ಅಭಿವೃದ್ಧಿಗೆ ಕಡಿವಾಣ ಹಾಕಿದ ಪ್ರಭಾರ ಹೊರೆ
ಜಿಲ್ಲೆಯಲ್ಲಿ 40 ಪಿಡಿಒ ಹುದ್ದೆ ಖಾಲಿ•ಪಿಡಿಒ-ಕಾರ್ಯದರ್ಶಿಗಳಿಗೆ ಪ್ರಭಾರ ಹೊಣೆ
Team Udayavani, May 5, 2019, 12:16 PM IST
ರಾಯಚೂರು ಜಿಲ್ಲಾ ಪಂಚಾಯಿತಿ ಕಾರ್ಯಾಲಯ.
ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗದ ಜನರ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕಾದ ಗ್ರಾಮ ಪಂಚಾಯಿತಿಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದೆ. ಅದರಲ್ಲೂ 40 ಪಿಡಿಒಗಳ ಹುದ್ದೆಗಳೇ ಖಾಲಿ ಇದ್ದು, ಇರುವ ಸಿಬ್ಬಂದಿ ಮೇಲೆಯೇ ಹೆಚ್ಚುವರಿ ಹೊರೆ ಬಿದ್ದಿದೆ.
ಜಿಲ್ಲೆಯಲ್ಲಿ 179 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ ಕೇವಲ 139 ಪಿಡಿಒ ಹುದ್ದೆಗಳು ಭರ್ತಿಯಾಗಿವೆ. ಇದರಿಂದ ಉಳಿದ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳಿಂದ ಸೇವೆ ಪಡೆದರೆ ಅನೇಕ ಕಡೆ ಕಾರ್ಯದರ್ಶಿ ಹುದ್ದೆಗಳು ಖಾಲಿ ಇವೆ. ಅಂಥ ಕಡೆ ವಿಧಿ ಇಲ್ಲದೇ ಸಮೀಪದ ಪಂಚಾಯಿತಿ ಪಿಡಿಒಗಳಿಗೆ ಪ್ರಭಾರ ಹೊಣೆ ನೀಡಿ ಕೆಲಸ ಪಡೆಯಲಾಗುತ್ತಿದೆ.
ಇಂದು ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಬಹುತೇಕ ಯೋಜನೆಗಳ ಅನುಷ್ಠಾನದ ಹೊಣೆ ಆಯಾ ಪಂಚಾಯಿತಿ ಸಿಬ್ಬಂದಿ ಮೇಲಿದೆ. ಸ್ವಚ್ಛತೆ, ಅಭಿವೃದ್ಧಿ, ಆರೋಗ್ಯ, ಉದ್ಯೋಗ ಖಾತ್ರಿ ಕೂಲಿ ಸೇರಿ ಎಲ್ಲ ಕೆಲಸಗಳಿಗೂ ಪಂಚಾಯಿತಿಗಳ ಪಾತ್ರ ಮಹತ್ವದ್ದು. ಹೀಗಿರುವಾಗ ಒಂದು ಪಂಚಾಯಿತಿ ನಿಭಾಯಿಸಲಾಗದೇ ಪರಿತಪಿಸುತ್ತಿರುವ ಪಿಡಿಗಳಿಗೆ ಈಗ ಹೆಚ್ಚುವರಿ ಪಂಚಾಯಿತಿ ಹೊಣೆ ನೀಡಲಾಗಿದೆ. ಇದರಿಂದ ಪಿಡಿಗಳು ಅಡಕತ್ತರಿಗೆ ಸಿಲುಕಿದಂತಾಗಿದ್ದು, ಮಾಡುವುದೋ ಬಿಡುವುದೋ ಎನ್ನುವ ಗೊಂದಲದಲ್ಲಿದ್ದಾರೆ.
ನಿರೀಕ್ಷೆಯಷ್ಟು ಸಿಬ್ಬಂದಿ ಇಲ್ಲ: ಜಿಲ್ಲೆಯಲ್ಲಿರುವ 179 ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿ, ಸಹಾಯಕ ಲೆಕ್ಕಾಧಿಕಾರಿ ಸೇರಿ 444 ಮಂಜೂರಾತಿ ಹುದ್ದೆಗಳಿವೆ. ಅದರಲ್ಲಿ ಈಗ 308 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 136 ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಯಾವ ವಿಭಾಗದಲ್ಲೂ ನಿರೀಕ್ಷೆಯಷ್ಟು ಸಿಬ್ಬಂದಿ ಇಲ್ಲ.
ಪಿಡಿಒಗಳಿಗೆ ನೋಟಿಸ್?: ಈಚೆಗೆ ನಿರೀಕ್ಷಿತ ಮಟ್ಟದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿಯಿಂದ ನೋಟಿಸ್ ಜಾರಿ ಮಾಡಲಾಗಿತ್ತು ಎನ್ನಲಾಗುತ್ತಿದೆ. ಅದಕ್ಕೂ ಮುನ್ನ ಪಂಚಾಯಿತಿಗಳಿಂದ ಸಮರ್ಪಕ ತೆರಿಗೆ ವಸೂಲಾತಿ ಆಗುತ್ತಿಲ್ಲ ಎನ್ನುವ ಕಾರಣಕ್ಕೂ ನೂರಾರು ಬಿಲ್ ಕಲೆಕ್ಟರ್‌ಗಳಿಗೆ ನೋಟಿಸ್ ನೀಡಲಾಗಿತ್ತು. ಹೀಗೆ ಒಂದಿಲ್ಲ ಒಂದು ಕಾರಣಕ್ಕೆ ಮೇಲಧಿಕಾರಿಗಳು ಕೆಲಸ ತೆಗೆಸಲು ಪ್ರಯಾಸ ನಡೆಸುತ್ತಲೇ ಇದ್ದಾರೆ. ಆದರೆ, ಕೊರತೆ ಇರುವ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳುತ್ತಿಲ್ಲ.
