ಏನ್ ಮಾಡೋದ್ರೀ.. ನಮ್ಮ ಹಣೆಬರಹ..
Team Udayavani, Aug 11, 2019, 12:52 PM IST
ರಾಯಚೂರು: ಸರಕು ಸರಂಜಾಮು ಸಮೇತ ಊರು ತೊರೆದ ಗುರ್ಜಾಪುರ ನಿವಾಸಿಗಳು.
ರಾಯಚೂರು: ಬೆಳೆಯೆಲ್ಲ ನೀರಾಗ ಕೊಚ್ಕೊಂಡ್ ಹೋಗೈತಿ. ನಾವ್ ಬದುಕಬೇಕಂದ್ರ ಊರು ಬಿಡ್ಲೇಬೇಕು. ಎಲ್ಲ ದೇವರಿಚ್ಛೆ. ಏನು ಆಗುತ್ತೋ ಆಗ್ಲಿ. ಎಲ್ಲ ನಮ್ ಹಣೆ ಬರಹ…
ಹೀಗೆ ಭಾರದ ಮನದಿಂದ ನೋವು ತೋಡಿಕೊಂಡವರು ಕೃಷ್ಣೆಯ ನೆರೆಗೆ ಸಿಲುಕಿ ಊರು ತೊರೆಯುತ್ತಿರುವ ಗುರ್ಜಾಪುರ ಗ್ರಾಮದ ಮಲ್ಲಮ್ಮ.
ನದಿ ಪಾತ್ರದಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳಿಗೆ ಈಗ ಅದೇ ನದಿ ಯಮರೂಪಿಯಾಗಿ ಕಾಡುತ್ತಿದೆ. ಹಾಕಿದ ಬೆಳೆಗಳೆಲ್ಲ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬದುಕಿಗೆ ಮುಂದೇನು ಎಂಬ ಯಕ್ಷಪ್ರಶ್ನೆ ಕಾಡುತ್ತಿದೆ. ಮನೆಯಲ್ಲಿ ಸಂಗ್ರಹಿಸಿದ ದವಸ ಧಾನ್ಯಗಳನ್ನು ಬಿಟ್ಟು ಜಿಲ್ಲಾಡಳಿತ ಸೂಚಿಸಿದ ಪರಿಹಾರ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇದು ಒಂದೆರಡು ಗ್ರಾಮದ ವ್ಯಥೆಯಲ್ಲ. ಜಿಲ್ಲೆಯ ರಾಯಚೂರು, ದೇವದುರ್ಗ ಹಾಗೂ ಲಿಂಗಸುಗೂರು ತಾಲೂಕಿನ 51 ಹಳ್ಳಿಗಳ ಜನ ರೋದನೆ. ನದಿಗೆ ಉಕ್ಕಿ ಬರುವ ನೀರಿನ ಪ್ರವಾಹದಿಂದ ಬದುಕುಳಿದರೆ ಸಾಕಪ್ಪ ಎನ್ನುವ ಸ್ಥಿತಿಗೆ ಬಂದೊದಗಿದೆ ಜನಜೀವನ. ಮಾಡಿಟ್ಟ ಆಸ್ತಿ ಪಾಸ್ತಿಗಳನ್ನು ಬಿಟ್ಟು ಗಂಟು ಮೂಟೆ ಕಟ್ಟಿಕೊಂಡು ಹೊರಡುತ್ತಿದ್ದಾರೆ.
16 ಹಳ್ಳಿಗಳ ಸ್ಥಳಾಂತರ: ತೀರ ಅಪಾಯದಲ್ಲಿದ್ದ 16 ಹಳ್ಳಿಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಗುರ್ಜಾಪುರ, ಕರ್ಕಿಹಳ್ಳಿ, ಹಳೇ ಬೂರ್ದಿಪಾಡ್, ಪರ್ತಾಪುರ ಗ್ರಾಮಗಳನ್ನು ಸಂಪೂರ್ಣ ಖಾಲಿ ಮಾಡಿಸಲಾಗಿದೆ. ಇನ್ನೂ ಮುದ್ಗೋಟ್, ಲಿಂಗದಳ್ಳಿ, ಅಂಜಳ, ಬಾಗೂರ, ವಗಡಂಬಳಿ, ಹೊಳದಡಗಿ, ಹೂವಿನಹೆಡಗಿ, ಚಿಕ್ಕರಾಯಕುಂಪಿ, ಹಿರೇರಾಯಕುಂಪಿ, ಮದರಕಲ್, ಅರಶಿಣಗಿ ಗ್ರಾಮಗಳ ಕೆಲ ಕುಟುಂಬಗಳನ್ನು ಮಾತ್ರ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ನೀರಿನ ಮಟ್ಟ ಹೆಚ್ಚಾದಲ್ಲಿ ಈ ಹಳ್ಳಿಗಳನ್ನೂ ಖಾಲಿ ಮಾಡಬೇಕಾದ ಪ್ರಮೇಯ ಬರಬಹುದು.
