ಮಳೆಯಿಲ್ಲದೇ ಬಾಡುತ್ತಿದೆ ‘ರೈತನ ಬಾಳು’
ಮೂರು ತಿಂಗಳಲ್ಲಿ ಶೇ.39 ಕೊರತೆ •3.49 ಲಕ್ಷ ಹೆಕ್ಟೇರ್ ಪೈಕಿ 2.08 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ •ಮಳೆ ಇಲ್ಲದೇ ಬಾಡಿದ ಬೆಳೆ
Team Udayavani, Aug 28, 2019, 11:19 AM IST
ರಾಯಚೂರು: ತಾಲೂಕಿನ ಗೋನಾಲ ಗ್ರಾಮದಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ನೀರಿಲ್ಲದೇ ಬಾಡಿದೆ.
ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ರಾಯಚೂರು ಜಿಲ್ಲೆ ಮತ್ತೂಂದು ಭೀಕರ ಕ್ಷಾಮಕ್ಕೆ ಅಣಿಯಾಗುತ್ತಿದೆ. ಅಲ್ಪ-ಸ್ವಲ್ಪ ಸುರಿದ ಮಳೆಗೆ ಬಿತ್ತನೆ ಮಾಡಿದ್ದ ರೈತರು ಕೊನೆಗೂ ಆಸೆ ಕೈ ಚೆಲ್ಲಿದ್ದು, ಮಳೆ ಇಲ್ಲದೇ ಬೆಳೆಯೆಲ್ಲ ಒಣಗುತ್ತಿದೆ. ಮತ್ತೂಂದೆಡೆ ನೆರೆ ಅಪ್ಪಳಿಸಿ ನದಿ ಪಾತ್ರದ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.
ಆಗಸ್ಟ್‌ನಲ್ಲಿ ಸುರಿದ ಅಲ್ಪ ಸ್ವಲ್ಪ ಮಳೆಯನ್ನೇ ಆಧರಿಸಿ ಜಿಲ್ಲೆಯ ಖುಷ್ಕಿ ಜಮೀನಿನಲ್ಲಿ ರೈತರು ತೊಗರಿ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಸುರಿದ ತುಂತುರು ಮಳೆಗೆ ಆರಂಭದಲ್ಲಿ ಮೊಳಕೆ ಚೆನ್ನಾಗಿ ಬಂದಿದೆಯಾದರೂ, ಬೆಳೆ ಬಲಗೊಳ್ಳುವ ಹೊತ್ತಿನಲ್ಲಿಯೇ ಮಳೆ ಕೈ ಕೊಟ್ಟಿದೆ. ಕೆಲ ಪ್ರದೇಶಗಳಲ್ಲಿ ಹೊರತುಪಡಿಸಿ ಬಹುತೇಕ ಖುಷ್ಕಿ ಜಮೀನು ಕ್ಷಾಮಕ್ಕೆ ತುತ್ತಾಗಿದೆ.
ಶೇ.39ರಷ್ಟು ಮಳೆ ಕೊರತೆ: ಜಿಲ್ಲೆಗೆ ಈವರೆಗೆ ಶೇ.39ರಷ್ಟು ಮಳೆ ಕೊರತೆ ಕಾಡುತ್ತಿದೆ. ಮುಂಗಾರು ಹಂಗಾಮಿನಲ್ಲಿ ಯಾವ ತಿಂಗಳಲ್ಲೂ ಪರಿಪೂರ್ಣ ಮಳೆ ಬಂದಿಲ್ಲ. ಜೂನ್‌ನಲ್ಲಿ 81 ಮಿಮೀ ನಿರೀಕ್ಷೆಯಿದ್ದು, ಕೇವಲ 61 ಮಿಮೀ ಮಳೆ ಸುರಿದಿತ್ತು. ಆಗ ಶೇ.25ರಷ್ಟು ಮಳೆ ಕೊರತೆಯಾಗಿತ್ತು. ಜುಲೈನಲ್ಲಿ 103 ಮಿಮೀ ಅಗತ್ಯವಿದ್ದರೆ 75 ಮಿಮೀ ಮಾತ್ರ ಸುರಿದಿತ್ತು. ಆಗ ಶೇ.28 ಮಿಮೀ ಮಳೆ ಕೊರತೆ ಆಗಿತ್ತು. ಆಗಸ್ಟ್‌ನಲ್ಲಿ ರೈತರು ಹೊಲ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧರಾಗಿ ಕುಳಿತಿದ್ದರು. ಆದರೆ, ಈವರೆಗೆ 94 ಮಿಮೀನಲ್ಲಿ ಕೇವಲ 46 ಮಿಮೀ ಮಳೆಯಾಗಿದ್ದು, ಶೇ.51ರಷ್ಟು ಕೊರತೆ ಕಾಡುತ್ತಿದೆ. ಒಟ್ಟಾರೆ ಮೂರು ತಿಂಗಳಲ್ಲಿ 345 ಮಿಮೀ ಮಳೆ ನಿರೀಕ್ಷೆಯಿದ್ದು, 210 ಮಿಮೀ ಮಾತ್ರ ಮಳೆಯಾಗಿದ್ದು, ಶೇ.39ರಷ್ಟು ಮಳೆ ಕೊರತೆ ಕಾಡುತ್ತಿದೆ. ಇದರಿಂದ ರೈತರು ಧೈರ್ಯ ಮಾಡಿ ಬಿತ್ತನೆ ಮಾಡಿದ ಬೆಳೆ ಬಾಡುವುದನ್ನು ಕಂಡು ಮಮ್ಮಲ ಮರುಗುವಂತಾಗಿದೆ.
