ರೈತರಿಗೆ ಪರ್ಯಾಯ ಬೆಳೆ ಅನಿವಾರ್ಯ
ಶೇ.32 ಮುಂಗಾರು ಕೊರತೆಯಿಂದ ರೈತರು ಮತ್ತೆ ಕಂಗಾಲು •ಈ ಬಾರಿಯೂ ಹತ್ತಿ-ತೊಗರಿ ಬಿತ್ತನೆಗೆ ಚಿಂತನೆ
Team Udayavani, Jul 25, 2019, 10:44 AM IST
•ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಮುಂಗಾರು ಮಳೆ ನಿರೀಕ್ಷೆಯಷ್ಟು ಸುರಿಯದ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುವ ಅನಿವಾರ್ಯತೆ ಎದುರಾಗಿದೆ. ಈ ಬಾರಿಯೂ ಹತ್ತಿ, ತೊಗರಿಯನ್ನೇ ನೆಚ್ಚಿಕೊಂಡಂತೆ ಕಾಣುತ್ತಿದೆ. ಆದರೆ, ಸತತ ಮೂರು ವರ್ಷದಿಂದಲೂ ಹೆಸರು, ಉದ್ದು ಸೇರಿ ಇನ್ನಿತರ ಬೆಳೆ ಬೆಳೆಯಲು ವರುಣನ ಕೃಪೆ ಸಿಕ್ಕಿಲ್ಲ ಎನ್ನುವುದು ಕಟುವಾಸ್ತವ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಮಳೆಯಾಗಿದೆ. ಕಳೆದ ಜೂನ್‌ನಲ್ಲಿ ಈವರೆಗೆ ವಾಡಿಕೆ ಮಳೆಗಿಂತ ಶೇ.40ರಷ್ಟು ಮಳೆ ಕೊರತೆಯಾಗಿತ್ತು. ಆದರೆ, ಈ ಬಾರಿ ಶೇ.32ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಆದರೆ, ಅದು ಸಕಾಲಕ್ಕೆ ಬೀಳದೆ ಆಯ್ದ ಪ್ರದೇಶಗಳಲ್ಲಿ ಸುರಿದ ಪರಿಣಾಮ ರೈತರಿಗೆ ಅನುಕೂಲವಾಗಿಲ್ಲ. ಜೂನ್, ಜುಲೈನಲ್ಲಿ ಸಮರ್ಪಕ ಮುಂಗಾರು ಮಳೆಯಾಗಿಲ್ಲ. ಜೂನ್‌ನಲ್ಲಿ ಶೇ.25 ಕೊರತೆಯಾದರೆ, ಜುಲೈನಲ್ಲಿ ಶೇ.15ರಷ್ಟು ಮಳೆ ಕೊರತೆಯಾಗಿದೆ. ಈವರೆಗೆ 144 ಮಿಮೀ ಮಳೆಯಾಗಬೇಕಿತ್ತು. 114 ಮಿಮೀ ಮಾತ್ರ ಆಗಿದೆ. ಅದು ಕೂಡ ಎಲ್ಲ ಕಡೆ 2.5 ಮಿಮೀ ಆಗದೆ ಕೆಲವೆಡೆ 1 ಮಿಮೀ ಆದರೆ ಕೆಲ ಭಾಗಗಳಲ್ಲಿ ಏನೂ ಆಗಿಲ್ಲ. ರಾಯಚೂರು ತಾಲೂಕಿನಲ್ಲೇ ಶೇ.44ರಷ್ಟು ಮಳೆ ಕೊರತೆಯಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೂ ಕೇವಲ 28,665 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ನೀರಾವರಿ ಭಾಗದಲ್ಲಿ ಕೇವಲ 1,177 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಎನ್‌ಆರ್‌ಬಿಸಿಯಿಂದ ನೀರು ಸಿಗುವ ವಿಶ್ವಾಸದಲ್ಲಿರುವ ರೈತರು 7,628 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದಾರೆ.
ಮುಂಗಾರು ಉತ್ತಮ ಆರಂಭ ಪಡೆದಿದ್ದರೆ ಹೆಸರು, ಉದ್ದು ಸೇರಿ ಇನ್ನಿತರ ಅಲ್ಪಾವಧಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ಈ ಬಾರಿಯೂ ಅದಕ್ಕೆ ಅವಕಾಶ ಸಿಕ್ಕಿಲ್ಲ. ಇದೇ ವರ್ಷವಲ್ಲ ಕಳೆದ ಮೂರು ವರ್ಷದಿಂದಲೂ ಇದೇ ಪರಿಸ್ಥಿತಿ ಎದುರಿಸುತ್ತಿರುವುದು ರೈತರ ದುರ್ದೈವ ಎನ್ನುವಂತಾಗಿದೆ. ಹೀಗಾಗಿ ಪರ್ಯಾಯ ಬೆಳೆಗಳನ್ನೇ ಬೆಳೆಯಲು ಮುಂದಾಗುತ್ತಿದ್ದಾರೆ.
