ವೈಟಿಪಿಎಸ್ ಗುತ್ತಿಗೆ ಕಾರ್ಮಿಕರಿಂದ ಹೆದ್ದಾರಿ ತಡೆ
•410 ಗುತ್ತಿಗೆ ಕಾರ್ಮಿಕರ ಮರು ನೇಮಕಕ್ಕೆ ಆಗ್ರಹ •ಪ್ರತಿಭಟನಾಕಾರರ ವಶ-ಬಿಡುಗಡೆ •ಕಿಮೀಗಟ್ಟಲೇ ಸಾಲುಗಟ್ಟಿದ್ದ ವಾಹನಗಳು
Team Udayavani, Jun 23, 2019, 10:45 AM IST
ರಾಯಚೂರು: ಸಮೀಪದ ಬೈಪಾಸ್ ಬಳಿ ರಸ್ತೆ ತಡೆ ನಡೆಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು
ರಾಯಚೂರು: ವೈಟಿಪಿಎಸ್‌ನಲ್ಲಿ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದ 410 ಕಾರ್ಮಿಕರನ್ನು ಸೇವೆಗೆ ಮರು ನೇಮಿಸಿಕೊಳ್ಳುವಂತೆ ಆಗ್ರಹಿಸಿ ಟಿಯುಸಿಐ ಸಂಯೋಜಿತ ಯರಮರಸ್ ಥರ್ಮಲ್ ಪವರ್ ಸ್ಟೇಶನ್ ಕಾರ್ಮಿಕ ಸಂಘದಿಂದ ಶನಿವಾರ ಬೈಪಾಸ್ ಬಳಿ ಹೆದ್ದಾರಿ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿರುವ ಕಾರಣ ಟ್ರಾಫಿಕ್ ಸಮಸ್ಯೆಯಾಗಿ ಕಿಮೀಗಟ್ಟಲೇ ವಾಹನಗಳು ಸಾಲುಗಟ್ಟಿದ್ದವು. ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಕುಳಿತು ಧರಣಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಯಿತು.
ಈ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ವೈಟಿಪಿಎಸ್ ಆರಂಭಕ್ಕೂ ಮುನ್ನ 2500 ಜನ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಕೆಪಿಸಿ, ಈಗ ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಿದೆ. ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕಳೆದ 20 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಯಾರು ಸ್ಪಂದಿಸಿಲ್ಲ. ಅಲ್ಲದೇ, ಕಳೆದ 12 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿದರೂ ಸರ್ಕಾರ ನಮ್ಮ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೆದ್ದಾರಿ ತಡೆಗೆ ಮುಂದಾಗಿದ್ದಾಗಿ ತಿಳಿಸಿದರು.
13,250 ಕೋಟಿ ರೂ. ಬಂಡವಾಳ ಹೂಡಿ ವೈಟಿಪಿಎಸ್ ಆರಂಭಿಸಲಾಗಿದೆ. ಭೂ ಸಂತ್ರರ ಕುಟುಂಬಕ್ಕೂ ಸರಿಯಾಗಿ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಆರ್‌ಟಿಪಿಎಸ್‌ನಿಂದ ಅನೇಕ ಕೆಲಸಗಾರರನ್ನು ಇಲ್ಲಿಗೆ ವರ್ಗಾವಣೆ ಮಾಡಿದ್ದು, ಅವರ ಮೂಲಕವೇ ಕೆಲಸ ಮಾಡಿಸುವುದಾಗಿ ತಿಳಿಸುತ್ತಿದ್ದಾರೆ. ಇಷ್ಟು ದಿನ ದುಡಿದ ಕಾರ್ಮಿಕರ ಬದುಕು ಅತಂತ್ರಕ್ಕೆ ಸಿಲುಕಿದೆ ಎಂದರು.
ಇಷ್ಟು ದಿನ ಆ ಕೆಲಸದಲ್ಲಿ ಪಳಗಿರುವ ಕಾರಣ ಕೆಲಸಕ್ಕೆ ನಮ್ಮನ್ನೇ ನೇಮಿಸಿಕೊಳ್ಳಬೇಕು. ಕಾಯಂ ನೌಕರಿ ನೀಡದಿದ್ದರೂ ಚಿಂತೆ ಇಲ್ಲ. ಆದರೆ, ಕೆಲಸದಿಂದ ತೆಗೆದು ಕಾರ್ಮಿಕರ ಕುಟುಂಬಗಳನ್ನು ಅತಂತ್ರಗೊಳಿಸಬಾರದು. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮನವಿ ಸ್ವೀಕರಿಸಿದರು. ಆದರೂ ಜಿಲ್ಲಾಧಿಕಾರಿಯೇ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಮುಖಂಡರೊಂದಿಗೆ ಮಾತನಾಡಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ. ಈ ವೇಳೆ ವಿಧಿ ಇಲ್ಲದೇ ಪೊಲೀಸರು ಬಲವಂತವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ಗಳಿಗೆ ಹತ್ತಿಸಿದರು. ಬಳಿಕ ಬಿಡುಗಡೆ ಮಾಡಿದರು. ಮಹಿಳಾ ಪ್ರತಿಭಟನಾಕಾರರನ್ನು ಕೂಡ ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು.
ಸಂಘದ ಮುಖಂಡ ಜಿ.ಅಮರೇಶ, ಕಾರ್ಯದರ್ಶಿ ರವಿಚಂದ್ರ, ಉಪಾಧ್ಯಕ್ಷ ರಾಮರೆಡ್ಡಿ, ಮುಖಂಡರಾದ ರವಿ ದಾದಸ್, ರಾಘವೇಂದ್ರ, ರಾಘು, ವಿಜಯ, ಪ್ರಶಾಂತ, ಮಲ್ಲಯ್ಯ ಸ್ವಾಮಿ, ರವಿ, ಕಲ್ಲೂರಪ್ಪ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಯಾಣಿಕರಿಗೆ ಕಿರಿಕಿರಿ: ರಾಯಚೂರು, ಲಿಂಗಸುಗೂರು ರಸ್ತೆ ಮಧ್ಯದಲ್ಲಿ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಬಳಿ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಯಿತು. ಲಿಂಗಸುಗೂರಿನಿಂದ ರಾಯಚೂರು, ಹೈದರಾಬಾದ್‌ಗೆ ತೆರಳುವ ವಾಹನಗಳು ಕಿಮೀಗಟ್ಟಲೇ ಸಾಲುಗಟ್ಟಿದ್ದವು. ಆದರೆ, ಹೈದರಾಬಾದ್‌ನಿಂದ ವಾಹನಗಳನ್ನು ನಗರದ ಮೂಲಕ ತೆರಳುವಂತೆ ಮತ್ತೂಂದು ಬೈಪಾಸ್ ತುದಿಯಲ್ಲಿ ತಡೆದು ಕಳುಹಿಸಲಾಗುತ್ತಿತ್ತು. ಇದರಿಂದ ಎಲೆಬಿಚ್ಚಾಲಿ ಮೂಲಕ ಮಾನ್ವಿ ಮಾರ್ಗವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 12 ಗಂಟೆಗೆಲ್ಲ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಸಂಚಾರ ಸುಗಮವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.