ಚುನಾವಣೆ ಘೋಷಣೆಗೂ ಮುನ್ನ ಕಾವೇರಿದ ಬೊಂಬೆ ನಾಡು ಚನ್ನಪಟ್ಟಣ ಕಣ
Team Udayavani, Mar 1, 2023, 2:45 PM IST
ಚನ್ನಪಟ್ಟಣ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಘೋಷಣೆಗೂ ಮುನ್ನ ಬೊಂಬೆ ನಾಡು ಚನ್ನಪಟ್ಟಣದ ರಾಜಕೀಯ ರಣಾಂಗಣ ಅಕ್ಷರಶಃ ರಂಗೇರಿದೆ.
ರಾಜ್ಯದಲ್ಲೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಚನ್ನಪಟ್ಟಣದ ಉಸಿರು ಉಸಿರೆಲ್ಲಾ ಈಗ ರಾಜಕೀಯಮಯವಾಗಿದೆ. ಪುಟ್ಟ ಜಿಲ್ಲೆ ರಾಮನಗರದಲ್ಲಿ ಜೆಡಿಎಸ್- ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಆದರೆ, ಚನ್ನಪಟ್ಟ ಣದಲ್ಲಿ ಮಾತ್ರ ದಳ- ಕಮಲ ಹಾವು- ಮುಂಗೂಸಿಯಂತೆ ಪರಸ್ಪರ ಸೆಣಸಾಡಲು ವಿಧಾನಸಭಾ ಚುನಾವಣೆ ಘೋಷಣೆ ಆಗುವುದನ್ನೇ ಕಾಯುತ್ತಿವೆ. ಹಾಗಂತ ಕಾಂಗ್ರೆಸ್ ಕೂಡ ಇಲ್ಲಿ ಹಿಂದೆ ಬಿದ್ದಿಲ್ಲ. ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಲು ಅದು ಕೂಡ ಸಾಕಷ್ಟು ಕಸರತ್ತು ನಡೆಸುತ್ತಿದೆ.
ಲಕ್ಷಕ್ಕೂ ಹೆಚ್ಚು ಜನರ ಸಂಪರ್ಕ: ಮೇಲ್ನೋಟಕ್ಕೆ ನೋಡುವುದಾದರೆ ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ಕ್ಷೇತ್ರದ ಪ್ರಚಾರದಲ್ಲಿ ಬಿಜೆಪಿ ಮುಂದಿದೆ. ಕಮಲದ ಕಲಿ ಯಾರು ಎಂಬುದು ಇನ್ನೂ ಅಂತಿಮ ವಾಗಿ ಘೋಷಣೆಯಾಗಿಲ್ಲವಾದರೂ, ಅಘೋಷಿತ ಅಭ್ಯರ್ಥಿಯಾಗಿ ಎಂಎಲ್ಸಿ ಯೋಗೇಶ್ವರ್ ಈಗಾಗಲೇ ಸ್ವಾಭಿಮಾನ ನಡಿಗೆ ಹೆಸರಲ್ಲಿ ಮೂರು ಹಂತಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರನ್ನು ಮುಟ್ಟಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರ ಅಭಿಮತ. ಜೆಡಿಎಸ್ ಆಗಾಗ್ಗೆ ಗುಟುರು ಹಾಕುತ್ತಿದೆ. ಅಂದರೆ, ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆಗಳನ್ನು ಮಾಡುವ ಮೂಲಕ ಹಾಗೂ ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳ ಮೂಲಕ ಕ್ಷೇತ್ರದ ಮಹಿಳಾ ಮತದಾರರನ್ನು ತಲುಪಲು ಸಾಕಷ್ಟು ಶ್ರಮ ಹಾಕುತ್ತಿದೆ.
ಹುರುಪು ತುಂಬುವ ಕೆಲಸ: ಜೆಡಿಎಸ್ ಯುವ ಘಟ ಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕರಾದ ಎಚ್.ಡಿ. ಕುಮಾರ ಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಯ ಮುತ್ತು ನೇತೃತ್ವದ ಸ್ಥಳೀಯ ಪ್ರಭಾವಿ ಮುಖಂಡರ ತಂಡ ಅಲ್ಲಲ್ಲಿ ಕಿರುಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಕೂಡ ತಮ್ಮದೇ ನೆಲೆಯಲ್ಲಿ ಪಕ್ಷ ಸಂಘಟನೆಗೆ ಶ್ರಮ ಹಾಕುತ್ತಿದ್ದಾರೆ. ಹೋಬಳಿ ಹಾಗೂ ಜಿಪಂ ಕ್ಷೇತ್ರವಾರು ಮತದಾರ ಪ್ರಭುಗಳಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು ಕಡೆ ಧಾರ್ಮಿಕ ಯಾತ್ರೆಗಳನ್ನು ಮಾಡಿಸುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸಾಕಷ್ಟು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದೆ.
