ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಾಳೆ
Team Udayavani, Jul 22, 2019, 5:00 PM IST
ರಾಮನಗರ: ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಇದೇ ಜುಲೈ 23ರ ಮಂಗಳವಾರ ನಡೆಯಲಿದೆ. ಇದೇ ದಿನ ನಗರದ ವಿವಿಧ ಭಾಗಗಳಲ್ಲಿ ಭಕ್ತ ಸಂರಕ್ಷಣಾರ್ಥ ನೆಲೆಸಿರುವ ಅಷ್ಟ ದೇವತೆಗಳ ಕರಗ ಮಹೋತ್ಸವವೂ ನೆರೆವೇರಲಿದೆ. ಮಂಗಳವಾರ ನವಶಕ್ತಿಯರ ಕರಗ ಮಹೋತ್ಸವಕ್ಕೆ ರಾಮನಗರ ಜಿಲ್ಲೆಯ ಜನತೆ ಸಾಕ್ಷಿಯಾಗಲಿದ್ದಾರೆ.
ಶ್ರೀ ಚಾಮುಂಡೇಶ್ವರಿ ಅಮ್ಮನವರು, ಐಜೂರು ಆದಿಶಕ್ತಿ ಕರಗ, ಬಿಸಿಲು ಮಾರಮ್ಮ ಕರಗ, ಮಗ್ಗದ ಕೇರಿ ಮಾರಮ್ಮ ಕರಗ, ಮುತ್ತು ಮಾರಮ್ಮ ಕರಗ, ಶೆಟ್ಟಿಹಳ್ಳಿ ಆದಿ ಶಕ್ತಿ ಕರಗ, ಭಂಡಾರಮ್ಮ ದೇವಿ ಕರಗ, ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ, ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವಗಳು ಒಂದೇ ದಿನ ನೆರೆವೇರಲಿದೆ.
ಚಾಮುಂಡೇಶ್ವರಿ ಕರಗ, ಅಗ್ನಿಕೊಂಡ ಮಹೋತ್ಸವ: ನಗರದ ಪ್ರಧಾನ ಶಕ್ತಿ ದೇವತೆ ಶ್ರೀ ಬನ್ನಿಮಹಾಕಾಳಿ ಅಮ್ಮನವರ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ಇತ್ತೀಚೆಗೆ ನೆರೆವೇರಿದೆ. ಇದೇ ಜುಲೈ 23ರಂದು ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಲಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ಆರಾಧಿಸುವ ಈ ದೇವತೆಯ ಕರಗಕ್ಕೆ ಸುತ್ತಮುತ್ತಲ ಜಿಲ್ಲೆಗಳಲ್ಲಿಯೂ ಭಕ್ತರಿದ್ದಾರೆ. ಕರಗ ಮಹೋ ತ್ಸವ ಪ್ರಯುಕ್ತ ಕಳೆದೊಂದು ವಾರದಿಂದ ಧಾರ್ಮಿಕ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಿದೆ.
ಚಾಮುಂಡೇಶ್ವರಿ ದೇವಸ್ಥಾನವನ್ನು ಏಳುಮಂದಮ್ಮ ದೇವಾಲಯ ಅಂತಲೂ ಕರೆಯುತ್ತಾರೆ. ದೇವಾಲಯದಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ಹೀಗಾಗಿ ಏಳುಮಂದಮ್ಮ ದೇವಾಲಯ ಅಂತಲೂ ಕರೆಯುವುದುಂಟು ಎಂದು ಕರಗಧಾರಕ ಪಿ. ದೇವಿಪ್ರಸಾದ್ ಸಿಂಗ್ ಮಾಹಿತಿ ನೀಡಿದ್ದಾರೆ.
