ಮಳೆಗೆ ಕೊಯ್ಲಿಗೆ ಬಂದ ರಾಗಿ ಬೆಳೆ ಹಾನಿ; ಉತ್ತಮ ಫಸಲಿನ ನಿರೀಕೆಯಲ್ಲಿದ್ದ ರೈತರಿಗೆ ಆತಂಕ
ಅಕಾಲಿಕ ಮಳೆ ಬೀಳುತ್ತಿರುವುದರಿಂದ ಬೆಳೆನಷ್ಟದ ಆತಂಕದಲ್ಲಿ ರೈತರಿದ್ದಾರೆ.
Team Udayavani, Nov 25, 2022, 6:48 PM IST
ಮಾಗಡಿ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಬಹುತೇಕ ರಾಗಿ ಬೆಳೆ ಹಸಿರಿನಿಂದ ಕೂಡಿದೆ. ಮತ್ತೂಂದೆಡೆ ಕೊಯ್ಲಿಗೆ ಬಂದ ರಾಗಿ ಬೆಳೆ ಹಾನಿಯಾಗುವ ಆತಂಕದಲ್ಲಿ ರೈತರನ್ನು ಕಾಡುತ್ತಿದೆ. ನಾಡಪ್ರಭು ಕೆಂಪೇಗೌಡ ತವರೂರು ಮಾಗಡಿಗೆ ಅರೆ ಮಲೆನಾಡಿನಂತೆ ಜೀವ ಕಳೆ ಬಂದಿದೆ. ಹೀಗಾಗಿ ರೈತರಲ್ಲಿ ಒಂದೆಡೆ ಮಂದಹಾಸ, ಮತ್ತೂಂದೆಡೆ ಆತಂಕ ಮೂಡಿದೆ.
ಮಾಗಡಿ ತಾಲೂಕಿನ ಕುದೂರು, ತಿಪ್ಪಸಂದ್ರ, ಸೋಲೂರು, ಮಾಡಬಾಳ್, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಮಾಡಿದ್ದ ರಾಗಿ, ಭತ್ತ, ತೊಗರಿ, ಅಲಸಂದೆ, ,ಅವರೆ ಕಾಯಿ ಗಿಡಗಳು ಹಸಿರಿನಿಂದ ಕೂಡಿದ್ದು, ನಳನಳಿಸುತ್ತಿವೆ. ಉತ್ತರಾ ಮಳೆಗೆ ರಾಗಿ ಹೊಲದ ಪೈರು ಮುಸುಕು ಹೊಡೆಯಲು ಸಕಾಲವಾಗಿದೆ. ಇದರಿಂದಾಗಿ ಉತ್ತಮವಾಗಿ ಮುಸುಕು ಬರಲಿದೆ.
ಮುಸುಕು ಹೊಡೆದ ಹದಿನೈದು ದಿನಗಳಲ್ಲಿ ರಾಗಿ ಕಟ್ಟಲು ಪ್ರಾರಂಭಗೊಳ್ಳಲಿದೆ. ಆಗಾಗ್ಗೆ ಹದವಾಗಿ ಮಳೆ ಬಿದ್ದರೆ ಉತ್ತಮ ಫಸಲ ನಿರೀಕ್ಷಿಸಬಹುದು ಎಂಬ ನಂಬಿಕೆ ರೈತರಲ್ಲಿದೆ. ಅದರಲ್ಲೂ ಪ್ರಮುಖ ರಾಗಿ ಬೆಳೆ ಹೊಲದಲ್ಲಿ ಅವರೆ, ಅಲಸಂದೆ, ಜೋಳ, ಸಾಸಿವೆ, ತೊಗರಿ ಇವುಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ಸಾಮಾನ್ಯವಾಗಿದೆ.
ರೈತರಿಗೆ ಬೆಳೆ ನಷ್ಟದ ಆತಂಕ: ಹದವಾಗಿ ಮಳೆಯಾಗುತ್ತಿರುವುದರಿಂದ ಬದುಗಳಲ್ಲಿ ಹಸಿರು ಮೇವು ಸಹ ಸೊಂಪಾಗಿ ಬರಲಾರಂಭಿಸಿದೆ. ರೈತರು ತಮ್ಮ ರಾಸುಗಳಿಗೆ ಹಸಿರು ಮೇವು ಕೊಡುತ್ತಿದ್ದಾರೆ. ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಸಹ ಹೆಚ್ಚಾಗುತ್ತಿದೆ. ಆದರೂ, ಕೆರೆಕಟ್ಟೆ ತುಂಬುವಂತ ಮಳೆಯಾಗಿಲ್ಲ ಎಂಬ ಮಾತು ರೈತರಲ್ಲಿ ಕೇಳಿಬರುತ್ತಿದೆ.
ಸದ್ಯಕ್ಕೆ ನೀರು, ಮೇವಿಗೆ ಕೊರತೆಯಿಲ್ಲ. ಹೀಗೆ ಹದವಾಗಿ ಮಳೆಯಾದರೆ ಶೇ.70ರಿಂದ 80ರಷ್ಟು ರಾಗಿ ಬೆಳೆ ರೈತರ ಕೈಸೇರಲಿದೆ ಎಂದು ನಿರೀಕ್ಷಿಸಲಾಗಿದೆ. ಅಕಾಲಿಕ ಮಳೆ ಬೀಳುತ್ತಿರುವುದರಿಂದ ಬೆಳೆನಷ್ಟದ ಆತಂಕದಲ್ಲಿ ರೈತರಿದ್ದಾರೆ.
