನೇ ಬಜೆಟ್‌ನಲ್ಲಿಯೂ ದೊಡ್ಡ ದೊಡ್ಡ ಯೋಜನೆ ಸಿಗದಿದ್ದರೂ ಸಣ್ಣ ಪುಟ್ಟ ನೀರಾವರಿ ಯೋಜನೆಗಳು, ಕುಡಿಯುವ ನೀರು ಹಾಗೂ ಏತ ನೀರಾವರಿಗೆ ಒತ್ತು ನೀಡಲಾಗಿತ್ತು. ಮನೆ ಮನೆಗೆ ಶುದ್ಧ ನೀರು ಪೂರೈಸುವ ಜಲಧಾರೆ ಯೋಜನೆಯಡಿ ನಾಲ್ಕು ಜಿಲ್ಲೆಗಳಿಗೆ 4,000 ಕೋಟಿ ರೂ. ಮೀಸಲಿಟ್ಟಿದ್ದು, ಅದರಲ್ಲಿ ಜಿಲ್ಲೆಯೂ ಸೇರಿದೆ ಎನ್ನುವುದು ಸಮಾಧಾನಕರ ಸಂಗತಿ. ಆದರೆ, ಜಲಧಾರೆ ಯೋಜನೆ ಇನ್ನೂ ಆರಂಭವೇ ಆಗಿಲ್ಲ. ಅದರ ಜತೆಗೆ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಒದಗಿಸಲು ಗಣೇಕಲ್ ಜಲಾಶಯಕ್ಕೆ ನೀರು ಪೂರೈಸಲು 140 ಕೋಟಿ ರೂ. ಮಂಜೂರಾಗಿದ್ದು ಅದು ಇನ್ನೂ ಆರಂಭವಾಗಿಲ್ಲ.
ತುಂಗಭದ್ರಾ ನದಿಯಿಂದ ಗುಂಜಳ್ಳಿ ಬಸಪ್ಪ ಕೆರೆ ನೀರು ತುಂಬಿಸಲು 70 ಕೋಟಿ, ಚಿಕ್ಕಮಂಚಾಲಿ ಹತ್ತಿರದಿಂದ ಮಂತ್ರಾಲಯಕ್ಕೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು 50 ಕೋಟಿ ರೂ. ಮೀಸಲಿಟ್ಟಿದ್ದು ಆ ಕೆಲಸಗಳು ಕೂಡ ಶುರುವಾಗಬೇಕಿದೆ. ಮಸ್ಕಿ ಲಿಂಗಸುಗೂರು ಏತ ನೀರಾವರಿಗೆ 200 ಕೋಟಿ ನೀಡಿದ್ದು, ಹಿಂದಿನ ಸರ್ಕಾರದಲ್ಲೇ ಕೆಲಸ ಆರಂಭವಾಗಿತ್ತು. ನಂಜುಂಡಪ್ಪ ವದಿಯನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3010 ಕೋಟಿ ಮೀಸಲಿಟ್ಟಿದ್ದು, ಜಿಲ್ಲೆಯಲ್ಲಿ ಮಾತ್ರ ಕಣ್ಣಿಗೆ ಕಾಣುವ ಯಾವ ಕೆಲಸಗಳು ನಡೆಯುತ್ತಿಲ್ಲ. ಸಿಂಧನೂರಿಗೆ ಪಶು ವೈದ್ಯಕೀಯ ಕಾಲೇಜ್ ಕೇಳಲಾಗಿತ್ತು. ಬದಲಿಗೆ ರೈತ ಪ್ರಾತ್ಯಕ್ಷಿಕೆ ಕೇಂದ್ರ ನೀಡಿದ್ದು, ಅದು ಕೂಡ ಕೆಲಸ ಆರಂಭಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.