Channapatna Politics: ಚನ್ನಪಟ್ಟಣ ಈಗ ಒಕ್ಕಲಿಗ ದಿಗ್ಗಜರ ರಣ ಕಣ
Team Udayavani, Jun 22, 2024, 4:43 PM IST
ರಾಮನಗರ: ಮತ್ತೂಮ್ಮೆ ಒಕ್ಕಲಿಗ ದಿಗ್ಗಜರ ಕಾದಾಟಕ್ಕೆ ಚನ್ನಪಟ್ಟಣ ಭೂಮಿಕೆ ಯಾಗಲಿದೆಯಾ…? 22 ವರ್ಷ ಬಳಿಕ ಮತ್ತೆ ಬೊಂಬೆನಾಡಿನ ನೆಲದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ರಾಜಕೀಯ ಕಾಳಗ ಅನುರಣಿಸಲಿದೆಯಾ..? ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಸಂಘರ್ಷಕ್ಕೆ ಅಖಾಡ ಅಣಿಗೊಂಡಿದೆ.
ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಎಚ್‌ಡಿಕೆ, ಈ ಕ್ಷೇತ್ರವನ್ನು ಕಬ್ಜಾ ಮಾಡಿಕೊಂಡು ಜಿಲ್ಲೆಯಿಂದ ಎಚ್. ಡಿ.ದೇವೇಗೌಡರ ಕುಟುಂಬವನ್ನು ಹೊರಗಿಡಬೇಕು ಎಂದು ಡಿ.ಕೆ.ಶಿವಕುಮಾರ್ ಪಣತೊಟ್ಟಿದ್ದು, ಚನ್ನಪಟ್ಟಣದಲ್ಲಿ ಮತ್ತೂಮ್ಮೆ ಒಕ್ಕಲಿಗ ನಾಯಕರಿಬ್ಬರು ಕಾದಾಟಕ್ಕಿಳಿದಿದ್ದಾರೆ. ಬುಧವಾರ ಚನ್ನಪಟ್ಟಣಕ್ಕೆ ಎಂಟ್ರಿ ನೀಡಿದ ಡಿಕೆಶಿ ಟೆಂಪಲ್ ರನ್ ಮಾಡಿ, ಚನ್ನಪಟ್ಟಣವನ್ನು ಬದಲಾಯಿಸುತ್ತೇನೆ ಎಂದು ಹೇಳಿ ಹೋಗಿರುವ ಬೆನ್ನಲ್ಲೇ ಈ ಹಿಂದೆ ಕನಕಪುರ ಲೋಕಸಭಾ ಉಪಚುನಾವಣೆ, ನೀರಾ ಚಳವಳಿಯ ಸಮಯದ ರಾಜಕೀಯ ಜಿದ್ದಾಜಿದ್ದಿ ಮತ್ತೆ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
2002ರಲ್ಲಿ ಏನಾಗಿತ್ತು?: ಚನ್ನಪಟ್ಟಣ ತಾಲೂಕಿನಲ್ಲಿ ನೀರಾ ಚಳವಳಿ ಉಚ್ರಾಯಸ್ಥಿತಿ ತಲುಪಿತ್ತು. ಅಂದು ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿ ಗ್ರಾಮದಲ್ಲಿ ನೀರಾ ಹೋರಾಟಗಾರರ ಮೇಲೆ ಗೋಲಿಬಾರ್ ನಡೆದು ಇಬ್ಬರು ಸಾವಿಗೀಡಾಗಿದ್ದರು. ಇದನ್ನು ಖಂಡಿಸಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಪಾದಯಾತ್ರೆ ನಡೆಸಿದರು. ಬಳಿಕ ಸಂಸದ ಎಂ.ವಿ. ಚಂದ್ರಶೇಖರ್ ಮೂರ್ತಿ ನಿಧನದಿಂದ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾ ಯಿತು. ಈ ಚುನಾವಣೆಯಲ್ಲಿ ಎಚ್.ಡಿ.ದೇವೇ ಗೌಡರು- ಡಿ.ಕೆ.ಶಿವಕುಮಾರ್ ಮುಖಾಮುಖಿಯಾದರು. ಈ ಚುನಾವಣೆ ಅಕ್ಷರಶಃ ಜೆಡಿಎಸ್ -ಕಾಂಗ್ರೆಸ್ ಕಾರ್ಯಕರ್ತರ ನಡುವಿನ ರಣಕಣವಾಗಿತ್ತು. ಇದೀಗ ಮತ್ತೆ ಚನ್ನಪಟ್ಟಣದ ಭೂಮಿಯಲ್ಲಿ ಅಂತಹುದೇ ಅಖಾಡಕ್ಕೆ ಸಮಯ ಹುರಿಗೊಂಡಿದೆ.
