ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಲಸಿಕೆ ಪಡೆಯಲು ನಿರ್ಲಕ್ಷ್ಯ
Team Udayavani, Apr 30, 2022, 5:13 PM IST
ರಾಮನಗರ: ಕೋವಿಡ್ ಸೋಂಕಿನ ಪ್ರಮಾಣ ಕುಗ್ಗುತ್ತಿ ದ್ದಂತೆ ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಪದೇ ಪದೆ ಕೈಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಸಾಮಾನ್ಯರು ಮರೆತಿದ್ದಾರೆ. ಲಸಿಕೆ ಪಡೆಯಲು ಸಹ ಸಾಮಾನ್ಯರು ನಿರ್ಲಕ್ಷ್ಯವಹಿ ಸಲಾರಂಭಿಸಿದ್ದಾರೆ!
ವಿಶೇಷವಾಗಿ ಮುನ್ನೆಚ್ಚರಿಕೆಯ ಡೋಸ್ (3ನೇ ಡೋಸ್) ಪಡೆಯಲು ನಿರ್ಲಕ್ಷ್ಯವಹಿಸಿರುವುದು ಅಂಕಿ-ಅಂಶಗಳು ದೃಢಪಡಿಸಿವೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ವೇಳೆ ಲಸಿಕೆ ಪಡೆಯಲು ನೂಕು ನುಗ್ಗಲು ಎದುರಾಗಿತ್ತು. ಅನ್ಯ ಜಿಲ್ಲೆಗಳಿಂದಲೂ ಜನತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಬಂದು ಲಸಿಕೆ ಪಡೆದಿದ್ದರು. 3ನೇ ಅಲೆಯ ವೇಳೆ 2ನೇ ಡೋಸ್ ಪಡೆ ಯಲು ನಾಗರಿಕರು ಸಹಜ ಆಸಕ್ತಿ ತೋರಿಸಿದ್ದರು. 3ನೇ ಅಲೆಯ ಪ್ರಭಾವ ಕುಗ್ಗುತ್ತಿದ್ದಂತೆ ಲಸಿಕೆ ಪಡೆಯುವ ಆಸಕ್ತಿ ನಾಗರಿಕರಲ್ಲಿ ಕಡಿಮೆಯಾಗಿದೆ.
ಮೂರನೇ ಡೋಸ್ ಪ್ರಗತಿ ಶೇ.18 ಮಾತ್ರ!: ಜಿಲ್ಲೆ ಯಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯದವರು ಆಸಕ್ತಿಯಿಂದ ಲಸಿಕೆ ಪಡೆಯುತ್ತಿದ್ದಾರೆ. 2ನೇ ಡೋಸ್ ಅನ್ನು ಬಲವಂತದಿಂದ ಕೊಡಬೇಕಾಗಿದೆ. ಮುನ್ನೆಚ್ಚರಿಕೆಯ ಡೋಸ್ (3ನೇ ಡೋಸ್) ಪಡೆ ಯಲು ತೀರಾ ನಿರ್ಲಕ್ಷ್ಯವಹಿಸಿರುವುದು ಅಂಕಿ-ಅಂಶಗಳು ಹೇಳುತ್ತಿವೆ.
ಜಿಲ್ಲೆಯಲ್ಲಿ 60ಕ್ಕಿಂತ ಹೆಚ್ಚು ವಯಸ್ಸಾದವರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಒಟ್ಟು 1 ಲಕ್ಷ 36 ಸಾವಿರದ 971 ಮಂದಿ ಇದ್ದಾರೆ. ಇವರು ಮುನ್ನೆಚ್ಚರಿಕೆಯ ಡೋಸ್ (ಪ್ರಿಕಾಷನ್ ಡೋಸ್ ಅಥವಾ 3ನೇ ಡೋಸ್) ಪಡೆ ಯಲು ಅರ್ಹರಾಗಿದ್ದಾರೆ. ಆದರೆ, ಇಲ್ಲಿಯವರೆಗೆ ಮುನ್ನೆಚ್ಚರಿಕೆಯ ಡೋಸ್ ಪಡೆದಿರುವವರ ಸಂಖ್ಯೆ (ಏ.28ಕ್ಕೆ ಅನ್ವಯಿಸುವಂತೆ) ಕೇವಲ 24996 ಮಂದಿ. ಅಂದರೆ ಶೇ.18ರಷ್ಟು ಮಾತ್ರ ಪ್ರಗತಿಯಾಗಿದೆ.