ತವರಲ್ಲಿಯೇ ಕಾಂಗ್ರೆಸ್‌ಗೆ ಬಲವಿಲ್ಲ: ಚುನಾವಣೆ ಸಮೀಪಿಸುತ್ತಿದ್ದಂತೆ ಬೊಂಬೆನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾಗಿ ಗರಿಗೆದರಿವೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮುಖಂಡರು ಮತದಾರರ ಮನೆ ಮನ ತಲುಪುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಜಿಲ್ಲೆಯ ಮಗ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ, ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗುತ್ತಿದ್ದಾರೆ. ಹಾಗಾಗಿ ಮುಂಬ ರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಜಿಲ್ಲೆ ರಾಮನಗರದಿಂದ ಹೆಚ್ಚಿನ ಸೀಟ್ ಗೆಲ್ಲಬೇಕಾದ ಅವಶ್ಯಕತೆ, ಅನಿವಾರ್ಯತೆ ಇದೆ. ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷರ ತವರಲ್ಲಿಯೇ ಕಾಂಗ್ರೆಸ್‌ಗೆ ಬಲವಿಲ್ಲ ಎಂಬ ಸಂದೇಶ ರವಾನೆಯಾದರೆ, ಭವಿಷ್ಯದಲ್ಲಿ ಡಿ.ಕೆ. ಶಿವಕುಮಾರ್ ಕನಸಿಗೆ ಭಂಗವಾಗ ಬಹುದು ಎಂಬುದು ಸ್ವತಃ ಕಾಂಗ್ರೆಸ್‌ನ ಹಿರಿಯ ಮುಖಂಡರೇ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ತೇಲಿಸುತ್ತಾರೆಂಬ ಹಂಬಲ: ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತದಾರರಿದ್ದಾರೆನ್ನುವ ಮಾತಿಗೆ ಕಳೆದ ಬಾರಿಯ ವಿಧಾನಸಭಾ ಚುನಾ ವಣೆಯಲ್ಲಿ ಸಿಕ್ಕಿರುವ ಮತಗಳೇ ಜೀವಂತ ಸಾಕ್ಷಿ. ಯೋಗೇಶ್ವರ್ – ಕುಮಾರಸ್ವಾಮಿ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಎಚ್. ಎಂ.ರೇವಣ್ಣ 30 ಸಾವಿರಕ್ಕೂ ಹೆಚ್ಚು ಮತಪಡೆದಿದ್ದರು. ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸಿ.ಪಿ. ಯೋಗೇ ಶ್ವರ್ ಅವರು ಈ ಬಾರಿ ಏನಾದರೂ ಮಾಡಿ ಶತಾಯ-ಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಕ್ಷೇತ್ರವನ್ನು ನೀರಾವರಿ ಮಾಡಿರುವ ನನ್ನನ್ನು ಮತದಾರರು ಈ ಬಾರಿ ಮುಳುಗಿಸುವುದಿಲ್ಲ ತೇಲಿಸು ತ್ತಾರೆ ಎಂಬ ಅತೀವ ಆಶಾಭಾವನೆ ಹೊಂದಿದ್ದಾರೆ. ಇನ್ನೂ ಹಾಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಇದು ನನ್ನ ಕೊನೆ ಚುನಾವಣೆ, ಮುಂದಿನ ಚುನಾವಣೆಯನ್ನು ಸ್ಥಳೀಯ ಜೆಡಿಎಸ್ ಮುಖಂಡರೊಬ್ಬರು ಎದುರಿಸಲಿದ್ದಾರೆ ಎಂದು ಘೋಷಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಕೈ ಬಿಡಬೇಡಿ ಎಂದು ಪರಿಪರಿಯಾಗಿ ಕೇಳಿ ಕೊಂಡಿದ್ದಾರೆ.
