ಬೊಂಬೆನಗರಿಯಲ್ಲಿ ಮಿತಿಮೀರಿದ ಪ್ಲಾಸ್ಟಿಕ್ ಬಳಕೆ
ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಈಗಲೂ ಲಭ್ಯ ; ಕಂಡು ಕಾಣದಂತಿರುವ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು
Team Udayavani, Oct 20, 2022, 4:57 PM IST
ಚನ್ನಪಟ್ಟಣ: ದೇಶದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧವು ಜುಲೈ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದರೂ, ತಾಲೂಕಿನಲ್ಲಿ ಮಾತ್ರ ರಾಜಾರೋಷವಾಗಿ ಬಳಕೆ ಯಾಗುತ್ತಲೇ ಇದೆ. ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಹಾಗೂ ಬಳಕೆ ಎಲ್ಲವು ನಿಷೇಧವಾಗಿದ್ದರೂ ಕೂಡ ಪಟ್ಟಣದ ಹೂವು, ತರಕಾರಿ, ಕೋಳಿ ಮಾಂಸ-ಮೀನು ಮಾರಾಟ ಮಳಿಗೆ, ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಈಗಲೂ ಚಾಲ್ತಿಯಲ್ಲಿವೆ.
ನಗರಸಭೆ ಅಧ್ಯಕ್ಷರಾದಿಯಾಗಿ ಪೌರಾಯುಕ್ತರು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪರಿಪೂರ್ಣವಾಗಿ ನಿಷೇಧಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬ ಅರೋಪ, ಅಸಮಾಧಾನ, ಆಕ್ರೋಶ ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಟ್ಟಣಾದ್ಯಂತ ದಾಳಿ ಮಾಡಿ ಸಾಕಷ್ಟು ಪ್ಲಾಸ್ಟಿಕ್ ವಶಪಡಿಸಿಕೊಳ್ಳುತ್ತಿದ್ದು, ದಂಡ ಕೂಡ ವಸೂಲಿ ಮಾಡುತ್ತಿದ್ದಾರೆ.
ಅಂಗಡಿಗಳಿಗಷ್ಟೇ ಪ್ಲಾಸ್ಟಿಕ್: ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಾದ ಹಿನ್ನೆಲೆ ಪ್ಲಾಸ್ಟಿಕ್ ವ್ಯಾಪಾರಿಗಳು ಸಾರ್ವಜನಿಕರಿಳಿಗೆ ಪ್ಲಾಸ್ಟಿಕ್ ನಿಷೇಧವಾಗಿದೆ ಎಂದು ಹೇಳಿ, ಕಾಗದದ ಕವರ್ ನೀಡುತ್ತಿದ್ದಾರೆ. ಆದರೆ, ಪಟ್ಟಣದ ಅಂಗಡಿಗಳ ವರ್ತಕರು ಮತ್ತು ಪಟ್ ಬಾತ್ ವ್ಯಾಪಾರಿಗಳಿಗೆ ಮಾತ್ರ ಪ್ಲಾಸ್ಟಿಕ್ ಮಾರಾಟ ಮಾಡುತ್ತಾ ಹಣ ವಸೂಲಿ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ನಡೆಯುತ್ತಿದೆ. ಪ್ಲಾಸ್ಟಿಕ್ ಉತ್ಪಾದನೆ ಯನ್ನೇ ಬಂದ್ ಮಾಡಿದರೆ ಇಲ್ಲಿ ದಾಳಿ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಸದ್ಯ ನಮ್ಮ ವ್ಯಾಪಾರಕ್ಕೆ ನಷ್ಟವಾದರೂ, ಮುಂದಿನ ಪೀಳಿಗೆಗೆ ಒಳ್ಳೆಯದಕ್ಕೆ ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಆದರೆ, ಅದು ಸರಿ ಯಾಗಿ ಆಗುತ್ತಿಲ್ಲ. ಕಠಿಣ ನಿಯಮ ಜಾರಿಗೆ ತಂದರೆ ಗ್ರಾಹಕರು ಮತ್ತು ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಪಾಲನೆ ಮಾಡುತ್ತಾರೆ ಎನ್ನುವುದು ಅಷ್ಟೇ ಸತ್ಯ.
ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ನಿಷೇಧ ಕೂಡ ಸ್ವತ್ಛ ಭಾರತ ನಿರ್ಮಾಣದ ಮಹತ್ವದ ಭಾಗ ಎನ್ನುವ ತಿಳಿವಳಿಕೆ ಮೂಡಿಸಬೇಕಾದ ನಗರಸಭೆಯಲ್ಲಿನ ಸಿಬ್ಬಂದಿಗಳ ಕೊರತೆ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ, ಅಂಗಡಿಗಳ ಮೇಲೆ ದಾಳಿ ಮಾಡಿ ಸಮಯದಲ್ಲಿ ಎರಡರಿಂದ ಐದು ಸಾವಿರ ರೂ.ವರೆಗೆ ದಂಡ ವಿಧಿಸಿ ಕಾಟಾಚಾರಕ್ಕಷ್ಟೇ ಪಾಲನೆ ಮಾಡುತ್ತಿ ದ್ದಾರೆ ಎನ್ನುವುದು ಪಟ್ಟಣದಲ್ಲಿ ಕೇಳಿ ಬರುತ್ತಿದೆ.
ತಪ್ಪಿದರೆ ಮೊಕದ್ದಮೆ: ಸಂಬಂಧ ನಿಗಾ ವಹಿಸುವ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿ, ತಹಶೀಲ್ದಾರರು, ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು, ತೂಕ ಮಾಪನ ಮತ್ತು ಅಳತೆ ಇಲಾಖೆಯ ನಿಯಂ ತ್ರಕರು, ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು, ಇನ್ನಿತರ ಅಧಿಕಾರಿಗಳಿಗೆ ವಹಿಸಲಾಗಿದೆ. ಪ್ಲಾಸ್ಟಿಕ್ ಬಳಕೆ, ವಿತರಣೆ, ಸಂಗ್ರಹಣೆ ಕಂಡು ಬಂದರೆ ಅಂಥ ವರ ವಿರುದ್ಧ ಈ ಅಧಿಕಾರಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದಾಗಿದೆ. ಆದರೆ, ಪಟ್ಟಣದಲ್ಲಿ ಈ ಸಂಬಂಧ ಯಾವುದೇ ದೂರು ದಾಖಲಾಗಿರುವ ಬಗ್ಗೆ ನಿದರ್ಶನವಿಲ್ಲ.
ಪಾಲನೆಯಾಗದ ಶಿಕ್ಷೆ: ಚಿಲ್ಲರೆ ಮಾರಾಟಗಾರರಿಂದ ಮೊದಲ ಬಾರಿಗೆ 2000 ರೂ., ಎರಡನೇ ಬಾರಿಗೆ 5000 ರೂ., ಮತ್ತು ಮೂರನೇ ಬಾರಿ ಉಲ್ಲಂಘನೆಗೆ 10,000 ರೂ. ದಂಡವನ್ನು ವಿಧಿಸಲಾಗುತ್ತದೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂ ಸಿದರೆ 1986ರ ಪರಿಸರ ಸಂರಕ್ಷಣಾ ಕಾಯ್ದೆಯಡಿ ಐದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶವಿದೆ. ತಾಲೂಕಿನಲ್ಲಿ ಪ್ಲಾಸ್ಟಿಕ್ ಸಗಟು ಮಾರಾಟಗಾರರ ವಿರುದ್ಧ ಈ ಅಸ್ತ್ರ ಪ್ರಯೋಗಿಸಿ ಶಿಕ್ಷೆಗೆ ಗುರಿಪಡಿಸಿದಿದ್ದರೇ ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗುತ್ತಿರಲಿಲ್ಲ. ಕೇವಲ ದಂಡ ಪ್ರಯೋಗ ಮಾಡುತ್ತಿರುವುದು ಪ್ಲಾಸ್ಟಿಕ್ ಬಳಕೆಯಾಗುತ್ತಿದೆ.
