ರಾಮನಗರ ಜಿಲ್ಲೆಯಲ್ಲಿ ರಕ್ತದ ಅಭಾವ!
Team Udayavani, May 3, 2020, 6:38 PM IST
ರಾಮನಗರ: ಜಿಲ್ಲೆಯಲ್ಲಿ ರಕ್ತ ಸಂಗ್ರಹವೇ ಇಲ್ಲ ಮಾಹಿತಿ ಸಿಕ್ಕಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ರಕ್ತ ಬೇಕಾದರೆ ಕಿಸೆ ಬರಿದಾಗುತ್ತೆ. ಸರ್ಕಾರಿ ರಕ್ತ ಸಂಗ್ರಹ ಘಟಕಗಳಿಗೆ ಹೋದರೆ ಅಲ್ಲಿ ರಕ್ತದ ಸಂಗ್ರಹವೇ ಇಲ್ಲ. ಈ ಸತ್ಯ ಗೊತ್ತಿದ್ದರೂ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಲಿಪ್ತವಾಗಿದೆ!
ಜಿಲ್ಲಾ ಕೇಂದ್ರ ರಾಮನಗರದ ಐಜೂರಿನ ನಿವಾಸಿಯೊಬ್ಬರಿಗೆ ರಕ್ತ ಸಿಗದೆ ಆರೋಗ್ಯ ಬಿಗಡಾಯಿಸಿ ಬೆಂಗಳೂರಿಗೆ ದೌಡಾಯಿಸಿದ ಪ್ರಸಂಗವೂ ನಡೆದು ಹೋಗಿದೆ. ಜಿಲ್ಲೆ ರಚನೆಯಾಗಿ 13 ವರ್ಷಗಳಾಗಿವೆ. ಇಲ್ಲಿವರೆಗೂ ಬ್ಲಿಡ್ ಬ್ಯಾಂಕ್ ಸ್ಥಾಪನೆಯಾಗಿಲ್ಲ. ಜಿಲ್ಲಾಸ್ಪತ್ರೆ ಸೇರಿದಂತೆ ಉಳಿದ ಮೂರು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ರಕ್ತ ಸಂಗ್ರಹ ಕೇಂದ್ರಗಳಿವೆ. ಅಂದರೆ ದಾನಿಗಳಿಂದ ರಕ್ತ ಪಡೆಯುವ ಸೌಲಭ್ಯ ಇಲ್ಲಿಲ್ಲ. ದುರಾದೃಷ್ಟವೆಂದರೆ ಕನಕಪುರ ಆಸ್ಪತ್ರೆ ಯಲ್ಲಿರುವ ರಕ್ತ ಸಂಗ್ರಹ ಕೇಂದ್ರದಲ್ಲಿ 7 ಯೂನಿಟ್ ರಕ್ತ ಬಿಟ್ಟರೆ (ಮೇ 2ರಂದು ಇದ್ದಂತೆ) ಇನ್ಯಾವ ರಕ್ತ ಸಂಗ್ರಹ ಕೇಂದ್ರದಲ್ಲೂ ಒಂದೇ ಒಂದು ಹನಿ ರಕ್ತ ಸಿಗೋಲ್ಲ. ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರಿನ ಭಾರತೀಯ ರೆಡ್ ಕ್ರಾಸ್ ನಿಂದ ತರಿಸಿಕೊಳ್ಳುವ ಅನಿ ವಾರ್ಯ ಇಲ್ಲಿನ ಸರ್ಕಾರಿ ವೈದ್ಯರಿಗಿದೆ.
ಖಾಸಗಿ ಬ್ಲಡ್ ಬ್ಯಾಂಕ್‌ಗಳ ಕರ್ಮಕಾಂಡ: ಡಿಎಚ್‌ಒ ಸೈಲೆಂಟ್! ಜಿಲ್ಲೆಯಲ್ಲಿ 2 ಖಾಸಗಿ ರಕ್ತನಿಧಿಗಳಿದ್ದು, ಅವರ ಕರ್ಮಕಾಂಡದ ಬಗ್ಗೆ ತನಿಖೆಯಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಒಂದು ಯೂನಿಟ್ ರಕ್ತಕ್ಕೆ (ವೋಲ್ ಬ್ಲಡ್) 725 ರೂ. ಮತ್ತು ಬಿಪಿಎಲ್ ಕಾರ್ಡುದಾರರಿಗೆ 1,450 ರೂ. ಶುಲ್ಕ ಪಡೆದು ಕೊಡಬೇಕು. ಆದರೆ ಈ ಖಾಸಗಿ ರಕ್ತನಿಧಿಗಳು ಬಿಪಿಎಲ್ ಕಾರ್ಡುದಾರು ಎಂಬ ಕನಿಕರವಿಲ್ಲದೆ 1,500 ರಿಂದ 2,000 ರೂ.ವರೆಗೆ ಪೀಕುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ.