ಸದ್ದು ಮಾಡಿದ ಸೈನಿಕನ ಸೀರೆ ವಿತರಣೆ : ಫೆ.1ರಿಂದ ಮಾರ್ಚ್ 31ರವರೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಸ್ವಾಭಿಮಾನ ಸಂಕಲ್ಪ ನಡಿಗೆ ಹೆಸರಿನಲ್ಲಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸುತ್ತಿರುವ ಮಾಜಿ ಸಚಿವ ಯೋಗೇಶ್ವರ್ ಅವರು ಯುಗಾದಿ ಕೊಡುಗೆಯಾಗಿ ಮಹಿಳೆ ಯರಿಗೆ ಸೀರೆ ಹಂಚುತ್ತಿರುವ ವಿಚಾರವಾಗಿ ಅವರ ರಾಜಕೀಯ ಎದುರಾಳಿ, ಶಾಸಕ ಎಚ್ .ಡಿ. ಕುಮಾರಸ್ವಾಮಿ ಅವರು 20 ವರ್ಷ ಶಾಸಕರಾಗಿ ಆಳಿದವರು ಅಭಿವೃದ್ಧಿ ಮಾಡಿದ್ದರೆ, ಸೀರೆ ಹಂಚುವ ಅಗತ್ಯ ಇರಲಿಲ್ಲ. ಬರೀ ಇಂತಹ ಗಿಮಿಕ್‌ಗಳಿಂದಲೇ ಗೆಲ್ಲುವ ಅವರಿಗೆ ಸ್ವಾಭಿಮಾನ ಎಲ್ಲಿಂದ ಬರಬೇಕು ಎಂದು ತಿವಿದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ತಮ್ಮ ಆಡಳಿತಾವಧಿಯಲ್ಲಿ ಏನೇನು ಕೆಲಸ ಮಾಡಿದ್ದಾರೆ ಎಂದು ಪಟ್ಟಿ ಕೊಡಲಿ, ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಮಾದರಿ ಮಾಡದವರು, ರಾಜ್ಯವನ್ನು ಹೇಗೆ ಆಳುತ್ತಾರೆ ಎಂದು ಗೇಲಿ ಮಾಡಿದ್ದಾರೆ.
ಜೋರಾದ ಪಕ್ಷಾಂತರ ಪರ್ವ : ಚುನಾವಣೆ ಹೊಸ್ತಿಲಲ್ಲಿ ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಆ ಪಕ್ಷಕ್ಕೆ ಜಿಗಿದಾಡುವುದು ಸಹಜ. ಆದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವರ್ಷದಿಂದಲೇ ಶುರು ಪಕ್ಷಾಂತರ ಎಂಬುದು ನಿಂತ ನೀರಾಗದೆ, ನಿರಂತರವಾಗಿ ನಡೆಯುತ್ತಲೇ ಇದೆ. ಜೆಡಿಎಸ್ – ಕಾಂಗ್ರೆಸ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರು ಬಿಜೆಪಿಗೆ ಸೇರಿದರೆ, ಬಿಜೆಪಿ- ಜೆಡಿಎಸ್‌ನ ಕೆಲವು ಕಿರಿಯ ಮುಖಂಡರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಆದರೆ, ತಾಲೂಕಿನಲ್ಲಿ ಆಡಳಿತಾರೂಢ ಪಕ್ಷವಾಗಿರುವ ಜೆಡಿಎಸ್ ಮಾತ್ರ ಬೇರೆ ಪಕ್ಷಗಳ ಮುಖಂಡರನ್ನು ತನ್ನತ್ತ ಸೆಳೆಯುವಲ್ಲಿ ತಟಸ್ಥವಾಗಿದೆ. ಆದರೆ, ಆ ಪಕ್ಷದ ಸ್ಥಳೀಯ ಮುಖಂಡರು ನಮ್ಮ ಪಕ್ಷಕ್ಕೆ ಘಟಾನು ಘಟಿಗಳೇ ಬರುತ್ತಾರೆ ಕಾದು ನೋಡಿ ಎಂದು ಹೇಳುತ್ತಿದ್ದಾರೆ.
– ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Success: ಯಶಸ್ವಿ ಜೀವನಕ್ಕೆ ಸೂತ್ರಗಳು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.