ಬಹಳಷ್ಟು ಜನರಿಗೆ ಗೊತ್ತೇ ಇಲ್ಲ: ಸಾಕಷ್ಟು ಜನರಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ತಿಳಿದೇ ಇಲ್ಲ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಗೊತ್ತಿರುವ ಕೆಲವರು ಬ್ಯಾಗ್ ತರುತ್ತಾರೆ. ಅಂಗಡಿಗೆ ಬಂದು ಪ್ಲಾಸ್ಟಿಕ್ ನಿಷೇಧವಾಗಿದೆ ಎಂದು ಹೇಳಿದರೆ ಗಲಾಟೆ ಮಾಡಲು ಆರಂಭಿಸುತ್ತಾರೆ. ಪ್ಲಾಸ್ಟಿಕ್ ನೀಡದೆ ಹೋದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್ ನೀಡಿದರೆ ದಂಡ ಕಟ್ಟಬೇಕಾಗುತ್ತದೆ. ನಮ್ಮ ಅಂಗಡಿಯಲ್ಲಿ ಕೊಟ್ಟಿಲ್ಲ ಎಂದರೆ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡು ತ್ತಾರೆ. ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದ್ದರಿಂದ, ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಎಲ್ಲೂ ಏಕಬಳಕೆ ಪ್ಲಾಸ್ಟಿಕ್ ಸಿಗದ ಹಾಗೆ ಅಧಿಕಾರಿಗಳು ಮಾಡಿದರೆ ಮಾತ್ರವೇ ತಕ್ಷಣಕ್ಕೆ ಪ್ಲಾಸ್ಟಿಕ್ ನಿಷೇಧ ಸಾಧ್ಯ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.
ಚನ್ನಪಟ್ಟಣದಲ್ಲಿ ಚಿಕನ್, ಮಟನ್ ಸ್ಟಾಲ್ ಸೇರಿದಂತೆ ಬಹುತೇಕ ಎಲ್ಲಾ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಚುನಾಯಿತ ಪ್ರತಿನಿಧಿ, ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಕಟಾಚಾರಕ್ಕೆ ಬಂದು ಕೇವಲ ವ್ಯಾಪಾರಿಗಳಷ್ಟೇ ದಂಡ ಹಾಕುತ್ತಿದ್ದಾರೆ. ಆದರೆ, ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿ ಕೇಸ್ ದಾಖಲಿಸಿದರೆ ಪಟ್ಟಣದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವಾಗಲಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಗರಸಭೆ ತನ್ನ ಕರ್ತವ್ಯ ಕಟ್ಟುನಿಟ್ಟಾಗಿ ಪಾಲಿಸಲಿ. ● ಭೂಹಳ್ಳಿ ಪುಟ್ಟಸ್ವಾಮಿ, ಪರಿಸರ ಪ್ರೇಮಿ
ಆರೇಳು ತಿಂಗಳ ಹಿಂದೆ ನಗರಸಭೆ ಅಧಿಕಾರಿಗಳು ನಗರ ವ್ಯಾಪ್ತಿಯ ಬಹುತೇಕ ಅಂಗಡಿ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಹತ್ತು ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದೆವು. ಇದೀಗ ನಗರದಲ್ಲಿ ಅಂಗಡಿ ಹಾಗೂ ಇನ್ನಿತರೆ ಕಡೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರು ವುದು ಗಮನಕ್ಕೆ ಬಂದಿದ್ದು, ಈ ಸಂಬಂಧ ತಹಶೀಲ್ದಾರ್ ಅವರ ಗಮನಕ್ಕೂ ತರಲಾಗಿದೆ. ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಕ್ಕೆ ನಗರಸಭೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ● ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ, ಚನ್ನಪಟ್ಟಣ ನಗರಸಭೆ
ಪೌರಾಯುಕ್ತರ ನೇತೃತ್ವದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ ದಂಡವನ್ನು ಹಾಕಿದ್ದೇವೆ. ವರ್ತಕರಿಗೆ ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದವರಿಗೆ ಎರಡು ಹಂತದ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ ಪ್ಲಾಸ್ಟಿಕ್ ಬಳಕೆ ಬಗ್ಗೆ ನಮಗೂ ದೂರು ಬರುತ್ತಿವೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ● ಶಿವಕುಮಾರ್, ಆಹಾರ ನಿರೀಕ್ಷಕರು, ನಗರಸಭೆ ಚನ್ನಪಟ್ಟಣ
● ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.