ಬೈರಮಂಗಲ ಜಲಾಶಯ ಅಭಿವೃದ್ಧಿಗೆ ಕ್ರಮ
Team Udayavani, Mar 20, 2020, 3:43 PM IST
ರಾಮನಗರ: ಬೈರಮಂಗಲ ಜಲಾಶಯದ 21 ಕಿ.ಮೀ ಎಡದಂಡೆ ನಾಲೆ ಮತ್ತು 9 ಕಿ.ಮೀ ಬಲದಂಡೆ ನಾಲೆ ಅಭಿವೃದ್ಧಿಪಡಿಸಲು ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ 106 ಕೋಟಿ ರೂ. ಬಿಡುಗಡೆಗೆ ಹಾಲಿ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ತಿಳಿಸಿದರು.
ತಾಲೂಕಿನ ಬಿಡದಿ ಹೋಬಳಿಯ ಮನಗ ನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹಿಂದಿನ ಸರ್ಕಾರ ನೀಡಿದ್ದ 40 ಕೋಟಿ ರೂ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಮುಖ್ಯ ಮಂತ್ರಿ ಗಳು ಒಪ್ಪಿದ್ದಾರೆ. ಆರ್ಥಿಕ ಇಲಾಖೆಯು ಅನುಮೋದನೆ ನೀಡಲಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಆದ್ಯತೆ: ಬೈರಮಂಗಲ ಜಲಾಶಯದ ಗ್ರಾಮಗಳ ಅಂತರ್ಜಲ ಕಲುಷಿತಗೊಂಡಿದ್ದು, ಈ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು. ನಾನು ಶಾಸಕನಾದ ನಂತರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಮೂಲ ಸೌಕರ್ಯ ವೃದ್ಧಿಸುವ ಧ್ಯೇಯ ಹೊಂದಿದ್ದೇನೆ. ಚೌಕಹಳ್ಳಿ ಸಂಜೀವಯ್ಯನ ದೊಡ್ಡಿ ಗ್ರಾಮಗಳ ನಡುವಿನ ಕಾಂಕ್ರೀಟ್ ರಸ್ತೆ ಕಾಮಗಾರಿಗೆ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಹೇಳಿದರು.
ಸಲಹೆ ಪಾಲಿಸಿ: ರಾಜ್ಯದಲ್ಲಿ ಕೋವಿಡ್ 19 ವೈರಸ್ ಹರಡುವಿಕೆ ತಡೆಯಲು ಸರ್ಕಾರ ತೆಗೆದುಕೊಂಡಿರುವ ಅಗತ್ಯ ಕ್ರಮಗಳಿಗೆ ಸಾರ್ವಜನಿಕರು ಸ್ಪಂದಿಸುವಂತೆ ಶಾಸಕರು ಮನವಿ ಮಾಡಿದರು. ಜಿಲ್ಕಲಾಡಳಿತ ಕೈಗೊಂಡಿರುವ ಅಗತ್ಯಕ್ರಮಗಳು, ಸ್ಥಳೀಯ ನಗರಸಭೆ, ಪುರಸಭೆ ಗ್ರಾಮ ಪಂಚಾಯಿತಿಗಳು ತೆಗೆದುಕೊಳ್ಳುವ ಮುಂಜಾಗ್ರತೆ ಕ್ರಮಗಳಿಗೆ ಜನರು ಸ್ಪಂದಿಸಬೇಕು. ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸುವ ಮೂಲಕ ವೈರಸ್ ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಯಾರೂ ಇಲ್ಲದಿರುವುದು ಸಂತಸದ ವಿಚಾರವಾಗಿದೆ. ಆದರೆ, ಮಾನವ ಕುಲಕ್ಕೆ ಕಂಟಕವಾಗಿರು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕರಿಗೆ ಸೂಚಿಸಿರುವ ಮುಖ್ಯ ಸಂದೇಶ ಗಳನ್ನು ತಪ್ಪದೆ ಪಾಲಿಸಬೇಕು ಎಂದರು.
ಜಿಲ್ಲಾಧಿಕಾರಿಗಳು ಆದೇಶ ನೀಡಿರುವಂತೆ ಜಾತ್ರೆ, ಸಂತೆ, ರಥೋತ್ಸವ ಹಾಗೂ ಊರ ಹಬ್ಬಗಳನ್ನು ಸರಳ ರೀತಿಯಲ್ಲಿ ಆಚರಿಸಲು ಆದ್ಯತೆ ನೀಡಬೇಕು. ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಅನುಸರಿಸಲು ಒತ್ತು ನೀಡ ಬೇಕು ಎಂದು ಶಾಸಕ ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.