ಚಾಮುಂಡಿ ದೇವಾಲಯಕ್ಕಿದೆ ಹಿನ್ನಲೆ! :ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಪ್ರತಾಪ್ ಸಿಂಗ್ ಎಂಬುವರಿಗೆ ಮಕ್ಕಳಿರಲಿಲ್ಲ. ಮಕ್ಕಳ ಭಾಗ್ಯಕ್ಕೆ ದಂಪತಿ ಭಗವತಿಯಲ್ಲಿ ಮೊರೆ ಇಟ್ಟಿದ್ದರು. ಒಮ್ಮೆ ಚಾಮುಂಡೇಶ್ವರಿ ಅಮ್ಮನವರು ಪ್ರತಾಪ್ ಸಿಂಗ್ ಕನಸಿನಲ್ಲಿ ಬಂದು ನಗರದ ಸಮೀಪ ಗುಹೆಯೊಂದರಲ್ಲಿ ತಮ್ಮ ಮೂರ್ತಿಯನ್ನು ಕಳ್ಳರು ಪೂಜಿಸುತ್ತಿದ್ದಾರೆ. ಅದನ್ನು ತಂದು ಗುಡಿ ಕಟ್ಟಿ ಪ್ರತಿಷ್ಠಾಪಿಸಿದರೆ ಇಷ್ಟಾರ್ಥ ಪೂರೈಸುವುದಾಗಿ ಹರಸಿದಳಂತೆ. ಪೊಲೀಸ್ ಅಧಿಕಾರಿಯಾಗಿದ್ದ ಪ್ರತಾಪ್ ಸಿಂಗ್ ಮಾತೆಯ ಅಣತಿಯಂತೆ ಮಾರು ವೇಷದಲ್ಲಿ ಸುತ್ತಿ ಗುಹೆಯಲ್ಲಿದ್ದ ಶ್ರೀ ಚಾಮುಂಡೇಶ್ವರಿ ಅಮ್ಮನವರ ವಿಗ್ರಹವನ್ನು ತಂದು ನಗರದಲ್ಲಿ ಗುಡಿಯೊಂದನ್ನು ಕಟ್ಟಿ ಪ್ರತಿಷ್ಠಾಪಿಸಿದರು. ಇದಾದ ನಂತರ ಸಿಂಗ್ ದಂಪತಿಗಳಿಗೆ ಶ್ರೀ ಮಾತೆ ಸಂತಾನ ಕರುಣಿಸಿದ್ದಾಳೆ ಎಂದು ಹಿರಿಯರು ಹೇಳುತ್ತಾರೆ. ಅಂದಿನಿಂದ ನಿರಂತರವಾಗಿ ದೇವಾಲಯವನ್ನು ಪ್ರತಾಪ್ ಸಿಂಗ್ ಕುಟುಂಬದವರೇ ನಿರ್ವಹಿಸುತ್ತಿದ್ದಾರೆ.
ಪ್ರತಾಪ್ ಸಿಂಗ್ ಅವರ ನಂತರ ಇವರ ಮಗ ಗಿರಿಧರ್ ಸಿಂಗ್, ಇವರ ನಂತರ ಪದ್ಮನಾಭ ಸಿಂಗ್ ಕರಗಧಾರಣೆ ಮಾಡಿ ಸೇವೆ ನೆರೆವೇರಿಸುತ್ತಿದ್ದರು. ಇವರ ನಂತರ ಇದೀಗ ಪಿ. ದೇವಿ ಪ್ರಸಾದ್ ಸಿಂಗ್ (ಬಾಬು) 19ನೇ ಬಾರಿಗೆ ಕರಗಧಾರಣೆ ಮಾಡಿಕೊಂಡು ಬರುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಪುರಾತನವಾದುದಾಗಿದೆ. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ನಮ್ಮ ಕುಟುಂಬ ಐದನೆ ತಲೆಮಾರಿನಿಂದ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದೆ’ ಎಂದು ನೀಡಿದ್ದಾರೆ.
