ನಡುಗಡ್ಡೆ ಸಂತ್ರಸ್ತರ ಮನೆಗಳಲ್ಲಿ ಅನ್ಯರ ವಾಸ
ಮನೆಗಳಿದ್ದರೂ ಸ್ಥಳಾಂತರಕ್ಕೆ ಒಪ್ಪದ ಸಂತ್ರಸ್ತರು • ಕುರ್ವಕುಲಾ ಜನತೆಗೆ ನಡುಗಡ್ಡೆಯೇ ಲೇಸಂತೆ..!
Team Udayavani, Aug 7, 2019, 11:09 AM IST
ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು: 2009ರಲ್ಲಿ ಜಿಲ್ಲೆಯನ್ನು ಕಾಡಿದ್ದ ಭೀಕರ ನೆರೆಗೆ ನಲುಗಿ ಹೋಗಿದ್ದ ಸಂತ್ರಸ್ತರಿಗೆ ಆಗಿನ ಬಿಜೆಪಿ ಸರ್ಕಾರ ಪುನರ್ವಸತಿ ಕಲ್ಪಿಸಿತ್ತು. ಆದರೆ, ಇಂದು ಆ ಮನೆಗಳಲ್ಲಿ ಅನ್ಯರು ವಾಸವಾಗಿದ್ದು, ನಡುಗಡ್ಡೆ ಜನ ಮಾತ್ರ ಅಲ್ಲಿಂದ ಕಾಲ್ಕಿತ್ತಿಲ್ಲ.
ತಾಲೂಕಿನ ಕುರ್ವಕುಲಾ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶವಾಗಿದೆ. ಹಿಂದೆ ಬಂದಿದ್ದ ನೆರೆಗೆ ಕುರ್ವಕುಲಾ ನಲುಗಿ ಹೋಗಿತ್ತು. ಇದನ್ನರಿತ ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಾ ಅಮೃತಾನಂದಮಯಿ ಅವರ ಆಶ್ರಮದ ನೆರವಿನೊಂದಿಗೆ ಆತ್ಕೂರು ಬಳಿ 180ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ, ಈಗ ಆ ಮನೆಗಳಲ್ಲಿ ಬಹುತೇಕ ಖಾಲಿ ಬಿದ್ದು ಹಾಳಾಗುತ್ತಿದ್ದರೆ, ಇನ್ನೂ ಅನೇಕ ಮನೆಗಳಲ್ಲಿ ಆತ್ಕೂರು ಗ್ರಾಮದವರು ಬಂದು ಸೇರಿಕೊಂಡಿದ್ದಾರೆ.
ಕುರ್ವಕುಲಾ ನಡುಗಡ್ಡೆಯಲ್ಲಿ 270ಕ್ಕೂ ಅಧಿಕ ಮನೆಗಳಿದ್ದು, 600ಕ್ಕೂ ಅಧಿಕ ಜನ ವಾಸವಾಗಿದ್ದಾರೆ. ಆದರೆ, ಇದು ಸುತ್ತಲೂ ನದಿಯಿಂದ ಕೂಡಿದ್ದು ಅಲ್ಲಿಗೆ ತೆಪ್ಪಗಳ ಮೂಲಕವೇ ಸಾಗಬೇಕು. ಪ್ರತಿಯೊಂದು ಕೆಲಸಕ್ಕೂ ಇಲ್ಲಿನ ಜನ ತೆಪ್ಪಗಳನ್ನೇ ಅವಲಂಬಿಸಿರುವುದು ಗಮನಾರ್ಹ. ಇದನ್ನರಿತ ಜಿಲ್ಲಾಡಳಿತ ನಡುಗಡ್ಡೆ ನಿವಾಸಿಗಳ ಸ್ಥಳಾಂತರಕ್ಕೆ ನಿರ್ಧರಿಸಿತ್ತು. ಆದರೆ, ಅದಾಗಿ ದಶಕ ಕಳೆದಿದ್ದು, ಮನೆಗಳು ಮಾತ್ರ ಹಾಳಾಗುತ್ತಿವೆ.
ಸೂಕ್ತ ಸೌಲಭ್ಯ-ದಾಖಲೆ ಇಲ್ಲ: ನೀವು ಅಲ್ಲಿಗೆ ಯಾಕೆ ಹೋಗಿಲ್ಲ ಎಂದು ನಡುಗಡ್ಡೆ ನಿವಾಸಿಗಳನ್ನು ಕೇಳಿದರೆ ಮನೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನಮಗೆ ನೀಡಿಲ್ಲ. ಹಕ್ಕು ಪತ್ರ ನೀಡಿದ್ದು, ಅವು ಪಂಚಾಯಿತಿಯಲ್ಲಿ ನೋಂದಣಿಯಾಗಿಲ್ಲ. ಅಲ್ಲದೇ, ಅಲ್ಲಿ ಕುಡಿಯುವ ನೀರಿನ ಸೌಕರ್ಯವಿಲ್ಲ ಎಂದು ಕಾರಣ ನೀಡುತ್ತಾರೆ. ಇನ್ನು ಅಲ್ಲಿ ವಾಸವಾದ ಜನರನ್ನು ಪ್ರಶ್ನಿಸಿದರೆ ನಮಗೆ ಜಮೀನುಗಳು ಇಲ್ಲಿಂದ ಸಮೀಪವಾಗುತ್ತವೆ. ಹೀಗಾಗಿ ಕುರ್ವಕುಲಾ ಜನರ ಒಪ್ಪಿಗೆ ಮೇರೆಗೆ ವಾಸವಾಗಿದ್ದೇವೆ ಎಂದು ಹೇಳುತ್ತಾರೆ. ನಿರಂತರ ಜ್ಯೋತಿಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ನೀರಿನದ್ದೇ ಸಮಸ್ಯೆಯಾಗಿದ್ದು, ಪಕ್ಕದ ಬಾವಿಗಳಿಂದ ನೀರು ತರುವುದಾಗಿ ಹೇಳುತ್ತಾರೆ ಅಲ್ಲಿನ ನಿವಾಸಿಗಳು.