ಶೇ.59.59ರಷ್ಟು ಬಿತ್ತನೆ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಶೇ.59.59ರಷ್ಟು ಬಿತ್ತನೆ ಮಾಡಿದ್ದು, ಖುಷ್ಕಿ ಜಮೀನಿನಲ್ಲಿ ಶೇ.78.86ರಷ್ಟು, ನೀರಾವರಿ ಪ್ರದೇಶದಲ್ಲಿ ಶೇ.40.06ರಷ್ಟು ಬಿತ್ತನೆ ಮಾಡಲಾಗಿದೆ. 3.49 ಲಕ್ಷ ಹೆಕ್ಟೇರ್ ± ್ರದೇಶ ಬಿತ್ತನೆ ಗುರಿ ಹೊಂದಿದ್ದು, 2.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ನೀರಾವರಿ ಪ್ರದೇಶ ವ್ಯಾಪ್ತಿಯ ಪ್ರದೇಶಗಳು ಸೇರುವುದರಿಂದ ಇತ್ತೀಚೆಗೆ ಅಪ್ಪಳಿಸಿದ ನೆರೆಯಿಂದ ಸಾಕಷ್ಟು ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ನೀರು ಪಾಲಾಗಿದೆ. ಇನ್ನು ತೊಗರಿ, ಹತ್ತಿ, ಸೂರ್ಯಕಾಂತಿ, ಔಡಲ, ಶೇಂಗಾ ಸೇರಿ ಇನ್ನಿತರ ವಾಣಿಜ್ಯ ಬೆಳೆಗಳಿಗೆ ನೀರು ಸಿಗದೆ ಬಾಡುತ್ತಿವೆ. ಇಳುವರಿ ಚೆನ್ನಾಗಿ ಬರುವ ಹೊತ್ತಿನಲ್ಲಿಯೇ ಬೆಳೆ ಬಾಡುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಟ್ಯಾಂಕರ್‌ಗಳೇ ಗತಿ: ಈಗ ರೈತರು ಬೆಳೆ ಉಳಿಸಿಕೊಳ್ಳಬೇಕಾದರೆ ಪುನಃ ಟ್ಯಾಂಕರ್‌ಗಳ ಮೊರೆ ಹೋಗಬೇಕಾದ ಸ್ಥಿತಿ ಎದುರಾಗುತ್ತಿದೆ. ಕಳೆದ ವರ್ಷವೇ ಸಾವಿರಾರು ರೂ. ಖರ್ಚು ಮಾಡಿ ಜೋಳದ ಬೆಳೆಗೆ ನೀರು ಕಟ್ಟಿದ್ದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಮತ್ತದೆ ಸ್ಥಿತಿ ಎದುರಾಗುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ. ಮಳೆರಾಯನ ಮೇಲೆ ದಿನೇದಿನೆ ವಿಶ್ವಾಸ ಕಳೆದುಕೊಳ್ಳುತ್ತಿರುವ ರೈತರು ಈ ಬಾರಿಯೂ ಮುಂಗಾರು ಕೈಬಿಟ್ಟಿತು ಎಂದು ಪೇಚಾಡುತ್ತಿದ್ದಾರೆ. ಆದರೆ, ಬಡ ರೈತರು ಟ್ಯಾಂಕರ್ ನೀರು ಹರಿಸಲಾಗದೆ ಮುಂಗಾರು ಬೆಳೆ ಕೆಡಿಸಿ ಹಿಂಗಾರು ಬಿತ್ತನೆ ಮಾಡುವ ಚಿಂತನೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಮಳೆ ಇಲ್ಲದೇ ಬೆಳೆ ಹಾನಿ ಆಗಿದ್ದರೆ, ನೆರೆಯಿಂದ ಕೂಡ 15,955 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣ ನಷ್ಟದ ಕುರಿತು ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿಗೆ ಅಪ್ಪಳಿಸಿದ ಪ್ರವಾಹದಿಂದ ಭತ್ತ, ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಕಬ್ಬು, ಹತ್ತಿ ಬೆಳೆ ಹಾನಿಯಾಗಿದೆ. ರಾಯಚೂರು ತಾಲೂಕಿನಲ್ಲಿ 3,338 ಹೆಕ್ಟೇರ್, ಮಾನ್ವಿಯಲ್ಲಿ 1,266 ಹೆಕ್ಟೇರ್, ದೇವದುರ್ಗದಲ್ಲಿ 10,189 ಹೆಕ್ಟೇರ್, ಲಿಂಗಸುಗೂರು ತಾಲೂಕಿನಲ್ಲಿ 1,034 ಹೆಕ್ಟೇರ್, ಸಿಂಧನೂರು ತಾಲೂಕಿನಲ್ಲಿ 128 ಹೆಕ್ಟೇರ್ ಪ್ರದೇಶ ನೆರೆಗೆ ತುತ್ತಾಗಿದೆ. ಅದರಲ್ಲಿ 8,824 ಹೆಕ್ಟೇರ್ ಭತ್ತ ಬೆಳೆ ಹಾನಿಯಾದರೆ, 3999 ಹೆಕ್ಟೇರ್‌ನಲ್ಲಿ ಹತ್ತಿ ಹಾಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.