ಪಿಡಿಒಗಳ ಉದಾಸೀನತೆ: ಜಿಲ್ಲೆಯಲ್ಲಿ ಉದ್ಯೋಗ ಇಲ್ಲದೇ ಜನ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲೆಂದೇ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದೆ. ಆದರೆ, ಸಿಬ್ಬಂದಿ ಕೊರತೆ ಒತ್ತಡದ ಮಧ್ಯೆ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ದೂರುಗಳಿವೆ. ಕೆಲಸಗಳನ್ನು ಯಂತ್ರಗಳ ಮೂಲಕ ಮಾಡಿಸುತ್ತಿದ್ದು, ಪರಿಶೀಲಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಅತ್ತ ದೃಷ್ಟಿ ಹಾಯಿಸುತ್ತಿಲ್ಲ. ಹೆಸರಿಗೆ ಮಾತ್ರ ಜಾಬ್ ಕಾರ್ಡ್ ಎನ್ನುವಂತಾಗಿದ್ದು, ಜನರಿಗೆ ಸರಿಯಾಗಿ ಕೂಲಿ ಸಿಗುತ್ತಿಲ್ಲ ಎನ್ನುವ ದೂರುಗಳಿವೆ. ಇನ್ನೂ ಅನೇಕ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಜನ ನಿತ್ಯ ಬಿಂದಿಗೆ ಹಿಡಿದು ಜಗಳವಾಡುವ ಸ್ಥಿತಿಯಿದೆ. ಈ ಸಮಸ್ಯೆ ನಿವಾರಣೆಗೆ ಒತ್ತು ನೀಡುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೇ, ಪ್ರಭಾರ ಇರುವ ಪಿಡಿಒಗಳು ಅಲ್ಲಿದ್ದರೆ ಇಲ್ಲಿ, ಇಲ್ಲಿದ್ದರೆ ಅಲ್ಲಿ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಕೂಡ ಇವೆ.
ಕಚೇರಿಗಳಿಗೆ ಅಲೆದಾಟ: ಪಂಚಾಯಿತಿ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿರುವುದರಿಂದ ಅವರು ಎಲ್ಲಿ ಸಿಗುತ್ತಾರೆ ಎನ್ನುವುದೇ ಜನರಿಗೆ ಗೊಂದಲವಾಗುತ್ತದೆ. ಸಣ್ಣ ಸಣ್ಣ ಕೆಲಸಗಳಿಗೂ ವಾರಗಟ್ಟಲೇ ಕಚೇರಿಗಳಿಗೆ ಅಲೆಯಬೇಕಿದೆ. ಪಿಡಿಒರನ್ನು ಕೇಳಿದರೆ ನಾವೇನು ಮಾಡುವುದು, ನಮಗೆ ನೂರಿಪ್ಪತ್ತು ಕೆಲಸಗಳಿವೆ ಎನ್ನುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಆದರೆ, ಪಿಡಿಒಗಳು ಮಾತ್ರ ನಮ್ಮ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ. ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ನಾವೇ ಜನರಿಗೆ ತಲುಪಿಸಬೇಕಿದೆ. ಅತ್ತ ಮೇಲಧಿಕಾರಿಗಳು ಒತ್ತಡ ಹಾಕುತ್ತಿದ್ದರೆ, ಹಳ್ಳಿಗಳಲ್ಲಿ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಒಂದಿಲ್ಲೊಂದು ವಿಚಾರಕ್ಕೆ ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ತಳಮಟ್ಟದ ಪ್ರಗತಿಗೆ ಶ್ರಮಿಸಬೇಕಾದ ಪಿಡಿಒಗಳ ಹುದ್ದೆಗಳೇ ಖಾಲಿ ಇರುವುದು ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿರುವುದು ಸುಳ್ಳಲ್ಲ. ಸರ್ಕಾರ ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಜಿಲ್ಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಇರುವುದು ನಿಜ. ಆದರೆ, ಬೆರಳೆಣಿಕೆ ಅಧಿಕಾರಿಗಳಿಗೆ ಮಾತ್ರ ಬೇರೆ ಪಂಚಾಯಿತಿಗಳ ಹೊಣೆ ನೀಡಲಾಗಿದೆ. ಉಳಿದ ಕಡೆ ಕಾರ್ಯದರ್ಶಿಗಳಿಂದಲೇ ಕೆಲಸ ಪಡೆಯಲಾಗುತ್ತಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಯಾವುದೇ ಅಡ್ಡಿಯುಂಟಾಗಿಲ್ಲ.
•ನಲಿನ್ ಅತುಲ್, ಜಿಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.