ಕೃಷಿಯೇ ಜೀವಾಳ: ನಡುಗಡ್ಡೆಗಳಲ್ಲಿರುವ ಸಾವಿರಾರು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರುವ ಕುರ್ವಕುಲಾ ಜನರಿಗೆ ಸ್ಥಳಾಂತರಗೊಂಡಲ್ಲಿ ಆದಾಯದ ಮೂಲ ತಪ್ಪಿ ಹೋಗಲಿದೆ. ಹೊಸ ಗ್ರಾಮಕ್ಕೆ ತೆರಳಿ ವಾಸವಾದರೆ ನಿತ್ಯ ಜಮೀನುಗಳಿಗೆ ಓಡಾಡುವುದು ದುಸ್ತರವಾಗಲಿದೆ. ಈಗಾಗಲೇ ಕುರ್ವಕುಲಾದಲ್ಲಿಯೇ 18ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿದ್ದು, ಕೃಷಿಗೆ ಬೇಕಾದ ಎಲ್ಲ ಚಟುವಟಿಕೆ ಮಾಡಲಾಗುತ್ತಿದೆ. ಮಳೆಗಾಲದ ಕೆಲ ದಿನಗಳ ತಾಪತ್ರಯ ಬಿಟ್ಟರೆ ಉಳಿದ ದಿನಗಳಲ್ಲಿ ಅವರಿಗೆ ಮತ್ಯಾವ ಸಮಸ್ಯೆ ಇಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಅಭಿಪ್ರಾಯ.
ಸ್ಥಳಾಂತರಕ್ಕಿಂತ ಸೇತುವೆ ನಿರ್ಮಿಸಿ: ಇದು ಜುರಾಲಾ ಜಲಾಶಯದ ನಿರಾಶ್ರಿತ ತಾಣ. ಹೀಗಾಗಿ ಈ ಹಿಂದೆಯೇ ಆಂಧ್ರ ಸರ್ಕಾರ ಇಲ್ಲಿಗೆ ಸೇತುವೆ ನಿರ್ಮಿಸಲು ಜಿಲ್ಲಾಡಳಿತ ಅಗತ್ಯ ಅನುದಾನ ಮಂಜೂರು ಮಾಡಿದೆ. ಈಗಾಗಲೇ ಸೇತುವೆ ಕಾಮಗಾರಿ ಕೂಡ ಅರ್ಧ ಮುಗಿದಿದ್ದು, ಸ್ಥಗಿತಗೊಂಡಿದೆ. ನಮ್ಮನ್ನು ಇಲ್ಲಿಂದ ಸ್ಥಳಾಂತರಿಸುವುದಕ್ಕಿಂತ ಆ ಸೇತುವೆ ಕಾಮಗಾರಿ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯ. ಆದರೆ, ಆಗಿನ ಅಂದಾಜು ಪಟ್ಟಿಗೂ ಈಗಿನ ಮೊತ್ತಕ್ಕೂ ತಾಳೆ ಆಗದ ಕಾರಣ ಆ ಸೇತುವೆ ಕಾಮಗಾರಿ ನಿರ್ವಹಣೆಗೆ ಯಾವುದೇ ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂಬುದು ಅಧಿಕಾರಿಗಳ ವಿಶ್ಲೇಷಣೆ.
ಕುರ್ವಕುಲಾ ಜನರ ಪುನರ್ವಸತಿಗಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ, ಪಂಚಾಯಿತಿಗಳಲ್ಲಿ ಅವುಗಳ ದಾಖಲಾತಿ ಸರಿಯಾಗಿ ಮಾಡಿಲ್ಲ. ಅಲ್ಲದೇ, ನಮಗೆ ಸಂಚಾರಕ್ಕೆ ಸೇತುವೆ ನಿರ್ಮಿಸಿಕೊಟ್ಟರೆ ಸಾಕಷ್ಟು ಅನುಕೂಲವಾಗಲಿದೆ. ಈಗ ಅಲ್ಲಿ ಆತ್ಕೂರು ಗ್ರಾಮದವರು ತಾತ್ಕಾಲಿಕವಾಗಿ ಇರುತ್ತೇವೆ ಎಂದು ಕೇಳಿಕೊಂಡಿದ್ದಕ್ಕೆ ಕೆಲವರು ಒಪ್ಪಿಗೆ ಸೂಚಿಸಿದ್ದಾರೆ.
•ಕುರುಮಪ್ಪ,
ಕುರ್ವಕುಲಾ ನಿವಾಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.