ಡಿಸಿ-ಅಧಿಕಾರಿಗಳ ತಂಡ ಭೇಟಿ: ರಾಯಚೂರು ತಾಲೂಕಿನ ಗುರ್ಜಾಪುರ, ದೇವದುರ್ಗದ ಹಿರೇರಾಯಕುಂಪಿ, ಗೂಗಲ್, ಕರ್ಕಿಹಳ್ಳಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶರತ್ ಬಿ., ಅಪರ ಡಿಸಿ ಗೋವಿಂದರೆಡ್ಡಿ, ಜಿಪಂ ಸಿಇಒ ಲಕ್ಷಿ ್ಮೕಕಾಂತರೆಡ್ಡಿ, ಎಸ್ಪಿ ಡಾ| ಸಿ.ಬಿ.ವೇದಮೂರ್ತಿ ಒಳಗೊಂಡ ಅಧಿಕಾರಿಗಳ ತಂಡ ಜನರಿಗೆ ಮನವರಿಕೆ ಮಾಡಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿತು.
ಸಾವಿರಾರು ಎಕರೆ ಪ್ರದೇಶಕ್ಕೆ ನೀರು: ನದಿ ಸಮೀಪದ ಸಾವಿರಾರು ಎಕರೆಯ ಜಮೀನುಗಳಿಗೆ ನೀರು ನುಗ್ಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಗ್ರಾಮಸ್ಥರು ವಿಧಿ ಇಲ್ಲದೇ ಗಂಟು ಮೂಟೆ ಕಟ್ಟಿದ್ದಾರೆ. ಕೈಲಾದಷ್ಟು ದವಸ-ಧಾನ್ಯ, ಬಟ್ಟೆ-ಬರೆ, ಚಿನ್ನಾಭರಣ, ಅಗತ್ಯ ವಸ್ತುಗಳನ್ನು ಟ್ರ್ಯಾಕ್ಟರ್, ಟಾಟಾ ಏಸ್, ಎತ್ತಿನ ಬಂಡಿಗಳಲ್ಲಿ ತುಂಬಿಕೊಂಡು ಜಿಲ್ಲಾಡಳಿತ ಸೂಚಿಸಿದ ಪರಿಹಾರ ಕೇಂದ್ರಕ್ಕೆ ತೆರಳಿದರೆ, ಇನ್ನೂ ಕೆಲವರು ಸಂಬಂಧಿಗಳ ಮನೆಗಳಿಗೆ ಹೋಗುತ್ತಿದ್ದಾರೆ.
ಗುರ್ಜಾಪುರದ 55 ಕುಟುಂಬಗಳ 148ಕ್ಕೂ ಹೆಚ್ಚು ಜನರನ್ನು ಸಮೀಪದ ಜೇಗರಕಲ್ನ ಸರ್ಕಾರಿ ಪ್ರೌಢಶಾಲೆಗೆ ಕರೆದೊಯ್ಯಲು ಆರು ಸಾರಿಗೆ ಬಸ್‌ಗಳನ್ನು ಬಿಡಲಾಗಿತ್ತು. ದೇವದುರ್ಗ ತಾಲೂಕಿನ ಕೆಲ ಹಳ್ಳಿಗಳಿಗೆ ಭೇಟಿ ನೀಡಿದ ಶಾಸಕ ಶಿವನಗೌಡ ನಾಯಕ ಕೂಡ ಆಸ್ತಿ ಪಾಸ್ತಿ ಎಂದು ಪೇಚಾಡಬೇಡಿ. ಎಲ್ಲವೂ ಇಲ್ಲೇ ಇರುತ್ತದೆ. ಜೀವ ಮುಖ್ಯ. ಕೂಡಲೇ ಊರು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.