ಇಬ್ಬರಿಗೂ ಅಸ್ತಿತ್ವದ ಪ್ರಶ್ನೆ: ಚನ್ನಪಟ್ಟಣದ ಉಪ ಚುನಾವಣೆ ಗೆಲ್ಲುವುದು ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ಕುಮಾರಸ್ವಾಮಿ ತಾವು ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ತನ್ನ ರಾಜಕೀಯ ವೈರಿಗೆ ಬಿಟ್ಟುಕೊಡುವುದಿಲ್ಲ. ಇನ್ನು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ವನ್ನು ಬಿಟ್ಟುಕೊಟ್ಟರೆ ತಮ್ಮ ಹಿನ್ನಡೆಯನ್ನು ತಾವೇ ಘೋಷಿಸಿಕೊಂಡಂತೆ. ಹೀಗಾಗಿ ಇಬ್ಬರು ನಾಯಕರ ಕಾದಾಟಕ್ಕೆ ಚನ್ನಪಟ್ಟಣ ರಣಾಂಗಣವಾಗಿದೆ.
ಇಬ್ಬರ ಸಂರ್ಘಕ್ಕೆ ಸುದೀರ್ಘ ಇತಿಹಾಸ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಸಂಘರ್ಷಕ್ಕೆ 40 ವರ್ಷಗಳ ಇತಿಹಾಸವಿದೆ. 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಮುಖಾಮುಖಿಯಾಗಿದ್ದರು. 1999ರಲ್ಲಿ ಡಿಕೆಶಿ- ಎಚ್‌ಡಿಕೆ ಸಾತನೂರಿನಲ್ಲಿ ಮುಖಾಮುಖೀಯಾಗಿದ್ದರು. ಇನ್ನು 2002 ಕನಕಪುರ ಲೋಕಸಭಾ ಉಪಚುನಾವಣೆ ಎಚ್ ಡಿಡಿ-ಡಿಕೆಶಿ ನಡುವಿನ ಸಂಘರ್ಷವಾಗಿತ್ತು. 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾತನೂರಿ ನಲ್ಲಿ ನಡೆಸಿದ ಕಾರ್ಯಕ್ರಮ ಇವರಿಬ್ಬರ ನಡುವಿನ ರಾಜಕೀಯ ಕಾದಾಟಕ್ಕೆ ಅಗ್ನಿಕುಂಡವಾಗಿತ್ತು. ಇದೀಗ ಮತ್ತೆ ಚನ್ನಪಟ್ಟಣದಲ್ಲಿ ಅದು ಮುಂದುವರಿದಿದೆ.
ಡಿಕೆಶಿ ಚಕ್ರವ್ಯೂಹ ಭೇದಿಸಲು ಸೈನಿಕನೇ ಕಮ್ಯಾಂಡರ್: ಚನ್ನಪಟ್ಟಣ ಕೋಟೆಗೆ ಲಗ್ಗೆ ಇಡುವ ಮೂಲಕ ಡಿ.ಕೆ.ಶಿವ ಕುಮಾರ್ ಒಕ್ಕಲಿಗರ ಕೋಟೆ ಯಲ್ಲಿ ಎಚ್.ಡಿ.ಕುಮಾರಸ್ವಾಮಿ ಯನ್ನು ಮಣಿಸಲು ಚಕ್ರವ್ಯೂಹ ಹಣೆದಿದ್ದಾರೆ. ಚನ್ನಪಟ್ಟಣವನ್ನು ಕಳೆದುಕೊಂಡರೆ ಬಿಜೆಪಿ ರಾಷ್ಟ್ರನಾಯಕರಲ್ಲಿ ಕುಮಾರಸ್ವಾಮಿ ಬಗ್ಗೆ ಮೂಡಿರುವ ಒಕ್ಕಲಿಗರ ಅಧಿನಾಯಕ ಎಂಬ ಇಮೇಜ್‌ಗೆ ಧಕ್ಕೆ ಬರುತ್ತದೆ. ಮಾಜಿ ಪ್ರಧಾನಿಯ ಮಗ, ಅವರ ಉತ್ತರಾಧಿಕಾರಿ ಎಂದು ದೆಹಲಿಯಲ್ಲಿ ಬಿಂಬಿಸಿಕೊಂಡಿರುವ ಕುಮಾರಸ್ವಾಮಿ, ಈ ಇಮೇಜ್ ಕಳೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ, ಚನ್ನಪಟ್ಟಣದಲ್ಲಿ ತನ್ನೆಲ್ಲ ಶಕ್ತಿಯನ್ನು ಕ್ರೋಢಿಕರಿಸುವ ಜತೆಗೆ ಗೆಲ್ಲಿಸಬಲ್ಲ ಜಾಕಿಯನ್ನು ಕಣಕ್ಕಿಳಿಸಿ ಡಿಕೆಶಿ ರಚಿಸಿದ ಚಕ್ರವ್ಯೂಹವನ್ನು ಯಶಸ್ವಿಯಾಗಿ ಭೇದಿಸಬಲ್ಲ ಸೇನಾನಿ ಎಚ್‌ಡಿಕೆಗೆ ಅಗತ್ಯವಿದೆ. ಚನ್ನಪಟ್ಟಣ ಅಖಾಡಕ್ಕೆ ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದು ಪ್ರಯಾಸದ ಕೆಲಸ. ಇನ್ನು ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಅವರನ್ನು