ಬೆಳೆಗೆ ಕೀಟನಾಶಕ ಸಿಂಪಡಣೆ: ರಾಗಿ ಹೊಲದಲ್ಲಿ ಸೊಂಪಾಗಿ ಬೆಳೆ ಬಂದಿದ್ದು, ಜೊತೆಗೆ ಹಸಿರು ಹುಲ್ಲು ಸಹ ಚೆನ್ನಾಗಿ ಬೆಳೆದು ನಿಂತಿರುವುದರಿಂದ ಕೀಟಬಾಧೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಇದರಿಂದಾಗಿ ಕೃಷಿ ಇಲಾಖೆ ಸೂಚಿಸುವ ಕೀಟನಾಶಕಗಳನ್ನು ಸಿಂಪಡಿಸಲು ರೈತರು ಮುಂದಾಗಿದ್ದಾರೆ.
ಉತ್ತಮ ಫಸಲು ಬಂದಿದೆ. ಈಗ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಈಗಾಗಲೇ ಮೂರು ಹಂತದಲ್ಲಿ ರಾಗಿ ಬೆಳೆ ಬಂದಿದೆ. ಮುಂಚಿತವಾಗಿ ಬಿತ್ತನೆಯಾಗಿರುವ ರಾಗಿ ಬೆಳೆ ಈಗಾಗಲೇ ತೆನೆ ಒಣಗಿ ಕೊಯ್ಲಿಗೆ ಬಂದಿದೆ. ಬಹುತೇಕ ರೈತರು ರಾಗಿ ಬೆಳೆಯನ್ನು ಕೊಯ್ದಿದ್ದಾರೆ.
ಬಹುತೇಕ ರೈತರು ತಡವಾಗಿ ಬಿತ್ತನೆ ಮಾಡಿರುವುದರಿಂದ 15ರಿಂದ 25 ದಿನದವರೆಗೆ ಕೊಯ್ಲಿಗೆ ಕಾಯಬಹುದು. ಈಗಾಗಲೆ ಕೊಯ್ದಿರುವ ರಾಗಿ ಬೆಳೆ ನೀರಿನಿಂದ ಒದ್ದೆಯಾಗಿ ಕೊಳೆಯುತ್ತಿದೆ. ಜಮೀನಿನಲ್ಲಿಯೇ ಬೆಳೆಗಳು ಹಾಳಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಯಂತ್ರೋಪಕರಣ ಸೇರಿದಂತೆ ಕಾಲಕಾಲಕ್ಕೆ ಸರ್ಕಾರ ಸಹಾಯಧನದಲ್ಲಿ ಬಿತ್ತನೆ ಬೀಜ, ಔಷಧ, ರಸಗೊಬ್ಬರವನ್ನು ಪೂರೈಕೆ ಮಾಡುತ್ತಿದ್ದೇವೆ. ಆರ್‌ಎಸ್‌ಕೆ ಕೃಷಿ ಅಧಿಕಾರಿಗಳು ಸಹ ರೈತರಿಗೆ ಸರ್ಕಾರದ ವಿವಿಧ ಯೋಜನೆ ಹಾಗೂ ಕೃಷಿ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡುತ್ತಾ ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಈಗಾಗಲೇ ಕೃಷಿ ಪ್ರಶಸ್ತಿ ಪಡೆಯಲು ಬಹುತೇಕ ರೈತರು ಸ್ಪರ್ಧೆಗೆ ಇಳಿದಿದ್ದಾರೆ. ಪೈಪೋಟಿ ಇರುವೆಡೆ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಆದರೆ, ಅಕಾಲಿಕ ಮಳೆಗೆ ರೈತರು ಬೆಳೆದ ರಾಗಿ ಬೆಳೆಗೆ ಒಡೆತ ಬಿದ್ದಿದೆ.
● ಎನ್.ನರಸಿಂಹಯ್ಯ, ಸಹಾಯಕ ಕೃಷಿ ನಿರ್ದೇಶಕ, ಮಾಗಡಿ
ಮಾಗಡಿ ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಅದರಲ್ಲೂ, ಎಲ್ಲಿ ಬೆಳೆಯಾಗದಿದ್ದರೂ ಮಾಗಡಿಯಲ್ಲಿ ಕನಿಷ್ಠ ಪಕ್ಷ ಶೇ.40ರಿಂದ 50ರಷ್ಟು ರಾಗಿ ಬೆಳೆ ರೈತರ ಕೈ ಸೇರಿದೆ ಎಂಬ ನಂಬಿಕೆಯಿದೆ. ಮಾಗಡಿ ರಂಗನ ಮಹಿಮೆಯಿಂದ ಎಂದೂ ರಾಗಿ ಬೆಳೆ ಸಂಪೂರ್ಣವಾಗಿ ನಷ್ಟವಾದ ದಿನಗಳನ್ನು ನಾವು ಕಂಡಿಲ್ಲ. ಅಕಾಲಿಕ ಮಳೆಯಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ನಷ್ಟವಾಗದಂತೆ ಮಾಗಡಿ ರಂಗನಾಥ ಸ್ವಾಮಿ ದೇವರನ್ನು ಪ್ರಾರ್ಥಿಸುತ್ತೇವೆ.
● ಶ್ಯಾನಭೋಗನಹಳ್ಳಿ ರಾಜಣ್ಣ, ಪ್ರಗತಿ ಪರ ರೈತ, ಮಾಗಡಿ
ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.