ಮೊದಲ ಡೋಸ್ ಸಾಧನೆ ಶೇ.101: 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್‌ನ ಪ್ರಗತಿ ಶೇ.101 ರಷ್ಟಾಗಿದೆ. 2ನೇ ಡೋಸ್ ಪ್ರಗತಿ ಶೇ.96ರಷ್ಟಾಗಿದೆ. 15ರಿಂದ 17 ವರ್ಷದವರಿಗೆ ಲಸಿಕೆ ಕೊಡಲು ಜನವರಿ ಯಲ್ಲಿ ಆರಂಭವಾಗಿದೆ. ಜಿಲ್ಲೆಯಲ್ಲಿ ಈ ವಯೋಮಾನ ದವರ 48700 ಗುರಿ ಇದೆ. ಈ ಪೈಕಿ ಶೇ.76ರಷ್ಟು ಸಾಧ ನೆಯಾಗಿದೆ. 15ರಿಂದ 17 ವರ್ಷದವರಿಗೆ 2ನೇ ಡೋಸ್ ಗುರಿ 35816 ಇದ್ದು, ಶೇ.85ರಷ್ಟು ಗುರಿ ಸಾಧನೆಯಾಗಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್ ತಿಂಗಳಿನಿಂದ 12ರಿಂದ 14 ವಯೋಮಾನದಲ್ಲಿ ಮಕ್ಕಳಿಗೂ ಲಸಿಕೆ ಕೊಡುವುದು ಆರಂಭವಾಗಿದೆ. ಈ ವಯೋಮಾನದವರ ಜಿಲ್ಲೆಯಲ್ಲಿ 30487 ಗುರಿ ಇದೆ. ಈ ಪೈಕಿ ಇಲ್ಲಿಯವರೆಗೆ 23755 ಮಂದಿ ಪಡೆದುಕೊಂಡಿದ್ದು ಶೇ.78ರಷ್ಟು ಸಾಧನೆಯಾಗಿದೆ.
ಲಸಿಕಾ ಶಿಬಿರ ಆಯೋಜಿಸಿ: ಕೋವಿಡ್ ನಿಯಂತ್ರಿಸಲು ಸರ್ಕಾರ ಲಸಿಕಾ ಅಭಿಯಾನವನ್ನು ಹಮ್ಮಿ ಕೊಂಡಿತ್ತು. ಪ್ರತಿ ಬುಧವಾರ ಜಿಲ್ಲಾದ್ಯಂತ ವಾರ್ಡ್, ಗ್ರಾಮ ಹೀಗೆ ಶಿಬಿರಗಳನ್ನು ಆಯೋಜಿಸಿ, ನಾಗರಿಕರ ಮನೆಗಳ ಬಳಿಯಲ್ಲೇ ಲಸಿಕೆಯನ್ನು ಕೊಡಲಾಗುತ್ತಿತ್ತು. ಇದೀಗ ಈ ಶಿಬಿರಗಳು ಆಯೋಜನೆಯಾಗುತ್ತಿಲ್ಲ. ವಿಶೇಷವಾಗಿ ಮುನ್ನೆಚ್ಚರಿಕೆ ಡೋಸ್ ವಿಚಾರದಲ್ಲಿ ಈ ರೀತಿಯ ಶಿಬಿರಗಳನ್ನು ಆಯೋಜಿಸುವಂತೆ ನಾಗರಿಕರು ಜಿಲ್ಲಾಡಳಿತಕ್ಕೆ ಸಲಹೆ ಕೊಟ್ಟಿದ್ದಾರೆ.
4ನೇ ಅಲೆ ಬಗ್ಗೆ ಎಚ್ಚರಿಕೆವಿರಲಿ: ಕೋವಿಡ್ ಸೋಂಕಿನ 4ನೇ ಅಲೆಯ ಭೀತಿ ಎದುರಾಗಿದೆ. ಕೋವಿಡ್ ಸೋಂಕು ಹೆಚ್ಚು ಪ್ರಭಾವ ಬೀರದಿರಲು ಲಸಿಕೆ ಪಡೆ ಯುವುದೊಂದೇ ದಾರಿ ಎಂದು ತಜ್ಞರು ಹೇಳುತ್ತಿದ್ದಾರೆ. ಕೋವಿಡ್ ವೈರಾಣು ತನ್ನ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಜನ ಭ್ರಮೆಯಲ್ಲಿದ್ದಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೋವಿಡ್ ವೈರಾಣುವಿನ ಶಕ್ತಿ ಕುಗ್ಗಿರಬಹುದು. ಆದರೆ, ವೈರಾಣು ಸಂಪೂರ್ಣ ನಾಶವಾಗಿಲ್ಲ. ಹೀಗಾಗಿ ಅಪಾಯ ಎದುರಾಗುವ ಎಲ್ಲ ಸಾಧ್ಯತೆಗಳಿವೆ. ಜನ ಸಾಮಾನ್ಯರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾ ಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳುಮನವಿ ಮಾಡಿದ್ಧಾರೆ.