ಈ ರಕ್ತನಿಧಿಗಳು ತಾವು ಕ್ಯಾಂಪ್‌ಗ್ಳಲ್ಲಿ ಸಂಗ್ರಹಿಸುವ ಒಟ್ಟು ರಕ್ತದ ಪೈಕಿ ಶೇ.25ರಷ್ಟನ್ನು ಸರ್ಕಾರಿ ರಕ್ತನಿಧಿಗೆ ಸಲ್ಲಿಸಬೇಕಾಗಿದೆ. ಆದರೆ ಈ ವಿಚಾರದಲ್ಲೂ ಖಾಸಗಿ ಬ್ಲಿಡ್‌ಬ್ಯಾಂಕ್ ಗಳು ದ್ರೋಹವೆಸಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ನಗರದ ಖಾಸಗಿ ರಕ್ತನಿಧಿ 306 ಯೂನಿಟ್ ಮತ್ತು ಚನ್ನಪಟ್ಟಣದ ರಕ್ತನಿಧಿ 51 ಯೂನಿಟ್ ಬಾಕಿ ಉಳಿಸಿಕೊಂಡಿವೆ. ಇದು ರಕ್ತನಿಧಿ ಸ್ಥಾಪನೆ ಸ್ಪಷ್ಟ ಉಲ್ಲಂಘನೆ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಈ ವಿಚಾರದಲ್ಲಿ ಮೌನವಾಗಿದ್ದಾರೆ ಎಂದು ಹೇಳಲಾಗಿದೆ.
ಶಿಬಿರ ನಡೆಸ್ತೀವಿ ಅಂದ್ರೂ ಪ್ರೋತ್ಸಾಹವಿಲ್ಲ!: ಕೋವಿಡ್ 19 ಸಂಬಂಧ ಲಾಕ್‌ಡೌನ್ ಕಾರಣ ರಾಜ್ಯದ ರಕ್ತನಿಧಿಗಳಲ್ಲಿ ರಕ್ತದ ಸಂಗ್ರಹ ಹೆಚ್ಚಿಸುವಂತೆ ಸರ್ಕಾರ 23 ಏ. 2020ರಂದು ಅಧಿಸೂಚನೆ ಹೊರಡಿಸಿದೆ. ಜಿಲ್ಲಾಡಳಿತಗಳೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋ ಜಿಸುವಂತೆ ಅಧಿ ಸೂಚನೆ ಪ್ರಕಟವಾಗಿ 10 ದಿನ ಕಳೆದರೂ ಜಿಲ್ಲಾಡಳಿತವಾಗಲಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಾಗಲಿ ಈ ಬಗ್ಗೆ ಚಕಾ ರವೇ ಎತ್ತುತ್ತಿಲ್ಲ ಎಂಬುದು ದುರಾದೃಷ್ಟಕರ. ಖಾಸಗಿ ಸಂಘ-ಸಂಸ್ಥೆಗಳು ರಕ್ತದಾನ ಶಿಬಿರ ಮಾಡುವುದಾಗಿ ಮುಂದೆ ಬಂದರೂ ಪ್ರೋತ್ಸಾಹಿಸದೆ, ಹಿಂದಕ್ಕೆ ಕಳುಹಿಸಿರುವ ಪ್ರಸಂಗ ನಡೆದಿದೆ.
ಸ್ಪಂದಿಸದ ಜಿಲ್ಲಾಡಳಿತ : ಜಿಲ್ಲೆಯನ್ನು ಕೊರೊನಾದಿಂದ ಯಶಸ್ವಿಯಾಗಿ ದೂರವಿಟ್ಟ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ರಕ್ತದಾನ ಶಿಬಿರ ಆಯೋಜಿಸುವ ವಿಚಾರದಲ್ಲಿ ಹಿಂದೇಟು ಹಾಕುತ್ತಿರುವುದೇಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ರಾಮನಗರದ ಖಾಸಗಿ ವಿದ್ಯಾಸಂಸ್ಥೆ ವತಿಯಿಂದ ತಾವು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿ ಸಂಗ್ರಹವಾದ ಎಲ್ಲ ರಕ್ತವನ್ನು ಜಿಲ್ಲಾಸ್ಪತ್ರೆ ರಕ್ತನಿಧಿಗೆ ಅರ್ಪಿಸುವುದಾಗಿ ಲಿಖೀತ ಮೂಲಕ ಕೊಟ್ಟರೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಕೋವಿಡ್ 19 ಸೋಂಕು ಇದ್ದಿದ್ದರಿಂದ ರಕ್ತ ಸಂಗ್ರಹಕ್ಕೆ ಅವಕಾಶವಾಗಲಿಲ್ಲ. ಸರ್ಕಾರಿ ಆದೇಶವಾಗಿದ್ದು, ಸದ್ಯದಲ್ಲೇ ರಕ್ತದಾನ ಶಿಬಿರ ಆಯೋಜಿಸಿ, ರಕ್ತ ಸಂಗ್ರಹ ಮಾಡಿಕೊಳ್ಳಲಾಗುವುದು. ಖಾಸಗಿ ರಕ್ತನಿಧಿಗಳಲ್ಲಿ ನಿಗದಿಗಿಂತ ಹೆಚ್ಚು ಶುಲ್ಕ ಪಡೆದ ದೂರು ಬಂದರೆ ಕ್ರಮ ಜರುಗಿಸುತ್ತೇವೆ. –ಡಾ.ನಿರಂಜನ್, ಡಿಎಚ್‌ಒ
–ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.