ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ಬದ್ಧ
Team Udayavani, Aug 9, 2020, 10:42 AM IST
ರಾಮನಗರ: ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಹಿಂದೂಸ್ಥಾನ ಕೋಕಕೋಲಾ ಬೇವರೇಜಸ್ ಘಟಕದಲ್ಲಿ ನೂತನ ತಂತ್ರಜ್ಞಾನದೊಂದಿಗೆ ಹಣ್ಣಿನರಸವನ್ನು ಟೆಟ್ರಾ ಪ್ಯಾಕ್ ಮಾಡುವ ವ್ಯವಸ್ಥೆಗೆ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಲಾಕ್ ಡೌನ್ ನಂತರ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸರ್ಕಾರ ಬದ್ಧ. ಕೋವಿಡ್ 19 ಸೋಂಕು ಹರಡದಂತೆ ವಿಧಿಸಿದ್ದ ಲಾಕ್‌ಡೌನ್ ತೆರವಿನ ನಂತರ ಉದ್ಯಮಗಳು ಮರುಚಾಲನೆಗೆ ಸಿದ್ಧವಾಗಿದೆ. ಕೋಕಕೋಲ ಸ್ಥಾಪಿಸಿರುವ ನೂತನ ಘಟಕ ಇದಕ್ಕೆ ಉದಾಹರಣೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರೇರೇಪಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಸರ್ಕಾರದಿಂದ ಸಹಕಾರ: ಹಿಂದೂಸ್ಥಾನ್ ಕೋಕಕೋಲ ಬೇವರೇಜಸ್‌ನ (ಹೆಚ್‌ಸಿಸಿಬಿ) ಮಾರುಕಟ್ಟೆ ಕಾರ್ಯಾಚರಣೆಯ ಕಾರ್ಯಕಾರಿ ನಿರ್ದೇಶಕ ದಿನೇಶ್ ಜಾಧವ್ ಮಾತನಾಡಿ, ದ್ರವ್ಯ ರೂಪದ ಆಹಾರ ಪದಾರ್ಥಗಳು ಸಹ ಅಗತ್ಯ ವಸ್ತುಗಳಾಗಿವೆ. ಈ ವಸ್ತುಗಳನ್ನು ಗ್ರಾಹಕರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಸರ್ಕಾರ ಮಾರ್ಗದರ್ಶನ ನೀಡುತ್ತಿದೆ. ತಮ್ಮ ಕಾರ್ಖಾನೆಗಳನ್ನು ಪುನಃ ಆರಂಭಿಸಲು ಸರ್ಕಾರ ಸಹಕಾರ ನೀಡುತ್ತಿದೆ. ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ವೈಯಕ್ತಿಕ ಮತ್ತು ಸಮುದಾದಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳ ಬೇಕು ಎಂದರು.
ಎಚ್‌ಸಿಸಿಬಿ ಸರಬರಾಜು ಸರಪಳಿ ವಿಭಾಗದ ಕಾರ್ಯಕಾರಿ ನಿರ್ದೇಶಕ ಅಲೋಕ್ ಶರ್ಮಾ ಮಾತನಾಡಿ, ರಾಜ್ಯ ಸರ್ಕಾರ ಜನರ ಜೀವನ ಮತ್ತು ಜೀವನೋಪಾಯಗಳನ್ನು ನಿರ್ವಹಿಸುವ ವಿಚಾರದಲ್ಲಿ ಸರ್ಕಾರ ಬದ್ಧತೆ ಪ್ರದರ್ಶಿಸಿದೆ. ಸಚಿವರು ಚಾಲನೆ ನೀಡಿರುವ ಹೊಸ ವ್ಯವಸ್ಥೆಯಿಂದಾಗಿ ಜನಪ್ರಿಯ ಹಣ್ಣಿನ ರಸಗಳನ್ನು ಅಗ್ಗದ ದರದಲ್ಲಿ ಟೆಟ್ರಾಪ್ಯಾಕ್‌ನಲ್ಲಿ ನೀಡುವುದು ಸಾಧ್ಯವಾಗಲಿದೆ ಎಂದರು.
ನೂತನ ಘಟಕದ ಉದ್ಘಾಟನೆ ವೇಳೆ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್, ಬಿಜೆಪಿ ಪ್ರಮುಖರಾದ ಎಂ.ರುದ್ರೇಶ್, ವರದರಾಜ ಗೌಡ, ಎಚ್.ಎಸ್.ಮುರುಳೀಧರ್, ಬಿಡದಿ ಪುರಸಭೆ ಮಾಜಿ ಅಧ್ಯಕ್ಷೆ, ಕೋಕಕೋಲದ ಹಿರಿಯ ಅಧಿಕಾರಿಗಳಾದ ಮೋಹನ್ ಸಿಂಗ್, ಚಂದ್ರಶೇಖರ್, ಭೀಮಣಪ್ಪ ಮಂತಲೆ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.