ಜುಲೈ ಕೊನೆ ವೇಳೆಗೆ ಉತ್ತಮ ಮಳೆ ನಿರೀಕ್ಷೆ ಹೊಂದಿರುವ ರೈತಾಪಿ ವರ್ಗ ತೊಗರಿ, ಹತ್ತಿ, ಸೂರ್ಯಕಾಂತಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನೂ ಕೆಲವೆಡೆ ಈಗಾಗಲೇ ಸುರಿದ ಅಲ್ಪ ಮಳೆ ನೆಚ್ಚಿಕೊಂಡು ಹತ್ತಿ, ತೊಗರಿ ಬಿತ್ತನೆ ಮಾಡಿಯಾಗಿದೆ. ಆದರೆ, ಹತ್ತಿ, ತೊಗರಿ ಬೆಳೆದರೂ ಅದರ ಜತೆಗೆ ಸಜ್ಜೆ ನವಣೆಯಂಥ ಬೆಳೆಗಳನ್ನು ಹಾಕಬೇಕು. ಏಕ ಬೆಳೆ ಬೆಳೆದರೆ ಮತ್ತೆ ಮಳೆ ಕೈ ಕೊಟ್ಟರೆ ನಷ್ಟಕ್ಕೆ ತುತ್ತಾಗಬೇಕಾಗುತ್ತದೆ ಎಂದು ಕೃಷಿ ಇಲಾಖೆ ಹಾಗೂ ಕೃಷಿ ವಿವಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
ಹತ್ತಿಗೆ ಇದು ಸೂಕ್ತ ಸಮಯವಲ್ಲ ಎನ್ನುತ್ತಿರುವ ಕೃಷಿ ಇಲಾಖೆ ತಜ್ಞರು ಮಳೆಗಾಗಿ ಕಾಯುವುದು ಲೇಸು. ಈಗ ಬಂದಿರುವ ಮಳೆ ಬೆಳೆಗೆ ಪೂರಕವಾಗಿಲ್ಲ. ಇದರಿಂದ ಗುಲಾಬಿ ಕಾಯಿ ಕೊರಕ ರೋಗಕ್ಕೆ ತುತ್ತಾಗಬಹುದು. ಒಂದು ವೇಳೆ ಬಿತ್ತನೆ ಮಾಡಿದ್ದರೆ ಅದಕ್ಕೆ ತಕ್ಕ ಕೆಲ ಅಗತ್ಯ ಕ್ರಮಗಳನ್ನು ಕೈಗೊಂಡು ಬೆಳೆ ಕಾಪಾಡಿಕೊಳ್ಳಬೇಕು. ಮುಂಗಾರು ಮಳೆಗೆ ಇನ್ನೂ ಕೊಂಚ ಕಾಲಾವಕಾಶವಿದ್ದು, ದೊಡ್ಡ ಮಳೆ ಬಂದಲ್ಲಿ ಅನುಕೂಲವಾಗಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಡ್ಯಾಂ ನೀರು ನಿರೀಕ್ಷೆಯಲ್ಲಿ ರೈತರು: ಸಿಂಧನೂರು, ಮಾನ್ವಿ ಭಾಗದ ರೈತರು ತುಂಗಭದ್ರಾ ಜಲಾಶಯದ ನೀರಿಗಾಗಿ ಕಾದು ಕುಳಿತಿದ್ದಾರೆ. ಕೂರಿಗೆ ಪದ್ಧತಿಯಡಿ ಭತ್ತ ಬಿತ್ತನೆಗೆ ಅವಕಾಶವಿದ್ದರೂ ಹೆಚ್ಚಿನ ರೈತರು ಅದಕ್ಕೆ ಮೊರೆ ಹೋಗದೆ ನಾಟಿ ಮಾಡಲೆಂದೇ ಕಾಯುತ್ತಿದ್ದಾರೆ. ಕಳೆದ ಬಾರಿ ಒಂದು ಬೆಳೆಗೂ ನೀರು ಸಿಗದೆ ಸಾಕಷ್ಟು ಅತಂತ್ರ ಸ್ಥಿತಿ ಎದುರಿಸುವಂತಾಗಿತ್ತು. ಈ ಬಾರಿ ಕೂಡ ಮುಂಗಾರು ಸರಿಯಾಗಿ ಆಗದ ಕಾರಣ ಏನಾಗುವುದೋ ಎಂಬ ಆತಂಕ ಮನೆ ಮಾಡಿದೆ.
ಒಟ್ಟಾರೆ ವಾಡಿಕೆ ಮಳೆಗೆ ಹೋಲಿಸಿದರೆ ಈವರೆಗೆ ಶೇ.32ರಷ್ಟು ಮಳೆ ಕೊರತೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಉತ್ತಮ. ಆದರೆ, ಎಲ್ಲ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ. ಹೀಗಾಗಿ ರೈತರು ಪರ್ಯಾಯ ಬೆಳೆಗಳನ್ನು ಬೆಳೆದು ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಬೇಕು. ತೊಗರಿ ಜತೆ ನವಣೆ, ಸಜ್ಜೆಯಂಥ ಬೆಳೆ ಬೆಳೆಯುವುದು ಸೂಕ್ತ. ಹತ್ತಿ ಬಿತ್ತಲು ಇನ್ನೂ ಮಳೆ ಅಗತ್ಯವಿದ್ದು, ಕಾಯುವುದು ಲೇಸು. ಅದರ ಜತೆಗೆ ಬೆಳೆ ವಿಮೆ ಮಾಡಿಸಲು ಇನ್ನೂ ಕಾಲಾವಕಾಶವಿದ್ದು ವಿಮೆ ಮಾಡಿಸಬೇಕು.
•ಡಾ| ಚೇತನಾ ಪಾಟೀಲ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.