ಹಾರೋಹಳ್ಳಿ ಗ್ರಾಪಂ ಇನ್ನು ಪಪಂ
ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ
Team Udayavani, Nov 15, 2020, 8:08 PM IST
ಕನಕಪುರ: ತಾಲೂಕಿನ ಹಾರೋಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿ ಆಗಿ ಬಿಜೆಪಿ ಸಚಿವ ಸಂಪುಟಸಭೆಯಲ್ಲಿ ಅನುಮೋದನೆ ದೊರೆತ್ತಿದ್ದು, ಈ ಭಾಗದ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಏಷ್ಯಾ ಖಂಡದಲ್ಲಿ ಕೈಗಾರಿಕಾ ಅಭಿವೃದ್ಧಿಯಲ್ಲಿ 2ನೇ ಸ್ಥಾನದಲ್ಲಿರುವ ಹಾರೋಹಳ್ಳಿ ಹೋಬಳಿ ಕೇಂದ್ರ, ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಜೊತೆಗೆ ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ಹಾರೋಹಳ್ಳಿಹೋಬಳಿ ಕೇಂದ್ರದಲ್ಲಿ ಗಣನೀಯವಾಗಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ.
ತಾಲೂಕು ಕೇಂದ್ರವಾಗಿ ಘೋಷಣೆ: ಈ ಭಾಗದ ಎಲ್ಲಾ ಪಕ್ಷದ ರಾಜಕೀಯ ಮುಖಂಡರು, ಸಾರ್ವಜನಿಕರು, ಪಕ್ಷಾತೀತವಾಗಿ ತಾಲೂಕು ಹೋರಾಟ ಸಮಿತಿ ರಚಿಸಿಕೊಂಡು ಹಾರೋಹಳ್ಳಿ ಹೋಬಳಿ ಕೇಂದ್ರವನ್ನು ತಾಲೂಕಾಗಿ ಘೋಷಣೆ ಮಾಡುವಂತೆ ಹೋರಾಟ ಮಾಡಿದ್ದರು. ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರ ಬಜೆಟ್‌ನಲ್ಲಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿತ್ತು. ಆದರೆ, ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಸಮ್ಮಿಶ್ರ ಸರ್ಕಾರ ಉರುಳಿ ತಾಲೂಕು ಕೇಂದ್ರವಾಗಿ ಘೋಷಣೆ ಯಾಗಿದ್ದ ಹಾರೋಹಳ್ಳಿಕಡತಕ್ಕೆ ಮಾತ್ರ ಸಮೀತವಾಗಿದೆ. ಇದರ ಆಧಾರದ ಮೇಲೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ರುದ್ರೇಶ್ ಅವರ ನೇತೃತ್ವದಲ್ಲಿ ಹಾರೋಹಳ್ಳಿ ತಾಲೂಕು ಹೋರಾಟ ಸಮಿತಿ ಸದಸ್ಯರು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್ ಅವರಿಗೆ ಗ್ರಾಪಂ ಅನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಡ ತಂದಿದ್ದರು.
ಈ ಹಿನ್ನೆಲೆಯಲ್ಲಿ ಪೌರಸಭೆಗಳ ಅಧಿನಿಯಮ 1964ರ ನಿಯಮ 3 ಹಾಗೂ 9ರಅನ್ವಯ ನಿಗದಿಪಡಿಸಿರುವ ಮಾನದಂಡಗಳಂತೆಕ್ರಮವಹಿಸಲು ತೀರ್ಮಾನಿಸಿ ಕಾರ್ಯನಿರ್ವಾಹಕಅಧಿಕಾರಿಗಳಿಗೆ ನಿಯಮಾನುಸಾರ ಅನುಬಂಧಗಳೊಡನೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಸೂಚನೆ ನೀಡಿತ್ತು. ಜೊತೆಗೆ ಜಿಲ್ಲಾಡಳಿತ ಅಧಿಕೃತವಾಗಿ ಸಲ್ಲಿಸಿದ ಜನಗಣತಿ, ಚೇಕ್ ಬಂದಿ, ಕೃಷಿಯೇತರ ಚಟುವಟಿಕೆ ಹಾಗೂ ನಕಾಶೆ ಆಧಾರದ ಮೇಲೆ ಸಂಪುಟ ಸಭೆ ಹಾರೋಹಳ್ಳಿ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿದೆ. ಇದರಿಂದ ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ಇಲಾಖೆಗೆ ಒಳಪಟ್ಟು ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗುವುದರಿಂದ ಕೆಲವರಿಗೆ ನಡುಕ ಶುರುವಾಗಿದೆ.