ಕಣಕ್ಕಿಳಿಸಿದರೆ ಡಿಕೆಎಸ್ ಸಹೋದರರ ಹಣದ ಅಬ್ಬರದ ಮುಂದೆ ಈಜಿ ದಡಸೇರುವುದು ಸುಲಭವಲ್ಲ. ಇದಕ್ಕಾಗಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ಇರಾದೆ ದಳಪತಿಗಳದ್ದಾಗಿದೆ. ಯೋಗೇಶ್ವರ್‌ಗೆ ನೀರಾವರಿ ಯೋಜನೆ ಹಾಗೂ ಇನ್ನಿತರ ಕೆಲಸಗಳ ಮೂಲಕ ಚನ್ನಪಟ್ಟಣದಲ್ಲಿ ತಮ್ಮದೇ ಆದ ಮತಬ್ಯಾಂಕ್ ಹೊಂದಿದ್ದಾರೆ. ಇದರೊಂದಿಗೆ ಜೆಡಿಎಸ್ ಮತಗಳು ಸೇರಿದರೆ ಅನುಕೂಲವಾಗುತ್ತದೆ ಎಂಬುದು ದಳಪತಿಗಳ ಲೆಕ್ಕಾಚಾರ. ಇನ್ನು ಅಲ್ಪಸಂಖ್ಯಾತ ಮತಗಳು ಬಿಜೆಪಿ ಚಿಹ್ನೆಗೆ ಬರುವುದಿಲ್ಲ ಎಂಬ ಕಾರಣಕ್ಕೆ ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯ ಮೇಲೆ ನಿಲ್ಲಿಸುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಜೆಡಿಎಸ್ ಕೋಟೆ ಕಾಯುವ ಕೆಲಸವನ್ನು ಸೈನಿಕನಿಗೆ ವಹಿಸಲು ಸ್ಥಳೀಯ ಜೆಡಿಎಸ್ ಪಾಳಯದಲ್ಲೂ ಸಹಮತ ವ್ಯಕ್ತವಾಗುತ್ತಿದೆ.
ಕೈ ಪಾಳಯಕ್ಕೆ ಬಂಡೆಯೇ ಬಲ: 2009ರಲ್ಲಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಬಳಿಕ ಚನ್ನಪಟ್ಟಣದಲ್ಲಿ ಸಮರ್ಥ ನಾಯಕನನ್ನು ಬೆಳೆಸುವಲ್ಲಿ ಡಿ.ಕೆ. ಶಿವಕುಮಾರ್ ವಿಫಲಗೊಂಡಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್ ಬಿಟ್ಟುಹೋದ ಬಳಿಕ ನಡೆದಿರುವ 3 ಸಾರ್ವತ್ರಿಕ ಚುನಾವಣೆ, ಎರಡು ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಠೇವಣಿ ಉಳಿಸಿಕೊಂಡಿಲ್ಲ. ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬ ನಾಯ ಕನನ್ನು ಕಣಕ್ಕಿಳಿಸುತ್ತಾ ಬಂದಿರುವ ಪರಿಣಾಮ ಚನ್ನಪಟ್ಟಣದಲ್ಲಿ ಯಾರೂ ಸಂಘಟನಾತ್ಮಕವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಸ್ಥಳೀಯವಾಗಿ ನಾಯಕತ್ವ ಬೆಳೆಸುವಲ್ಲಿ ಡಿ.ಕೆ.ಶಿವಕುಮಾರ್ ವಿಫಲವಾಗಿದ್ದಾರೆ. ಸದ್ಯಕ್ಕೆ ಡಿ.ಕೆ.ಸುರೇಶ್ ಕಣಕ್ಕಿಳಿಸಿ ವ್ಯತ್ಯಾಸವಾದರೆ ಅದು ಬೇರೆಯ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಚನ್ನಪಟ್ಟಣದ ಮಾಜಿ ಸಚಿವ ವಿ.ವೆಂಕಟಪ್ಪ ಅವರ ಮೊಮ್ಮಗ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ ಅವರನ್ನು ಅಭ್ಯರ್ಥಿಯಾಗಿಸಲು ಚಿಂತನೆ ನಡೆದಿ ದೆಯಾದರೂ, ಮೈತ್ರಿ ಪಡೆಯ ನಡುವೆ ಅವರನ್ನು ಕಣಕ್ಕಿಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕಾಂಗ್ರೆಸ್ ಪಾಳಯಕ್ಕೆ ಬಲ ಎಂದು ಹೇಳಲಾಗುತ್ತಿದೆ.
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.