ಕರಗಧಾರಿಗಳು ಯಾರು? : ಐಜೂರು ಆದಿಶಕ್ತಿ ಕರಗವನ್ನು ವಿಜಯ್ ಕುಮಾರ್ ಧಾರಣೆ ಮಾಡಲಿದ್ದಾರೆ. ಬಿಸಿಲು ಮಾರಮ್ಮ ಕರಗವನ್ನು ಪಿ.ಮಹೇಂದ್ರ, ಮಗ್ಗದಕೇರಿ ಮಾರಮ್ಮ ಕರಗವನ್ನು ಪಿ.ಚೇತನ್‌ಕುಮಾರ್, ಭಂಡಾರಮ್ಮ ದೇವಿ ಕರಗವನ್ನು ಸಾಗರ್, ಮುತ್ತುಮಾರಮ್ಮ ಕರಗವನ್ನು ಎನ್.ಪ್ರಶಾಂತ್, ಶೆಟ್ಟಿಹಳ್ಳಿ ಆದಿಶಕ್ತಿ ಕರಗವನ್ನು ಅನಿಲ್ ಕುಮಾರ್, ಕೊಂಕಾಣಿದೊಡ್ಡಿ ಆದಿಶಕ್ತಿ ಕರವನ್ನು ಎಚ್.ಮುನೀಂದ್ರ, ಚೌಡೇಶ್ವರಿ ಅಮ್ಮನವರ ಕರಗವನ್ನು ವಿ.ಸುರೇಶ್‌ಧರಿಸಲಿದ್ದಾರೆ.
ಕರಗ ಮಹೋತ್ಸವದ ಆಕರ್ಷಣೆ ಸಂಗೀತ ಸಂಜೆ: ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಮತ್ತು ಶ್ರೀ ರಾಮ ಚಿತ್ರಮಂದಿರದ ಬಳಿಯ ಬಯಲಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಂಗೀತ ಸಂಜೆ ಕಾರ್ಯಕ್ರಮವನ್ನು ಈ ಬಾರಿ ಗಾಯಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ನಡೆಯಲಿದೆ. ಕರಗ ಮಹೋತ್ಸವದ ಪ್ರಯುಕ್ತ ಇಡೀ ನಗರ ವಿದ್ಯುತ್ ದೀಪಗಳಿಂದ ಈಗಾಗಲೆ ಶೃಂಗಾರಗೊಂಡಿದೆ.
ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ರಾಮನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಜನರನ್ನು ಸೆಳಯುತ್ತಿದೆ. ದಸರಾ ಮಹೋತ್ಸವದಂತೆ ಜುಲೈ 23 ಜಿಲ್ಲಾ ಕೇಂದ್ರ ಕಂಗೊಳಿಸಲಿದೆ. ಕರಗ ಮಹೋತ್ಸವ ಸರ್ವ ಧರ್ಮಿಯರು ಒಡಗೂಡಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬೃಹತ್ ಮಟ್ಟದಲ್ಲಿ ರಸಮಂಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಪ್ರದಾಯವನ್ನು ಹುಟ್ಟಿಹಾಕಿದ್ದು, ಯುವ ಮುಖಂಡ ಕೆ.ಶೇಷಾದ್ರಿ (ಶಶಿ). ಸಂಗೀತ ಸಂಜೆಯ ಜೊತೆಗೆ ನಗರದಲ್ಲಿ ವಿದ್ಯುತ್ ದೀಪಗಳ ಅಲಂಕಾರವನ್ನು ಸಹ ಕೆ.ಶೇಷಾದ್ರಿ ಅವರ ನೇತೃತ್ವದ ಯುವಕರ ತಂಡ ಆರಂಭಿಸಿತ್ತು. ಇಂದಿಗೂ ವಿವಿಧ ಸಂಘಟನೆಗಳ ವತಿಯಂದ ಇವುಗಳ ಪಾಲನೆಯಾಗುತ್ತಿದೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹತ್ತು ಹಲವು ಮನರಂಜಾನೆ ಆಟಗಳು, ವಸ್ತುಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.