ಹಾರೋಹಳ್ಳಿ ಗ್ರಾಮ ಪಂಚಾಯ್ತಿ ವಾಣಿಜ್ಯ ಮಳಿಗೆಗಳನ್ನು ಹಾರಾಜು ಮೂಲಕ ಪಡೆದಿರುವ ಕೆಲವರು ಸರಿಯಾಗಿ ಬಾಡಿಗೆಯನ್ನೂ ಪಾವತಿಸದೆ ಮಳಿಗೆಗಳನ್ನು ಮತ್ತೂಬ್ಬರಿಗೆ ಕರಾರು ಪತ್ರ ಮಾಡಿಕೊಟ್ಟು ಹೆಚ್ಚಿನ ಬಾಡಿಗೆಯನ್ನು ವಸೂಲಿ ಮಾಡುತ್ತಿರುವವರಿಗೆ ಬ್ರೇಕ್ ಬೀಳಲಿದೆ. ಅಷ್ಟೇ ಅಲ್ಲದೆ, ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಜಾಗ ಗೋಮಾಳಗಳ ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಲಪಾಟಾಯಿಸಿರುವವರ ಬಣ್ಣವು ಬಯಲಾಗಲಿದೆ.
ಪಪಂನಿಂದ ಆಗುವ ಅನುಕೂಲಗಳು : ಹಾರೋಹಳ್ಳಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ನೇರವಾಗಿ ಜಿಪಂ ನಿಯಂತ್ರಣದಿಂದ ಹೊರಬಂದು ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ಇಲಾಖೆಗೆ ಒಳಪಡುತ್ತದೆ. ಗ್ರೇಡ್-2 ಮುಖ್ಯಾಧಿಕಾರಿಗಳು ನೇಮಕಗೊಂಡು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳಾಗಿ ವಿಂಗಡಣೆ ಆಗಲಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ನಿವೇಶನ, ಕಾರ್ಖಾನೆಗಳಿಂದ ತೆರಿಗೆ ಸಂಗ್ರಹ ದ್ವಿಗುಣವಾಗಿ 15ನೇ ಹಣಕಾಸು ಸೇರಿ ಮುಖ್ಯಮಂತ್ರಿಗಳ ಅನುದಾನವೂ ಹರಿದು ಬರಲಿದೆ. ಹಾರೋಹಳ್ಳಿ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಸುತ್ತಮುತ್ತಲ ಕೃಷಿ ಭೂಮಿಗೆ ಮೌಲ್ಯವು ಹೆಚ್ಚಾಗಲಿದೆ. ಗ್ರಾಮ ಪಂಚಾಯ್ತಿ ಮೇಲ್ದರ್ಜೆಗೇರಿದ ನಂತರ ಆರೋಗ್ಯ ಇಲಾಖೆ, ಕಂದಾಯ ಸೇರಿ ಇತರೆ ಇಲಾಖೆಗಳು ತೆರೆದುಕೊಂಡು ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆಲ್ಲ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಬೇಕಿದೆ.
ಪಪಂ ಆದ್ರೆ ಹೆಚ್ಚಿನ ತೆರಿಗೆ ಹೊರೆ : ಗ್ರಾಪಂಗಳಲ್ಲಿ ತುರ್ತುಪರಿಸ್ಥಿತಿಯ ಎದುರಾದಾಗ ಶೀಘ್ರವಾಗಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಪಟ್ಟಣ ಪಂಚಾಯಿತಿಯಲ್ಲಿ1 ಲಕ್ಷ ರೂ.ವರೆಗಿನ ಒಳಗೊಂಡ ಸಮಸ್ಯೆಗಳನ್ನು ಮಾತ್ರ ತುರ್ತಾಗಿ ಬಗೆಹರಿಸಬಹುದೇ ಹೊರತು, ಹೆಚ್ಚಿನ ಹಣಕಾಸಿನ ಕಾಮಗಾರಿಗಳನ್ನು ನಡೆಸಬೇಕಾದರೆಕ್ರಿಯಾಯೋಜನೆ ಸಿದ್ಧಪಡಿಸಿ ಪ್ಲಾನ್ ಪ್ರಕಾರ ಟೆಂಡರ್‌ಕರೆದು,ಕಾಮಗಾರಿ ನಡೆಸಬೇಕು. ಹಾಗಾಗಿ ತುರ್ತು ಕಾಮಗಾರಿಗಳುವಿಳಂಬವಾಗಬಹುದು. ಗ್ರಾಮ ಪಂಚಾಯ್ತಿಗಿಂತ ಪಪಂನಲ್ಲಿ ಹೆಚ್ಚಿನ ಆಸ್ತಿ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವಕಾರ್ಖಾನೆ ಮಾಲಿಕರು ಮತ್ತು ಸಾರ್ವಜನಿಕರ ಆಸ್ತಿ ತೆರಿಗೆಕಟ್ಟುವಾಗ ಜೇಬಿಗೆಕತ್ತರಿ ಬೀಳಬಹುದು.
ಹಾರೋಹಳ್ಳಿ ಗ್ರಾಮ ಪಂಚಾಯ್ತಿ ಅನ್ನು ಮೇಲ್ದರ್ಜೆಗೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂಜಿಲ್ಲಾ ಉಸ್ತುವಾರಿಸಚಿವ ಡೀಸಿಎಂ ಅಶ್ವತ್ಥನಾರಾಯಣ್,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರುದ್ರೇಶ್‌ಗೆ ಹಾರೋಹಳ್ಳಿ ಜನತೆ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ.- ಮುರಳೀಧರ್, ಅಧ್ಯಕ್ಷ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
– ಉಮೇಶ್ ಬಿ.ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.