ವೃದ್ಧರಿಗೆ ಮನೆಯಲ್ಲೇ ಲಸಿಕೆ ಕೊಡಿ : 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್ ಕೊಡುತ್ತಿದೆ. ಆದರೆ, ಈ ಲಸಿಕೆ ಪಡೆಯಲು ವೃದ್ಧರಿಗೆ ಸಮಸ್ಯೆಗಳಿವೆ. ಬಿಸಿಲ ಬೇಗೆಯನ್ನು ತಡೆದುಕೊಂಡು ಲಸಿಕಾ ಕೇಂದ್ರಗಳಿಗೆ ಹೋಗಲು ಅವರಲ್ಲಿ ನಿತ್ರಾಣದ ಸಮಸ್ಯೆಗಳಾಗಬಹುದು. ಹೀಗಾಗಿಯೇ 60 ವರ್ಷ ಮೇಲ್ಪಟ್ಟ ನಾಗರಿಕರು ಲಸಿಕಾ ಕೇಂದ್ರಗಳಿಗೆ ಬರಲು ಹಿಂಜರಿಯುತ್ತಿರಬಹುದು ಎಂಬ ಅಭಿಪ್ರಾಯಗಳು ನಾಗರಿಕ ವಲಯ ದಲ್ಲಿ ವ್ಯಕ್ತವಾಗಿದೆ. 70 ವರ್ಷ ಮೇಲ್ಪಟ್ಟ ನಾಗರಿಕರಿಗೆ ಅವರ ಮನೆಯಲ್ಲೇ ಲಸಿಕೆ ಕೊಡುವ ವ್ಯವಸ್ಥೆ ಜಾರಿಯಾಗಲಿ ಎಂದು ಹಲವು ಕುಟುಂಬಗಳು ಜಿಲ್ಲಾಡಳಿತವನ್ನು ಆಗ್ರಹಿಸಿವೆ.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆಗೆ ಕೊರತೆಯಿಲ್ಲ. ಸುಮಾರು 60 ಸಾವಿರ ಡೋಸ್‌ಗಳಿವೆ. ಅರ್ಹರಿರುವ ನಾಗರಿಕರು. ಮುನ್ನೆಚ್ಚರಿಕೆ ಡೋಸ್ ಪಡೆಯುವುದು ಅನಿವಾರ್ಯವಾಗಿದೆ. – ಡಾ.ಪದ್ಮ, ಆರ್‌ಸಿಎಚ್ ಅಧಿಕಾರಿ
ಕೋವಿಡ್ ಸೋಂಕು ನಿರ್ಮೂಲನೆಯಾಗಿಲ್ಲ. ನಾಗರಿಕರು ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಪದೇ ಪದೇ ಕೈಗಳನ್ನು ಸ್ವತ್ಛಗೊಳಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಪೌಷ್ಟಿಕ ಆಹಾರ ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸೋಂಕು ಲಕ್ಷಣ ಗಳು ಕಾಣಿಸಿಕೊಂಡಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ನಿರ್ಲಕ್ಷ್ಯ ಬೇಡ. ● ಬಿ.ಎಸ್.ಗಂಗಾಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ
ಕೋವಿಡ್ ಲಸಿಕೆ 2ನೇ ಡೋಸ್ ಪಡೆದ 9 ತಿಂಗಳ ನಂತರ ಮುನ್ನೆಚ್ಚರಿಕೆ ಡೋಸ್ ಅನ್ನು ತಪ್ಪದೇ ಪಡೆದುಕೊಳ್ಳುವುದು. ಕೋವಿಡ್ ಸೋಂಕು ಪಾಸಿಟಿವ್ ಬಂದು 3 ತಿಂಗಳ ನಂತರ ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು. ರಾಮನಗರ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಲಸಿಕೆ ಪಡೆಯಲು ಇನ್ನು 1,36,6674 ಫಲಾನುಭವಿಗಳು ಬಾಕಿಯಿದ್ದು, ಎಲ್ಲಾ ಅರ್ಹ ಫಲಾನುಭವಿಗಳು ಆದಷ್ಟು ಬೇಗ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಳ್ಳಬೇಕು. – ಡಾ.ಅವಿನಾಶ್ ಮನೆನ್ ರಾಜೇಂದ್ರನ್, ಜಿಲ್ಲಾಧಿಕಾರಿ
-ಬಿ.ವಿ. ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.